ಆಪರೇಷನ್‌ ಕಮಲ ಭೀತಿ ಕ್ಷೀಣ: ನಿಟ್ಟುಸಿರು ಬಿಟ್ಟ ಮೈತ್ರಿ ಸರ್ಕಾರ

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 12, Dec 2018, 9:08 AM IST
5 state assembly election results 2018 effect karnataka govt safe form Operation Kamala
Highlights

 ಪಂಚ ರಾಜ್ಯಗಳ ಚುನಾವಣೆ ಫಲಿತಾಂಶದಿಂದ ಬಿಜೆಪಿ ಉತ್ಸಾಹ ಇಳಿಕೆ! ನಿಟ್ಟುಸಿರು ಬಿಟ್ಟಸಮ್ಮಿಶ್ರ ಸರ್ಕಾರದ ನಾಯಕರು! ಸರ್ಕಾರ ಬೀಳಿಸುವ ಯತ್ನ ನಿಲ್ಲುವ ಸಾಧ್ಯತೆ.

ಬೆಂಗಳೂರು, [ಡಿ.12]: ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆಯ ಫಲಿತಾಂಶ ಹೊರಬಿದ್ದ ಬೆನ್ನಲ್ಲೇ ರಾಜ್ಯದ ಜೆಡಿಎಸ್‌ ಮತ್ತು ಕಾಂಗ್ರೆಸ್‌ ನೇತೃತ್ವದ ಸಮ್ಮಿಶ್ರ ಸರ್ಕಾರದ ನಾಯಕರು ನಿಟ್ಟುಸಿರು ಬಿಟ್ಟಿದ್ದಾರೆ.

ಸರ್ಕಾರ ಪತನಗೊಳಿಸುವ ಸಂಬಂಧ ನಡೆಯಬಹುದು ಎಂದು ನಿರೀಕ್ಷಿಸಲಾಗುತ್ತಿದ್ದ ಆಪರೇಷನ್‌ ಕಮಲದ ತೀವ್ರತೆ ಕ್ಷೀಣಿಸಿದೆ.

ಕಳೆದ ಹಲವು ದಿನಗಳಿಂದ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಸೇರಿದಂತೆ ಸರ್ಕಾರದ ಪ್ರಮುಖರು ಐದು ರಾಜ್ಯಗಳ ಚುನಾವಣಾ ಫಲಿತಾಂಶ ಬಿಜೆಪಿ ಮೇಲುಗೈ ಸಾಧಿಸಿದ್ದಲ್ಲಿ ಆಪರೇಷನ್‌ ಕಮಲಕ್ಕೆ ತಮ್ಮ ಕೆಲವು ಶಾಸಕರು ಬಲಿಯಾಗಬಹುದು, ಅದರಿಂದಾಗಿ ಸರ್ಕಾರ ಅಸ್ಥಿರಗೊಳ್ಳಬಹುದು ಎಂಬ ಆತಂಕದಲ್ಲೇ ಕಾಲ ದೂಡುತ್ತಿದ್ದರು. 

ಬೇಲಿ ಮೇಲೆ ಕುಳಿತ ಶಾಸಕರನ್ನು ಹಿಡಿದಿಟ್ಟುಕೊಳ್ಳುವುದು ಹೇಗೆ ಎಂಬುದೇ ಅವರ ಚಿಂತೆಗೆ ಕಾರಣವಾಗಿತ್ತು. ಅದಕ್ಕೆ ತಕ್ಕಂತೆ ಕಳೆದ ಹಲವು ದಿನಗಳಿಂದ ನಾನಾ ರೀತಿಯ ಬೆಳವಣಿಗೆಗಳು ನಡೆಯುತ್ತಿದ್ದವು. 

ಅದಕ್ಕೆ ತಕ್ಕಂತೆ ತರೇಹವಾರಿ ವದಂತಿಗಳು ರೆಕ್ಕೆ ಪುಕ್ಕ ಕಟ್ಟಿಕೊಂಡು ಭರದ ಹಾರಾಟ ನಡೆಸುತ್ತಿದ್ದವು. ಒಂದು ಹಂತದಲ್ಲಿ ಒತ್ತಡ ಹೆಚ್ಚಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಆರೋಗ್ಯದ ಮೇಲೂ ಇದು ಪರಿಣಾಮ ಬೀರಿತ್ತು.

ಆದರೆ, ಮಂಗಳವಾರ ಮಧ್ಯಾಹ್ನದ ಹೊತ್ತಿಗೆ ಕುಮಾರಸ್ವಾಮಿ ಅವರು ನೆಮ್ಮದಿಯ ನಗು ಬೀರಿದರು. ಫಲಿತಾಂಶದಿಂದ ಸಂತಸಗೊಂಡು ಸದ್ಯಕ್ಕಾದರೂ ಸರ್ಕಾರ ಅಸ್ಥಿರಗೊಳ್ಳುವ ಭೀತಿ ದೂರವಾಯಿತಲ್ಲ ಎಂಬ ನಿರಾಳ ಭಾವದಿಂದ ಬೆಳಗಾವಿಯ ಅಧಿವೇಶನದಲ್ಲಿ ಭಾಗಿಯಾದರು ಎಂದು ಅವರ ಆಪ್ತರು ಮಾಹಿತಿ ನೀಡಿದ್ದಾರೆ.

ಒಂದು ವೇಳೆ ಆಪರೇಷನ್‌ ಕಮಲ ನಡೆದದ್ದೇ ಆದಲ್ಲಿ ರಾಜಿನಾಮೆ ನೀಡುವ ಶಾಸಕರು ಪ್ರತಿನಿಧಿಸುತ್ತಿದ್ದ ಕ್ಷೇತ್ರಗಳ ಉಪಚುನಾವಣೆ ಮುಂಬರುವ ಸಾರ್ವತ್ರಿಕ ಲೋಕಸಭಾ ಚುನಾವಣೆಯ ಜೊತೆಗೆ ನಡೆಯುವ ಸಾಧ್ಯತೆಯಿತ್ತು. 

ಇದಕ್ಕೆ ತಕ್ಕಂತೆ ತೆರೆಮರೆಯಲ್ಲಿ ಪೂರ್ವಸಿದ್ಧತೆಯೂ ನಡೆದಿತ್ತು. ಪ್ರಧಾನಿ ನರೇಂದ್ರ ಮೋದಿ ಅಲೆಯಲ್ಲಿ ಲೋಕಸಭೆ ಜೊತೆಗೆ ತಾವೂ ಮತ್ತೊಮ್ಮೆ ಶಾಸಕರಾಗಿ ಉಪಚುನಾವಣೆಯಲ್ಲೂ ಗೆಲ್ಲಬಹುದು ಎಂಬ ಲೆಕ್ಕಾಚಾರವಿತ್ತು.

ಆದರೆ, ಈಗ ಫಲಿತಾಂಶ ಹೊರಬಿದ್ದ ನಂತರ ಬೇಲಿ ಮೇಲೆ ಕುಳಿತ ಶಾಸಕರು ಗೊಂದಲಕ್ಕೀಡಾಗಿದ್ದಾರೆ. ಸಚಿವ ಸ್ಥಾನ ಸಿಗಲಿ ಅಥವಾ ಬಿಡಲಿ. ಶಾಸಕ ಸ್ಥಾನವಾದರೂ ಉಳಿದರೆ ಸಾಕು ಎಂಬಂತಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮೇಲಾಗಿ ಬಿಜೆಪಿಗೂ ಈಗ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಇನ್ನೇನು ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರು ಮತ್ತೊಮ್ಮೆ ಮುಖ್ಯಮಂತ್ರಿಯಾಗುತ್ತಾರೆ ಎಂಬ ವಿಶ್ವಾಸದಲ್ಲೇ ಇದ್ದ ಬಿಜೆಪಿ ಶಾಸಕರು ಹಾಗೂ ಕಾರ್ಯಕರ್ತರಿಗೆ ನಿರಾಸೆ ಉಂಟಾಗಿದೆ. 

ಇನ್ನು ಜೆಡಿಎಸ್‌ ಮತ್ತು ಕಾಂಗ್ರೆಸ್‌ ಪಕ್ಷಗಳ ಅಸಮಾಧಾನಿತ ಶಾಸಕರು ಅವರ ಪಕ್ಷ ಬಿಟ್ಟು ಹೊರಬರುವುದು ಕಷ್ಟ ಎಂಬ ನಿಲುವಿಗೆ ಬರತೊಡಗಿದ್ದಾರೆ.

loader