ಚಿಕ್ಕಪೇಟೆ ವಾರ್ಡ್‌ನಲ್ಲೇ 8500 ಮತದಾರರ ಬಗ್ಗೆ ಸರಿಯಾದ ಮಾಹಿತಿ ಇರಲಿಲ್ಲ. ಅವರು ಯಾರು, ಏನು, ವಿಳಾಸ ಯಾವುದೂ ಇರಲಿಲ್ಲ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಆರೋಪಿಸಿದ್ದಾರೆ.
ಬೆಂಗಳೂರು (ಆ.08): ನಾನು ಪ್ರತಿನಿಧಿಸುವ ಗಾಂಧಿನಗರ ವಿಧಾನಸಭಾ ಕ್ಷೇತ್ರದಲ್ಲೂ ಮತಗಳ್ಳತನ ನಡೆದಿತ್ತು. ಈ ಬಗ್ಗೆ ಚುನಾವಣಾ ಆಯೋಗಕ್ಕೆ ಪತ್ರ ಬರೆದರೂ ಯಾವುದೇ ಪ್ರಯೋಜನ ಆಗಲಿಲ್ಲ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಆರೋಪಿಸಿದ್ದಾರೆ. ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಹುಲ್ ಗಾಂಧಿ ಅವರು ಲೋಕಸಭಾ ಚುನಾವಣೆಯಲ್ಲಿ ಕರ್ನಾಟದಲ್ಲೂ ಮತಗಳವು ಆರೋಪ ಸಂಬಂಧ ದಾಖಲೆಗಳ ಬಿಡುಗಡೆ ಮಾಡಿದ ಕುರಿತ ಪ್ರಶ್ನೆಗೆ, ನನ್ನ ಕ್ಷೇತ್ರದಲ್ಲೂ ಈ ರೀತಿ ಆಗಿದೆ.
ಚಿಕ್ಕಪೇಟೆ ವಾರ್ಡ್‌ನಲ್ಲೇ 8500 ಮತದಾರರ ಬಗ್ಗೆ ಸರಿಯಾದ ಮಾಹಿತಿ ಇರಲಿಲ್ಲ. ಅವರು ಯಾರು, ಏನು, ವಿಳಾಸ ಯಾವುದೂ ಇರಲಿಲ್ಲ. ಈ ಬಗ್ಗೆ ಪರಿಶೀಲಿಸಲು ಆಯೋಗಕ್ಕೆ ಪತ್ರ ಬರೆದರೂ ಪ್ರಯೋಜನ ಆಗಲಿಲ್ಲ. ಆಯೋಗದ ಇಂತಹ ನಡೆ ಸರಿಯಲ್ಲ. ಆಯೋಗವು ಬಿಜೆಪಿಗಾಗಿ ಕೆಲಸ ಮಾಡುತ್ತಿದೆ ಎನ್ನುವ ಅನುಮಾನ ಬರುತ್ತಿದೆ. ಇಂತಹ ಅಕ್ರಮ ಪ್ರಶ್ನಿಸಿ ನ್ಯಾಯಾಲಯದ ಮೊರೆ ಹೋಗಬೇಕಾಗುತ್ತದೆ. ನೋಡೋಣ ಎಂದರು.
ಶಿರಸಿ ಆಸ್ಪತ್ರೆ ಜಿಲ್ಲಾಸ್ಪತ್ರೆಯಾಗಿ ಅಭಿವೃದ್ಧಿ: ಕಾರವಾರದ ಜಿಲ್ಲಾ ಆಸ್ಪತ್ರೆಯನ್ನು ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ವಿಲೀನ ಮಾಡಿರುವುದರಿಂದ, ಶಿರಸಿಯಲ್ಲಿನ ಆಸ್ಪತ್ರೆಯನ್ನು ಜಿಲ್ಲಾ ಆಸ್ಪತ್ರೆಯಾಗಿ ಅಭಿವೃದ್ಧಿ ಮಾಡಲಾಗುವುದು ಎಂದು ಹೇಳಿದರು. ಶಿರಸಿಯಲ್ಲಿನ ಆಸ್ಪತ್ರೆಯನ್ನು ಜಿಲ್ಲಾಸ್ಪತ್ರೆಯಾಗಿ ಅಭಿವೃದ್ಧಿ ಮಾಡುವ ಕುರಿತಂತೆ ಆಸ್ಪತ್ರೆಗೆ ಅಗತ್ಯವಿರುವ ಸಿಟಿ ಸ್ಕ್ಯಾನ್, ಎಂಆರ್‌ಐ ಯಂತ್ರೋಪಕರಣ, ಸಿಬ್ಬಂದಿ ಹಾಗೂ ಕಿಮೋಥೇರಪಿ, ಡೇ ಕೇರ್ ಸೆಂಟರ್ ಸ್ಥಾಪನೆಯ ಕುರಿತಂತೆ ಪ್ರಸ್ತಾವನೆ ಸಲ್ಲಿಸುವಂತೆ ಸೂಚಿಸಿದ ಸಚಿವರು, ಜಿಲ್ಲೆಯಲ್ಲಿ ತಾಯಿ ಮತ್ತು ಮಗುವಿನ ಆರೋಗ್ಯದ ಬಗ್ಗೆ ಹೆಚ್ಚಿನ ನಿಗಾ ವಹಿಸಬೇಕು. ನಿರ್ಜೀವ ಜನನ ದರ ಕಡಿಮೆಗೊಳಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕು ಎಂದರು.
ಜಿಲ್ಲೆಯ ಎಲ್ಲ ತಾಲೂಕು ಆಸ್ಪತ್ರೆಗಳಲ್ಲಿ 2 ಮಂದಿ ಪ್ರಸೂತಿ ವೈದ್ಯರು, 2 ಮಂದಿ ಅರವಳಿಕೆ ತಜ್ಞರು ಮತ್ತು 2 ಮಂದಿ ಮಕ್ಕಳ ತಜ್ಞರ ಸೇವೆ ದೊರೆಯುವಂತೆ ಮಾಡುವ ಮೂಲಕ 24*7 ಕಾರ್ಯನಿರ್ವಹಿಸಲು ಕ್ರಮ ಕೈಗೊಳ್ಳಿ, ಜಿಲ್ಲೆಯ ವಿವಿಧ ಆರೋಗ್ಯ ಕೇಂದ್ರಗಳಲ್ಲಿ ಕಡಿಮೆ ಹೆರಿಗೆ ಪ್ರಮಾಣವಿದ್ದಲ್ಲಿ ಅಲ್ಲಿ ಕಾರ್ಯ ನಿರ್ವಹಿಸುವ ತಜ್ಞ ವೈದ್ಯರನ್ನು ತಾಲೂಕು ಆಸ್ಪತ್ರೆಗೆ ನಿಯೋಜಿಸುವ ಮೂಲಕ ಸಾರ್ವಜನಿಕರಿಗೆ ಉತ್ತಮ ಸೇವೆ ಒದಗಿಸುವ ಜತೆಗೆ ತುರ್ತು ಸಂದರ್ಭದಲ್ಲಿ ವೈದ್ಯರ ಲಭ್ಯತೆ ಸಿಗುವುದರಿಂದ ಮುಂದೆ ಆಗಬಹುದಾದ ಅನಾಹುತ ತಡೆಗಟ್ಟಬಹುದಾಗಿದೆ ಎಂದರು.
