ನಟ ಉಪೇಂದ್ರ ಅವರ 'ಉತ್ತಮ ಪ್ರಜಾಕೀಯ ಪಕ್ಷ'ವು 'ಪ್ರಜಾಕೀಯ.ಇನ್' ಎಂಬ ವೆಬ್‌ಸೈಟ್ ಮತ್ತು ಮೊಬೈಲ್ ಆ್ಯಪ್ ಅನ್ನು ಲೋಕಾರ್ಪಣೆ ಮಾಡಿದೆ. ಈ ಮೂಲಕ ಸಾರ್ವಜನಿಕರೇ ತಮ್ಮ ಕ್ಷೇತ್ರದ ಅಭ್ಯರ್ಥಿಯನ್ನ ಆಯ್ಕೆ ಮಾಡಬಹುದು ಮತ್ತು ಸರಿಯಾಗಿ ಕೆಲಸ ಮಾಡದಿದ್ದರೆ ಅವರನ್ನು ವಾಪಸ್ ಕರೆಸಿಕೊಳ್ಳುವ ಅಧಿಕಾರ ಹೊಂದಿರುತ್ತಾರೆ.
ಬೆಂಗಳೂರು (ಏ.2): ‘ನಿಮ್ಮ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಲು ಅರ್ಹ ಅಭ್ಯರ್ಥಿಗಳನ್ನು ನೀವೇ ಆಯ್ಕೆ ಮಾಡಿಕೊಳ್ಳಿ. ಜಯಗಳಿಸಿದ ಬಳಿಕ ಸರಿಯಾಗಿ ಕೆಲಸ ಮಾಡದಿದ್ದರೆ ಅವರನ್ನು ನೀವೇ ವಾಪಸ್ ಕರೆಸಿಕೊಳ್ಳಿ..!’
‘ಉತ್ತಮ ಪ್ರಜಾಕೀಯ ಪಕ್ಷ’ದ ಸಂಸ್ಥಾಪಕ ಹಾಗೂ ನಟ ಉಪೇಂದ್ರ ಅವರು ಬುಧವಾರ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿ, ‘ಪ್ರಜಾಕೀಯ.ಇನ್’ ಎಂಬ ವೆಬ್‌ಸೈಟ್ ಮತ್ತು ಮೊಬೈಲ್ ಆ್ಯಪ್ ಅನ್ನು ಲೋಕಾರ್ಪಣೆಗೊಳಿಸಿ ಪಕ್ಷವು ಅಳವಡಿಸಿಕೊಂಡಿರುವ ತಂತ್ರಜ್ಞಾನದ ಕುರಿತು ಮಾಹಿತಿ ನೀಡಿದರು.
ಚುನಾವಣೆಯ ದೃಷ್ಟಿಯಿಂದ ಆ್ಯಪ್ ಅಭಿವೃದ್ಧಿಪಡಿಸಿದ್ದು ಗ್ರಾಪಂನಿಂದ ಲೋಕಸಭಾ ಚುನಾವಣೆಯವರೆಗೂ ಆಕಾಂಕ್ಷಿಗಳು ಲೈವ್ ಮೂಲಕ ಫೇಸ್‌ಬುಕ್, ಇನ್ಸ್ಟಾಗ್ರಾಮ್ ಸೇರಿ ಸಂವಾದದಲ್ಲಿ ಪಾಲ್ಗೊಳ್ಳಬಹುದು. ಆಯಾ ಕ್ಷೇತ್ರದ ಸಮಸ್ಯೆಗಳು, ಅದಕ್ಕಿರುವ ಪರಿಹಾರದ ಬಗ್ಗೆ ಮಾತನಾಡಬಹುದು. ಸಾರ್ವಜನಿಕರು ತಮಗಿಷ್ಟವಾದವರ ಬಗ್ಗೆ ಒಲವು ತೋರಿಸಬಹುದು. ಇದರ ಆಧಾರದಲ್ಲಿ ಅಂಕಗಳನ್ನು ಕೊಟ್ಟು, ಟಿಕೆಟ್ ನೀಡಲಾಗುವುದು ಎಂದು ವಿವರಿಸಿದರು.
ಚುನಾಯಿತರಾದವರು ಸರಿಯಾಗಿ ಕಾರ್ಯ ನಿರ್ವಹಿಸದಿದ್ದರೆ ಅವರನ್ನು ವಾಪಸ್ ಕರೆಸಿಕೊಳ್ಳಲೂ ಜನರಿಗೆ ಅಧಿಕಾರವಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಆ್ಯಪ್ ಸಿದ್ಧ ಮಾಡಲಾಗಿದೆ. ಕೊನೆಯ ಪಕ್ಷ ನನ್ನ ಕಾಲಾವಧಿಯ ಬಳಿಕವಾದರೂ ವ್ಯವಸ್ಥೆ ಶುದ್ಧವಾಗಲಿ ಎಂಬ ಆಶಯ ನನ್ನದು ಎಂದು ಸ್ಪಷ್ಟಪಡಿಸಿದರು.
ಏ.1 ಬುದ್ಧಿವಂತರ ದಿನ:
ಏ.1 ಮೂರ್ಖರ ದಿನವಲ್ಲ. ಬುದ್ಧಿವಂತರ ದಿನವನ್ನಾಗಿ ಆಚರಣೆ ಮಾಡಬೇಕು. ಅದಕ್ಕಾಗಿಯೇ ಈ ದಿನ ಆ್ಯಪ್ ಬಿಡುಗಡೆ ಮಾಡುತ್ತಿದ್ದೇವೆ. ಅರ್ಹರಿಗೆ ವೇದಿಕೆ ಕಲ್ಪಿಸಬೇಕು ಎಂಬುದು ನಮ್ಮ ಗುರಿ. ಅದಕ್ಕಾಗಿಯೇ ಆ್ಯಪ್ ಅಭಿವೃದ್ಧಿಪಡಿಸಿ ಜನರ ತೀರ್ಮಾನಕ್ಕೇ ಬಿಡಲಾಗಿದೆ. ನಾವು ಏನಾದರೂ ಮಾತನಾಡಿದರೆ ಸಾಕು ನಮ್ಮನ್ನು ಎಡಪಂಥೀಯ-ಬಲಪಂತೀಯ ಎಂದು ನಿರ್ಧರಿಸಿಬಿಡುತ್ತಾರೆ. ಅದಕ್ಕಾಗಿ ಎಚ್ಚರದಿಂದ ಇರಬೇಕು ಎಂದು ತಿಳಿಸಿದರು.
ಜೀವನದಲ್ಲಿ ಇನ್ನೊಬ್ಬರ ಮೇಲೆ ಅವಲಂಬನೆ ಆಗಿರಬಾರದು. ಸ್ವತಂತ್ರವಾಗಿರಬೇಕು. ಪ್ರಜಾಕೀಯ ಪ್ರಾರಂಭಿಸಿದಾಗ ಬಹಳಷ್ಟು ಸಮಸ್ಯೆ ಎದುರಿಸಿದೆ. ಅದಕ್ಕಾಗಿ ಈಗ ಸಿದ್ಧತೆ ಮಾಡಿಕೊಂಡು ವಿಭಿನ್ನವಾಗಿ ನಿಮ್ಮ ಮುಂದೆ ಬಂದಿದ್ದೇನೆ. ತಂತ್ರಜ್ಞಾನವನ್ನು ಬಳಸಿಕೊಂಡು ಸಮರ್ಥ ಸೇವಕರನ್ನು ಆಯ್ಕೆ ಮಾಡಿಕೊಳ್ಳಬೇಕು, ತಂತ್ರಜ್ಞಾನದ ಮೂಲಕ ಪಾರದರ್ಶಕ ಆಡಳಿತ ನೀಡಬೇಕು ಎಂಬ ಉದ್ದೇಶ ಇದರ ಹಿಂದಿದೆ ಎಂದು ಬಣ್ಣಿಸಿದರು.


