Asianet Suvarna News Asianet Suvarna News

ಜೆಡಿಎಸ್‌ ಆಟಾಟೋಪಕ್ಕೆ ಬ್ರೇಕ್: ಸೂಪರ್ ಸಿಎಂ ರೇವಣ್ಣಗೆ ಬೀಳುತ್ತಾ ಮೂಗುದಾರ?

ಪಂಚ ರಾಜ್ಯಗಳ ಫಲಿತಾಂಶದಿಂದ ದಳಪತಿಗಳಿಗೆ ಸಿಹಿ-ಕಹಿ! ಆಪರೇಷನ್‌ ಕಮಲದ ಭೀತಿ ಕ್ಷೀಣ! ಜೆಡಿಎಸ್‌ಗೆ ಕಾಂಗ್ರೆಸ್‌ನ ಬಿಗಿಹಿಡಿತದ ಭೀತಿ..!

5 States Election Results Effect Congrees Break to JDS Foul Play In Karnataka
Author
Bengaluru, First Published Dec 12, 2018, 9:42 AM IST

ಬೆಂಗಳೂರು, [ಡಿ.12]: ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆಯ ಫಲಿತಾಂಶ ಜೆಡಿಎಸ್‌ ಪಾಲಿಗೆ ಸಿಹಿ ಮತ್ತು ಕಹಿಯ ಮಿಶ್ರಣದಂತಿದ್ದರೂ ಸಿಹಿಯೇ ಹೆಚ್ಚಾಗಿದೆ.

ಐದು ರಾಜ್ಯಗಳ ಪೈಕಿ ಕಾಂಗ್ರೆಸ್‌ ಮತ್ತು ಬಿಜೆಪಿ ಹೆಚ್ಚೂ ಕಡಮೆ ಸಮನಾಗಿ ಫಲಿತಾಂಶ ಪಡೆದಿದ್ದರೆ, ಆಗ ಕರ್ನಾಟಕದಲ್ಲಿ ಜೆಡಿಎಸ್‌ನ ಪ್ರಾಮುಖ್ಯತೆ ಹೆಚ್ಚುತ್ತಿತ್ತು. 

ಆದರೆ, ಬಿಜೆಪಿ ಧೂಳೀಪಟವಾಗಿರುವುದರಿಂದ ಮುಂದಿನ ದಿನಗಳಲ್ಲಿ ಕಾಂಗ್ರೆಸ್ಸಿನ ಮರ್ಜಿ ಕಾಯಬೇಕಾಗಿ ಬರುತ್ತದೆಯೋ ಎಂಬ ಚಿಂತೆ ರೂಪದ ಅಭಿಪ್ರಾಯ ಜೆಡಿಎಸ್‌ ಪಾಳೆಯದಲ್ಲಿ ಕಂಡು ಬರುತ್ತಿದೆ.

ಆಪರೇಷನ್‌ ಕಮಲ ಭೀತಿ ಕ್ಷೀಣ: ನಿಟ್ಟುಸಿರು ಬಿಟ್ಟ ಮೈತ್ರಿ ಸರ್ಕಾರ

ಆ ಐದು ರಾಜ್ಯಗಳಲ್ಲಿ ಬಿಜೆಪಿ ಜಯಭೇರಿ ಬಾರಿಸುವುದರಿಂದ ಎಲ್ಲಿ ತಮ್ಮ ಸರ್ಕಾರದ ಅಸ್ತಿತ್ವಕ್ಕೆ ಧಕ್ಕೆ ಉಂಟಾಗುತ್ತದೆಯೋ ಎಂಬ ಆತಂಕ ಸದ್ಯಕ್ಕೆ ನಿವಾರಣೆಯಾಗಿರುವುದರಿಂದ ಜೆಡಿಎಸ್‌ ನಾಯಕರು ಸಂತಸಗೊಂಡಿದ್ದಾರೆ. 

ಅದರೊಂದಿಗೇ ಫಲಿತಾಂಶದ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ನಾಯಕರು ಜೆಡಿಎಸ್‌ಗೆ ಮೊದಲಿನಷ್ಟುಪ್ರಾಮುಖ್ಯತೆ ನೀಡದೆ ಸರ್ಕಾರದ ಮೇಲೆ ಹಂತ ಹಂತವಾಗಿ ಹಿಡಿತ ಬಿಗಿಗೊಳಿಸಬಹುದು ಎಂಬ ಆತಂಕವೂ ಇದೆ ಎಂದು ಮೂಲಗಳು ತಿಳಿಸಿವೆ.

ಮುಖ್ಯಮಂತ್ರಿಗಳ ಸಹೋದರರೂ ಆಗಿರುವ ಲೋಕೋಪಯೋಗಿ ಸಚಿವ ಎಚ್‌.ಡಿ.ರೇವಣ್ಣ ಅವರ ಬಗ್ಗೆ ಮೊದಲಿನಿಂದಲೂ ಕಾಂಗ್ರೆಸ್‌ ಪಾಳೆಯದಲ್ಲಿ ತೀವ್ರ ಅಸಮಾಧಾನವಿದೆ. 

ಅಧಿಕಾರಿಗಳ ವರ್ಗಾವಣೆ ಸೇರಿದಂತೆ ತಮಗೆ ಸಂಬಂಧವಿಲ್ಲದ ಖಾತೆಗಳಲ್ಲೂ ಮೂಗು ತೂರಿಸುತ್ತಾರೆ ಎಂಬ ಆಕ್ರೋಶ ಆಗಾಗ ವ್ಯಕ್ತವಾಗುತ್ತಲೇ ಇತ್ತು. 

ಇದು ಗೊತ್ತಿದ್ದರೂ ಮುಖ್ಯಮಂತ್ರಿ ಕುಮಾರಸ್ವಾಮಿ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂಬ ಅತೃಪ್ತಿಯೂ ಕಾಂಗ್ರೆಸ್‌ ಶಾಸಕರಲ್ಲಿತ್ತು. ಆದರೆ, ಜೆಡಿಎಸ್‌ ನಾಯಕರು ಕಾಂಗ್ರೆಸ್‌ ಹೈಕಮಾಂಡ್‌ ಕಡೆ ಕೈತೋರಿಸಿ ಸುಮ್ಮನಾಗಿಸುತ್ತಿದ್ದರು.

ಆದರೆ, ಇನ್ನು ಮುಂದೆ ಜೆಡಿಎಸ್‌ ನಡೆದದ್ದೇ ಹಾದಿ ಎನ್ನುವಂತೆ ಇರಲಿಕ್ಕಿಲ್ಲ. ದೇಶದ ಇತರೆಡೆ ಎಲ್ಲಿಯೂ ಪಕ್ಷ ಅಧಿಕಾರದಲ್ಲಿ ಇಲ್ಲ ಎಂಬ ಕಾರಣಕ್ಕಾಗಿ ಕರ್ನಾಟಕದಲ್ಲಿ ಅಧಿಕಾರ ತಪ್ಪಿಹೋಗಬಾರದು ಎಂಬ ಕಾಳಜಿಯಿಂದಾಗಿ ಜೆಡಿಎಸ್‌ಗೆ ಮಣಿಯುತ್ತಿದ್ದ ಕಾಂಗ್ರೆಸ್‌ ನಾಯಕರು ಮುಂದಿನ ದಿನಗಳಲ್ಲಿ ಬದಲಾಗಬಹುದು. ಆ ಮೂಲಕ ತಮ್ಮ ಪಕ್ಷವನ್ನು ನಿಯಂತ್ರಿಸಬಹುದು ಎಂಬ ಸಣ್ಣ ಆತಂಕವಿದೆ ಎಂದು ಜೆಡಿಎಸ್‌ ಉನ್ನತ ಮೂಲಗಳು ತಿಳಿಸಿವೆ.

Follow Us:
Download App:
  • android
  • ios