ಬೆಂಗಳೂರು, (ಜ.19): ರಾಜ್ಯ ಸಚಿವ ಸಂಪುಟ ವಿಸ್ತರಣೆಯಾಗಿ ಒಂದು ವಾರ ಆಗುತ್ತಾ ಬಂತು. ಆದ್ರೆ, ಇದುವರೆಗೂ ಸಿಎಂ ಬಿಎಸ್​ವೈ ನೂತನ ಸಚಿವರಿಗೆ ಖಾತೆಯನ್ನ ಇನ್ನೂ ಹಂಚಿಕೆ ಮಾಡಿಲ್ಲ. ಆದ್ರೆ, ಇದೀಗ ಸಿಎಂ ಬಿಎಸ್ ಯಡಿಯೂರಪ್ಪ ಖಾತೆ ಓಪನ್‌ಗೆ ಮುಹೂರ್ತ ಫಿಕ್ಸ್ ಮಾಡಿದ್ದಾರೆ.

ಹೌದು.. ಈ ಬಗ್ಗೆ ಇಂದು (ಮಂಗಳವಾರ) ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಗುರುವಾರ (ಜ.21) ನೂತನ ಸಚಿವರುಗಳಿಗೆ ಖಾತೆ ಹಂಚಿಕೆ ಮಾಡಲಾಗುವುದು ಎಂದು ಮಾಧ್ಯಮಗಳ ಮುಂದೆ ಹೇಳಿದ್ದು, ಯಾವ ಖಾತೆ ಕೊಡಬಹುದು ಎನ್ನುವ ಕುತೂಹಲದಲ್ಲಿ ನೂತನ ಸಚಿವರಿದ್ದಾರೆ. 

ನೂತನ ಸಚಿವರಿಗೆ ಖಾತೆ ಬಹುತೇಕ ಫೈನಲ್: ಯಾರಿಗೆ-ಯಾವ ಖಾತೆ?

ಈ ಹಿನ್ನೆಲೆಯಲ್ಲಿ ಯಾರಿಗೆ ಯಾವ್ಯಾವ ಜವಾಬ್ದಾರಿ ಸಿಗುತ್ತೆ ಅನ್ನೋ ಕುತೂಹಲ ಮೂಡಿಸಿದೆ. ಖಾಲಿ ಇರುವ ಖಾತೆಗಳನ್ನು ನೂತನ ಸಚಿವರಿಗೆ ಕೊಡಿತ್ತಾರೋ ಇಲ್ಲ ಹಳೆ ಸಚಿವರ ಖಾತೆಗಳನ್ನು ಬದಲಿಸುತ್ತಾರೋ ಎನ್ನುವುದು ಮಾತ್ರ ಇನ್ನು ನಿಗೂಢವಾಗಿದೆ.

ಸದ್ಯ ಯಾರಿಗೆ ಯಾವೆಲ್ಲಾ ಖಾತೆಗಳು ಸಿಗಬಹುದು ಅನ್ನೋ ಚರ್ಚೆ ರಾಜ್ಯ ರಾಜಕಾರಣದಲ್ಲಿ ಶುರುವಾಗಿದೆ. ಆದರೆ ಸಿಎಂ ಬಿಎಸ್​ವೈ ತಮ್ಮ ಬಳಿ ಉಳಿಸಿಕೊಂಡಿರುವ 13ಕ್ಕೂ ಹೆಚ್ಚು ಜವಾಬ್ದಾರಿಗಳಲ್ಲಿ ಯಾವುದೆಲ್ಲಾ ನೂತನ ಸಚಿವರಿಗೆ ನೀಡಬಹುದು ಅನ್ನೋ ಮಾತುಗಳು ಸಹ ಕೇಳಿಬರುತ್ತಿವೆ. 

ಈ ಪೈಕಿ ಆರ್ಥಿಕ ಇಲಾಖೆ, ಬೆಂಗಳೂರು ನಗರಾಭಿವೃದ್ಧಿ, ಗುಪ್ತಚರ ಇಲಾಖೆ ಖಾತೆಗಳನ್ನ ಸಿಎಂ ತಮ್ಮ ಬಳಿಯೇ ಇಟ್ಟುಕೊಳ್ಳುವ ಸಸಾಧ್ಯತೆಗಳು ಹೆಚ್ಚಿವೆ.  ಅಂದ್ಹಾಗೆ ಸಿಎಂ ಬಿಎಸ್​ವೈ ಬಳಿ ಯಾವೆಲ್ಲಾ ಖಾತೆಗಳು ಎನ್ನುವುದು ಈ ಕೆಳಗಿನಂತಿದೆ ನೋಡಿ...

ಸಿಎಂ ಬಳಿಯಿರುವ ಖಾತೆಗಳು
 ಆರ್ಥಿಕ ಇಲಾಖೆ, ಬೆಂಗಳೂರು ನಗರಾಭಿವೃದ್ಧಿ, ಗುಪ್ತಚರ ಇಲಾಖೆ, ಇಂಧನ ಇಲಾಖೆ, ಪ್ರವಾಸೋದ್ಯಮ ಇಲಾಖೆ, ಅಬಕಾರಿ ಇಲಾಖೆ, ಯುವಜನ ಸಬಲೀಕರಣ ಮತ್ತು ಕ್ರೀಡೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ, ಹಿಂದುಳಿದ ವರ್ಗಗಳ ಕಲ್ಯಾಣ, ಯೋಜನೆ ಮತ್ತು ಸಂಯೋಜನೆ ಸಾಂಖ್ಯಿಕ ಅಂಕಿ ಅಂಶ, ವಾರ್ತಾ ಮತ್ತು ಪ್ರಚಾರ, ಸಣ್ಣ ಕೈಗಾರಿಕೆ ‌ಇಲಾಖೆ.