ಮಣಿಪುರದಲ್ಲಿ 44 ಶಾಸಕರ ಬೆಂಬಲದೊಂದಿಗೆ ಹೊಸ ಸರ್ಕಾರ ರಚಿಸಲು ಸಿದ್ಧರಿದ್ದೇವೆ ಎಂದು ಶಾಸಕ ತೋಕ್ಚೋಮ್ ರಾಧೇಶ್ಯಾಮ್ ಸಿಂಗ್ ರಾಜ್ಯಪಾಲರಿಗೆ ತಿಳಿಸಿದ್ದಾರೆ.

ಇಂಫಾಲ: ಮೈತೇಯಿ, ಕುಕಿಗಳ ನಡುವಿನ ನಡುವಿನ ಸಂಘರ್ಷ, ಮುಖ್ಯಮಂತ್ರಿ ಎನ್‌ ಬಿರೇನ್ ಸಿಂಗ್ ರಾಜೀನಾಮೆಯಿಂದ ರಾಷ್ಟ್ರಪತಿ ಆಳ್ವಿಕೆ ಜಾರಿಯಲ್ಲಿದ್ದ ಮಣಿಪುರದಲ್ಲಿ ಕ್ಷಿಪ್ರ ರಾಜಕೀಯ ಬೆಳವಣಿಗೆ ಘಟಿಸಿದ್ದು, 44 ಶಾಸಕರ ನೆರವಿನಿಂದ ಹೊಸ ಸರ್ಕಾರವನ್ನು ರಚಿಸಲು ಸಿದ್ಧವಾಗಿದ್ದೇವೆ ಎಂದು ಶಾಸಕ ತೊಕ್ಚೊಂ ರಾಧೇಶ್ಯಾಮ್ ಸಿಂಗ್ ರಾಜ್ಯಪಾಲ ಅಜಯ್‌ ಕುಮಾರ್ ಭಲ್ಲಾಗೆ ಮಾಹಿತಿ ನೀಡಿದ್ದಾರೆ.

ಬುಧವಾರ ಶಾಸಕ ಸಿಂಗ್ ಮತ್ತು ಇತರ 9 ಶಾಸಕರು ರಾಜಭವನದಲ್ಲಿ ರಾಜ್ಯಪಾಲರನ್ನು ಭೇಟಿಯಾಗಿ, ಸರ್ಕಾರ ರಚನೆ ಚರ್ಚೆ ನಡೆಸಿದರು. ಬಳಿಕ ಮಾತನಾಡಿದ ಶಾಸಕ, ‘ ಜನರ ಆಸೆಯಂತೆ 44 ಶಾಸಕರು ಸರ್ಕಾರ ರಚಿಸಲು ಉತ್ಸುಕರಾಗಿದ್ದಾರೆ. ಇದನ್ನು ನಾವು ರಾಜ್ಯಪಾಲರಿಗೆ ಮನವರಿಕೆ ಮಾಡಿದ್ದೇವೆ’ ಎಂದರು.

ಇನ್ನು ಸರ್ಕಾರ ರಚಿಸಲು ಬಿಜೆಪಿ ಹಕ್ಕು ಮಂಡಿಸುತ್ತಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವರು, ‘ ಬಿಜೆಪಿ ಹೈಕಮಾಂಡ್‌ ನಿರ್ಧಾರ ತೆಗೆದುಕೊಳ್ಳುತ್ತದೆ. ನಾವು ಸಿದ್ಧರಿದ್ದೇವೆ ಎಂಬುದು ಸರ್ಕಾರ ರಚಿಸಲು ಹಕ್ಕು ಮಂಡಿಸುವುದಕ್ಕೆ ಸಮಾನವಾ ಗಿದೆ. ಹೊಸ ಸರ್ಕಾರವನ್ನು ವಿರೋಧಿಸುವವರು ಯಾರು ಇಲ್ಲ’ ಎಂದರು.

ರಾಜ್ಯದಲ್ಲಿ ಎರಡು ಸುಮುದಾಯ ನಡುವಿನ ಜನಾಂಗೀಯ ಘರ್ಷಣೆಯಿಂದ ಭಾರಿ ಟೀಕೆ ಎದುರಿಸಿದ್ದ ಬಿರೇನ್ ಸಿಂಗ್ ಕಳೆದ ಫೆಬ್ರವರಿಯಲ್ಲಿ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು ಅಲ್ಲಿಂದ ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಯಲ್ಲಿತ್ತು.

ಸಾವರ್ಕರ್‌ ನಿಂದಿಸಿದ ರಾಗಾಗೆ ಮಸಿ : ಮಿತ್ರ ಉದ್ಧವ್ ಆಪ್ತನ ಎಚ್ಚರಿಕೆ

ನಾಸಿಕ್: ‘ಸ್ವಾತಂತ್ರ್ಯ ಹೋರಾಟಗಾರ ವಿನಾಯಕ ದಾಮೋದರ್ ಸಾವರ್ಕರ್ ಅವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ರಾಹುಲ್ ಗಾಂಧಿಯವರ ಮುಖಕ್ಕೆ ಕಪ್ಪು ಬಣ್ಣ ಬಳಿಯುತ್ತೇವೆ. ಅದು ಸಾಧ್ಯವಾಗದಿದ್ದರೆ, ಅವರ ಬೆಂಗಾವಲು ಪಡೆಯ ಮೇಲೆ ಕಲ್ಲೆಸೆಯುತ್ತೇವೆ’ ಎಂದು ಶಿವಸೇನೆ (ಯುಬಿಟಿ)ಯ ಸ್ಥಳೀಯ ಮುಖಂಡ ಬಾಳಾ ದರಾಡೆ ಹೇಳಿದ್ದಾರೆ.

ಉದ್ಧವ್ ಠಾಕ್ರೆ ಬಣದ ಶಿವಸೇನೆ ಕಾಂಗ್ರೆಸ್‌ನ ಮಿತ್ರಪಕ್ಷವಾಗಿದ್ದು, ಮಹಾ ವಿಕಾಸ್ ಅಘಾಡಿ (ಎಂವಿಎ) ಮೈತ್ರಿಕೂಟದ ಭಾಗವಾಗಿದೆ. ಅಲ್ಲದೆ ಎರಡೂ ಪಕ್ಷಗಳು ಕೇಂದ್ರದಲ್ಲಿ ವಿರೋಧ ಪಕ್ಷವಾಗಿರುವ ಇಂಡಿ ಮೈತ್ರಿಕೂಟದ ಭಾಗವೂ ಆಗಿವೆ. ಹೀಗಿರುವಾಗ ತಮ್ಮದೇ ಮಿತ್ರಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ಹೇಳಿಕೆ ಬಂದಿರುವುದು ರಾಜಕೀಯ ಸಂಚಲನ ಸೃಷ್ಟಿಸಿದೆ.

ಇಲ್ಲಿ ಈ ಕುರಿತು ಪ್ರತಿಕ್ರಿಯಿಸಿರುವ ಶಿವಸೇನೆ (ಯುಬಿಟಿ)ಯ ನಾಸಿಕ್‌ ಉಪನಗರ ಘಟಕದ ಮುಖ್ಯಸ್ಥ ಬಾಳಾ ದರಾಡೆ, ‘ಸ್ವಾತಂತ್ರ್ಯವೀರ ಸಾವರ್ಕರ್ ಅವರ ಜನ್ಮಭೂಮಿಯಲ್ಲಿ ವಾಸಿಸುತ್ತಿರುವುದಕ್ಕೆ ನಮಗೆ ಹೆಮ್ಮೆಯಿದೆ. ಸಾವರ್ಕರ್ ಅವರನ್ನು ಮಾಫಿ ವೀರ (ಕ್ಷಮಾ ವೀರ) ಎಂದು ಕರೆದ ರಾಹುಲ್ ಗಾಂಧಿ ಹೇಳಿಕೆ ಅವಮಾನಕರವಾಗಿತ್ತು. ನಾವು ಅದನ್ನು ಬಲವಾಗಿ ಖಂಡಿಸುತ್ತೇವೆ. ರಾಹುಲ್ ಗಾಂಧಿಯವರು ನಾಸಿಕ್‌ಗೆ ಬಂದರೆ ಅವರ ಮುಖಕ್ಕೆ ಕಪ್ಪು ಬಣ್ಣ ಬಳಿಯುತ್ತೇವೆ. ಹಾಗೆ ಮಾಡಲು ಸಾಧ್ಯವಾಗದಿದ್ದರೆ, ಅವರ ಬೆಂಗಾವಲು ಪಡೆಯ ಮೇಲೆ ಕಲ್ಲು ಎಸೆಯುತ್ತೇವೆ’ ಎಂದಿದ್ದಾರೆ.

ಬೆಂಗಳೂರಿನಲ್ಲಿ ತಯಾರಾಗಲಿದೆ ಎಲೆಕ್ಟ್ರಿಕ್‌ ಹಂಸ ತರಬೇತಿ ವಿಮಾನ

ನವದೆಹಲಿ: ಸ್ವದೇಶಿ ನಿರ್ಮಾಣ ಪರಿಕಲ್ಪನೆಯಲ್ಲಿ ಭಾರತವು ಪ್ರಮುಖ ಹೆಜ್ಜೆಯೊಂದನ್ನು ಇಡಲು ಮುಂದಾಗಿದ್ದು, ಮುಂದಿನ ಪೀಳಿಗೆಯ ಎಲೆಕ್ಟ್ರಿಕ್ ಮಾದರಿಯ 2 ಆಸನಗಳ ಹಂಸ ತರಬೇತಿ ವಿಮಾನವನ್ನು ಅಭಿವೃದ್ಧಿ ಪಡಿಸಲು ಮುಂದಾಗಿದೆ. ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಏರೋಸ್ಪೇಸ್‌ ಪ್ರಯೋಗಾಲಯ, ದೇಶಿಯವಾಗಿ ಈ ವಿಮಾನ ಅಭಿವೃದ್ಧಿಪಡಿಸಲಿದೆ.

ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ. ಜಿತೇಂದ್ರ ಸಿಂಗ್ ನೇತೃತ್ವದಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಇ- ಹಂಸ ತರಬೇತಿ ವಿಮಾನ ತಯಾರಿಕೆಯ ಬಗ್ಗೆ ಘೋಷಿಸಲಾಗಿದೆ. ಈ ತರಬೇತಿ ವಿಮಾನವು ಹಂಸ-3 ತರಬೇತುದಾರ ವಿಮಾನ ಕಾರ್ಯಕ್ರಮದ ಭಾಗವಾಗಿದ್ದು, ಇದನ್ನು ಭಾರತದಲ್ಲಿ ಸ್ವದೇಶಿಯಾಗಿ ಪೈಲಟ್‌ ತರಬೇತಿಗಾಗಿ ಬಳಸಲಾಗುತ್ತದೆ. ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಏರೋಸ್ಪೇಸ್‌ ಪ್ರಯೋಗಾಲಯ ಅಭಿವೃದ್ಧಿ ಪಡಿಸಲಿರುವ ಈ ವಿಮಾನ ಪರಿಣಾಮಕಾರಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿದ್ದು, ಇದು ವಿದೇಶದಿಂದ ಆಮದು ಮಾಡಿಕೊಳ್ಳುವ ತರಬೇತಿ ವಿಮಾನದ ಸರಿ ಸುಮಾರು ಅರ್ಧದಷ್ಟು ಬೆಲೆಗೆ ತಯಾರಾಗಲಿದೆ.

ಸುಮಾರು ಎರಡು ಕೋಟಿ ರು. ವೆಚ್ಚದಲ್ಲಿ ನಿರ್ಮಾಣಗಲಿರುವ ಈ ಎರಡು ಆಸನಗಳ ಎಲೆಕ್ಟ್ರಿಕ್ ತರಬೇತಿ ವಿಮಾನ ಆಮದು ಮಾಡಿಕೊಳ್ಳುವ ವಿಮಾನಗಳಿಗಿಂತ ಶೇ.50ರಷ್ಟು ಅಗ್ಗ. ಆಮದಿನ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುತ್ತದೆ. ತರಬೇತಿಗೆ ಕೈಗೆಟಕುವ ದರದಲ್ಲಿ ಸಿಗುವ ಈ ವಿಮಾನ ಪರಿಸರ ಸ್ನೇಹಿಯಾಗಿರಲಿದೆ.