ಬೆಂಗಳೂರು (ಅ.20):  ಆಡಳಿತಾರೂಢ ಬಿಜೆಪಿ ಮತ್ತು ಪ್ರತಿಪಕ್ಷಗಳಿಗೆ ಪ್ರತಿಷ್ಠೆಯ ಕಣವಾಗಿರುವ ಆರ್‌.ಆರ್‌.ನಗರ ಮತ್ತು ಶಿರಾ ವಿಧಾನಸಭಾ ಕ್ಷೇತ್ರದಲ್ಲಿ ಉಪಚುನಾವಣೆಯಲ್ಲಿ ನಾಮಪತ್ರಗಳನ್ನು ವಾಪಸ್‌ ಪಡೆಯುವ ಸಮಯ ಮುಕ್ತಾಯವಾಗಿದ್ದು, ಆರು ಅಭ್ಯರ್ಥಿಗಳು ಉಮೇದುವಾರಿಕೆ ವಾಪಸ್‌ ಪಡೆದುಕೊಂಡಿದ್ದಾರೆ.

ಒಟ್ಟಾರೆ ಅಂತಿಮವಾಗಿ 31 ಅಭ್ಯರ್ಥಿಗಳು ಅಧಿಕೃತವಾಗಿ ಕಣದಲ್ಲಿದ್ದಾರೆ. ಆರ್‌.ಆರ್‌.ನಗರ ಕ್ಷೇತ್ರದಲ್ಲಿ 16 ಮತ್ತು ಶಿರಾ ಕ್ಷೇತ್ರದಲ್ಲಿ 15 ಮಂದಿ ಅಖಾಡದಲ್ಲಿ ಉಳಿದಿದ್ದಾರೆ.

ಜೆಡಿಎಸ್‌ ಪ್ರಧಾನ ಕಾರ್ಯದರ್ಶಿ ಸೇರಿದಂತೆ ಘಟಾನುಘಟಿ ನಾಯಕರು ಕಾಂಗ್ರೆಸ್ ಸೇರ್ಪಡೆ...!

ಆರ್‌.ಆರ್‌.ನಗರ ಕ್ಷೇತ್ರದಲ್ಲಿ 16 ಮತ್ತು ಶಿರಾ ಕ್ಷೇತ್ರದಲ್ಲಿ 15 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ನಾಮಪತ್ರ ಹಿಂಪಡೆಯಲು ಸೋಮವಾರ ಕೊನೆಯ ದಿನಾಂಕವಾಗಿದ್ದು, ಶಿರಾ ಕ್ಷೇತ್ರದಲ್ಲಿ 17 ಅಭ್ಯರ್ಥಿಗಳ ಪೈಕಿ ಇಬ್ಬರು ನಾಮಪತ್ರಗಳನ್ನು ವಾಪಸ್‌ ಪಡೆದುಕೊಂಡಿದ್ದಾರೆ. ಆರ್‌.ಆರ್‌.ನಗರ ಕ್ಷೇತ್ರದಲ್ಲಿ 20 ಅಭ್ಯರ್ಥಿಗಳ ಪೈಕಿ ನಾಲ್ಕು ಅಭ್ಯರ್ಥಿಗಳು ಹಿಂಪಡೆದುಕೊಂಡಿದ್ದಾರೆ. ಶಿರಾ ಕ್ಷೇತ್ರದಲ್ಲಿ ನಿಸಾರ್‌ ಅಹಮದ್‌, ತಿಮ್ಮರಾಜ್‌ ಗೌಡ ಮತ್ತು ಆರ್‌.ಆರ್‌.ನಗರ ಕ್ಷೇತ್ರದಲ್ಲಿ ಸಿ.ಆನಂದನ್‌, ಆರ್‌.ಕುಮಾರ್‌, ಮುನಿರತ್ನ ಮತ್ತು ಮುನಿರತ್ನಮ್ಮ ಎಂಬುವರು ನಾಮಪತ್ರಗಳನ್ನು ವಾಪಸ್‌ ಪಡೆದಿದ್ದಾರೆ ಎಂದು ಚುನಾವಣಾ ಆಯೋಗವು ತಿಳಿಸಿದೆ.

ಶಿರಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಡಾ.ರಾಜೇಶ್‌ಗೌಡ, ಪ್ರತಿಪಕ್ಷ ಕಾಂಗ್ರೆಸ್‌ ಅಭ್ಯರ್ಥಿ ಟಿ.ಬಿ.ಜಯಚಂದ್ರ, ಜೆಡಿಎಸ್‌ ಅಭ್ಯರ್ಥಿ ಅಮ್ಮಾಜಮ್ಮ ಸೇರಿದಂತೆ 15 ಅಭ್ಯರ್ಥಿಗಳು ಕಣದಲ್ಲಿದ್ದರೆ, ಆರ್‌.ಆರ್‌.ನಗರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಮುನಿರತ್ನ, ಕಾಂಗ್ರೆಸ್‌ ಅಭ್ಯರ್ಥಿ ಕುಸುಮಾ, ಜೆಡಿಎಸ್‌ ಅಭ್ಯರ್ಥಿ ಕೃಷ್ಣಮೂರ್ತಿ ಸೇರಿ 16 ಅಭ್ಯರ್ಥಿಗಳು ಅಖಾಡದಲ್ಲಿದ್ದಾರೆ. ನ.3ರಂದು ಮತದಾನ ನಡೆಯಲಿದ್ದು, ನ.10ಕ್ಕೆ ಮತ ಎಣಿಕೆಯಾಗಲಿದೆ.