ಆ.30ರ ಬಳಿಕ ಖಾಸಗಿ ಸಾರಿಗೆ ಸಂಸ್ಥೆಗಳಿಂದ ಬಂದ್?: ಸಿಎಂ ಸಿದ್ದುಗೆ 3 ದಿನಗಳ ಗಡುವು
ಶಕ್ತಿ ಯೋಜನೆಯಿಂದ ಖಾಸಗಿ ಬಸ್, ಕ್ಯಾಬ್ ಮತ್ತು ಆಟೋಗಳಿಗೆ ಉಂಟಾಗಿರುವ ಸಮಸ್ಯೆ ಪರಿಹರಿಸುವ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆ.30ರೊಳಗೆ ನಿರ್ಧಾರ ತೆಗೆದುಕೊಳ್ಳದಿದ್ದರೆ, ‘ಸಾರಿಗೆ ಬಂದ್’ಗೆ ಕರೆ ನೀಡಲಾಗುವುದು ಎಂದು ರಾಜ್ಯ ಖಾಸಗಿ ಸಾರಿಗೆ ಸಂಘಟನೆಗಳ ಒಕ್ಕೂಟ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ.
ಬೆಂಗಳೂರು (ಆ.28): ಶಕ್ತಿ ಯೋಜನೆಯಿಂದ ಖಾಸಗಿ ಬಸ್, ಕ್ಯಾಬ್ ಮತ್ತು ಆಟೋಗಳಿಗೆ ಉಂಟಾಗಿರುವ ಸಮಸ್ಯೆ ಪರಿಹರಿಸುವ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆ.30ರೊಳಗೆ ನಿರ್ಧಾರ ತೆಗೆದುಕೊಳ್ಳದಿದ್ದರೆ, ‘ಸಾರಿಗೆ ಬಂದ್’ಗೆ ಕರೆ ನೀಡಲಾಗುವುದು ಎಂದು ರಾಜ್ಯ ಖಾಸಗಿ ಸಾರಿಗೆ ಸಂಘಟನೆಗಳ ಒಕ್ಕೂಟ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ.
ಕೊರೋನಾದಿಂದ ಸಾಕಷ್ಟುಸಮಸ್ಯೆ ಅನುಭವಿಸಿದ್ದ ಖಾಸಗಿ ಸಾರಿಗೆ ಉದ್ಯಮಕ್ಕೆ ಈಗ ಶಕ್ತಿ ಯೋಜನೆ ಮತ್ತಷ್ಟುಹೊಡೆತ ನೀಡಿದೆ. ಖಾಸಗಿ ಸಾರಿಗೆ ಉದ್ಯಮದ ಸಮಸ್ಯೆ ನಿವಾರಿಸಲು ಪರಿಹಾರ ಕ್ರಮ ಕೈಗೊಳ್ಳುವಂತೆ ಸಾರಿಗೆ ಕ್ಷೇತ್ರದ 32 ಸಂಘಟನೆಗಳು ಸರ್ಕಾರವನ್ನು ಆಗ್ರಹಿಸಿದ್ದವು. ಜತೆಗೆ ಸಾರಿಗೆ ಬಂದ್‌ಗೂ ಕರೆ ನೀಡಿದ್ದವು. ಇದರಿಂದ ಆ.21ರಂದು ಮುಖ್ಯಮಂತ್ರಿಗಳು ಸಾರಿಗೆ ಸಂಘಟನೆಗಳೊಂದಿಗೆ ಸಭೆ ನಡೆಸಿದರು.
ಮಾನವ-ಪ್ರಾಣಿ ಸಂಘರ್ಷ ಪರಿಹಾರಕ್ಕೆ ಅವಿರತ ಪ್ರಯತ್ನವಿರಲಿ: ರಿಷಬ್ ಶೆಟ್ಟಿ
ಆದರೆ ಸಭೆಗೆ ಬಂದ್‌ಗೆ ಕರೆ ನೀಡಿದ್ದ ಸಂಘಟನೆಗಳನ್ನು ಆಹ್ವಾನಿಸಿರಲಿಲ್ಲ. ಹಾಗಾಗಿ, 32 ಸಂಘಟನೆಗಳು ಸಭೆಯನ್ನು ಬಹಿಷ್ಕರಿಸಿದ್ದವು ಹಾಗೂ ಆ.30ರೊಳಗೆ ಬಂದ್‌ಗೆ ಕರೆ ನೀಡಿದ್ದ ಸಂಘಟನೆಗಳ ಮುಖಂಡರೊಂದಿಗೆ ಸಭೆ ನಡೆಸಿ, ಸಂಕಷ್ಟದಲ್ಲಿರುವ ಸಾರಿಗೆ ಉದ್ಯಮಕ್ಕೆ ಪರಿಹಾರ ನೀಡಲು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದವು. ಇದಕ್ಕೂ ಮುನ್ನ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರೊಂದಿಗೆ ಸಭೆ ನಡೆಸಿ ವಿವಿಧ ಬೇಡಿಕೆಗಳ ಈಡೇರಿಗೆ ಮನವಿ ಸಲ್ಲಿಸಿದ್ದವು. ಸಚಿವರು ಸಹ ಬೇಡಿಕೆಗಳನ್ನು ಈಡೇರಿಸುವಾಗಿ ಭರವಸೆ ಸಹ ನೀಡಿದ್ದರು. ಆದರೆ, ಈವರೆಗೂ ಯಾವೊಂದು ಬೇಡಿಕೆ ಈಡೇರಿಸಿಲ್ಲ ಎಂದು ಆಕ್ರೋಶ ಹೊರಹಾಕಿರುವ ಸಂಘಟನೆಗಳ ಒಕ್ಕೂಟ, ಆ.30ರವರೆಗೆ ಸರ್ಕಾರಕ್ಕೆ ಗಡುವು ನೀಡಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಒಕ್ಕೂಟದ ಅಧ್ಯಕ್ಷ ಎಸ್.ನಟರಾಜ ಶರ್ಮಾ, ಶಕ್ತಿ ಯೋಜನೆಯಿಂದ ಆಟೋ ಚಾಲಕರು, ಖಾಸಗಿ ಬಸ್ ಹಾಗೂ ಕ್ಯಾಬ್ ಮಾಲಿಕರಿಗೆ ನಷ್ಟಉಂಟಾಗುತ್ತಿದೆ. ನಮ್ಮ ಸಮಸ್ಯೆ ಬಗೆಹರಿಸುವಂತೆ ಸರ್ಕಾರಕ್ಕೆ ಮನವಿ ಮಾಡಿ ಒಂದು ತಿಂಗಳು ಕಳೆದಿದೆ. ಆದರೆ, ಈವರೆಗೂ ಯಾವೊಂದು ಬೇಡಿಕೆಯನ್ನೂ ಸರ್ಕಾರ ಈಡೇರಿಸಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಅಲ್ಲದೆ, ನಮ್ಮ ಸಮಸ್ಯೆಗಳ ಈಡೇರಿಕೆಗಾಗಿ ಆ.30ರವರೆಗೆ ಕಾಯುತ್ತೇವೆ. ಅಷ್ಟರಲ್ಲಿ ಸರ್ಕಾರ ನಮ್ಮ ಬೇಡಿಕೆಗಳನ್ನು ಈಡೇರಿಸದೆ ಹೋದರೆ, ಎಲ್ಲಾ 32 ಸಂಘಟನೆಗಳ ಪದಾಧಿಕಾರಿಗಳು ಆ.31ರಂದು ಸಭೆ ನಡೆಸಿ ಸಾರಿಗೆ ಬಂದ್ ನಡೆಸುವ ಬಗ್ಗೆ ಚರ್ಚಿಸಲಾಗುವುದು. ಅಂದೇ ಅಥವಾ ಸೆ.1ರಂದು ಬಂದ್ ನಡೆಸುವ ದಿನಾಂಕ ಪ್ರಕಟಿಸಲಾಗುವುದು. ಬಂದ್ ನಡೆಸುವ ಸಂದರ್ಭ ಎದುರಾದರೆ, ಯಾವೊಂದು ಆಟೋ, ಖಾಸಗಿ ಬಸ್, ಮ್ಯಾಕ್ಸಿ ಕ್ಯಾಬ್, ಟೂರಿಸ್ಟ್ ಕ್ಯಾಬ್ ಮತ್ತು ಕಾರ್ಪೋರೇಟ್ ಬಸ್‌ಗಳು ರಸ್ತೆ ಇಳಿಯದಂತೆ ಮಾಡುವ ಮೂಲಕ ಉಗ್ರ ಹೋರಾಟ ಮಾಡಲಾಗುವುದು ಎಂದು ನಟರಾಜ್ ಶರ್ಮಾ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ದೇವೇಗೌಡರ ಬದುಕಿನ ತಪಸ್ಸಿಗೆ ಫಲ ಸಿಗಲಿದೆ: ನಿರ್ಮಲಾನಂದನಾಥ ಶ್ರೀ
ಸಾರಿಗೆ ಸಂಘಟನೆಗಳ ಬೇಡಿಕೆಗಳೇನು?: ಶಕ್ತಿ ಯೋಜನೆಗೆ ಖಾಸಗಿ ಬಸ್ಸುಗಳನ್ನೂ ಪರಿಗಣಿಸಬೇಕು. ಆಟೋ ಚಾಲಕರಿಗೆ ಮಾಸಿಕ 10 ಸಾವಿರ ರು. ಧನಸಹಾಯ ನೀಡಬೇಕು. ಬೈಕ್ ಟ್ಯಾಕ್ಸಿಗೆ ಸಂಪೂರ್ಣ ನಿಷೇಧ ಹೇರಬೇಕು. ಅಂತಾರಾಜ್ಯ ಟೂರಿಸ್ಟ್ ವಾಹನಗಳಿಗೆ ಮತ್ತು 60:40 ಅನುಪಾತದಲ್ಲಿ ಸರ್ಕಾರಿ-ಖಾಸಗಿ ಬಸ್ಸುಗಳ ಓಡಾಟಕ್ಕೆ ಅವಕಾಶ ಕಲ್ಪಿಸಬೇಕು ಎಂಬುದು ಸೇರಿದಂತೆ ಒಟ್ಟು 30 ಬೇಡಿಕೆಗಳನ್ನು ಸರ್ಕಾರದ ಮುಂದೆ ರಾಜ್ಯ ಖಾಸಗಿ ಸಾರಿಗೆ ಸಂಘಟನೆಗಳ ಒಕ್ಕೂಟ ಇರಿಸಿದೆ.