ಬೇರೆ ಪಕ್ಷದವರು ನಮ್ಮ ಸಂಪರ್ಕದಲ್ಲಿದ್ದಾರೆ. ಆದರೆ, ನಮ್ಮ ಪಕ್ಷದ ಸಿದ್ಧಾಂತವೇ ಬೇರೆ. ಅವರನ್ನು ಕರೆದುಕೊಂಡು ಬಂದರೆ ಗೆಲ್ಲುತ್ತೇವೆ ಎನ್ನುವ ಪರಿಸ್ಥಿತಿ ನಮ್ಮಲ್ಲಿಲ್ಲ: ಪೃಥ್ವಿ ರೆಡ್ಡಿ 

ಬಾಗಲಕೋಟೆ(ಡಿ.06): ಗುಜರಾತ್‌ನಲ್ಲಿ ಆಮ್‌ ಆದ್ಮಿ ಪಕ್ಷ ಗೆಲವು ಕಾಣಲಿದ್ದು, ಎಎಪಿಯ ಸರ್ಕಾರ ರಚನೆ ಮಾಡಲಿದೆ ಎಂದು ಆಮ್‌ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗುಜರಾತ್‌ನಲ್ಲಿ ಎಎಪಿ ಒಂದು ರು. ಖರ್ಚು ಮಾಡದೇ ನಮ್ಮ ರಾರ‍ಯಲಿಗಳಿಗೆ ಜನ ಹರಿದು ಬರುತ್ತಿದೆ. ದೆಹಲಿ, ಪಂಜಾಬನಲ್ಲಿ ಆಪ್‌ನಿಂದ ಆಗಿರುವ ಅಭಿವೃದ್ಧಿ ಕೆಲಸ ನೋಡಿ ಜನರು ಖುಷಿ ಪಟ್ಟು ನಮ್ಮನ್ನು ಸ್ವಾಗತ ಮಾಡುತ್ತಿದ್ದಾರೆ. ಬಿಜೆಪಿಯವರು ದುಟ್ಟು ಕೊಟ್ಟರೂ ಕುರ್ಚಿ ತುಂಬಿಸುವುದಕ್ಕೆ ಆಗದ ಸ್ಥಿತಿಗೆ ಬಂದಿದೆ ಎಂದು ಟೀಕಿಸಿದರು.

ಆಪ್‌ ಆಡಳಿತ ನೋಡಿ ರಾಜಕೀಯ ಬೇರೆ ರೀತಿ ಆಗುವುದಕ್ಕೆ ಸಾಧ್ಯ ಎಂದು ಜನರಿಗೆ ನಂಬಿಕೆ ಬರುತ್ತದೆ. ದೆಹಲಿ ಎಂಸಿಡಿ ಚುನಾವಣೆ ಪ್ರಚಾರಕ್ಕೆ ಹೋದಾಗ ಅಲ್ಲಿಯ ಜನ ಯಾಕೆ ಪ್ರಚಾರ ಮಾಡೋಕೆ ಬರುತ್ತೀರಾ ನಿಮ್ಮನ್ನು ಬಿಟ್ಟು ಯಾರಿಗೂ ವೋಟ್‌ ಹಾಕಲ್ಲ ಎನ್ನುತ್ತಿದ್ದಾರೆ. ಆಪ್‌ದವರು ನಮ್ಮ ಜೀವನದಲ್ಲಿ ಒಂದು ಬದಲಾವಣೆ ತಂದಿದ್ದೀರಾ ಎಂದು ಸಂತಸ ವ್ಯಕ್ತಪಡಿಸುತ್ತಾರೆ ಎಂದರು.

ಮೈದಾನ ತಯಾರಿದೆ, ಅಖಾಡಕ್ಕೆ ಧುಮುಕಿ: ಪರೋಕ್ಷವಾಗಿ ಜಾರಕಿಹೊಳಿಗೆ ಹೆಬ್ಬಾಳಕರ ಸವಾಲು

ದೆಹಲಿಯ ಎಂಸಿಡಿ ಚುನಾವಣೆ ಉದ್ದೇಶಪೂರ್ವಕವಾಗಿ ನಡೆಸುತ್ತಿದ್ದು, ಗುಜರಾತ್‌ ಚುನಾವಣೆ ಒಂದನೇ ಹಾಗೂ ಎರಡನೇ ಹಂತದ ಮಧ್ಯದಲ್ಲಿ ನಡೆಸಿದ್ದಾರೆ. ನಮ್ಮ ಪಕ್ಷದಲ್ಲಿ ಹಣದ ಕೊರತೆ ಇದೆ. ಅದೆಲ್ಲ ಇದ್ದರೂ ಎಂಸಿಡಿ ಚುನಾವಣೆ ಕ್ಲೀನ್‌ ಸ್ವೀಪ್‌ ಮಾಡುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಜನಾರ್ಧನ ರೆಡ್ಡಿ ಹೊಸ ಪಕ್ಷ ಕಟ್ಟುವ ಬಗ್ಗೆ ಪ್ರಶ್ನಿಸಿದ್ದಕ್ಕೆ ಪೃಥ್ವಿ ರಡ್ಡಿ ಅವರು, ನಾವು ಬೇರೆ ವ್ಯಕ್ತಿ ಬಗ್ಗೆ ಮಾತನಾಡುವುದು ಬೇಕಿಲ್ಲ. ನಾವು ಮಾತನಾಡುವುದು ಭ್ರಷ್ಟಾಚಾರ ಮತ್ತು ಅನ್ಯಾಯದ ಬಗ್ಗೆ ಮಾತ್ರ. ನಮ್ಮ ಅಭಿಪ್ರಾಯದಲ್ಲಿ ಮೂರು ಪಕ್ಷದ ರಾಜಕೀಯ ಒಂದೇ. ಹೆಸರು ಮಾತ್ರ ಬೇರೆ ಬೇರೆ ಇಟ್ಟುಕೊಳ್ಳುತ್ತಾರೆ. ಆದರೆ, ಅವರ ರಾಜಕೀಯ ಒಂದೇ. ರಾಜ್ಯದಲ್ಲಿನ ಪಕ್ಷಗಳಲ್ಲಿ ನಿಮ್ಮ ಲಿಸ್ಟ್‌ನಲ್ಲಿ ಅಷ್ಟು ರೌಡಿಗಳಿದ್ದಾರೆ. ನಮ್ಮ ಲಿಸ್ಟ್‌ನಲ್ಲಿ ಇಷ್ಟು ರೌಡಿಗಳಿದ್ದಾರೆ ಎಂಬುದರ ಚರ್ಚೆಯೇ ಹೆಚ್ಚಾಗಿದೆ. ಆದರೆ, ನಾವು ತೋರಿಸ್ತೀವಿ. ನಮ್ಮ ಕ್ಲೀನ್‌ ಲಿಸ್ಟ್‌ ಶೀಟ್‌ ತೋರಿಸುತ್ತೇವೆ ಎಂದು ತಿಳಿಸಿದರು.

ಬೇರೆ ಪಕ್ಷದವರು ನಮ್ಮ ಸಂಪರ್ಕದಲ್ಲಿದ್ದಾರೆ. ಆದರೆ, ನಮ್ಮ ಪಕ್ಷದ ಸಿದ್ಧಾಂತವೇ ಬೇರೆ. ಅವರನ್ನು ಕರೆದುಕೊಂಡು ಬಂದರೆ ಗೆಲ್ಲುತ್ತೇವೆ ಎನ್ನುವ ಪರಿಸ್ಥಿತಿ ನಮ್ಮಲ್ಲಿಲ್ಲ. ಜನಸಾಮಾನ್ಯರನ್ನ ನಿಲ್ಲಿಸಿ ಗೆಲ್ಲಿಸುವ ರಾಜಕೀಯ ನಾವು ಮಾಡುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.