ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಹೊಸ ಅಧ್ಯಾಯ ಬರೆಯಲು ಆಮ್ ಆದ್ಮಿ ಪಾರ್ಟಿ ಇನ್ನಿಲ್ಲದ ಪ್ರಯತ್ನ ಮಾಡುತ್ತಿದೆ. ಅರವಿಂದ್ ಕೇಜ್ರಿವಾಲ್ ಪ್ರತಿ ವಾರ ಗುಜರಾತ್ ಪ್ರವಾಸ ಮಾಡುತ್ತಿದ್ದಾರೆ. ಇದೀಗ ಮೋದಿ ಭದ್ರಕೋಟೆಯ 20 ಕ್ಷೇತ್ರಗಳಿಗೆ ಅಭ್ಯರ್ಥಿ ಪಟ್ಟಿಯನ್ನು ಪ್ರಕಟಿಲಾಗಿದೆ.

ನವದೆಹಲಿ(ಅ.20): ಗುಜರಾತ್ ಚುನಾವಣೆ ಅಖಾಡ ರಂಗೇರಿದೆ. ಬಿಜೆಪಿ ಭದ್ರಕೋಟೆ ಛಿದ್ರಗೊಳಿಸಲು ಆಮ್ ಆದ್ಮಿ ಪಾರ್ಟಿ ಸಜ್ಜಾಗಿದೆ. ಇದಕ್ಕಾಗಿ ಅರವಿಂದ್ ಕೇಜ್ರಿವಾಲ್ ಸತತ ಪ್ರಯತ್ನ ಪಡುತ್ತಿದ್ದಾರೆ. ಗುಜರಾತ್ ಚುನಾವಣೆ ಸಮೀಪಿಸುತ್ತಿದ್ದಂತೆ ಆಮ್ ಆದ್ಮಿ ಪಾರ್ಟಿ ಅಭ್ಯರ್ಥಿಗಳ 6ನೇ ಪಟ್ಟಿ ಬಿಡುಗಡೆ ಮಾಡಲಾಗಿದೆ. 20 ಅಭ್ಯರ್ಥಿಗಳ ಪಟ್ಟಿಯನ್ನು ಘೋಷಿಸಲಾಗಿದೆ. ಈ ಮೂಲಕ ಚುನಾವಣಾ ಅಖಾಡದಲ್ಲಿ ಬಿಜೆಪಿಗೆ ತಿರುಗೇಟು ನೀಡಲು ಅರವಿಂದ್ ಕೇಜ್ರಿವಾಲ್ ಎಲ್ಲಾ ಅವಕಾಶಗಳನ್ನು ಬಳಸಿಕೊಳ್ಳುತ್ತಿದ್ದಾರೆ. ಸೂರತ್ ಉತ್ತರದಿಂದ ಮಹೇಂದ್ರ ನವಾಡಿಯಾ ಜುನಾಗಢದಿಂದ ಚೇತನ್ ಗಜೇರಾ, ಸಂತ್ರಂಪುರದಿಂದ ಪರ್ವತ ವಗೋಡಿಯಾ, ಡ್ಯಾಂಗ್‌ನಿಂದ ಸುನೀತ್ ಗಮಿತ್, ದಹೋಡ್‌ನಿಂದ ದಿನೇಶ್ ಮುನಿಯಾ, ಮಂಜಲ್‌ಪುರದಿಂದ ವಿರಾಲ್ ಪಾಂಚಾಲ್ ಮತ್ತು ವಲ್ಸಾದ್‌ನಿಂದ ರಾಜು ಮಾರ್ಚಾ ಸೇರಿದಂತೆ 20 ಅಭ್ಯರ್ಥಿಗಳಿಗೆ ಆಮ್ ಆದ್ಮಿ ಪಾರ್ಟಿ ಟಿಕೆಟ್ ನೀಡಿದೆ.

ಈಗಾಗಲೇ ಆಮ್ ಆದ್ಮಿ ಪಾರ್ಟಿ 5 ಪಟ್ಟಿಗಳನ್ನು ಬಿಡುಗಡೆ ಮಾಡಿದೆ. ಮೊದಲ ಪಟ್ಟಿಯಲ್ಲಿ ಆಮ್ ಆದ್ಮಿ ಪಾರ್ಟಿ 10 ಅಭ್ಯರ್ಥಿಗಳ ಹೆಸರು ಘೋಷಿಸಿತ್ತು. ಅಭ್ಯರ್ಥಿಗಳು ತಮ್ಮ ಪ್ರದೇಶದ ಜನರೊಂದಿಗೆ ಉತ್ತಮ ಸಂವಹನ ಹೊಂದಲು ಮೊದಲೇ ಅಭ್ಯರ್ಥಿಗಳ ಪಟ್ಟಿಬಿಡುಗಡೆ ಮಾಡಲಾಗಿದೆ ಎಂದು ಪಕ್ಷ ಹೇಳಿಕೊಂಡಿದೆ. ಇತ್ತೀಚಿನ ಪಂಜಾಬ್‌ ಚುನಾವಣೆಯ ಗೆಲುವಿನಿಂದ ಉತ್ಸಾಹದಲ್ಲಿರುವ ಆಪ್‌, ಗುಜರಾತ್‌ ಮೇಲೆ ಇದೀಗ ತನ್ನ ಗಮನ ಕೇಂದ್ರೀಕರಿಸಿದೆ. ಆಪ್‌ ರಾಷ್ಟ್ರೀಯ ಸಂಚಾಲಕ ಈಗಾಗಲೇ ಹಲವು ಬಾರಿ ಗುಜರಾತ್‌ನಲ್ಲಿ ರಾರ‍ಯಲಿ ನಡೆಸಿ, ಹಲವು ಭರವಸೆಗಳನ್ನೂ ನೀಡಿದ್ದಾರೆ.

ಚುನಾವಣಾ ಅಖಾಡಕ್ಕೆ ಬಿಜೆಪಿಯಿಂದ ಮತ್ತೊರ್ವ ಚಾಯ್‌ವಾಲಾ!

ಇದುವರೆಗೆ ಆಮ್ ಆದ್ಮಿ ಪಾರ್ಟಿ 73 ಅಭ್ಯರ್ಥಿಗಳ ಹೆಸರು ಘೋಷಿಸಿದೆ. ಈ ಅಭ್ಯರ್ಥಿಗಳು ಮನೆ ಮನೆಗೆ ತೆರಳಿ, ತಮ್ಮ ಬೆಂಬಲಿಗರ ಮೂಲಕ ಆಪ್ ಅಧಿಕಾರಕ್ಕೆ ಬಂದರೆ ಉಚಿತ ವಿದ್ಯುತ್, ಉಚಿತ ನೀರು, ಉಚಿತ ಶಿಕ್ಷಣ ಸೇರಿದಂತೆ ಎಲ್ಲವೂ ಉಚಿತ ಅನ್ನೋ ವಾಗ್ದಾನ ನೀಡುತ್ತಿದೆ. 

2 ತಿಂಗಳಲ್ಲಿ ಆಪ್‌ ಗುಜರಾತಲ್ಲಿ ಅಧಿಕಾರಕ್ಕೆ: ಕೇಜ್ರಿ
2 ತಿಂಗಳಲ್ಲಿ ಆಮ್‌ ಆದ್ಮಿ ಪಕ್ಷ ಗುಜರಾತಲ್ಲಿ ಅಧಿಕಾರಕ್ಕೆ ಬರಲಿದೆ ಎಂದು ಆಪ್‌ ರಾಷ್ಟ್ರೀಯ ಸಂಚಾಲಕ ಅರವಿಂದ ಕೇಜ್ರಿವಾಲ್‌ ಪೊಲೀಸರಿಗೆ ಭವಿಷ್ಯ ನುಡಿದಿದ್ದಾರೆ. ಸಭೆಯಲ್ಲಿ ಮಾತಣಾಡಿದ ಅವರು, ‘ನಮ್ಮನ್ನು ತಡೆಯಲು ಬಿಜೆಪಿ ಪೊಲೀಸರನ್ನು ಬಳಸಿಕೊಳ್ಳುತ್ತಿದೆ. ಸೋಮವಾರ ರಿಕ್ಷಾ ಚಾಲಕನ ಭೇಟಿಗೆ ಪೊಲೀಸರು ನಮಗೆ ಅವಕಾಶ ನೀಡಲು ಹಿಂದೇಟು ಹಾಕಿದರು. ಆದರೆ ನಮ್ಮ ವಿರುದ್ಧ ಬಿಜೆಪಿ ಸರ್ಕಾರ ಸೂಚಿಸುವ ತಪ್ಪು ಕೆಲಸಗಳನ್ನು ಮಾಡಬೇಡಿ. ಆ ಸೂಚನೆಗಳನ್ನು ನಿರಾಕರಿಸಿ. ಇನ್ನೆರಡು ತಿಂಗಳಲ್ಲಿ ನಾವು ಅಧಿಕಾರಕ್ಕೆ ಬರುತ್ತೇವೆ. ಆಗ ನಿಮ್ಮ ಹೆಚ್ಚಿನ ವೇತನ ಸೇರಿ ನಿಮ್ಮ ಎಲ್ಲಾ ಬೇಡಿಕೆಗಳನ್ನು ಈಡೇರಿಸುತ್ತೇವೆ’ ಎಂದು ಮನವಿ ಮಾಡಿದರು. ಇದೇ ವೇಳೆ ಕಾಂಗ್ರೆಸ್‌ ಪಕ್ಷದ ಬಗ್ಗೆ ಮಾತನಾಡಿದ ಅವರು, ಕಾಂಗ್ರೆಸ್‌ ಕುರಿತಾಗಿ ಯಾವುದೇ ಪ್ರಶ್ನೆಗಳನ್ನು ಕೇಳಬೇಡಿ. ಆ ಪಕ್ಷ ಈಗಾಗಲೇ ಅವಸಾನದತ್ತ ಸಾಗುತ್ತಿದೆ ಎಂದು ಹೇಳಿದರು. ಗುಜರಾತ್‌ ಚುನಾವಣೆಗೂ ಮುನ್ನ ಸಾಕಷ್ಟುಭರವಸೆಗಳನ್ನು ನೀಡಿರುವ ಆಪ್‌, ಅಧಿಕಾರಕ್ಕೆ ಬಂದರೆ ಪೊಲೀಸರ ವೇತನವನ್ನು ಹೆಚ್ಚು ಮಾಡುವುದಾಗಿ ಇತ್ತೀಚೆಗೆ ಭರವಸೆ ನೀಡಿತ್ತು.

ಗುಜರಾತ್‌ನಲ್ಲಿ ಪಾಕ್‌ ಗಡಿ ಸನಿಹ ಹೊಸ ವಾಯುನೆಲೆಗೆ ಮೋದಿ ಶಂಕು ಸ್ಥಾಪನೆ

ಗುಜರಾತ್‌ನಲ್ಲಿ ಆಪ್‌ಗೆ 58 ಸ್ಥಾನ: ಆಂತರಿಕ ಸಮೀಕ್ಷೆ!
ಮುಂಬರುವ ಗುಜರಾತ್‌ ವಿಧಾನಸಭಾ ಚುನಾವಣೆಯಲ್ಲಿ182 ಸ್ಥಾನದ ಪೈಕಿ ನಮ್ಮ ಪಕ್ಷ 58 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ ಎಂದು ಪಕ್ಷದ ಆಂತರಿಕ ಸಮೀಕ್ಷೆಯಲ್ಲಿ ತಿಳಿದು ಬಂದಿದೆ ಎಂದು ಆಮ್‌ಆದ್ಮಿ ಪಕ್ಷ ಹೇಳಿದೆ. ಇದೇ ವರ್ಷ ಡಿಸೆಂಬರ್‌ನಲ್ಲಿ ಗುಜರಾತ್‌ ಚುನಾವಣೆಗಳು ನಡೆಯುವ ಸಾಧ್ಯತೆ ಇದೆ. ಈ ಸಮೀಕ್ಷೆಯನ್ನು ವೈಜ್ಞಾನಿಕವಾಗಿ ಪಕ್ಷದ ಏಜೆನ್ಸಿ ಮೂಲಕ ನಡೆಸಲಾಗಿದೆ. ಈ ಆಂತರಿಕ ಸಮೀಕ್ಷೆಯ ಮೂಲಕ ನಾವು 58 ಸ್ಥಾನಗಳಲ್ಲಿ ಗೆಲುವು ಸಾಧಿಸುತ್ತೇವೆ. ಗುಜರಾತ್‌ ಗ್ರಾಮೀಣ ಪ್ರದೇಶದ ಜನ ನಮಗೆ ಮತ ನೀಡುತ್ತಾರೆ. ಮಧ್ಯಮ ಮತ್ತು ಬಡ ವರ್ಗ ಬದಲಾವಣೆಯನ್ನು ಬಯಸಿದ್ದಾರೆ ಎಂದು ಗುಜರಾತ್‌ ಆಪ್‌ ಪ್ರಭಾರಿ ಡಾ.ಸಂದೀಪ್‌ ಪಾಠಕ್‌ ಹೇಳಿದ್ದಾರೆ.