ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ ಪ್ರಕರಣ: ಎನ್‌ಎಚ್‌ಆರ್‌ಸಿ ಸಲಹೆ ಮೇರೆಗೆ ಮುಂದಿನ ಕ್ರಮ, ಸಚಿವ ಜಾರಕಿಹೊಳಿ
ಈ ಪ್ರಕರಣ ಸಂಬಂಧ ಈಗಾಗಲೇ ಪೊಲೀಸರು ಸಿಐಡಿ ತನಿಖೆಗೆ ಒಪ್ಪಿಸುವುದಕ್ಕಿಂತ ಮೊದಲೇ ಆರೋಪಿಗಳನ್ನು ಬಂಧಿಸಿದ್ದಾರೆ. ಇನ್ನೂ ಇಬ್ಬರು ಆರೋಪಿಗಳು ಕಾನೂನು ಸಂಘರ್ಷಕ್ಕೊಳಗಾದವರನ್ನು ಬಂಧಿಸಬೇಕಿದೆ. ಪೊಲೀಸರು ಒಳ್ಳೆಯ ತನಿಖೆ ಮಾಡಿದ್ದಾರೆ ಎಂದು ಅವರ ಕಾರ್ಯವನ್ನು ಶ್ಲಾಘಿಸಿದ ಸಚಿವ ಸತೀಶ ಜಾರಕಿಹೊಳಿ
ಬೆಳಗಾವಿ(ಡಿ.20): ವಂಟಮೂರಿ ಗ್ರಾಮದಲ್ಲಿ ಮಹಿಳೆ ವಿವಸ್ತ್ರಗೊಳಿಸಿ, ಹಲ್ಲೆ ನಡೆಸಿದ ಪ್ರಕರಣ ಸಂಬಂಧ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಸಲಹೆ ಮೇರೆಗೆ ಸರ್ಕಾರ ಮುಂದಿನ ಕ್ರಮಕೈಗೊಳ್ಳಲಿದೆ ಎಂದು ಲೋಕೋಪಯೋಗಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಪ್ರಕರಣ ಸಂಬಂಧ ಈಗಾಗಲೇ ಪೊಲೀಸರು ಸಿಐಡಿ ತನಿಖೆಗೆ ಒಪ್ಪಿಸುವುದಕ್ಕಿಂತ ಮೊದಲೇ ಆರೋಪಿಗಳನ್ನು ಬಂಧಿಸಿದ್ದಾರೆ. ಇನ್ನೂ ಇಬ್ಬರು ಆರೋಪಿಗಳು ಕಾನೂನು ಸಂಘರ್ಷಕ್ಕೊಳಗಾದವರನ್ನು ಬಂಧಿಸಬೇಕಿದೆ. ಪೊಲೀಸರು ಒಳ್ಳೆಯ ತನಿಖೆ ಮಾಡಿದ್ದಾರೆ ಎಂದು ಅವರ ಕಾರ್ಯವನ್ನು ಶ್ಲಾಘಿಸಿದರು.
ಬೆಳಗಾವಿಗೆ ಬರಲಿವೆ 50 ಎಲೆಕ್ಟ್ರಿಕಲ್ ವಾಹನಗಳು..!
ಇಂತಹ ಅಮಾನವೀಯ ಘಟನೆ ಆಗಬಾರದಿತ್ತು. ಆದರೆ, ಆಗಿದೆ. ಇಂತಹ ಘಟನೆ ನಿಯಂತ್ರಿಸುವುದು ಎಲ್ಲರ ಜವಾಬ್ದಾರಿಯೂ ಇದೆ. ಸ್ಥಳೀಯ ಮಟ್ಟದಲ್ಲೇ ಸಮಸ್ಯೆ ಇತ್ಯರ್ಥವಾಗಿದ್ದರೇ ಇಂತಹ ಘಟನೆ ನಡೆಯುತ್ತಿರಲಿಲ್ಲ. ಸಾರ್ವಜನಿಕರು ಸ್ಪಂದನೆ ಮಾಡಬೇಕಿತ್ತು ಎಂದು ಹೈಕೋರ್ಟ್ ಕೂಡ ಹೇಳಿದೆ. ಇಂತಹ ಘಟನೆ ಮರುಕಳಿಸದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಬಿಜೆಪಿಯವರು ಪ್ರತಿಯೊಂದರಲ್ಲಿ ರಾಜಕಾರಣ ಮಾಡುತ್ತಾರೆ. ಮಣಿಪುರ ಪ್ರಕರಣದಲ್ಲಿ ಬಿಜೆಪಿ ಸತ್ಯಶೋಧನಾ ಸಮಿತಿ ರಚಿಸಲಿಲ್ಲ. ಆದರೆ, ಬೆಳಗಾವಿ ಪ್ರಕರಣದಲ್ಲಿ ರಚಿಸಲಾದ ಸತ್ಯಶೋಧನಾ ಸಮಿತಿ ಬೆಳಗಾವಿಗೆ ಬಂದುಹೋಗಿದೆ. ಎಲ್ಲದರಲ್ಲೂ ಬಿಜೆಪಿ ರಾಜಕೀಯ ಮಾಡುತ್ತಿದೆ. ಅವರು ಮಾಡುತ್ತಾರೆಂದು ನಾವು ರಾಜಕೀಯ ಮಾಡುವುದಿಲ್ಲ. ಅವರು ರಾಜಕೀಯ ಮಾಡಲಿ, ಇನ್ನೂ10 ಸಲ ಬಂದರೂ ವಸ್ತುಸ್ಥಿತಿ ಹಾಗೆಯೇ ಇರುತ್ತದೆ. ಅದು ಬದಲಾಗುವುದಿಲ್ಲ. ಮಣಿಪುರಕ್ಕೆ ಹೋಗಬೇಕಿತ್ತು. ಎಲ್ಲ ಕಡೆ ಹೋದರೆ ಒಳ್ಳೆಯದು. ಆದರೆ, ಬಿಜೆಪಿ ಸಂಸದರ ನಿಯೋಗ ಬೆಳಗಾವಿಗೆ ಮಾತ್ರ ಭೇಟಿ ನೀಡಿದೆ. ಇದನ್ನು ನೋಡಿದರೆ ಬಿಜೆಪಿಯವರು ರಾಜಕಾರಣ ಮಾಡುತ್ತಿರುವುದು ಸ್ಪಷ್ಟವಾಗುತ್ತದೆ ಎಂದು ದೂರಿದರು.
ಘಟನೆ ಕುರಿತ ಮಾಹಿತಿ ಗೊತ್ತಾದ ಕೂಡಲೇ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಗ್ರಾಮಸ್ಥರೇ ಸಮಸ್ಯೆ ಬಗೆಬರಿಸಬೇಕಿತ್ತು. ಆದರೆ, ಘಟನೆ ಆಗಿದೆ. ಸರ್ಕಾರ , ಹೈಕೋರ್ಟ್ ಕೂಡ ನಿಯಂತ್ರಣ ಮಾಡುತ್ತಿದೆ. ಪ್ರಕರಣ ಸಂಬಂಧ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ವಿಚಾರಣೆ ನಡೆಸುತ್ತಿದೆ. ಸಿಐಡಿ ತನಿಖೆಯೂ ಮುಂದುವರೆದಿದೆ. ಆಯೋಗ ನೀಡುವ ಸಲಹೆ ಮೇರೆಗೆ ಸರ್ಕಾರ ಮುಂದಿನ ಕ್ರಮ ಕೈಗೊಳ್ಳಬಹುದು ಎಂದರು.
ಬೆಳಗಾವಿಯಲ್ಲಿ ಹೆಚ್ಚಾಯ್ತು ಮರಾಠಿಗರ ಪುಂಡಾಟ: ಕನ್ನಡ ಬಾವುಟ ಹಾರಿಸಿದ ಕನ್ನಡಿಗರ ಮೇಲೆ ಹಲ್ಲೆ!
ಸಂತ್ರಸ್ತೆಗೆ ಅದೇ ಗ್ರಾಮದಲ್ಲೇ ಪುನರ್ ವಸತಿ ಕಲ್ಪಿಸಲಾಗುತ್ತದೆ. ಈಗಾಗಲೇ ಮುಖ್ಯಮಂತ್ರಿಗಳ ನಿಧಿಯಿಂದ ₹ 5 ಲಕ್ಷ ಪರಿಹಾರ ಮತ್ತು ವಾಲ್ಮೀಕಿ ನಿಗಮದಿಂದ 2 ಎಕರೆ ಜಮೀನು ಮಂಜೂರು ಮಾಡಲಾಗಿದೆ ಎಂದು ತಿಳಿಸಿದರು.
ಕೋವಿಡ್ ವೈರಸ್ ಭೀತಿ ಸದ್ಯಕ್ಕಿಲ್ಲ. ಆದಾಗ್ಯೂ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುವುದು. ಈ ಸಂಬಂಧ ಜಿಲ್ಲಾಧಿಕಾರಿ ಜೊತೆಗೆ ಸಭೆ ನಡೆಸಲಾಗುವುದು. ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬೆಳಗಾವಿ ಮತ್ತು ಚಿಕ್ಕೋಡಿ ಕ್ಷೇತ್ರಗಳ ಪಕ್ಷದ ಆಕಾಂಕ್ಷಿಗಳ ಪಟ್ಟಿಯನ್ನು ಸೋಮವಾರ ಪಕ್ಷದ ಹೈಕಮಾಂಡ್‌ಗೆ ಸಲ್ಲಿಸಲಾಗುವುದು. ಗೆಲ್ಲುವ ಅಭ್ಯರ್ಥಿಗಳಿಗೆ ಟಿಕೆಟ್ ನೀಡಲಾಗುವುದು ಎಂದು ತಿಳಿಸಿದರು.
ಬಿಜೆಪಿ ಸಂಸದರು ಗ್ರಾಮಕ್ಕೆ ಹೋಗಿಲ್ಲ
ಯಾರೂ ರಾಜೀನಾಮೆ ಕೊಡುವ ಪ್ರಶ್ನೆಯೇ ಇಲ್ಲ. ಘಟನಾ ಸ್ಥಳಕ್ಕೆ ಗೃಹ ಸಚಿವರು ಭೇಟಿ ನೀಡಿದ್ದಾರೆ. ನಾನು ಕೂಡ ಹೋಗಿದ್ದೇನೆ ಎಂದು ಸಚಿವ ಸತೀಶ ಜಾರಕಿಹೊಳಿ ಹೇಳಿದರು. ವಂಟಮೂರಿ ಪ್ರಕರಣ ಸಂಬಂಧ ಗೃಹ ಸಚಿವರು ರಾಜೀನಾಮೆ ನೀಡುವಂತೆ ಬಿಜೆಪಿ ನಾಯಕರು ಒತ್ತಡ ಹೇರುತ್ತಿರುವುದಕ್ಕೆ ಪ್ರತಿಕ್ರಿಯಿಸಿದ ಅವರು, ಪ್ರತಿಪಕ್ಷದವರು ಕಾಕತಿ ಪೊಲೀಸ್ ಠಾಣೆಗೆ ಮಾತ್ರ ಭೇಟಿ ನೀಡಿದ್ದಾರೆ. ಗ್ರಾಮಕ್ಕೆ ಹೋಗಿಲ್ಲ. ಬಿಜೆಪಿಯವರು ಮೊದಲು ರಾಜಕೀಯ ಮಾಡುವುದನ್ನು ಬಿಡಬೇಕು. ತಮ್ಮ ಜವಾಬ್ದಾರಿ ಹೇಳದ ಅವರು ನಮ್ಮ ಜವಾಬ್ದಾರಿ ಬಗ್ಗೆ ಹೇಳುತ್ತಾರೆ. ಅವರ ಸಂಸದರೇ ಬಂದಿಲ್ಲ. ನಾವೆಲ್ಲರೂ ಹೋಗಿದ್ದೇವೆ ಎಂದರು.