ಜಾತಿ ಗಣತಿ ವರದಿ ಅಂಗೀಕರಿಸಿ ಮೀಸಲಾತಿ ಗೊಂದಲಕ್ಕೆ ತೆರೆ: ಸಿಎಂ ಸಿದ್ದರಾಮಯ್ಯ ಭರವಸೆ
ಶಾಶ್ವತ ಹಿಂದುಳಿದ ವರ್ಗಗಳ ಆಯೋಗವು ನಡೆಸಿದ್ದ ಜಾತಿವಾರು ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ವರದಿಯನ್ನು ಸ್ವೀಕರಿಸಿ, ಬಿಜೆಪಿ ಸರ್ಕಾರ ಸೃಷ್ಟಿಸಿದ್ದ ಮೀಸಲಾತಿ ಗೊಂದಲ ನಿವಾರಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.
ಬೆಂಗಳೂರು (ಜೂ.08): ಶಾಶ್ವತ ಹಿಂದುಳಿದ ವರ್ಗಗಳ ಆಯೋಗವು ನಡೆಸಿದ್ದ ಜಾತಿವಾರು ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ವರದಿಯನ್ನು ಸ್ವೀಕರಿಸಿ, ಬಿಜೆಪಿ ಸರ್ಕಾರ ಸೃಷ್ಟಿಸಿದ್ದ ಮೀಸಲಾತಿ ಗೊಂದಲ ನಿವಾರಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.
ಗೃಹ ಕಚೇರಿ ಕೃಷ್ಣಾದಲ್ಲಿ ತಮ್ಮನ್ನು ಭೇಟಿಯಾದ ಕರ್ನಾಟಕ ಶೋಷಿತ ವರ್ಗಗಳ ಮಹಾ ಒಕ್ಕೂಟದ ನಿಯೋಗದಿಂದ ಮನವಿ ಸ್ವೀಕರಿಸಿ ಮಾತನಾಡಿದ ಅವರು, ಹಿಂದಿನ ತಮ್ಮ ಸರ್ಕಾರದ ಅವಧಿಯಲ್ಲಿ ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ಕೈಗೊಳ್ಳಲಾದ ಜಾತಿವಾರು ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ವರದಿಯನ್ನು ಸ್ವೀಕರಿಸಿ, ಅದರ ದತ್ತಾಂಶದ ಆಧಾರದಲ್ಲಿ ಸಮುದಾಯಗಳಿಗೆ ಅನುಕೂಲ ಕಲ್ಪಿಸಲಾಗುವುದು ಎಂದು ಸ್ಪಷ್ಟಪಡಿಸಿದರು.
ಬಿಜೆಪಿ ಕಾಲದ 3 ಕಾಯ್ದೆಗಳು ಮರುಪರಿಶೀಲನೆ: ಸಿಎಂ ಸಿದ್ದರಾಮಯ್ಯ
ವರದಿಯನ್ನು ಸ್ವೀಕರಿಸಿ ಹಿಂದಿನ ಬಿಜೆಪಿ ಸರ್ಕಾರ ಸೃಷ್ಟಿಸಿದ್ದ ಮೀಸಲಾತಿ ಗೊಂದಲ ನಿವಾರಿಸಲಾಗುವುದು. ಇಲ್ಲದಿದ್ದರೆ ಯಾರಿಗೂ ಸಾಮಾಜಿಕ ನ್ಯಾಯ ಒದಗಿಸಲು ಸಾಧ್ಯವಾಗುವುದಿಲ್ಲ. ಎಲ್ಲರಿಗೂ ನ್ಯಾಯ ಒದಗಿಸಬೇಕು ಎಂದು ತಾವು ಈ ಹಿಂದೆ ಮುಖ್ಯಮಂತ್ರಿಯಾಗಿದ್ದಾಗ ಎಚ್.ಕಾಂತರಾಜು ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿತ್ತು ಎಂದು ತಿಳಿಸಿದರು.
ನಿಖರ ಮಾಹಿತಿಗಾಗಿಯೇ ಸಮೀಕ್ಷೆ: ಜಾತಿವಾರು ಸಮೀಕ್ಷೆಯ ಅಂಶಗಳ ಆಧಾರದ ಮೇಲೆ ವಿವಿಧ ಸಮುದಾಯದವರಿಗೆ ಸೌಲಭ್ಯ ಒದಗಿಸಲು ಅನುಕೂಲವಾಗಲಿದೆ. ಮೀಸಲಾತಿ ಮತ್ತಿತರ ಸೌಲಭ್ಯಗಳನ್ನು ಒದಗಿಸಲು ವೈಜ್ಞಾನಿಕ ಹಾಗೂ ನಿಖರ ಮಾಹಿತಿ ಅಗತ್ಯವಾಗಿದೆ. ಈ ಉದ್ದೇಶಕ್ಕಾಗಿಯೇ ಜಾತಿವಾರು ಸಮೀಕ್ಷೆ ನಡೆಸಲಾಗಿತ್ತು. ಇದೀಗ ವರದಿಯನ್ನು ಸ್ವೀಕರಿಸಿ, ಅದರಲ್ಲಿನ ದತ್ತಾಂಶಗಳ ಆಧಾರದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ವಿವರಿಸಿದರು.
ಇದೇ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರನ್ನು ನಿಯೋಗದಿಂದ ಅಭಿನಂದಿಸಲಾಯಿತು. ಒಕ್ಕೂಟದ ಮುಖಂಡ ಕೆ.ಎಂ.ರಾಮಚಂದ್ರಪ್ಪ ಅವರ ನೇತೃತ್ವದಲ್ಲಿ ಪ್ರೊ.ರವಿವರ್ಮ ಕುಮಾರ್, ಅನಂತ್ ನಾಯಕ್, ಡಾ.ನರಸಿಂಹಯ್ಯ, ಪ್ರೊ.ಜಾಫೆಟ್, ಬಿ.ಟಿ.ಲಲಿತಾನಾಯಕ್, ಜಿ.ಎಸ್.ಪಾಟೀಲ ಸೇರಿ ವಿವಿಧ ಸಮುದಾಯಗಳ 150 ಕ್ಕೂ ಅಧಿಕ ಪ್ರತಿನಿಧಿಗಳು, ಮುಖಂಡರು ಹಾಜರಿದ್ದರು.
ಧ್ವನಿ ಇಲ್ಲದವರಿಗೆ ಧ್ವನಿ ನೀಡಿದ ಅರಸು ಎಲ್ಲರಿಗೂ ಮಾದರಿ: ಸಿದ್ದರಾಮಯ್ಯ
ಷರತ್ತಿನ ಬೆಂಬಲ ನೀಡಲಾಗಿತ್ತು: ಜಾತಿವಾರು ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ವರದಿ ಸ್ವೀಕರಿಸುವುದಾಗಿ ವಿಧಾನ ಸಭಾ ಚುನಾವಣೆಯ ಪ್ರಣಾಳಿಕೆಯಲ್ಲಿ ಕಾಂಗ್ರೆಸ್ ಭರವಸೆ ನೀಡಿತ್ತು. ವರದಿ ಸ್ವೀಕರಿಸಬೇಕು ಎಂಬ ಷರತ್ತು ವಿಧಿಸಿಯೇ ಕರ್ನಾಟಕ ಶೋಷಿತ ವರ್ಗಗಳ ಮಹಾ ಒಕ್ಕೂಟ ಚುನಾವಣೆಯಲ್ಲಿ ಬೆಂಬಲ ನೀಡಿತ್ತು. ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವರದಿ ಸ್ವೀಕರಿಸಲು ಒಪ್ಪಿದ್ದಾರೆ ಎಂದು ಮುಖಂಡ ಮಾವಳ್ಳಿ ಶಂಕರ್ ತಿಳಿಸಿದರು.