ಬೆಂಗಳೂರು, [ಫೆ.23): 2019ರ ಲೋಕಸಭಾ ಚುನಾವಣೆಯಲ್ಲಿ ದಲಿತ ಮತಗಳನ್ನು ಸೆಳೆಯಲು ರಾಜ್ಯ ಬಿಜೆಪಿ ಮಾಸ್ಟರ್‌ಪ್ಲಾನ್ ರೂಪಿಸಿದೆ. 

ಬಿಜೆಪಿಯಿಂದ ಅಂತರ ಕಾಯ್ದುಕೊಂಡಿರುವ ದೊಡ್ಡ ಸಂಖ್ಯೆಯ ದಲಿತರನ್ನು ಪಕ್ಷದೆಡೆಗೆ ಸೆಳೆಯಲು ರಾಜ್ಯದ 28 ಕ್ಷೇತ್ರಗಳಲ್ಲಿ 7 ಮೀಸಲು ಕ್ಷೇತ್ರಗಳ ಉಸ್ತುವಾರಿಯನ್ನ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಶಾಸಕ ಬಿ‌. ಶ್ರೀರಾಮುಲು ಹೆಗಲಿಗೆ ನೀಡಿದೆ.

ಕಮಲ ಪಾಳೆಯದಲ್ಲಿ ಭಿನ್ನಮತ ಸ್ಫೋಟ: ಬಿಎಸ್‌ವೈ ಸಮ್ಮುಖದಲ್ಲೇ ಬಡಿದಾಟ!

ಮೀಸಲು ಕ್ಷೇತ್ರಗಳಾದ ವಿಜಯಪುರ(ಎಸ್​ಸಿ), ಬಳ್ಳಾರಿ(ಎಸ್​ಟಿ), ಕಲ್ಬುರ್ಗಿ(ಎಸ್​ಸಿ), ರಾಯಚೂರು(ಎಸ್​​ಟಿ), ಚಿತ್ರದುರ್ಗ(ಎಸ್​ಸಿ), ಚಾಮರಾಜನಗರ(ಎಸ್​ಸಿ) ಹಾಗೂ ಕೋಲಾರ(ಎಸ್​ಸಿ) ಕ್ಷೇತ್ರಗಳ ಪೈಕಿ 5 ಕ್ಷೇತ್ರವನ್ನು ಗೆಲ್ಲಲ್ಲೇಬೇಕೆಂದು ಪಣ ತೊಟ್ಟಿರುವ ಬಿಎಸ್​ವೈ, ಈ ಕ್ಷೇತ್ರಗಳ ಜವಾಬ್ದಾರಿಯನ್ನ ರಾಮುಲು ಹೆಗಲಿಗೆ ನೀಡಿದ್ದಾರೆ. 

ಈ ಮೂಲಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜನಪ್ರತಿನಿಧಿಗಳು ಸ್ಪರ್ಧಿಸುವ ಮೀಸಲು ಕ್ಷೇತ್ರಗಳಲ್ಲಿ ಮತದಾರರನ್ನು ಸೆಳೆಯಲು ಬಿಜೆಪಿ ತಂತ್ರ ಹೆಣೆಯುತ್ತಿದೆ.

ರಾಮುಲು ಜತೆಗೆ ಸಹ ಉಸ್ತುವಾರಿಗಳಾಗಿ ಗೋವಿಂದ ಕಾರಜೋಳ ಮತ್ತು ರಮೇಶ್ ಜಿಗಜಿಣಗಿಗೂ ಜವಾಬ್ದಾರಿ ನೀಡಲಾಗಿದೆ. ಇನ್ನು ರಾಜ್ಯಾಧ್ಯಕ್ಷರ ಸೂಚನೆ ಹಿನ್ನೆಲೆಯಲ್ಲಿ ಬಿ. ಶ್ರೀರಾಮುಲು ಈಗಾಗಲೇ ಕ್ಷೇತ್ರಗಳಲ್ಲಿ ಸುತ್ತಾಟ ಆರಂಭಿಸಿದ್ದಾರೆ.