* ಶಾಸಕ ಜಮೀರ್ ಅಹ್ಮದ್‌ಗೆ ACB ಶಾಕ್ * 8 ಗಂಟೆ ಕಾಲ ಸುದೀರ್ಘ ಶೋಧಕಾರ್ಯ* ಜೀವಂತ ಗುಂಡುಗಳು ಪತ್ತೆ

ಬೆಂಗಳೂರು, (ಜುಲೈ.05): ಆಸ್ತಿಗಳಿಕೆ ಆರೋಪದಡಿ ಚಾಮರಾಜಪೇಟೆ ಕ್ಷೇತ್ರದ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್(Zameer Ahmad) ಮೇಲೆ ಎಸಿಬಿ(ACB) ರೇಡ್ ಮಾಡಿದೆ. ಇಂದು(ಜುಲೈ.05) ಬೆಳಗ್ಗೆ ಮನೆ, ಕಚೇರಿ ಸೇರಿ 5 ಕಡೆ, 40 ಜನರ ತಂಡದಿಂದ ನಡೆದ ರೇಡ್ ಮಾಡಿದ್ದು, ಇದೀಗ ಪರಿಶೀಲನೆ ಅಂತ್ಯವಾಗಿದೆ.

 8 ಗಂಟೆ ಕಾಲ ಸುದೀರ್ಘ ಶೋಧಕಾರ್ಯ ನಡೆಸಿದ ಅಧಿಕಾರಿಗಳು ಹಲವು ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ. ಅಲ್ಲದೇ ಪ್ರಿಂಟರ್ ತಂದು ಕೆಲವು ದಾಖಲೆಗಳನ್ನ ಜೆರಾಕ್ಸ್ ಮಾಡಿಕೊಂಡು ವಶಕ್ಕೆ ಪಡೆದಿದ್ದಾರೆ. ಇನ್ನೂ ಸಿಲ್ವರ್ ಓಕ್ ಅಪಾರ್ಟ್ಮೆಂಟ್‌ನಲ್ಲಿ 25 ಜೀವಂತ ಗುಂಡುಗಳು ಪತ್ತೆಯಾಗಿವೆ. 

ಜಮೀರ್ ಅಹ್ಮದ್‌ ಖಾನ್‌ಗೆ ಎಸಿಬಿ ಶಾಕ್, ಬಿಟ್ಟೂ ಬಿಡದೆ ಕಾಡ್ತಿರುವ ಐಎಂಎ ಉರುಳು..

ಎಸಿಬಿಯ 14 ಅಧಿಕಾರಿಗಳ ತಂಡ ಜಮೀರ್‌ರ ಕಂಟೋನ್ಮೆಂಟ್ ರೈಲ್ವೆ ಸ್ಟೇಷನ್ ಬಳಿಯ ನಿವಾಸ, ಸಿಲ್ವರ್ ಓಕ್ ಅಪಾರ್ಟ್‌ಮೆಂಟ್‌ನಲ್ಲಿರುವ 3 ಬಿಎಚ್‌ಕೆ ಫ್ಲ್ಯಾಟ್, ಸದಾಶಿವನಗರದ ಗೆಸ್ಟ್‌ಹೌಸ್, ಬನಶಂಕರಿಯಲ್ಲಿರುವ ಜಿ.ಕೆ.ಅಸೋಸಿಯೇಟ್ಸ್ ಕಚೇರಿ, ಕಲಾಸಿಪಾಳ್ಯದ ಟ್ರಾವೆಲ್ಸ್ ಕಚೇರಿ ಮೇಲೂ ಎಸಿಬಿ ದಾಳಿ ನಡೆಸಿ ಮಹತ್ವದ ದಾಖಲೆಗಳನ್ನು ಕಲೆಹಾಕಿದೆ.

ಜಾರಿ ನಿರ್ದೇಶನಾಲಯದ ವರದಿಯ ಆಧಾರದ ಮೇಲೆ ಭ್ರಷ್ಟಾಚಾರ ನಿಗ್ರಹದ ದಳದ ಅಧಿಕಾರಿಗಳು ಶಾಸಕ ಜಮೀರ್ ಅಹ್ಮದ್‌ ಖಾನ್ ಅವರ ವಿರುದ್ಧ ಅಕ್ರಮ ಆಸ್ತಿ ಪ್ರಕರಣ ದಾಖಲಿಸಿಕೊಂಡಿದ್ದು, ಜಮೀರ್ ಖಾನ್ ಅವರಿಗೆ ಸೇರಿದ ಐದು ಕಡೆಗಳಲ್ಲಿ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. 

ಕಳೆದ ವರ್ಷ ಕೂಡ ಶಾಸಕ ಜಮೀರ್ ಅಹ್ಮದ್ ಖಾನ್ ಅವರ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿ ಪ್ರಮುಖ ದಾಖಲೆಗಳನ್ನು ಪರಿಶೀಲಿಸಿದ್ದರು. ಜಮೀರ್ ಅಹ್ಮದ್ ಅವರು ಕೋಟ್ಯಂತರ ಮೌಲ್ಯದ ಭವ್ಯವಾದ ಮನೆ ಕಟ್ಟಿರುವುದರ ಮೇಲೆ ಕಣ್ಣಿಟ್ಟಿದ್ದ ಅಧಿಕಾರಿಗಳು ಅದರ ಆದಾಯ ಮೂಲ ಯಾವುದು ಎಂದು ಪರಿಶೀಲಿಸಿದ್ದರು. ಜೊತೆಗೆ ನ್ಯಾಷನಲ್ ಟ್ರಾವೆಲ್ಸ್‌ ಸೇರಿದಂತೆ ಜಮೀರ್ ಖಾನ್‌ಗೆ ಸಂಬಂಧಿಸಿದಂತೆ ಮನೆ, ಕಚೇರಿ ಇನ್ನಿತರ ಕಡೆ ಪರಿಶೀಲನೆ ನಡೆಸಿದ್ದರು.