ಉಚಿತ ಗ್ಯಾರೆಂಟಿ ಯೋಜನೆ ಜಾರಿ ತಲೆನೋವು ಕಡಿಮೆಯಾಗುತ್ತಿದ್ದಂತೆ ಇದೀಗ ಹೊಸ ಟೆನ್ಶನ್ ಶುರುವಾಗಿದೆ. ಹಿಂದಿನ ಬಿಜೆಪಿ ಸರ್ಕಾರದ ವಿರುದ್ಧ ಮಾಡಿದ 40 ಪರ್ಸೆಂಟ್ ಆರೋಪಕ್ಕೆ ಇದೀಗ ಕೋರ್ಟ್ ಸಮನ್ಸ್ ನೀಡಿದೆ. ಸಿಎಂ ಸಿದ್ದರಾಮಯ್ಯ, ಡಿಕೆಶಿವಕುಮಾರ್ ಹಾಗೂ ರಾಹುಲ್ ಗಾಂಧಿಗೆ ಸಮನ್ಸ್ ನೀಡಲಾಗಿದೆ.

ಬೆಂಗಳೂರು(ಜೂ.14) ಹಿಂದಿನ ಬಿಜೆಪಿ ಸರ್ಕಾರದ ವಿರುದ್ಧ 40 ಪರ್ಸೆಂಟ್ ಆರೋಪ ಮಾಡಿದ ಕಾಂಗ್ರೆಸ್ ಇದೇ ಅಸ್ತ್ರ ಹಿಡಿದು ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿತ್ತು. ಪೇಸಿಎಂ, 40 ಪರ್ಸೆಂಟ್ ಸರ್ಕಾರ ಸೇರಿದಂತೆ ಹಲವು ಭ್ರಷ್ಟಾಚಾರ ಆರೋಪಗಳೇ ಈ ಚುನಾವಣೆಯಲ್ಲಿ ಸದ್ದು ಮಾಡಿತ್ತು. ಕಾಂಗ್ರೆಸ್ ನಾಯಕರು ಕೇವಲ ಮಾತಿನ ಮೂಲಕ ಮಾತ್ರವಲ್ಲ, ಪತ್ರಿಕೆ, ಟಿವಿಗಳಲ್ಲಿ 40 ಪರ್ಸೆಂಟ್ ಸರ್ಕಾರ ಅನ್ನೋ ಗಂಭೀರ ಆರೋಪದ ಜಾಹೀರಾತನ್ನು ನೀಡಿತ್ತು. ಇದು ಕಾಂಗ್ರೆಸ್‌ಗೆ ತಲೆನೋವಾಗಿದೆ. ಈ ಕುರಿತು ದಾಖಲಾಗಿದ್ದ ದೂರಿನ ಅನ್ವಯ ಇದೀಗ ಸ್ಥಳೀಯ ನ್ಯಾಯಾಲಯ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ರಾಹುಲ್ ಗಾಂಧಿಗೆ ಸಮನ್ಸ್ ನೀಡಿದೆ.

ಚುನಾವಣೆ ವೇಳೆ ಕಾಂಗ್ರೆಸ್ ಗಂಭೀರ ಆರೋಪ ಮಾಡಿತ್ತು. ಬಿಜೆಪಿ ಸರ್ಕಾರದಲ್ಲಿ ವಿಧಾನಸೌಧದ ಕಂಬಗಳು ಭ್ರಷ್ಟಾಚಾರ ಎಂದು ಪಿಸುಗುಡುತ್ತಿದೆ. ಇದು 40 ಪರ್ಸೆಂಟ್ ಸರ್ಕಾರ, ಪೇಸಿಎಂ ಸೇರಿದಂತೆ ಹಲವು ಆರೋಪಗಳನ್ನು ಮಾಡಿತ್ತು. ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಹಿನ್ನಡೆಗೆ ಈ ಭ್ರಷ್ಟಾಚಾರ ಆರೋಪ ಕೂಡ ಕಾರಣವಾಗಿತ್ತು. ಇದೇ ವಿಷಯ ಮುಂದಿಟ್ಟು ಜಾಹೀರಾತು ನೀಡಿತ್ತು. ಈ ಜಾಹೀರಾತು ಹಾಗೂ ಆರೋಪದ ವಿರುದ್ಧ ಬಿಜೆಪಿ ರಾಜ್ಯ ಕಾರ್ಯದರ್ಶಿ ಕೇಶವಪ್ರಸಾದ್ ಕ್ರಿಮಿನಲ್ ಡಿಫಮೇಶನ್ ಕೇಸ್ ದಾಖಲಿಸಿದ್ದರು.

ಬಿಜೆಪಿ ಅವಧಿಯ 40% ಕಮಿಷನ್‌ ಬಗ್ಗೆ ತನಿಖೆ ಖಚಿತ: ಸಿಎಂ ಸಿದ್ದರಾಮಯ್ಯ

ಮೇ.09ರಂದು ಕೇಶವಪ್ರಸಾದ್ ನೀಡಿದ ದೂರಿನಲ್ಲಿ ಕಾಂಗ್ರೆಸ್ ಆಧಾರ ರಹಿತ, ಸುಳ್ಳು ಆರೋಪ ಮಾಡಿದೆ ಎಂದಿದ್ದರು. ಮೇ 05 ರಂದು ಕಾಂಗ್ರೆಸ್ ನೀಡಿದ ಜಾಹೀರಾತಿನಲ್ಲಿ ಬಿಜೆಪಿ ಸರ್ಕಾರ 40 ಪರ್ಸೆಸೆಂಟ್ ಕಮಿಷನ್ ಸರ್ಕಾರ ಎಂದಿತ್ತು. ಕಳೆದ ಮೂರೂವರೆ ವರ್ಷದಲ್ಲಿ 1.50 ಲಕ್ಷ ಕೋಟಿ ರೂಪಾಯಿ ಹಣವನ್ನು ಬಿಜೆಪಿ ಸರ್ಕಾರ ದೋಚಿದೆ ಎಂದು ಜಾಹೀರಾತು ನೀಡಿತ್ತು. ಇದು ಆಧಾರ ರಹಿತ ಹಾಗೂ ಸುಳ್ಳು ಆರೋಪ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ದೂರಿನ ಜೊತೆಗೆ ಕಾಂಗ್ರೆಸ್ ಪತ್ರಿಕೆಗಳಿಗೆ ನೀಡಿದ ಜಾಹೀರಾತು ಸೇರಿದಂತೆ ಇತರ ದಾಖಲೆಗಳನ್ನು ಸಲ್ಲಿಸಲಾಗಿದೆ. ಈ ಕುರಿತು ಪರಿಶೀಲನೆ ನಡೆಸಿದ ಬೆಂಗಳೂರಿನ ಸ್ಥಳೀಯ ನ್ಯಾಯಾಲಯ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಹಾಗೂ ರಾಹುಲ್ ಗಾಂಧಿಗೆ ಸಮನ್ಸ್ ನೀಡಿದೆ. 

40% ಕಮಿಷನ್ ತನಿಖೆ ನನ್ನಿಂದಲೇ ಆರಂಭವಾಗಲಿ: ಸಿಎಂ ಸಿದ್ದುಗೆ ಕೋಟಾ ಶ್ರೀನಿವಾಸ ಪೂಜಾರಿ ಸವಾಲು!

ರಾಜ್ಯ ಚುನಾವಣೆಯಲ್ಲಿ ಬಿಜೆಪಿ ಸೋಲಿಗೆ ಆತ್ಮಾವಲೋಕನ ಮಾಡಿದೆ. ಈ ವೇಳೆಯೂ ಕಾಂಗ್ರೆಸ್ ಮಾಡಿದ 40 ಪರ್ಸೆಂಟ್ ಆರೋಪಕ್ಕೆ ತಕ್ಕ ತಿರುಗೇಟು ನೀಡಲು ಬಿಜೆಪಿ ವಿಫಲವಾಯಿತು. ಇದರಿಂದ ಕಾಂಗ್ರೆಸ್ ಆರೋಪ ಜನರಲ್ಲಿ ಭ್ರಷ್ಟಾಚಾರ ಸರ್ಕಾರ ಎಂಬ ಭಾವನೆ ಮೂಡಿತ್ತು ಎಂದು ಬಿಜೆಪಿ ನಾಯಕರೇ ಅಭಿಪ್ರಾಯ ವ್ಯಕ್ತಪಡಿಸಿದ್ದರು. 40 ಪರ್ಸೆಂಟ್‌ ಕಮಿಷನ್‌ ಭ್ರಷ್ಟಾಚಾರ ಆರೋಪಕ್ಕೆ ಸರ್ಕಾರದಲ್ಲಿನ ಕೆಲವೊಬ್ಬರನ್ನು ಹೊರತುಪಡಿಸಿ ಬಹುತೇಕ ಸಚಿವರು ಪರಿಣಾಮಕಾರಿಯಾದ ಎದಿರೇಟು ನೀಡುವಲ್ಲಿ ವಿಫಲರಾದರು. ಇದರಿಂದಾಗಿ ಜನರಿಗೂ ಕಾಂಗ್ರೆಸ್‌ ಆರೋಪದಲ್ಲಿ ಸತ್ಯಾಂಶ ಇರಬಹುದು ಎಂಬ ಅನುಮಾನ ಮೂಡುವಂತಾಯಿತು. ಆರೋಪ ಕೇಳಿಬಂದ ಬಳಿಕ ಅದನ್ನು ನಿರಾಕರಿಸಿ ಅದಕ್ಕೆ ಪ್ರತಿಯಾಗಿ ರಣತಂತ್ರ ರೂಪಿಸಿದ್ದರೆ ಭ್ರಷ್ಟಾಚಾರ ಆರೋಪ ಇಷ್ಟುದೊಡ್ಡದಾಗಿ ಬೆಳೆಯತ್ತಿರಲಿಲ್ಲ ಎಂದು ಹಲವು ಮುಖಂಡರು ಸಭೆಯಲ್ಲಿ ಬೇಸರದಿಂದಲೇ ಹೇಳಿದ್ದರು.