ಮತದಾರರಿಗೆ ಉಡುಗೊರೆ: ಕುಸುಮಾ, ಡಿಕೆಸು ಸೇರಿ ಮೂವರ ವಿರುದ್ಧ ಕೇಸ್
ಮತದಾರರಿಗೆ ಆಮಿಷವೊಡ್ಡಿದ ಆರೋಪದಡಿ ರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕುಸಮಾ ಹನುಮಂತರಾಯಪ್ಪ, ಸಂಸದ ಡಿ.ಕೆ.ಸುರೇಶ್ ಸೇರಿದಂತೆ ಮೂವರು ವಿರುದ್ಧ ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಬೆಂಗಳೂರು (ಏ.08): ಮತದಾರರಿಗೆ ಆಮಿಷವೊಡ್ಡಿದ ಆರೋಪದಡಿ ರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಹನುಮಂತರಾಯಪ್ಪ, ಸಂಸದ ಡಿ.ಕೆ.ಸುರೇಶ್ ಸೇರಿದಂತೆ ಮೂವರು ವಿರುದ್ಧ ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಫ್ಲೈಯಿಂಗ್ ಸ್ಕ್ವಾಡ್ ಅಸಿಸ್ಟೆಂಟ್ ಕಂಟ್ರೋಲರ್ ಎಂ.ಎಸ್.ಕುಮಾರ್ ನೀಡಿದ ದೂರಿನ ಮೇರೆಗೆ ಜವರೇಗೌಡನದೊಡ್ಡಿ ನಿವಾಸಿ ಜಗದೀಶ್, ಕಾಂಗ್ರೆಸ್ ಅಭ್ಯರ್ಥಿ ಕುಸಮಾ ಹನುಮಂತರಾಯಪ್ಪ, ಸಂಸದ ಡಿ.ಕೆ.ಸುರೇಶ್ ವಿರುದ್ಧ ಎಫ್‌ಐಆರ್ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಏ.5ರಂದು ರಾತ್ರಿ 10ರ ಸುಮಾರಿಗೆ ರಾಜರಾಜೇಶ್ವರಿ ನಗರದ ಕಾಳೇಗೌಡನ ಲೇಔಟ್‌ನ 2ನೇ ಅಡ್ಡರಸ್ತೆಯಲ್ಲಿ ಮತದಾರರಿಗೆ ಅಡುಗೆ ಸಾಧನಗಳನ್ನು ಹಂಚುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದಾಗ ಜಗದೀಶ್ ಎಂಬಾತ ಸಿಕ್ಕಿಬಿದ್ದಿದ್ದ. ಈತನನ್ನು ವಶಕ್ಕೆ ಪಡೆದು ಅಡುಗೆ ಸಾಧನಗಳನ್ನು ಜಪ್ತಿ ಮಾಡಲಾಗಿತ್ತು. ಈ ಉಡುಗೊರೆ ಬಾಕ್ಸ್‌ಗಳ ಮೇಲೆ ಡಿ.ಕೆ.ಸುರೇಶ್ ಮತ್ತು ಕುಸಮಾ ಅವರ ಭಾವಚಿತ್ರ ಮುದ್ರಿಸಿರುವುದು ಕಂಡು ಬಂದಿತ್ತು. ದಾಳಿ ವೇಳೆ ಇಬ್ಬರು ಪರಾರಿಯಾಗಿದ್ದರು. ಈ ಹಿನ್ನೆಲೆಯಲ್ಲಿ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆರೋಪದಡಿ ಎನ್‌ಸಿಆರ್ ದಾಖಲಿಸಲಾಗಿತ್ತು. ಇದೀಗ ನ್ಯಾಯಾಲಯದ ಅನುಮತಿ ಪಡೆದು ಮೂವರ ವಿರುದ್ಧ ಎಫ್‌ಐಆರ್ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಿದ್ದರಾಮಯ್ಯ ಸ್ಪರ್ಧೆ: ವರುಣದಲ್ಲಿ ಜೆಡಿಎಸ್ ಸ್ಪರ್ಧಿ ನಿಷ್ಕ್ರಿಯ!
ಕಾರಲ್ಲಿ ಸೀರೆ, ಪಂಚೆ, ಶಾಲು ಪತ್ತೆ, ಸೌಮಾರೆಡ್ಡಿ ವಿರುದ್ಧ ಕೇಸ್ ಹಾಕಿ: ನೀತಿ ಸಂಹಿತೆ ಉಲ್ಲಂಘನೆ ಆರೋಪದಡಿ ವಶಕ್ಕೆ ಪಡೆದಿರುವ ಕಾರಿನ ಮಾಲಿಕರಾದ ಶಾಸಕಿ ಸೌಮ್ಯಾರೆಡ್ಡಿ ವಿರುದ್ಧವೂ ಪ್ರಕರಣ ದಾಖಲಿಸುವಂತೆ ಪೊಲೀಸರಿಗೆ ಸೂಚಿಸಬೇಕು ಎಂದು ಚುನಾವಣಾ ಆಯೋಗಕ್ಕೆ ಬಿಜೆಪಿ ಬೆಂಗಳೂರು ದಕ್ಷಿಣ ಜಿಲ್ಲೆ ಅಧ್ಯಕ್ಷ ಎನ್.ಆರ್.ರಮೇಶ್ ದೂರು ನೀಡಿದ್ದಾರೆ. ಜಯನಗರದಲ್ಲಿ ವಾಹನಗಳ ತಪಾಸಣೆ ವೇಳೆ ಸೌಮ್ಯಾರೆಡ್ಡಿ ಅವರ ಇನ್ನೋವಾ ಕಾರನ್ನು ಪರಿಶೀಲಿಸಲಾಗಿದೆ. ಈ ವೇಳೆ ವಾಹನದಲ್ಲಿ 20 ಸೀರೆಗಳು, ಎರಡು ಪಂಚೆಗಳು, 13 ಶಾಲುಗಳು, 14 ಮೊಬೈಲ್‌ಗಳು, ಪ್ಲಾಸ್ಟಿಕ್ ಹಾರಗಳು ಪತ್ತೆಯಾಗಿವೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರಿನ ಚಾಲಕ ರಾಮಚಂದ್ರ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಆದರೆ, ಕಾರಿನ ಮಾಲಿಕರಾದ ಸೌಮ್ಯಾರೆಡ್ಡಿ ವಿರುದ್ಧ ಪ್ರಕರಣ ದಾಖಲಿಸಿಲ್ಲ. ಸೌಮ್ಯಾರೆಡ್ಡಿ ಅವರು ಶಾಸಕಿ ಮತ್ತು ಮಾಜಿ ಸಚಿವ ರಾಮಲಿಂಗಾರೆಡ್ಡಿ ಪುತ್ರಿಯಾಗಿರುವ ಕಾರಣ ಯಾವುದೇ ಪ್ರಕರಣ ದಾಖಲು ಮಾಡಿಲ್ಲ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಚುನಾವಣಾ ಆಯೋಗವು ತಕ್ಷಣ ಪೊಲೀಸರಿಗೆ ಪ್ರಕರಣ ದಾಖಲಿಸುವಂತೆ ಸೂಚನೆ ನೀಡಬೇಕು. ಎಸಿಪಿ ಅಧಿಕಾರಿಯು ತಿಲಕನಗರ ಪೊಲೀಸ್ ಠಾಣೆ ಪೊಲೀಸರಿಗೆ ಪ್ರಕರಣ ದಾಖಲಿಸುವಂತೆ ನಿರ್ದೇಶನ ನೀಡಿಲ್ಲ. ಪಾರದರ್ಶಕವಾಗಿ ನಡೆದುಕೊಳ್ಳದೆ ಒತ್ತಡಕ್ಕೆ ಮಣಿದಿರುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ತಕ್ಷಣ ಆಯೋಗವು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಉಲ್ಲೇಖಿಸಲಾಗಿದೆ.
ದೂರು ನೀಡಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ರಮೇಶ್, ಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕಿ ಸೌಮ್ಯಾರೆಡ್ಡಿ ಮಾಲಿಕತ್ವದ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಕಾರಿನಲ್ಲಿ ಸ್ಯಾಮ್ಸಂಗ್, ನೋಕಿಯಾ ಮೊಬೈಲ್ ಸೇರಿದಂತೆ ಇತರೆ ವಸ್ತುಗಳು ಪತ್ತೆಯಾಗಿವೆ. ವಾಹನ ಚಾಲಕ ರಾಮಚಂದ್ರ ಮೇಲೆ ಮಾತ್ರ ದೂರು ದಾಖಲಾಗಿದೆ. ವಾಹನದ ನಿಜವಾದ ಮಾಲಿಕರ ಮೇಲೆ ದೂರು ದಾಖಲಾಗಿಲ್ಲ ಎಂದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.
ಏ.9 ಅಥವಾ 10ಕ್ಕೆ ಜೆಡಿಎಸ್ ಅಂತಿಮ ಪಟ್ಟಿ ಬಿಡುಗಡೆ: ಎಚ್.ಡಿ.ಕುಮಾರಸ್ವಾಮಿ
ಕಾರಿನ ನಿಜವಾದ ಮಾಲಿಕರಾದ ಸೌಮ್ಯಾರೆಡ್ಡಿ ವಿರುದ್ಧ ಪ್ರಕರಣ ದಾಖಲಿಸಬೇಕು. ಒಂದು ವೇಳೆ ಪ್ರಕರಣ ದಾಖಲಿಸಿಕೊಳ್ಳದಿದ್ದರೆ ಮುಂದಿನ ದಿನದಲ್ಲಿ ಹೋರಾಟ ಮಾಡಲಾಗುವುದು.
-ಎನ್.ಆರ್.ರಮೇಶ್, ಬಿಜೆಪಿ ಮುಖಂಡ