ಅರ್ಹತೆ ಇಲ್ಲದ ಮುಂಬೈ ಕಂಪನಿಗೆ ಅಬಕಾರಿ ಇಲಾಖೆಯಿಂದ ಗುತ್ತಿಗೆ, ಗೋಲ್‌ಮಾಲ್‌ನಿಂದ ರಾಜ್ಯದ ಬೊಕ್ಕಸಕ್ಕೆ 60 ಕೋಟಿ ಆದಾಯ ನಷ್ಟ
ಬೆಂಗಳೂರು(ಮಾ.01): ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಪ್ರತಿಪಕ್ಷ ಕಾಂಗ್ರೆಸ್ ಮತ್ತೊಂದು ಭ್ರಷ್ಟಾಚಾರದ ಆರೋಪ ಮಾಡಿದ್ದು, ಅಬಕಾರಿ ಇಲಾಖೆಯ ಮೂಲಕ ಅರ್ಹತೆಯೇ ಇಲ್ಲದ ಖಾಸಗಿ ಕಂಪನಿಯೊಂದಕ್ಕೆ 2 ಲಕ್ಷ ಮೆಟ್ರಿಕ್ ಟನ್ ಕಾಕಂಬಿ ರಫ್ತಿಗೆ ಅಕ್ರಮವಾಗಿ ಅವಕಾಶ ನೀಡಿರುವುದರಲ್ಲಿ 80 ಕೋಟಿ ರು. ಡೀಲ್ ನಡೆದಿದೆ. ಜತೆಗೆ ಸರ್ಕಾರದ ಬೊಕ್ಕಸಕ್ಕೂ 60 ಕೋಟಿ ರು.ನಷ್ಟು ತೆರಿಗೆ ಖೋತಾ ಆಗಿದೆ ಎಂದು ಆರೋಪಿಸಿದೆ. ಅಲ್ಲದೆ, ಈ ಸಂಬಂಧ ಲೋಕಾಯುಕ್ತದಲ್ಲಿ ಈಗಾಗಲೇ ದೂರು ದಾಖಲಾಗಿದ್ದು ಸಮಗ್ರ ತನಿಖೆಯಾಗಬೇಕು ಎಂದು ಆಗ್ರಹಿಸಿದೆ.
ಕೆಪಿಸಿಸಿ ಮಾಧ್ಯಮ ವಿಭಾಗದ ಮುಖ್ಯಸ್ಥ ಪ್ರಿಯಾಂಕ ಖರ್ಗೆ ಹಾಗೂ ಉಪಾಧ್ಯಕ್ಷ ರಮೇಶ್ ಬಾಬು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾಕಂಬಿ ರಫ್ತು ಪರವಾನಿಗೆ ಪಡೆಯಲು ಬೇಕಾದ ಯಾವುದೇ ಅರ್ಹತೆ, ದಾಖಲೆ ಇಲ್ಲದಿದ್ದರೂ ಸರ್ಕಾರ ಮುಂಬೈ ಮೂಲದ ಕೆ.ಎನ್.ರಿಸೋರ್ಸಸ್ ಎಂಬ ಖಾಸಗಿ ಕಂಪನಿಗೆ ಕಳೆದ ಸೆಪ್ಟಂಬರ್‌ನಲ್ಲಿ 2 ಲಕ್ಷ ಮೆಟ್ರಿಕ್ ಟನ್ ಕಾಕಂಬಿ ರಫ್ತಿಗೆ ಅನುಮತಿ ನೀಡಿದೆ. ಇದರ ವಿರುದ್ಧ ರಾಜ್ಯ ಡಿಸ್ಟಿಲರಿ ಓನರ್ಸ್ ಆಸೋಸಿಯೇಷನ್ ಪ್ರತಿಭಟನೆ ನಡೆಸಿ, ಕಾಕಂಬಿ ನಮಗೇ ಸಾಲುತ್ತಿಲ್ಲ. ರಫ್ತು ಮಾಡಿದರೆ ನಮಗೆ ಸಮಸ್ಯೆಯಾಗುತ್ತದೆ ಎಂದು ವಾದಿಸಿದರೂ ಪರಿಗಣಿಸಿಲ್ಲ. ರಾಜ್ಯದ ಇಬ್ಬರು ಬಿಜೆಪಿ ಸಂಸದರು ಮತ್ತು ಕೇಂದ್ರ ಹಣಕಾಸು ಸಚಿವರು ಮಾಡಿರುವ ಶಿಫಾರಸಿನ ಆಧಾರದಲ್ಲಿ ಮುಖ್ಯಮಂತ್ರಿ ಬೊಮ್ಮಾಯಿ ಅವರು ಅಬಕಾರಿ ಸಚಿವರು ಹಾಗೂ ಆಯುಕ್ತರನ್ನು ಕರೆಸಿ ಕೆ.ಎನ್.ರಿಸೋರ್ಸಸ್ ಕಂಪನಿಗೆ ವಿಶೇಷ ಪ್ರೀತಿಯಿಂದ ಪರವಾನಿಗೆ ಕೊಡಿಸಿ ಸುಗಮ ರಫ್ತು ವ್ಯವಹಾರಕ್ಕೆ ಅವಕಾಶ ಮಾಡಿದ್ದಾರೆ ಎಂದು ಆರೋಪಿಸಿದರು.
ಕಸಾಯಿಖಾನೆ ನಡೆಸಿದ್ದೇ ಕಾಂಗ್ರೆಸ್ ಸಾಧನೆ: ಸಚಿವ ಪ್ರಭು ಚವ್ಹಾಣ್
ಬೊಕ್ಕಸಕ್ಕೂ ತೆರಿಗೆ ನಷ್ಟ:
1 ಮೆಟ್ರಿಕ್ ಟನ್ ಕಾಕಂಬಿಗೆ 10 ಸಾವಿರ ಬೆಲೆ ಇದೆ. 2 ಲಕ್ಷ ಮೆ. ಟನ್‌ಗೆ 200 ಕೋಟಿ ಆಗಲಿದೆ. ಕೆ.ಎಲ್ ರಿಸೋರ್ಸಸ್ ಅವರು ರಾಜ್ಯದಿಂದ 2 ಲಕ್ಷ ಮೆ.ಟನ್ ಪಡೆದು ಅದನ್ನು ಗೋವಾ ಮೂಲಕವಾಗಿ ರಫ್ತು ಮಾಡುತ್ತೇವೆ ಎಂದು ಹೇಳಿದ್ದಾರೆ. ಇದು ಕಾನೂನು ಪ್ರಕಾರವಾಗಿದ್ದರೆ ರಾಜ್ಯದ ಮಲ್ಪೆ ಬಂದರು ಮೂಲಕವೇ ಮಾಡಬಹುದಿತ್ತು. ಇದರಿಂದ ಸರ್ಕಾರಕ್ಕೆ 60 ಕೋಟಿ ರು. ತೆರಿಗೆ ಸಂಗ್ರಹವಾಗುತ್ತಿತ್ತು. ಜತೆಗೆ ಮದ್ಯ ಮಾರಾಟದಿಂದಲೂ ಹೆಚ್ಚುವರಿ ತೆರಿಗೆ ಸಂಗ್ರಹವಾಗುತ್ತಿತ್ತು. ಆದರೆ, ಗೋವಾದಿಂದ ಮಾಡಿದರೆ ನಮ್ಮ ಸರ್ಕಾರಕ್ಕೆ ಸಿಗುವ ತೆರಿಗೆಯೂ ಖೋತಾ ಆಗಿದೆ. 2 ಲಕ್ಷ ಮೆ.ಟನ್‌ಗೆ 40 ಪರ್ಸೆಂಟ್ ಕಮಿಷನ್‌ನಂತೆ ಲೆಕ್ಕ ಹಾಕಿದರೂ 80 ಕೋಟಿ ರು.ಗೆ ಡೀಲ… ಆಗಿದೆ. ಈ ಬಗ್ಗೆ ಸಮಗ್ರ ತನಿಖೆಯಾಗಬೇಕು ಎಂದು ಆಗ್ರಹಿಸಿದರು.
ಗುತ್ತಿಗೆದಾರರ ಸಂಭಾಷಣೆ:
ಈ ಆರೋಪ ನಮ್ಮದಲ್ಲ, ಇದು ಕಾಕಂಬಿ ಟ್ರಾನ್ಸ್‌ಪೋರ್ಟ್ ಮಾಡುವ ಗುತ್ತಿಗೆದರ ಶಿವರಾಜ್ ಮತ್ತು ಎಸ್.ಎನ್.ರಿಸೋರ್ಸ್‌ಸ್ ಪ್ರತಿನಿಧಿ ಸುರೇಶ್ ನಡುವಿನ ಸಂಭಾಷಣೆಯಲ್ಲಿ ಬಹಿರಂಗವಾಗಿದೆ. ಕಾಂಕಂಬಿ ರಪ್ತಿಗೆ ಬಿಜೆಪಿ ಸಂಸದರು ನೇರವಾಗಿ ಬೊಮ್ಮಾಯಿ ಅವರ ಬಳಿ ಹೋಗಿ ಡೀಲ್ ಮಾಡಿದ್ದಾರೆ. ಇದು ದೊಡ ಮಟ್ಟದ ಡೀಲ್ ಎಂದು ಅವರು ದೂರವಾಣಿಯಲ್ಲಿ ಮಾತನಾಡುತ್ತಾರೆ. ಅಸಲಿಗೆ ಎಸ್.ಎನ್.ರಿಸೋರ್ಸಸ್ ಕಂಪನಿ ಕಳೆದ 3 ವರ್ಷಗಳಿಂದ ಜಿಎಸ್‌ಟಿ ಪಾವತಿಸಿಲ್ಲ. ಕಾಕಂಬಿಯನ್ನು ಎಲ್ಲಿಗೆ ರಫ್ತು ಮಾಡುತ್ತೇವೆ ಎಂದೂ ತಿಳಿಸಿಲ್ಲ ಎಂದು ಪ್ರಿಯಾಂಕ ಖರ್ಗೆ ಹೇಳಿದರು.
ಸಿದ್ದರಾಮಯ್ಯ ಕೋಲಾರದಲ್ಲಿ ಸ್ಪರ್ಧಿಸಿದರೆ ಸ್ವಪಕ್ಷೀಯರೇ ಸೋಲಿಸುತ್ತಾರೆ: ಈಶ್ವರಪ್ಪ
ಈ ಪ್ರಕರಣದಲ್ಲಿರುವ ಇಬ್ಬರು ಸಂಸದರು ಯಾರು ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರಿಯಾಂಕ ಖರ್ಗೆ, ಅದು ತನಿಖೆ ಮೂಲಕ ತಿಳಿಯಬೇಕು. ಇಷ್ಟು ಹೇಳಿರುವುದಕ್ಕೆ ಯಾವಾಗ ನೋಟೀಸ್ ನೀಡುತ್ತಾರೋ ಗೊತ್ತಿಲ್ಲ. ಇನ್ನು ಹೆಸರು ಹೇಳಿದರೆ ಜೈಲಿಗೆ ಹಾಕುತ್ತಾರೆ. ಮುಖ್ಯಮಂತ್ರಿ ಬೊಮ್ಮಾಯಿ ಅವರು ರಾಜ್ಯದ ಬೊಕ್ಕಸಕ್ಕೆ ನಷ್ಟವಾದರೂ ಸರಿ ಹೈಕಮಾಂಡ್ ಮನವೊಲಿಸಲು ಈ ಅನುಮತಿ ಕೊಟ್ಟರಾ? ಕನ್ನಡಿಗರಿಗೆ ಅನ್ಯಾಯ ಮಾಡಿ ಹೈಕಮಾಂಡ್ ಮನವೊಲಿಸುತ್ತೀರಾ? ಕಾನೂನುಬದ್ಧವಾಗಿ ಮಾಡಿದ್ದರೆ ಸರ್ಕಾರದ ಬೊಕ್ಕಸಕ್ಕೆ ಆದಾಯವಾದರೂ ಬರುತ್ತಿತ್ತು. ಈ ಪ್ರಕರಣದ ಬಗ್ಗೆ ಲೋಕಾಯುಕ್ತದಲ್ಲಿ ಈಗಾಗಲೇ ದೂರು ದಾಖಲಾಗಿದ್ದು ಸಮಗ್ರ ತನಿಖೆಯಾಗಬೇಕು ಎಂದು ಆಗ್ರಹಿಸಿದರು.
ರಮೇಶ್ ಬಾಬು ಮಾತನಾಡಿ, ಅಬಕಾರಿ ಮಾತ್ರವಲ್ಲ ಪ್ರತಿ ಇಲಾಖೆಯಲ್ಲೂ 40 ಪರ್ಸೆಂಟ್ ಕಮಿಷನ್ ಡೀಲ್‌ಗಳು ನಡೆದಿವೆ. ಮುಂದಿನ ದಿನಗಳಲ್ಲಿ ಬೇರೆ ಇಲಾಖೆಗಳ ಹಗರಣಗಳ ಬಗ್ಗೆ ಪ್ರಸ್ತಾಪ ಮಾಡುತ್ತೇವೆ ಎಂದರು.
