ಸಿಇಟಿ ಪರೀಕ್ಷೆಯಲ್ಲಿ ವಿದ್ಯಾರ್ಥಿಯ ಜನಿವಾರ ತೆಗೆಸಿದ್ದು ತಪ್ಪು. ಧಾರ್ಮಿಕ ಸಂಪ್ರದಾಯಗಳಿಗೆ ಧಕ್ಕೆ ತರಬಾರದು. ಇಂತಹ ಘಟನೆಗಳಿಗೆ ನಮ್ಮ ಸರ್ಕಾರ ಅವಕಾಶ ನೀಡುವುದಿಲ್ಲ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಬೆಂಗಳೂರು (ಏ.22): ಸಿಇಟಿ ಪರೀಕ್ಷೆಯಲ್ಲಿ ವಿದ್ಯಾರ್ಥಿಯ ಜನಿವಾರ ತೆಗೆಸಿದ್ದು ತಪ್ಪು. ಧಾರ್ಮಿಕ ಸಂಪ್ರದಾಯಗಳಿಗೆ ಧಕ್ಕೆ ತರಬಾರದು. ಇಂತಹ ಘಟನೆಗಳಿಗೆ ನಮ್ಮ ಸರ್ಕಾರ ಅವಕಾಶ ನೀಡುವುದಿಲ್ಲ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಜನಿವಾರ, ಇಷ್ಟಲಿಂಗ ಕಟ್ಟಿಕೊಳ್ಳುವುದು, ಶಿವದಾರ, ಉಡುದಾರ, ಮಾಂಗಲ್ಯ ಸರ ಧರಿಸುವ ಪದ್ಧತಿಗಳಿವೆ. ಅವು ಅವರ ಧಾರ್ಮಿಕ ಪದ್ಧತಿಗಳು. ಪೊಲೀಸ್ ಮತ್ತಿತರ ನೇಮಕಾತಿ ಸಂದರ್ಭದಲ್ಲಿ ಮಾತ್ರ ಅವುಗಳನ್ನು ಪರಿಶೀಲನೆ ನಡೆಸಲಾಗುತ್ತದೆ.
ಉಳಿದಂತೆ ಶಾಲೆ-ಕಾಲೇಜುಗಳಲ್ಲಿ ಅವುಗಳನ್ನು ತೆಗೆಸುವ ಕೆಲಸವನ್ನು ಯಾರೂ ಮಾಡಬಾರದು ಎಂದರು.ಪರೀಕ್ಷೆ ವೇಳೆ ಕೆಲವರು ಪರೀಕ್ಷಾ ಅಕ್ರಮ ನಡೆಸಲು ಇಯರ್‌ಫೋನ್, ಬ್ಲೂಟೂತ್ ಮುಂತಾದ ಸಣ್ಣ ಡಿವೈಸ್‌ಗಳನ್ನು ಕಿವಿ ಮತ್ತಿತರ ಕಡೆ ಇಟ್ಟುಕೊಂಡಿರುತ್ತಾರೆ. ಅದನ್ನು ಪರಿಶೀಲಿಸುವ ವೇಳೆ ಕರ್ತವ್ಯ ಭಯದಿಂದ ಕೆಲ ಸಿಬ್ಬಂದಿ ಈ ರೀತಿಯ ಕೆಲಸ ಮಾಡಿರಬಹುದು. ಇಂತಹ ಘಟನೆಗಳಿಗೆ ನಮ್ಮ ಸರ್ಕಾರ ಅವಕಾಶ ನೀಡುವುದಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
ದಿನವಿಡೀ ಟೆಂಪಲ್ ರನ್: ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಶನಿವಾರ ರಾತ್ರಿ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಆಗಮಿಸುವ ಮೂಲಕ ಬೆಳ್ತಂಗಡಿ ಪ್ರವಾಸ ಆರಂಭಿಸಿದರು. ಬೆಳಗ್ಗೆ ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಮಾಡಿ ವಿಶೇಷ ಪೂಜೆ ಸಲ್ಲಿಸಿ ತೀರ್ಥ ಪ್ರಸಾದ ಸ್ವೀಕರಿಸುವ ಮೂಲಕ ಟೆಂಪಲ್ ರನ್ ಪ್ರಾರಂಭಿಸಿದರು. ಈ ಸಂದರ್ಭ ಧರ್ಮಾಧಿಕಾರಿ ಡಾ.ಹೆಗ್ಗಡೆ ಅವರನ್ನು ಭೇಟಿ ಮಾಡಿ ಕೆಲಕಾಲ ಮಾತುಕತೆ ನಡೆಸಿದರು. ಅಲ್ಲಿಂದ ಅವರು ವಾಣಿ ಕಾಲೇಜಿನ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಅಲ್ಲಿ ಉಪಸ್ಥಿತರಿದ್ದ ಶೃಂಗೇರಿ ಕಿರಿಯ ಶ್ರೀಗಳ ಆಶೀರ್ವಾದ ಪಡೆದರಲ್ಲದೆ, ಅವರ ಆಶೀರ್ವಚನವನ್ನು ಸಂಪೂರ್ಣ ಆಲಿಸಿಯೇ ಅಲ್ಲಿಂದ ಗುರುವಾಯನಕೆರೆ ಶಕ್ತಿನಗರದಲ್ಲಿನ ಕಾಂಗ್ರೆಸ್ ಸಮಾವೇಶದಲ್ಲಿ ಭಾಗವಹಿಸಿದರು.
ಜಾತಿಗಣತಿಯ ಮೂಲ ಪ್ರತಿ ಸಿದ್ದರಾಮಯ್ಯ ಮನೆಯಲ್ಲಿದೆ: ಆರ್.ಅಶೋಕ್
ಬಳಿಕ ಮಧ್ಯಾಹ್ನ ಸನಿಹದ ಎಕ್ಸೆಲ್ ಕಾಲೇಜಿಗೆ ಭೇಟಿ ನೀಡಿ ಅಲ್ಲಿ ಸ್ಥಾಪಿಸಲ್ಪಟ್ಟ ವಿದ್ಯಾಗಣಪತಿಗೆ ಪೂಜೆ ಸಲ್ಲಿಸುವ ಮೂಲಕ ಮೂರ್ತಿಯ ದರ್ಶನಕ್ಕೆ ಚಾಲನೆ ನೀಡಿದರು. ಸಂಜೆ ಅವರು ನೇರವಾಗಿ ಮತ್ತೊಮ್ಮೆ ಧರ್ಮಸ್ಥಳಕ್ಕೆ ತೆರಳಿ ಕಲ್ಯಾಣಮಂಟಪಗಳ ಸಮುಚ್ಚಯವನ್ನು ಉದ್ಘಾಟಿಸಿದರು. ಅಲ್ಲಿ ಹೆಗ್ಗಡೆ ಅವರನ್ನು ಮತ್ತೊಮ್ಮೆ ಭೇಟಿ ಮಾಡಿ ಆಶೀರ್ವಾದ ಪಡೆದರು. ಧರ್ಮಸ್ಥಳದ ಸಭಾ ಕಾರ್ಯಕ್ರಮ ಮುಗಿಸಿದ ಬಳಿಕ ಉಪಮುಖ್ಯಮಂತ್ರಿ, ಸನಿಹದ ಶ್ರೀರಾಮ ಮಂದಿರಕ್ಕೆ ಭೇಟಿ ನೀಡಿ ಶ್ರೀರಾಮ ಪರಿವಾರದ ದರ್ಶನ ಮಾಡಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಅಲ್ಲಿನ ಮಹಾಮಂಡಲೇಶ್ವರ ಶ್ರೀ ಬ್ರಹ್ಮಾನಂದ ಸರಸ್ವತೀ ಸ್ವಾಮೀಜಿಗಳ ಆಶೀರ್ವಾದ ಪಡೆದರು. ಶ್ರೀಗಳು ಮೇ 18, 19ರಂದು ಅಯೋಧ್ಯೆಯಲ್ಲಿ ನಡೆಯುವ ಮಠದ ಶಾಖಾ ಕಟ್ಟಡದ ಶಿಲಾನ್ಯಾಸಕ್ಕೆ ಅವರನ್ನು ಆಹ್ವಾನಿಸಿದರು.
