ಬೆಂಗಳೂರು: ರಾಜಕೀಯ ಪ್ರವೇಶಿಸುವ ನಿರ್ಧಾರವನ್ನು ಪ್ರಕಟಿಸಿದ ಬಳಿಕ, ಇದೇ ಮೊದಲ ಬಾರಿಗೆ ಪತ್ರಿಕಾಗೋಷ್ಠಿಯನ್ನುದ್ದೇಶಿ ಮಾತನಾಡಿದ ನಟ ಪ್ರಕಾಶ್ ರೈ, ಬಿಜೆಪಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಬೆಂಗಳೂರಿನ ಪ್ರೆಸ್ ಕ್ಲಬ್‌ನಲ್ಲಿ ಮಾಧ್ಯಮ ವರದಿಗಾರರನ್ನು ಉದ್ದೇಶಿಸಿ ಮಾತನಾಡಿದ ರೈ, ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಕೋಮುವಾದಿ ಶಕ್ತಿಗಳನ್ನು ಸೋಲಿಸುವುದು ಅನಿವಾರ್ಯ ಎಂದಿದ್ದಾರೆ.

ಪ್ರಸಕ್ತ ರಾಜ್ಯ ರಾಜಕಾರಣದ ಬಗ್ಗೆ ಪ್ರತಿಕ್ರಿಯಿಸಿದ ರೈ,  ಆಪರೇಷನ್ ಕಮಲ ಮಾಡುತ್ತಿರುವವರಿಗೆ ನಾಚಿಕೆ ಆಗಬೇಕು. ಹಬ್ಬದ ದಿನ ಇಡೀ ಜನತೆ ಹಬ್ಬ ಮಾಡ್ತಿದ್ರೆ, ಇವರು ರಾಜಕೀಯ ಮಾಡ್ತಿದ್ರು. ಬಿಜೆಪಿಯವರದ್ದು ನಾಚಿಕೆ ಇಲ್ಲದ ಜನ್ಮ, ಎಂದು ಹರಿಹಾಯ್ದಿದ್ದಾರೆ.

ಪ್ರಕಾಶ್‌ ರೈಗೆ ಕಾಂಗ್ರೆಸ್‌ ಬೆಂಬಲವಿಲ್ಲ!

ಮಹಾಘಟಬಂಧನ್ ಜೊತೆ ಸೇರಿದ್ರೆ ಏನು ತಪ್ಪು? ಕೋಮುವಾದಿ ಶಕ್ತಿಗಳನ್ನು ಎದುರಿಸುವ ನಿಟ್ಟಿನಲ್ಲಿ ಮಹಾಘಟಬಂಧನ್ ಇದೆ.  ನಮ್ಮ ಗುರಿ ಒಂದೇ ಇರುವಾಗ ನಾವು ಅವರಿಗೆ ಅಥವಾ ಅವರು ನಮಗೆ ಬೆಂಬಲ ಕೊಟ್ರೆ ತಪ್ಪೇನಿಲ್ಲ, ಎಂಬ ಅಭಿಪ್ರಾಯವನ್ನು ರೈ ವ್ಯಕ್ತಪಡಿಸಿದ್ದಾರೆ.

ಪ್ರಸಕ್ತ ರಾಜಕೀಯ ವ್ಯವಸ್ಥೆ ಹಾಗೂ ರಾಜಕಾರಣಿಗಳ ವಿರುದ್ಧ ಅಸಮಾಧಾನ ಹೊರಹಾಕಿದ ರೈ,  ರಾಜಕೀಯ ಪಕ್ಷಗಳು ಕಳ್ಳರು, ಐದು ವರ್ಷಕ್ಕೊಮ್ಮೆ ಜನರ ಬಳಿ ಬರುತ್ತಾರೆ, ಆಮೇಲೆ ಎಲ್ಲಾವನ್ನು ದೋಚುತ್ತಾರೆ ಎಂದು ಕಿಡಿಕಾರಿದ್ದಾರೆ.

ಬೆಂಗಳೂರು ಸೆಂಟ್ರಲ್ ಯಾಕೆ:

ತನ್ನ ಶಾಲೆ, ಕಾಲೇಜು ವಿದ್ಯಾಭ್ಯಾಸ, ರಂಗಭೂಮಿಗೆ ಪದಾರ್ಪಣೆ, ಚಿತ್ರರಂಗದ ಪ್ರವೇಶ ಎಲ್ಲವೂ ಜರುಗಿದ್ದು ಈ ಬೆಂಗಳೂರು ಸೆಂಟ್ರಲ್‌ನಲ್ಲಿಯೇ. ಇಲ್ಲಿಯ ಅವಶ್ಯಕತೆಗಳನ್ನು ಚೆನ್ನಾಗಿ ಬಲ್ಲೆ. ಹಾಗಾಗಿ ಈ ಕ್ಷೇತ್ರವನ್ನೇ ರಾಜಕೀಯ ಕರ್ಮಭೂಮಿಯಾಗಿ ಆಯ್ಕೆಮಾಡಿದ್ದೇನೆ, ಎಂದು ಪ್ರಕಾಶ್ ರೈ ಹೇಳಿದ್ದಾರೆ.

ಲೋಕಸಭಾ ಚುನಾವಣೆಗೆ ಪ್ರಕಾಶ್ ರೈ ಸ್ಪರ್ಧೆ!: ಯಾವ ಪಕ್ಷದಿಂದ ಸ್ಪರ್ಧಿಸ್ತಾರೆ?

ಸಿನಿಮಾ & ರಾಜಕೀಯ:

ತಾನು ನಟಿಸಿದ ಬಹುತೇಕ ಸಿನಿಮಾಗಳಲ್ಲಿ ಖಳನಟನಾಗಿ ಅಭಿನಯಿಸಿರುವ ರೈ, ಆ ಇಮೇಜ್ ಚುನಾವಣೆ ಮೇಲೆ ಪರಿಣಾಮ ಬೀರಲ್ಲ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ. 

ನನ್ನ‌ ಜವಾಬ್ದಾರಿ ಹೆಚ್ಚಾಗಿದೆ.  ಸಿನಿಮಾ ಹಾಗೂ ರಾಜಕಾರಣ ಎರಡನ್ನೂ ನೋಡಿಕೊಳ್ಳುತ್ತೇನೆ. ಆದರೆ ಸದ್ಯ ಆರು ತಿಂಗಳು ಸಿನಿಮಾ ಮಾಡಲ್ಲ
-ಪ್ರಕಾಶ್ ರೈ

ವಿಲನ್ ಪಾತ್ರ ಮಾಡಿದ್ದೇನೆ, ಅದು ನಟನಾಗಿ ಮಾತ್ರ. ಜನರು ನನ್ನನ್ನು ನಟನನ್ನಾಗಿ ನೋಡ್ತಾರೆ.  ಆದರೆ ಸಿನಿಮಾ ನಿಜವಲ್ಲ ಪಾತ್ರವಷ್ಟೇ, ಎಂಬುವುದು ರೈ ಮಾತು .