ಬೆಂಗಳೂರು, (ಡಿ.13): ಒಂದು ಕಾಲದಲ್ಲಿ ಬಳ್ಳಾರಿ ಕಾಂಗ್ರೆಸ್‌ ಭದ್ರಕೋಟೆ. ಬಳಿಕ ಕಾಲ ಬದಲಾದಂತೆ ಬಳ್ಳಾರಿಯ ರಾಜಕೀಯ ಸಹ ಬದಲಾಯ್ತು.

ತದನಂತರ ಬಳ್ಳಾರಿ ಅಂದ್ರೆ  ನೆನಪಿಗೆ ಬರುವುದು ಶ್ರೀರಾಮುಲು ಮತ್ತು ಜನಾರ್ದನ ರೆಡ್ಡಿ. ಈಗ ಕಾಲಚಕ್ರ ಬದಲಾದಂತೆ ಇವರ ರಾಜಕೀಯ ಹಿಡಿತವೂ ಸಹ ಬದಲಾಗಿದೆ. ಅಕ್ರಮ ಗಣಿ ಪ್ರಕರಣದಲ್ಲಿ ಸಿಲುಕಿ ಜನಾರ್ದನ ರೆಡ್ಡಿ ಬಳ್ಳಾರಿಗೆ ಕಾಲಿಡದಂತೆ ಕೋರ್ಟ್ ಹೇಳಿದೆ. ಮತ್ತೊಂದೆಡೆ ಶ್ರೀರಾಮುಲು ಜಿಲ್ಲೆಯ ರಾಜಕೀಯದಿಂದ ದೂರವಾಗಿ, ಪಕ್ಕದ ಚಿತ್ರದುರ್ಗಕ್ಕೆ ವರ್ಗವಾಗಿದ್ದಾರೆ.

ಬಳ್ಳಾರಿ: ಆನಂದ್ ಸಿಂಗ್ ಇನ್, ಶ್ರೀರಾಮುಲು ಔಟ್, ಏನಿದು ಬಿಜೆಪಿ ಲೆಕ್ಕಾಚಾರ?

2018ರ ವಿಧಾನಸಭೆ ಚುನಾವಣೆಯಲ್ಲಿ ಮೊಣಕಾಲ್ಮೂರು ಕ್ಷೇತ್ರದಿಂದ ಗೆದ್ದು, ಈಗ ಬಿಎಸ್‌ವೈ ಸಂಪುಟದಲ್ಲಿ ಆರೋಗ್ಯ ಸಚಿವರಾಗಿದ್ದಾರೆ. ಆದರೂ ಅವರು ಅದ್ಯಾಕೋ ಸಿಎಂ ಯಡಿಯೂರಪ್ಪ ಅವರಿಂದ ಅಂತರ ಕಾಯ್ದುಕೊಳ್ಳುತ್ತಿದ್ದಾರೆ.  

ಸಿಎಂ ನೇತೃತ್ವದಲ್ಲಿ ನಡೆಯುತ್ತಿರುವ ಅಧಿಕಾರಿಗಳ ಸಭೆಗೆ ಸಚಿವ ಶ್ರೀರಾಮಲು ಗೈರು, ನಿನ್ನೆ (ಗುರುವಾರ) ನಡೆದ ಸಚಿವ ಸಂಪುಟ ಸಭೆಗೂ ಹಾಜರಾಗಿಲ್ಲ. ಹಾಗೆ ವಿಕ್ಟೋರಿಯ ಆಸ್ಪತ್ರೆಯಲ್ಲಿ ಇಲಾಖೆಯ ಕಾರ್ಯಕ್ರಮಕ್ಕೂ ಚಕ್ಕರ್. ಹೀಗೇ ಯಡಿಯೂರಪ್ಪನವರ ಕಾರ್ಯಕ್ರಮದಿಂದ ಶ್ರೀರಾಮುಲು ದೂರ-ದೂರವಾಗುತ್ತಿದ್ದಾರೆ.

ಲೋಕಸಭೆ ಎಲೆಕ್ಷನ್ 2019: ಶ್ರಿರಾಮುಲುಗೆ ಹೊಸ ಟಾಸ್ಕ್ ಕೊಟ್ಟ BSY

ದೋಸ್ತಿ ಸರ್ಕಾರ ಖತಂ ಆಗಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಾಗ ಶ್ರೀರಾಮುಲು ಡಿಸಿಎಂ ಆಗೇ ಬಿಡುತ್ತಾರೆ ಎಂದು ಪರಿಭಾವಿಸಲಾಗಿತ್ತು. ಆದರೆ ಸಿಕ್ಕಿದ್ದು ಆರೋಗ್ಯ ಖಾತೆ. ನಿಧಾನವಾಗಿ ತೆರೆಮರೆಯಿಂದಲೇ ಶ್ರೀರಾಮುಲು ಅವರನ್ನು ಹೊರಗಿಡುವ ಕೆಲಸ ಮಾಡಿಕೊಂಡು ಬರಲಾಯಿತು.

ಹಾಗಾದ್ರೆ ಶ್ರೀರಾಮುಲು ಅದ್ಯಾಕೆ ಅಂತರ ಕಾಯ್ದುಕೊಳ್ಳುತ್ತಿದ್ದಾರೆ. ರಾಮುಲು ಮುನಿಸಿಗೆ ಕಾರಣವೇನು..? ಎನ್ನುವುದನ್ನು ಹುಡುಕುತ್ತಾ ಹೋದ್ರೆ ಹಲವು ಕಾರಣಗಳು ಸಿಕ್ಕಿವೆ. ಅವು ಈ ಕೆಳಗಿನಂತಿವೆ.
 
1. ಡಿಸಿಎಂ ಆಸೆ ಹುಟ್ಟಿಸಿ ಕೈಕೊಟ್ಟ ನಾಯಕರು
ಹೌದು...2018ರಲ್ಲಿ ನಡೆದ ಸಾರ್ವತ್ರಿಕ ವಿಧಾನಸಭೆ ಚುನಾವಣೆಯಲ್ಲಿ ಶ್ರೀರಾಮುಲು ಅವರಿಗೆ ಹೈಕಮಾಂಡ್ ಉಪಮುಖ್ಯಮಂತ್ರಿ ಹುದ್ದೆಯ ಆಸೆ ಹುಟ್ಟಿಸಿತ್ತು. ಈ ಹಿನ್ನೆಲೆಯಲ್ಲಿ ಶ್ರೀರಾಮುಲು ಫುಲ್ ಜೋಶ್‌ನಲ್ಲಿ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಹಗಲಿರುಳು ಶ್ರಮಿಸಿದರು.

ಅಷ್ಟೇ ಅಲ್ಲದೇ ಕಾಂಗ್ರೆಸ್‌ನ ವೋಟ್ ಬ್ಯಾಂಕ್ ಆಗಿದ್ದ ವಾಲ್ಮೀಕಿ ಸಮುದಾಯದ ಮತಗಳನ್ನ ಬಿಜೆಪಿಗೆ ತಿರುಗಿಸುಲ್ಲಿ ಪ್ರಮುಖ ಪಾತ್ರವಹಿಸಿದರು. ಆದ್ರೆ ಶ್ರೀರಾಮುಲು ಅವರನ್ನು ಪಕ್ಕಕ್ಕಿರಿಸಿ ಗೋವಿಂದ ಕಾರಜೋಳ, ಅಶ್ವತ್ಥ ನಾರಾಯಣ, ಲಕ್ಷ್ಮಣ ಸವದಿಗೆ ಡಿಸಿಎಂ ಹುದ್ದೆ ನೀಡಿರುವುದು ಅವರಿಗೆ ಅಸಮಾಧಾನಕ್ಕೆ ಪ್ರಮುಖ ಕಾರಣವಾಗಿದೆ.

ನಾನು ಡಿಸಿಎಂ ಆಗುವ ಭಾವನೆ ನಾಯಕ ಸಮಾಜದಲ್ಲಿದೆ : ಶ್ರೀರಾಮುಲು

2. ಹೈಕಮಾಂಡ್ ನೀಡಿದ ಟಾಸ್ಕ್‌ನ್ನು ಶಿರಸಾವಹಿಸಿ ಮಾಡಿದ್ರು ಮನ್ನಣೆ ನೀಡಿಲ್ಲ 
ಚುನಾವಣೆ ವೇಳೆ ವಾಲ್ಮೀಕಿ ಸಮುದಾಯದ ಮತಗಳನ್ನು ಬಿಜೆಪಿ ತೆಕ್ಕೆಗೆ ತರುವಲಿ ಶ್ರೀರಾಮುಲು ಪಾತ್ರ ದೊಡ್ಡದು. ಅಷ್ಟೇ ಅಲ್ಲದೇ ಬಾದಾಮಿಯಲ್ಲಿ ಸಿದ್ದರಾಮಯ್ಯ ವಿರುದ್ಧ ಅಲ್ಪ ಮತಗಳಿಂದ ಸೋತ್ರೂ ಅಲ್ಲಿ ಪಕ್ಷ ಸಂಘಟನೆ ಮಾಡಿದರು. ಅಷ್ಟೇ ಅಲ್ಲದೇ ಚಿತ್ರದುರ್ಗ ಜಿಲ್ಲೆಯಲ್ಲಿ ಪಕ್ಷ ಸಂಘಟನೆಗಾಗಿ ರಾಮುಲು ಅವರನ್ನು ಮೊಣಕಾಲ್ಮೂರು ಟಿಕೆಟ್‌ ನೀಡಿತ್ತು. ಅದರಂತೆ ಇಲ್ಲಿ ರಾಮುಲು  ಯಶಸ್ವಿ ಕಂಡರು. ಹೀಗೇ ಹೈಕಮಾಂಡ್ ಕೊಟ್ಟ ಸಾಲು-ಸಾಲು ಟಾಸ್ಕ್‌ಗಳನ್ನ  ಶಿರಸಾವಹಿಸಿ ಮಾಡಿದ್ರು ಮನ್ನಣೆ ನೀಡಿಲ್ಲ ಎನ್ನುವ ಕೋಪ ಶ್ರೀರಾಮುಲ ಅವರಲ್ಲಿದೆ.

3. ಪ್ರಮುಖ ಖಾತೆಗೆ ಬೇಡಿಕೆ ಇಟ್ಟಿದ್ದ ರಾಮುಲು
ಡಿಸಿಎಂ ಸಿಗದಿದ್ದರೂ ಪರವಾಗಿಲ್ಲ ಸಂಪುಟ ವಿಸ್ತರಣೆ ವೇಳೆ ಸಮಾಜ ಕಲ್ಯಾಣ ಅಥವಾ ಲೋಕೋಪಯೋಗಿ ಇಲಾಖೆ  ಮೇಲೆ ಕಣ್ಣಿಟ್ಟಿದ್ದರು. ಆದ್ರೆ, ಬಿಎಸ್‌ವೈ  ಆರೋಗ್ಯ ಇಲಾಖೆ ನೀಡಿದ್ದರು. ಈ ಖಾತೆ ಬೇಡ ಬೇರೆ ಇಲಾಖೆ ನೀಡಿ ಎಂದು ಯಡಿಯೂರಪ್ಪ ಬಳಿ ಮನವಿ ಮಾಡಿದ್ದರು. ಆದ್ರೆ, ಬಿಎಸ್‌ವೈ ಅದ್ಯಾವುದಕ್ಕೂ ಕ್ಯಾರೆ ಎನ್ನಲಿಲ್ಲ. 

4. ಜಿಲ್ಲಾ ಉಸ್ತುವಾರಿಯಲ್ಲೂ ಕಡೆಗಣನೆ
ನಿರೀಕ್ಷೆಯ ಖಾತೆ ಸಿಗದೇ ಅಸಮಾಧಾನದಲ್ಲಿ ರಾಮುಲುಗೆ ಜಿಲ್ಲಾ ಉಸ್ತುವಾರಿಯಲ್ಲೂ ಕಡೆಗಣನೆ ಮಾಡಲಾಗಿದೆ. ಬಳ್ಳಾರಿ ಅಥವಾ ಚಿತ್ರದುರ್ಗ ಜಿಲ್ಲೆಯ ಉಸ್ತುವಾರಿ ನೀಡಿ ಎಂದು ಮನವಿ ಮಾಡಿದ್ದರು. ಆದ್ರೆ, ಅವರಿಗೆ ರಾಯಚೂರು ಜಿಲ್ಲಾ ಉಸ್ತುವಾರಿಯನ್ನಾಗಿ ಮಾಡಿದ್ದು, ರಾಮುಲು ಕಣ್ಣುಕೆಂಪಾಗಿಸಿದೆ.

5. ಪ್ರತ್ಯೇಕ ಜಿಲ್ಲೆ ಮಾಡಲು ಸಿಎಂ ಉತ್ಸುಕತೆ, ತನ್ನ ಮಾತಿಗೆ ಮನ್ನಣೆ ನೀಡಿಲ್ಲ ಎನ್ನುವ ಅಸಮಾಧಾನ
ಬಳ್ಳಾರಿಯನ್ನು ಎರಡು ಭಾಗಗಳನ್ನಾಗಿ ಮಾಡಿ ವಿಜಯನಗರವನ್ನು ಜಿಲ್ಲೆ ಮಾಡಲು ನೂತನ ಶಾಸಕ ಆನಂದ್ ಸಿಂಗ್ ಅವರ ಮಾತಿಗೆ ಬಿಎಸ್‌ವೈ ಮನ್ನಣೆ ನೀಡುತ್ತಿದ್ದಾರೆ. ಈ ವಿಚಾರದಲ್ಲಿ ತಮ್ಮ ಮಾತಿಗೆ ಯಾವುದೇ ಮನ್ನಣೆ ನೀಡುತ್ತಿಲ್ಲ ಎನ್ನುವ ಕೋಪವೂ ಸಹ ಇದೆ.

6. ಡಿಸಿಎಂ ಹುದ್ದೆಗೆ ರಮೇಶ್ ಜಾರಕಿಹೊಳಿ ಹೆಸರು
ಮತ್ತೆ ಸಂಪುರ್ಣ ವಿಸ್ತರಣೆಗೆ ಬಿಜೆಪಿ ಮುಂದಾಗಿದ್ದು, ಈ ವೇಳೆ ಮತ್ತೊಬ್ಬರನ್ನ ಡಿಸಿಎಂ ಮಾಡುವ ಮಾತುಗಳು ಕೇಳಿಬರುತ್ತಿವೆ. ಅದು ಕಾಂಗ್ರೆಸ್‌ನಿಂದ ಅನರ್ಹಗೊಂಡು ಉಪಚುನಾವಣೆಯಲ್ಲಿ ಗೆದ್ದು ಅರ್ಹರಾದ ರಮೇಶ್ ಜಾರಕಿಹೊಳಿ ಹೆಸರು ಬಲವಾಗಿ ಕೇಳಿಬರುತ್ತಿವೆ. ಒಂದು ವೇಳೆ ರಮೇಶ್‌ಗೆ ಡಿಸಿಎಂ ಹುದ್ದೆ ಸಿಕ್ರೇ ವಾಲ್ಮೀಕಿ ಸಮುದಾಯ ಲೀಡರ್‌ ಆಗುತ್ತಾರೆ ಎನ್ನುವ ಆತಂಕ ಶ್ರೀರಾಮುಲುಗೆ ಇದೆ.

7.ಬಳ್ಳಾರಿ ಸಂಪೂರ್ಣ ಆನಂದ್ ಸಿಂಗ್ ಹೆಗಲಿಗೆ
ಬಳ್ಳಾರಿಯಿಂದ ಬಿಜೆಪಿಯೇ ಶ್ರೀರಾಮಲು ಅವರನ್ನು ಹೊರಗೆ ಉದ್ದೇಶಪೂರ್ವಕವಾಗಿ ಇಟ್ಟಿತೆ? ಹೌದು ಹೀಗೊಂದು ಪ್ರಶ್ನೆಯನ್ನು ಕೇಳಿಕೊಳ್ಳಬೇಕಿದೆ. ವಿಧಾನಸಭೆ ಚುನಾವಣೆ ವೇಳೆಯೂ ಬಳ್ಳಾರಿಗೆ ಪ್ರವೇಶ ಮಾಡದಂತೆ ಜನಾರ್ದನ ರೆಡ್ಡಿಗೆ ಪರಿಸ್ಥಿತಿ ಎದುರಾಗಿದ್ದರೆ ಇನ್ನೊಂದು ಕಡೆ ಶ್ರೀರಾಮುಲು ಬಳ್ಳಾರಿಯಿಂದ ಸ್ಪರ್ಧೆ ಮಾಡಬೇಕು ಎಂದುಕೊಂಡಿದ್ದರು. ಆದರೆ ಅವರಿಗೆ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ಟಿಕೆಟ್ ನೀಡಲಾಗಿತ್ತು. ಜತೆಗೆ ಸಿದ್ದರಾಮಯ್ಯ ವಿರುದ್ಧ ಸೆಣೆಸಲು ಬಾದಾಮಿಯಲ್ಲಿ ಸ್ಪರ್ಧೆ ಮಾಡಲು ಸೂಚಿಸಲಾಗಿತ್ತು.

ಶ್ರೀರಾಮುಲು ಅವರನ್ನು ಹೊರಗಿಟ್ಟು ಆನಂದ್ ಸಿಂಗ್ ಅವರನ್ನೇ ಬಳ್ಳಾರಿ ಚಕ್ರಾಧಿಪತಿ ಮಾಡಲು ಬಿಜೆಪಿ ಹಠ ತೊಟ್ಟಿರುವ ಹಾಗೆ ಕಾಣುತ್ತದೆ.

ಒಟ್ಟಿನಲ್ಲಿ ಡಿಸಿಎಂ ಸ್ಥಾನದ ನಿರೀಕ್ಷೆಯಲ್ಲಿರುವ ಶ್ರೀರಾಮಲು, ಹೀಗೆ ಯಡಿಯೂರಪ್ಪನವರಿಂದ ಅಂತರ ಕಾಯ್ದುಕೊಂಡು ಪರೋಕ್ಷವಾಗಿ ಒತ್ತಡ ಹೇರುವ ಪ್ರಯತ್ನ ಮಾಡುತ್ತಿದ್ದಾರಾ ಎನ್ನುವ ಪ್ರಶ್ನೆಗಳು ಉದ್ಭವಿಸಿವೆ.