ಅರ್ಜಿ ಸಲ್ಲಿಕೆ ಅವಧಿ ನ.21ವರೆಗೆ ವಿಸ್ತರಣೆ, 25 ಶಾಸಕರಿಂದ ಅರ್ಜಿ ಸಲ್ಲಿಕೆ ಇಲ್ಲ, 1150 ಅರ್ಜಿ ಪಡೆದ ಆಕಾಂಕ್ಷಿಗಳು, 900 ಅರ್ಜಿಗಳು ಈವರೆಗೆ ಸಲ್ಲಿಕೆ
ಬೆಂಗಳೂರು(ನ.16): ಮುಂಬರುವ ವಿಧಾನಸಭಾ ಸಾರ್ವತ್ರಿಕ ಚುನಾವಣೆಗೆ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳು ಅರ್ಜಿ ಸಲ್ಲಿಸಲು ಮಂಗಳವಾರ ಕೊನೆಯ ದಿನ ಎಂಬುದು ಘೋಷಣೆಯಾಗಿದ್ದರೂ, ಪಕ್ಷದ ಹಾಲಿ ಶಾಸಕರ ಪೈಕಿ ಶೇ.35ರಿಂದ 40ರಷ್ಟು ಮಂದಿ ಇನ್ನೂ ಅರ್ಜಿ ಸಲ್ಲಿಸಿಲ್ಲ ಎಂಬ ಕುತೂಹಲದ ಅಂಶ ತಿಳಿದು ಬಂದಿದೆ. ಇದರ ಬೆನ್ನಲ್ಲೇ ಕೊನೆಗೆ, ಅರ್ಜಿ ಸಲ್ಲಿಕೆಯ ಅವಧಿಯನ್ನು ಈ ತಿಂಗಳ 21ರವರೆಗೆ ಅಂದರೆ, ಒಂದು ವಾರ ಕಾಲ ವಿಸ್ತರಿಸಲು ಕೆಪಿಸಿಸಿ ನಿರ್ಧರಿಸಿದೆ.
‘ಈ ಮೊದಲು ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳು ಅರ್ಜಿ ಸಲ್ಲಿಸಲು ನ.15 ಕೊನೆಯ ದಿನವಾಗಿತ್ತು. ಆದರೆ, ನಿರೀಕ್ಷೆಗೂ ಮೀರಿದ ಆಕಾಂಕ್ಷಿಗಳಿದ್ದು ವಿಪರೀತ ಒತ್ತಡ ಇರುವುದರಿಂದ ಈ ಕಾಲಾವಕಾಶವನ್ನು ವಿಸ್ತರಿಸಲಾಗಿದೆ. ಅದರಂತೆ ಅರ್ಜಿ ಸಲ್ಲಿಸಲು ಮತ್ತು ಸ್ವೀಕರಿಸಲು ಇದ್ದ ಕೊನೆಯ ದಿನಾಂಕವನ್ನು ನ.21ರ ಸಂಜೆ 6 ಗಂಟೆವರೆಗೆ ವಿಸ್ತರಿಸಲಾಗಿದೆ’ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೋಲಾರದಲ್ಲಿ ಸಿದ್ದರಾಮಯ್ಯಗೆ ಗೆಲುವು ಸುಲಭವಿಲ್ಲ: ಸುಧಾಕರ್
ಸಿದ್ದು ಸೇರಿ 25 ಶಾಸಕರಿಂದ ಸಲ್ಲಿಕೆ ಇಲ್ಲ:
ಕೆಪಿಸಿಸಿ ಮೂಲಗಳ ಪ್ರಕಾರ ಈ ವರೆಗೆ 1150 ಮಂದಿ ಆಕಾಂಕ್ಷಿಗಳು ವಿವಿಧ ಕ್ಷೇತ್ರಗಳಿಗೆ ಟಿಕೆಟ್ ಬಯಸಿ ಪಕ್ಷದಿಂದ ಅರ್ಜಿ ಪಡೆದುಕೊಂಡಿದ್ದಾರೆ. ಆದರೆ, ಈ ಪೈಕಿ 900ಕ್ಕೂ ಹೆಚ್ಚು ಮಂದಿ ಅರ್ಜಿ ಭರ್ತಿ ಮಾಡಿ ಪಕ್ಷಕ್ಕೆ ವಾಪಸ್ ಸಲ್ಲಿಸಿದ್ದಾರೆ. ಪ್ರಸ್ತುತ ಪಕ್ಷದ ಶಾಸಕರ ಬಲ 70. ಈ ಪೈಕಿ ಇದರಲ್ಲಿ 40ಕ್ಕೂ ಹೆಚ್ಚು ಮಂದಿ ಹಾಲಿ ಶಾಸಕರು ಅರ್ಜಿ ಸಲ್ಲಿಸಿದ್ದಾರೆ. ಆದರೆ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಸೇರಿದಂತೆ ಇನ್ನೂ 25ಕ್ಕೂ ಹೆಚ್ಚು ಶಾಸಕರು ಅರ್ಜಿ ಸಲ್ಲಿಸಿಲ್ಲ ಎಂದು ಮೂಲಗಳು ತಿಳಿಸಿವೆ.
ಕಾಂಗ್ರೆಸ್‌ನಲ್ಲೀಗ ಒಗ್ಗಟ್ಟು ಪ್ರದರ್ಶನ: ಸಾಮೂಹಿಕ ನಾಯಕತ್ವದ ಮಂತ್ರ ಜಪ..!
ಡಿಕೆಶಿ ಪರ ಅರ್ಜಿ ಸಲ್ಲಿಕೆ:
ಈ ಮಧ್ಯೆ ಪಕ್ಷದ ಆದೇಶದ ಪ್ರಕಾರ ಅರ್ಜಿ ಸಲ್ಲಿಸಲು ಮಂಗಳವಾರ ಕೊನೆಯ ದಿನವಾಗಿದ್ದ ಕಾರಣ ಹಲವು ಆಕಾಂಕ್ಷಿಗಳು ಖುದ್ದಾಗಿ ಹಾಗೂ ಇನ್ನು ಕೆಲ ಆಕಾಂಕ್ಷಿಗಳ ಪರವಾಗಿ ಅವರ ಬೆಂಬಲಿಗರು ಟಿಕೆಟ್ ಕೋರಿ ಅರ್ಜಿ ಸಲ್ಲಿಸಿದರು. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಪರವಾಗಿ ಅವರ ಬೆಂಬಲಿಗರು ಕನಕಪುರ ಕ್ಷೇತ್ರಕ್ಕೆ ಟಿಕೆಟ್ ಕೋರಿ ಕೆಪಿಸಿಸಿ ಕಾರ್ಯದರ್ಶಿ ಅವರಿಗೆ ಅರ್ಜಿ ಸಲ್ಲಿಸಿದರು. ಅಲ್ಲದೆ, ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರು ಮತ್ತೆ ಸಾಗರ ಕ್ಷೇತ್ರದಿಂದ ಸ್ಪರ್ಧಿಸಲು ಅರ್ಜಿ ಸಲ್ಲಿಸಿದ್ದಾರೆ. ಜತೆಗೆ ಅವರ ಪುತ್ರಿ ರಾಜನಂದಿನಿ ಕೂಡ ಇದೇ ಕ್ಷೇತ್ರದ ಟಿಕೆಟ್ ಬಯಸಿ ಅರ್ಜಿ ಸಲ್ಲಿಸಿದ್ದಾರೆ. ಇದು ಸಂಚಲನ ಮೂಡಿಸಿದೆ. ತಂದೆ ಮಗಳು ಇಬ್ಬರಲ್ಲಿ ಯಾರಿಗೆ ಟಿಕೆಟ್ ಸಿಗುತ್ತದೋ ಅವರು ಚುನಾವಣೆಗೆ ಸ್ಪರ್ಧಿಸುವ ಲೆಕ್ಕಾಚಾರದಿಂದ ಇಬ್ಬರೂ ಅರ್ಜಿ ಸಲ್ಲಿಸಿದ್ದಾರೆ ಎನ್ನಲಾಗಿದೆ.
ಕಾಂಗ್ರೆಸ್ ಪಕ್ಷದ ಈ ಬಾರಿ ಹಾಲಿ ಶಾಸಕರು, ಪ್ರಭಾವಿ ನಾಯಕರೂ ಸೇರಿದಂತೆ ಪ್ರತಿಯೊಬ್ಬ ಪಕ್ಷದ ಟಿಕೆಟ್ ಆಕಾಂಕ್ಷಿಗಳು ಕಡ್ಡಾಯವಾಗಿ ಅರ್ಜಿ ಸಲ್ಲಿಸಬೇಕೆಂಬ ಆದೇಶ ಹೊರಡಿಸಿದೆ. ಅರ್ಜಿ ಸಲ್ಲಿಸಲು 5 ಸಾವಿರ ರು. ಶುಲ್ಕ ಹಾಗೂ 2 ಲಕ್ಷ ರು. ಡಿಡಿ ನೀಡಬೇಕೆಂದು ಷರತ್ತು ವಿಧಿಸಿದೆ. ಅದರಂತೆ ಆಕಾಂಕ್ಷಿಗಳು ಅರ್ಜಿ ಸಲ್ಲಿಸುತ್ತಿದ್ದಾರೆ.
