ಬೆಂಗಳೂರಿನ ಆಯಕಟ್ಟಿನ ಜಾಗದಲ್ಲಿ ಉಳಿದಿದ್ದ ಹಲವು ಅಧಿಕಾರಿಗಳನ್ನು ಜಿಲ್ಲೆಯ ಹೊರಗೆ ಕಳುಹಿಸಿರುವುದು ಸೇರಿದಂತೆ ಒಟ್ಟು 5,676 ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಬೆಂಗಳೂರು (ಆ.08): ಆರೋಗ್ಯ ಇಲಾಖೆಯ ವರ್ಗಾವಣೆ ಪ್ರಕ್ರಿಯೆಯನ್ನು ತ್ವರಿತ ಹಾಗೂ ಪಾರದರ್ಶಕವಾಗಿ ನಡೆಸಿದ್ದು, ಬೆಂಗಳೂರಿನ ಆಯಕಟ್ಟಿನ ಜಾಗದಲ್ಲಿ ಉಳಿದಿದ್ದ ಹಲವು ಅಧಿಕಾರಿಗಳನ್ನು ಜಿಲ್ಲೆಯ ಹೊರಗೆ ಕಳುಹಿಸಿರುವುದು ಸೇರಿದಂತೆ ಒಟ್ಟು 5,676 ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಆರೋಗ್ಯ ಸೌಧದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಹಲವು ವರ್ಷಗಳಿಂದ ವೈದ್ಯರನ್ನೇ ಕಾಣದಿದ್ದ ತಾಲೂಕು ಆಸ್ಪತ್ರೆಗಳಿಗೆ ವರ್ಗಾವಣೆಯಿಂದಾಗಿ ವೈದ್ಯರ ನಿಯೋಜನೆ ಆಗಿದೆ. ತಾಲೂಕು ಆಸ್ಪತ್ರೆಗಳ ಬಲವರ್ಧನೆಗೆ ಅನುಕೂಲವಾಗಿದೆ. ವರ್ಗಾವಣೆಯಿಂದ ಬೆಂಗಳೂರು ಸೇರಿ ಕೆಲ ಆಸ್ಪತ್ರೆಗಳಲ್ಲಿ ತೆರವಾಗಿರುವ ವೈದ್ಯರು ಹಾಗೂ ಶುಶ್ರೂಷಕರ ಹುದ್ದೆಗಳಿಗೆ ಮುಂದಿನ ವಾರ ಎರಡನೇ ಸುತ್ತಿನ ಕೌನ್ಸೆಲಿಂಗ್ ನಡೆಸಲಾಗುವುದು ಎಂದು ತಿಳಿಸಿದರು.
ಆರೋಗ್ಯ ಇಲಾಖೆಯಲ್ಲಿ ಎರಡು ಸಾವಿರ ಎಂಬಿಬಿಎಸ್ ವೈದ್ಯರು ಹಾಗೂ 185 ತಜ್ಞರ ಕೊರತೆ ಇದೆ. ಇದನ್ನು ನೀಗಿಸಲು ಸರ್ಕಾರಿ ವೈದ್ಯಕೀಯ ಸೀಟು ಪಡೆದು ಸರ್ಕಾರಿ ಹಾಗೂ ಖಾಸಗಿಯಲ್ಲಿ ವೈದ್ಯಕೀಯ ಪದವಿ ಪಡೆದ ವಿದ್ಯಾರ್ಥಿಗಳನ್ನು ಆದ್ಯತೆ ಮೇರೆಗೆ ನೇಮಕ ಮಾಡಿಕೊಳ್ಳಲಾಗುವುದು. ಈ ಸಂಬಂಧ ಈಗಾಗಲೇ 6 ಸಾವಿರ ಎಂಬಿಬಿಎಸ್ ವೈದ್ಯರು ಹಾಗೂ 119 ತಜ್ಞರು ನೋಂದಾಯಿಸಿಕೊಂಡಿದ್ದಾರೆ ಎಂದರು.
ಆಶಾ ಕಾರ್ಯಕರ್ತೆಯರಿಗೆ ಎಸ್‌ಎಸ್‌ಎಲ್‌ಸಿ ವಿದ್ಯಾರ್ಹತೆ: ಆಶಾ ಕಾರ್ಯಕರ್ತೆಯರ ನೇಮಕಾತಿಗೆ ಎಸ್ಸೆಸ್ಸೆಲ್ಸಿ ವಿದ್ಯಾರ್ಹತೆಯನ್ನು ನಿಗದಿಪಡಿಸಲಾಗಿದ್ದು, ಇನ್ನು ಮುಂದೆ ಆಶಾಗಳ ನೇಮಕಾತಿಯಲ್ಲಿ ಇದು ಅನ್ವಯವಾಗಲಿದೆ ಎಂದು ಇದೇ ವೇಳೆ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.
ರಾಜ್ಯದಲ್ಲಿ 15 ಸಾವಿರ ಆಶಾ ಕಾರ್ಯಕರ್ತೆಯರಿದ್ದಾರೆ. ಇವರಿಗೆ ಟೀಮ್ ಬೇಸ್ ಇನ್ಸೆಂಟಿವ್ ಒಂದು ಸಾವಿರ ಹೆಚ್ಚಿಸಲಾಗಿದೆ. ರಾಜ್ಯ ಮತ್ತು ಕೇಂದ್ರವು 60:40 ಅನುಪಾತದಲ್ಲಿ ಅನುದಾನ ನೀಡಲಾಗುತ್ತಿದೆ. ಅದರಂತೆ ಹೆಚ್ಚುವರಿ ಅನುದಾನ ನೀಡುವಂತೆ ಕೇಂದ್ರಕ್ಕೆ ಮನವಿ ಮಾಡಲಾಗಿದ್ದು, 1500 ರು. ಕೊಡುವುದಾಗಿ ಕೇಂದ್ರ ಒಪ್ಪಿದೆ. ಇದರಿಂದ ಅವರಿಗೆ ಮುಂದೆ 9 ಸಾವಿರದ ವರೆಗೂ ವೇತನ ಸಿಗಲಿದೆ. ಈ ಕುರಿತು ಮನವರಿಕೆ ಮಾಡಿಕೊಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
