ದಲಿತ ನಾಯಕರ ಜೊತೆ ಸತೀಶ್ ಜಾರಕಿಹೊಳಿ ದೆಹಲಿಗೆ ದೌಡು; ಕನಕಪುರ ಬಂಡೆಗೆ ಲಗಾಮು ಹಾಕ್ತಾರಾ ಸಾಹುಕಾರ?
ಕಾಂಗ್ರೆಸ್‌ನಲ್ಲಿ ಮೂವರು ಉಪಮುಖ್ಯಮಂತ್ರಿಗಳನ್ನು ಮಾಡುವ ವಿಚಾರ ಮತ್ತೆ ಮುನ್ನಲೆಗೆ ಬಂದಿದೆ. ಲೋಕಸಭಾ ಚುನಾವಣೆಗೂ ಮುನ್ನ ಮೂವರು ಉಪಮುಖ್ಯಮಂತ್ರಿಗಳನ್ನು ನೇಮಕ ಮಾಡುವಂತೆ ಹೈಕಮಾಂಡ್ ಮೇಲೆ ಒತ್ತಡ ಹೇರಲು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ನೇತೃತ್ವದಲ್ಲಿ ದಲಿತ ಮುಖಂಡರುಗಳು ದೆಹಲಿಗೆ ತೆರಳಿದ್ದಾರೆ ಎಂದು ಹೇಳಲಾಗಿದೆ.
ಬೆಂಗಳೂರು (ಡಿ.25): ಕಾಂಗ್ರೆಸ್‌ನಲ್ಲಿ ಮೂವರು ಉಪಮುಖ್ಯಮಂತ್ರಿಗಳನ್ನು ಮಾಡುವ ವಿಚಾರ ಮತ್ತೆ ಮುನ್ನಲೆಗೆ ಬಂದಿದೆ. ಲೋಕಸಭಾ ಚುನಾವಣೆಗೂ ಮುನ್ನ ಮೂವರು ಉಪಮುಖ್ಯಮಂತ್ರಿಗಳನ್ನು ನೇಮಕ ಮಾಡುವಂತೆ ಹೈಕಮಾಂಡ್ ಮೇಲೆ ಒತ್ತಡ ಹೇರಲು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ನೇತೃತ್ವದಲ್ಲಿ ದಲಿತ ಮುಖಂಡರುಗಳು ದೆಹಲಿಗೆ ತೆರಳಿದ್ದಾರೆ ಎಂದು ಹೇಳಲಾಗಿದೆ.
ಲೋಕಸಭಾ ಚುನಾವಣೆ(Loksabha election 2024) ಯಲ್ಲಿ ಹೆಚ್ಚು ಸ್ಥಾನ ಗೆಲ್ಲಲು ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ಹಾಗೂ ಲಿಂಗಾಯತ ಸಮುದಾಯದ ಮೂವರನ್ನು ಉಪಮುಖ್ಯಮಂತ್ರಿಗಳನ್ನಾಗಿ ಮಾಡಬೇಕು ಎಂದು ಕಾಂಗ್ರೆಸ್‌ನಲ್ಲಿ ಮೊದಲಿನಿಂದಲೂ ಚರ್ಚೆಗಳು ನಡೆಯುತ್ತಿದ್ದವು. ಈ ಬಗ್ಗೆ ಬಹಿರಂಗವಾಗಿಯೇ ಸಚಿವ ಕೆ.ಎನ್. ರಾಜಣ್ಣ ಸೇರಿದಂತೆ ಹಲವು ಸಚಿವರು ಹೇಳಿಕೆಯನ್ನು ನೀಡಿದ್ದರು. ಮೂವರು ಮುಖ್ಯಮಂತ್ರಿಗಳ ನೇಮಕ ವಿಚಾರ ಕಾಂಗ್ರೆಸ್‌ನಲ್ಲಿ ಒಳ ಬೇಗುದಿ ಹುಟ್ಟು ಹಾಕಿದ್ದನ್ನು ಗಂಭೀರವಾಗಿ ಪರಿಗಣಿಸಿದ ಕಾಂಗ್ರೆಸ್ ಹೈಕಮಾಂಡ್, ಈ ಬಗ್ಗೆ ಯಾರೂ ಬಹಿರಂಗವಾಗಿ ಮಾತನಾಡದಂತೆ ತಾಕೀತು ಮಾಡಿತ್ತು.
ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ ಪ್ರಕರಣ: ಎನ್‌ಎಚ್‌ಆರ್‌ಸಿ ಸಲಹೆ ಮೇರೆಗೆ ಮುಂದಿನ ಕ್ರಮ, ಸಚಿವ ಜಾರಕಿಹೊಳಿ
ಆಗ ಮೂವರು ಉಪಮುಖ್ಯಮಂತ್ರಿಗಳ ನೇಮಕ ಹಿನ್ನಲೆಗೆ ಸರಿದಿತ್ತು. ಲೋಕಸಭಾ ಚುನಾವಣೆಗೂ ಮುನ್ನ ಶತಾಯ ಗತಾಯ ಮೂವರು ಉಪಮುಖ್ಯಮಂತ್ರಿಗಳನ್ನು ನೇಮಕ ಮಾಡಲೇಬೇಕು ಎಂದು ಹೈಕಮಾಂಡ್ ಮನವೊಲಿಸಲು ಉಪಮುಖ್ಯಮಂತ್ರಿ ಸ್ಥಾನದ ಮೇಲೆ ಕಣ್ಣಿಟಿರುವ ಸಚಿವರುಗಳು ನಿರ್ಧರಿಸಿದ್ದು, ಆದರಂತೆ ಸತೀಶ್ ಜಾರಕಿಹೊಳಿ ಅವರು ಇಂದು ದಲಿತ ನಾಯಕರುಗಳ ಜತೆ ದೆಹಲಿಗೆ ತೆರಳಿದ್ದಾರೆ ಎಂದು ಹೇಳಲಾಗಿದೆ.
ದೆಹಲಿಯಲ್ಲಿ ಸತೀಶ್ ಜಾರಕಿಹೊಳಿ ಅವರು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನಖರ್ಗೆ, ರಾಹುಲ್‌ಗಾಂಧಿ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲ, ಎಐಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್ ಇವರುಗಳನ್ನು ಭೇಟಿ ಮಾಡಿ ಮೂವರು ಉಪಮುಖ್ಯಮಂತ್ರಿಗಳ ನೇಮಕಾತಿ ಮಾಡಿ ಎಂದು ಮನವಿ ಮಾಡಲಿದ್ದಾರೆ ಎನ್ನಲಾಗಿದೆ. ಲೋಕಸಭಾ ಚುನಾವಣೆಗೆ ಮುನ್ನ ವಿವಿಧ ಸಮುದಾಯಗಳಿಗೆ ಸೇರಿದ ಮೂವರನ್ನು ಉಪಮುಖ್ಯಮಂತ್ರಿಯನ್ನಾಗಿ ಮಾಡಿದರೆ ಚುನಾವಣೆಯಲ್ಲಿ ಆ ಸಮುದಾಯದ ಮತಗಳಿಸುವುದು ಸುಲಭವಾಗುತ್ತದೆ. ರಾಜಕೀಯವಾಗಿ ಕಾಂಗ್ರೆಸ್ ಪಕ್ಷಕ್ಕೆ ಲಾಭವಾಗಿ ಲೋಕಸಭಾ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗೆಲ್ಲಬಹುದು ಎಂಬುದನ್ನು ಸತೀಶ್ ಜಾರಕಿಹೊಳಿ ಹೈಕಮಾಂಡ್ ಗಮನಕ್ಕೆ ತರಲಿದ್ದರಾ ಎಂದು ಹೇಳಲಾಗಿದೆ.
ಕನಕಪುರ ಬಂಡೆಗೆ ಲಗಾಮು ಹಾಕುವ ಉದ್ದೇಶ :ಸರ್ಕಾರ ರಚನೆ ಸಂದರ್ಭದಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಪಟ್ಟು ಹಿಡಿದಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ತಮ್ಮನ್ನು ಬಿಟ್ಟು ಯಾರನ್ನೂ ಉಪಮುಖ್ಯಮಂತ್ರಿ ಮಾಡಬಾರದು ಎಂಬ ಷರತ್ತು ಹಾಕಿ ಉಪ ಮುಖ್ಯಮಂತ್ರಿ ಪಟ್ಟ ಅಲಂಕರಿಸಿದ್ದರು. ಬೆಳಗಾವಿ ರಾಜಕಾರಣದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಸ್ತಕ್ಷೇಪದಿಂದ ಸಿಡಿದೆದ್ದ ಸತೀಶ್ ಜಾರಕಿಹೊಳಿ, ಡಿ.ಕೆ. ಶಿವಕುಮಾರ್ ಅವರಿಗೆ ಲಗಾಮು ಹಾಕುವ ಉದ್ದೇಶದಿಂದಲೇ ಮೂವರು ಉಪಮುಖ್ಯಮಂತ್ರಿಗಳ ನೇಮಕದ ವಿಚಾರ ಪ್ರಸ್ತಾಪವಾಗಲು ಕಾರಣರಾಗಿದ್ದರು. ಈ ಮೂಲಕ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ರಾಜಕೀಯವಾಗಿ ಸೆಡ್ಡು ಹೊಡೆಯುವ ಲೆಕ್ಕಾಚಾರ ಸತೀಶ್ ಜಾರಕಿಹೊಳಿ ಸೇರಿದಂತೆ ಕೆಲ ಕಾಂಗ್ರೆಸ್ ನಾಯಕರದ್ದಾಗಿದೆ ಎಂದು ಹೇಳಲಾಗಿದೆ.
ಬೆಳಗಾವಿ ಲೋಕಸಭಾ ಟಿಕೆಟ್ ಯಾರಿಗೆ? ಪ್ರಿಯಾಂಕ ಜಾರಕಿಹೊಳಿಗೋ? ಮೃಣಾಲ್ ಹೆಬ್ಬಾಳ್ಕರ್‌ಗೋ?
ಈ ಹಿಂದೆ ಉಪಮುಖ್ಯಮಂತ್ರಿಗಳ ನೇಮಕ ವಿಚಾರ ಕಾಂಗ್ರೆಸ್‌ನಲ್ಲಿ ಆಂತರಿಕವಾಗಿ ಕದನಕ್ಕೆ ಕಾರಣವಾಗಬಹುದು ಎಂಬುದನ್ನು ಅರಿತು ಹೈಕಮಾಂಡ್ ಇದಕ್ಕೆಲ್ಲಾ ಬ್ರೇಕ್ ಹಾಕಿ ಮೂವರು ಉಪಮುಖ್ಯಮಂತ್ರಿಗಳ ನೇಮಕ ವಿಚಾರದ ಪ್ರಸ್ತಾವವನ್ನು ತಳ್ಳಿ ಹಾಕಿತ್ತು. ಇಷ್ಟಾದರೂ ಪಟ್ಟು ಬಿಡದ ಕೆಲ ಕಾಂಗ್ರೆಸ್ ನಾಯಕರು ಈ ಪ್ರಯತ್ನವನ್ನು ಮುಂದುವರೆಸಿಯೇ ಇದ್ದರು. ಈಗ ಸತೀಶ್ ಜಾರಕಿಹೊಳಿ ಅವರು ನೇರವಾಗಿ ಈ ವಿಚಾರವನ್ನು ಪ್ರಸ್ತಾಪಿಸಲು ಹೈಕಮಾಂಡ್ ನಾಯಕರ ಭೇಟಿಗೆ ದೆಹಲಿಗೆ ತೆರಳಿದ್ದಾರೆ. ಹೈಕಮಾಂಡ್ ಸತೀಶ್ ಜಾರಕಿಹೊಳಿ ಅವರು ಮಾತಿಗೆ ಅಸ್ತು ಎನ್ನುತ್ತದೆಯೇ ಎಂಬುದು ಕುತೂಹಲ ಮೂಡಿಸಿದೆ.