ಚುನಾವಣೆ ಬೆನ್ನಲ್ಲೇ ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದ ಆಪ್, ರಾಷ್ಟ್ರೀಯ ಪಕ್ಷಕ್ಕಾಗಿ ಪಟ್ಟು!
ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಖಾತೆ ತೆರೆಯಲು ಮುಂದಾಗಿರುವ ಆಮ್ ಆದ್ಮಿ ಪಾರ್ಟಿ, ಇದೀಗ ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದೆ. ಚುನಾವಣಾ ಆಯೋಗದ ವಿರುದ್ಧ ದೂರು ನೀಡಿರುವ ಆಪ್, ರಾಷ್ಟ್ರೀಯ ಪಕ್ಷ ಸ್ಥಾನಮಾನ ನೀಡಲು ಪಟ್ಟು ಹಿಡಿದಿದೆ.
ಬೆಂಗಳೂರು(ಏ.06): ಕರ್ನಾಟಕ ವಿಧಾನಸಭಾ ಚುನಾವಣೆಗೆ ಕೆಲ ದಿನಗಳು ಮಾತ್ರ ಬಾಕಿ ಇದೆ. ಬಿಜೆಪಿ ಅಧಿಕಾರ ಉಳಿಸಿಕೊಳ್ಳಲು ತಯಾರಿ ನಡೆಸಿದರೆ, ಕಾಂಗ್ರೆಸ್ ಮರಳಿ ಅಧಿಕಾರಕ್ಕೇರುವ ಕನಸು ಕಂಡಿದೆ. ಇತ್ತ ಜೆಡಿಎಸ್ ಕಿಂಗ್ ಮೇಕರ್ ಆಗುವ ಪ್ರಯತ್ನದಲ್ಲಿದೆ. ಇದರ ನಡುವೆ ಆಮ್ ಆದ್ಮಿ ಪಾರ್ಟಿ ಕರ್ನಾಟಕದಲ್ಲಿ ಖಾತೆ ತೆರೆಯಲು ತಯಾರಿ ನಡೆಸುತ್ತಿದೆ. ಕರ್ನಾಟಕ ಜನರ ಮೋಡಿ ಮಾಡಲು ಆಮ್ ಆದ್ಮಿ ಪಾರ್ಟಿ ಇದೀಗ ಹೊಸ ದಾಳ ಉರುಳಿಸಿದೆ. ಕರ್ನಾಟಕ ಚುಾವಣೆಗೆ ರಾಷ್ಟ್ರೀಯ ಪಕ್ಷದ ಸ್ಥಾನಮಾನ ಹಿಡಿದು ಅಖಾಡಕ್ಕೆ ಧುಮುಕಲು ಆಪ್ ಸಜ್ಜಾಗಿದೆ. ಆದರೆ ಚುನಾವಣಾ ಆಯೋಗ ಆಮ್ ಆದ್ಮಿ ಪಾರ್ಟಿಗೆ ರಾಷ್ಟ್ರೀಯ ಪಕ್ಷದ ಸ್ಥಾನ ಮಾನ ನೀಡಿಲ್ಲ. ಇದರ ವಿರುದ್ಧ ಆಮ್ ಆದ್ಮಿ ಪಾರ್ಟಿ ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದೆ.
ಆಮ್ ಆದ್ಮಿ ಪಾರ್ಟಿ ರಾಷ್ಟ್ರೀಯ ಪಕ್ಷದ ಸ್ಥಾನಮಾನಕ್ಕೆ ಬೇಕಾದ ಎಲ್ಲಾ ಅರ್ಹ ಪಡೆದಿದೆ. ಆದರೆ ಚುನಾವಣಾ ಆಯೋಗ ರಾಷ್ಟ್ರೀಯ ಸ್ಥಾನಮಾನ ನೀಡಲು ಹಿಂದೇಟು ಹಾಕುತ್ತಿದೆ. ಚುನಾವಣಾ ಆಯೋಗ ಉದ್ದೇಶಪೂರ್ವಕವಾಗಿ ವಿಳಂಭ ಮಾಡುತ್ತಿದೆ ಎಂದು ಆಮ್ ಆದ್ಮಿ ಪಾರ್ಟಿ ಆರೋಪಿಸಿದೆ. ಈ ಕುರಿತು ಎಪ್ರಿಲ್ 13ರೊಳಗೆ ನಿರ್ಧಾರ ತೆಗೆದುಕೊಳ್ಳುವಂತೆ ಕರ್ನಾಟಕ ಹೈಕೋರ್ಟ್, ಚುನಾವಣಾ ಆಯೋಗಕ್ಕೆ ಸೂಚನೆ ನೀಡಿದೆ.
ಮೋದಿ ಡಿಗ್ರಿ ಬಗ್ಗೆ ಈಗ ಅನುಮಾನ ಇನ್ನೂ ಜಾಸ್ತಿ ಆಗಿದೆ ಎಂದ ಅರವಿಂದ್ ಕೇಜ್ರಿವಾಲ್!
ರಾಷ್ಟ್ರೀಯ ಪಕ್ಷದ ಸ್ಥಾನಮಾನ ವಿಳಂಭ ಕಾರಣ ಕರ್ನಾಟಕ ಹೈಕೋರ್ಟ್‌ನಲ್ಲಿ ಮನವಿ ಸಲ್ಲಿಸಿದ್ದೇವೆ. ಈ ಕುರಿತು ಕೋರ್ಟ್, ಈಗಾಗಲೇ ಆಯೋಗಕ್ಕೆ ಸೂಚನೆ ನೀಡಿದೆ. ರಾಷ್ಟ್ರೀಯ ಪಕ್ಷದ ಸ್ಥಾನಮಾನ ಸಿಗುವ ಎಲ್ಲಾ ವಿಶ್ವಾಸವಿದೆ ಎಂದು ಆಮ್ ಆದ್ಮಿ ಪಾರ್ಟಿ ವಕ್ತಾರ ಬ್ರಿಜೇಶ್ ಕಾಳಪ್ಪ ಹೇಳಿದ್ದಾರೆ.
ಚುನಾವಣಾ ಆಯೋಗದ ನಿಯಮಗಳ ಪ್ರಕಾರ, ಯಾವುದೇ ರಾಜಕೀಯ ಪಕ್ಷ 4 ರಾಜ್ಯಗಳ ವಿಧಾನಸಭೆ ಚುನಾವಣೆಗಳಲ್ಲಿ ತಲಾ ಶೇ.6ಕ್ಕಿಂತ ಅಧಿಕ ಮತ ಅಥವಾ ತಲಾ 2 ಶಾಸಕ ಸ್ಥಾನಗಳನ್ನು ಗೆದ್ದರೆ ಅದನ್ನು ರಾಷ್ಟ್ರೀಯ ಪಕ್ಷ ಎಂದು ಪರಿಗಣಿಸಲಾಗುತ್ತದೆ. ದೆಹಲಿ, ಪಂಜಾಬ್‌ನಲ್ಲಿ ಸ್ವಂತ ಬಲದ ಮೇಲೆ ಆಪ್ ಅಧಿಕಾರದಲ್ಲಿದೆ. ಕಳೆದ ಮಾಚ್‌ರ್‍ನಲ್ಲಿ ನಡೆದ ಗೋವಾ ವಿಧಾನಸಭೆ ಚುನಾವಣೆಯಲ್ಲಿ ಶೇ.6.8 ಮತ ಗಳಿಕೆಯೊಂದಿಗೆ ಇಬ್ಬರು ಶಾಸಕರನ್ನು ಗೆಲ್ಲಿಸಿಕೊಂಡಿದೆ. ಇದೀಗ ನಾಲ್ಕನೇ ರಾಜ್ಯವಾದ ಗುಜರಾತಿನಲ್ಲಿ ಮತ ಗಳಿಕೆ, ಶಾಸಕ ಸ್ಥಾನ ಎರಡನ್ನೂ ಸಂಪಾದಿಸಿದೆ. ಆಯೋಗ ಹೇಳಿರುವ ಎಲ್ಲಾ ಮಾನದಂಡಗಳನ್ನು ಆಪ್ ಪೂರೈಸಿದೆ. ಹೀಗಾಗಿ ಆಮ್ ಆದ್ಮಿ ಪಾರ್ಟಿ, ಕರ್ನಾಟಕ ಚುನಾವಣಾ ಅಖಾಡಕ್ಕೆ ಧುಮಕಲು ರಾಷ್ಟ್ರೀಯ ಪಕ್ಷ ಸ್ಥಾನ ಹಣೆಪಟ್ಟಿ ಪಡೆಯಲು ಆಪ್ ಮುಂದಾಗಿದೆ.
ಆಪ್ ಅಧಿಕಾರಕ್ಕೆ ಬಂದರೆ ಜಾತಿ ಆಧಾರದಲ್ಲಿ ಮೀಸಲು: ಮುಖ್ಯಮಂತ್ರಿ ಚಂದ್ರು
ರಾಷ್ಟ್ರೀಯ ಹಣೆಪಟ್ಟಿಯೊಂದಿಗೆ ಕರ್ನಾಟಕ ಚುನಾವಣೆಯಲ್ಲಿ ಖಾತೆ ತೆರೆಯಲು ಆಪ್ ಮುಂದಾಗಿದೆ. ದೇಶದಲ್ಲಿ ಸದ್ಯ 8 ರಾಷ್ಟ್ರೀಯ ಪಕ್ಷಗಳು ಇವೆ. ಅವೆಂದರೆ- ಬಿಜೆಪಿ, ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್, ಸಿಪಿಎಂ, ಸಿಪಿಐ, ಎನ್‌ಸಿಪಿ, ಬಿಎಸ್ಪಿ, ಕಾನ್ರಾಡ್ ಸಂಗ್ಮಾ ಅವರ ನ್ಯಾಷನಲ್ ಪೀಪಲ್ಸ್ ಪಾರ್ಟಿ. ಆಪ್ 9ನೇ ರಾಷ್ಟ್ರೀಯ ಪಕ್ಷವಾಗುವುದಕ್ಕೆ ಹಾದಿ ಸುಗಮವಾಗಿದೆ. ಈ ಕುರಿತು ಚುನಾವಣಾ ಆಯೋಗ ಮಾನ್ಯತೆ ನೀಡಬೇಕಾಗುತ್ತದೆ.