Asianet Suvarna News Asianet Suvarna News

ಕಸಾಯಿಖಾನೆ ನಡೆಸಿದ್ದೇ ಕಾಂಗ್ರೆಸ್‌ ಸಾಧನೆ: ಸಚಿವ ಪ್ರಭು ಚವ್ಹಾಣ್‌

ಗೋ ಸಂಪತ್ತು ಅಭಿವೃದ್ಧಿಗೆ ಕಾಂಗ್ರೆಸ್‌ ಕೊಡುಗೆ ಏನೂ ಇಲ್ಲ, ಗೋಹತ್ಯೆ ನಿಷೇಧ ಕಾಯ್ದೆ ಜಾರಿ ಬಳಿಕ 1300 ಕೇಸು, 10000 ಗೋವುಗಳ ರಕ್ಷಣೆ: ಸಚಿವ ಪ್ರಭು ಚವ್ಹಾಣ್‌ 

Achievement of Congress  to Ran Slaughterhouse  Says Prabhu Chauhan grg
Author
First Published Mar 1, 2023, 11:04 AM IST

ಬೆಂಗಳೂರು(ಮಾ.01):  ರಾಜ್ಯದಲ್ಲಿ ಹೈನುಗಾರಿಕೆಯನ್ನು ಒಂದು ಉದ್ಯಮವನ್ನಾಗಿ ರೂಪಿಸಲು ಮುನ್ನುಡಿ ಬರೆಯುವುದರೊಂದಿಗೆ ಹೈನುಗಾರಿಕೋದ್ಯಮದಲ್ಲಿ ಹೊಸ ಕ್ರಾಂತಿಗೆ ನಾಂದಿ ಹಾಡಿದ್ದು, ಗೋ-ಸಂಪತ್ತು ಅಭಿವೃದ್ಧಿಗೆ ಕಾಂಗ್ರೆಸ್‌ ಕೊಡುಗೆ ಏನು ಇಲ್ಲ. ಕಸಾಯಿಖಾನೆಗಳನ್ನು ನಡೆಸಿಕೊಂಡು ಬಂದಿದ್ದೇ ಕಾಂಗ್ರೆಸ್‌ ಸಾಧನೆ ಎಂದು ಪಶುಸಂಗೋಪನೆ ಸಚಿವ ಪ್ರಭು ಚವ್ಹಾಣ್‌ ವ್ಯಂಗ್ಯವಾಡಿದ್ದಾರೆ.

ಮಂಗಳವಾರ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಸರ್ಕಾರವು ಜಾನುವಾರುಗಳ ಆರೋಗ್ಯಕ್ಕಾಗಿ ಪಶುಸಂಜೀವಿನಿ ಆ್ಯಂಬುಲೆನ್ಸ್‌, ಪ್ರಾಣಿ ಕಲ್ಯಾಣ ಮಂಡಳಿ ಸ್ಥಾಪನೆ, 400 ಪಶುವೈದ್ಯರು ಮತ್ತು 250 ಪಶು ವೈದ್ಯಕೀಯ ಪರೀಕ್ಷಕರ ನೇಮಕಾತಿ, ಪುಣ್ಯಕೋಟಿ ದತ್ತು ಯೋಜನೆ, ಗೋಮಾತಾ ಸಹಕಾರ ಸಂಘ ಸ್ಥಾಪನೆ ಸೇರಿದಂತೆ ಹಲವು ಮಹತ್ತರ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ಇಲಾಖೆಯಲ್ಲಿ ಬದಲಾವಣೆ ತರಲಾಗಿದೆ.

ಕಮಲ ನಗರದಲ್ಲಿ ಅದ್ದೂರಿಯಾಗಿ ನಡೆದ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನ

ಗೋಹತ್ಯೆ ನಿಷೇಧ ಕಾಯ್ದೆ ಜಾರಿ ಬಳಿಕ 1300ಕ್ಕೂ ಹೆಚ್ಚು ಪ್ರಕರಣಗಳನ್ನು ದಾಖಲಿಸಿ, 10 ಸಾವಿರಕ್ಕೂ ಹೆಚ್ಚು ಗೋವುಗಳನ್ನು ರಕ್ಷಿಸಿ ಗೋ ಶಾಲೆಗಳಿಗೆ ಕಳುಹಿಸಲಾಗಿದೆ. ಬಿಜೆಪಿ ಸರ್ಕಾರ ಜಾರಿಗೆ ತಂದಿರುವ ಗೋಹತ್ಯೆ ನಿಷೇಧ ಕಾಯ್ದೆಯನ್ನು ರದ್ದುಪಡಿಸುವುದಾಗಿ ಕಾಂಗ್ರೆಸ್‌ ಹೇಳುತ್ತಿದೆ. ಕಾಂಗ್ರೆಸ್‌ ನಡೆಯನ್ನು ಗಮನಿಸಿದರೆ ಚುನಾವಣೆಯಲ್ಲಿ ಯಾವ ಸರ್ಕಾರ ಬೇಕು ಎನ್ನುವುದನ್ನು ಜನತೆ ತೀರ್ಮಾನಿಸುತ್ತಾರೆ ಎಂದು ಕಿಡಿಕಾರಿದರು.

ಕಲ್ಯಾಣ ಕರ್ನಾಟಕ ಭಾಗದಲ್ಲಿ 47 ಪಶು ವೈದ್ಯಾಧಿಕಾರಿಗಳು, 83 ಪಶು ವೈದ್ಯಕೀಯ ಸಹಾಯಕರ ನೇಮಕಾತಿ ಮಾಡಲಾಗಿದೆ. ಪುಣ್ಯಕೋಟಿ ದತ್ತು ಯೋಜನೆಗೆ ಸರ್ಕಾರಿ ನೌಕರರು ಸ್ವ-ಇಚ್ಛೆಯಿಂದ 27 ಕೋಟಿ ರು. ದೇಣಿಗೆ ನೀಡಿದ್ದಾರೆ. ಹಾವೇರಿ ಮತ್ತು ಬಳ್ಳಾರಿಯಲ್ಲಿ ಮೆಗಾ ಡೇರಿ ಸ್ಥಾಪನೆಗೆ ಕ್ರಮ ಸೇರಿದಂತೆ ಹಲವು ಜನಪರ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಇಂತಹ ಒಂದೇ ಒಂದು ಜನಪರ ಮತ್ತು ಗೋವು ಪರ ಯೋಜನೆ ಜಾರಿಗೊಳಿಸಲಿಲ್ಲ ಎಂದು ವಾಗ್ದಾಳಿ ನಡೆಸಿದರು.

43.46 ಕೋಟಿ ಯೋಜನೆಗೆ ಸಚಿವ ಸಂಪುಟ ಒಪ್ಪಿಗೆ: ಸಚಿವ ಪ್ರಭು ಚವ್ಹಾಣ

ರೈತರು ಮತ್ತು ಗೋಪಾಲಕರು ಎದುರಿಸುತ್ತಿರುವ ಗೋವುಗಳ ಸಾಕಾಣಿಕೆ, ಪೋಷಣೆ, ಆರೈಕೆ ಮತ್ತು ವೈದ್ಯಕೀಯ ಸಲಹೆಗಳನ್ನು ನೀಡುತ್ತಾ ಜನಸ್ನೇಹಿ ವ್ಯವಸ್ಥೆಯನ್ನು ಜಾರಿಗೆ ತರುವಲ್ಲಿ ಪ್ರಾಮಾಣಿಕವಾಗಿ ನನಗೆ ಸಿಕ್ಕ ಅವಕಾಶದಲ್ಲಿ ಶ್ರಮಿಸಿದ್ದೇನೆ. ಚರ್ಮಗಂಟು ರೋಗವನ್ನು ಹಗಲಿರುಳು ಎನ್ನದೇ ಹತೋಟಿಗೆ ತರಲು ಇಲಾಖಾ ಅಧಿಕಾರಿ, ಸಿಬ್ಬಂದಿ ಶ್ರಮಿಸಿದ ಪರಿಣಾಮ ರೋಗ ನಿರ್ಮೂಲನೆಯಾಗಿದೆ. ರೈತರಿಗೆ ಪರಿಹಾರ ನೀಡಿ ನಿಮ್ಮೊಂದಿಗೆ ನಾವಿದ್ದೇವೆ ಎನ್ನುವ ಆತ್ಮಸ್ಥೈರ್ಯ ತುಂಬಿದ್ದೇವೆ. ಪಶುಸಂಪತ್ತು ದೇಶದ ಸಂಪತ್ತು ಎನ್ನುವುದನ್ನು ಕಾರ್ಯಗತಗೊಳಿಸುತ್ತಿದ್ದೇವೆ ಎಂದರು.

ಮೇವು ಕೊರತೆಯಾಗಿಲ್ಲ:

ರಾಜ್ಯದ ಗೋಶಾಲೆಗಳಲ್ಲಿ ಯಾವುದೇ ರೀತಿಯ ಮೇವು ಕೊರತೆಯಾಗಿಲ್ಲ. ಮೇವು ಕೊರತೆಯಾಗದಂತೆ ಕ್ರಮ ವಹಿಸಲಾಗಿದೆ. ಪ್ರತಿ ಗೋಶಾಲೆಯಲ್ಲಿ ಮೇವು ಗೋದಾಮು, ಬೋರ್‌ವೆಲ್‌, ಅಗತ್ಯ ತುರ್ತು ಚಿಕಿತ್ಸಾ ಕೊಠಡಿ, ಮೇವು ಉತ್ಪಾದನೆ, ಪಾಲನೆ, ಪೋಷಣೆ ಮತ್ತು ಆರೈಕೆಗೆ ಕ್ರಮ ವಹಿಸಲಾಗಿದೆ. ಗೋವುಗಳ ಸಂರಕ್ಷಣೆಯೇ ನಮ್ಮ ಸಂಕಲ್ಪ. ಇನ್ನು, ಸರ್ಕಾರಿ ಗೋ ಶಾಲೆಗಳಲ್ಲಿ ಯಾವುದೇ ರೀತಿ ಅವ್ಯವಹಾರವಾಗಿಲ್ಲ. ಬರಗಾಲದ ಗೋಶಾಲೆಗಳ ನಿರ್ವಹಣೆ ಜಿಲ್ಲಾಡಳಿತದ ಜವಾಬ್ದಾರಿಯಾಗಿರುತ್ತದೆ. ಜಿಲ್ಲಾಧಿಕಾರಿಗಳ ಅಧೀನದಲ್ಲಿರುವುದರಿಂದ ಇದಕ್ಕೂ, ನಮಗೂ ಸಂಬಂಧವಿಲ್ಲ. ಈ ಬಗ್ಗೆ ಮೇವು ಪೂರೈಕೆದಾರರಿಗೆ ಹಣಪಾವತಿ ಮಾಡುವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಲಾಗಿದೆ ಎಂದು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ವಿಧಾನಪರಿಷತ್‌ ಸದಸ್ಯ ಛಲವಾದಿ ನಾರಾಯಣಸ್ವಾಮಿ ಉಪಸ್ಥಿತರಿದ್ದರು.
 

Follow Us:
Download App:
  • android
  • ios