ಬೆಂಗಳೂರು, [ಜ.13]: ರಾಷ್ಟ್ರೀಯ ಕಾರ್ಯಕರಿಣಿಯಲ್ಲಿ ಭಾಗವಹಿಸಲು ದೆಹಲಿಗೆ ತೆರಳಿರುವ ಬಿಜೆಪಿಯ 100 ಶಾಸಕರು ಇನ್ನು ಎರಡು ದಿನ ಅಲ್ಲೇ ಉಳಿಯಲಿದ್ದಾರೆ. ಇದಕ್ಕೆ ಕಾರಣ ಯಡಿಯೂರಪ್ಪ ನೀಡಿರುವ ಸೂಚನೆ.  

ಇಂದು[ಭಾನುವಾರ] ಅಮಿತ್ ಷಾ ಜೊತೆ ನಡೆಯಬೇಕಿದ್ದ ಸಭೆ ಸೋಮವಾರ ಬೆಳಗ್ಗೆ 11ಕ್ಕೆ ನಡೆಯಲಿದೆ.ಅದಕ್ಕೂ ಮೊದಲು ರಾಜ್ಯ ಬಿಜೆಪಿ ಉಸ್ತುವಾರಿ ಮುರಳೀಧರ ರಾವ್ ಮತ್ತು ಯಡಿಯೂರಪ್ಪ ನೇತೃತ್ವದಲ್ಲಿ ರಾಜ್ಯ ಶಾಸಕರು - ಸಂಸದರ ಸಭೆ ನಡೆಯಿತು.

ಎಲ್ಲಾ ಶಾಸಕರು ಒಗ್ಗಟ್ಟಿನಿಂದ ಇರೋಣ, ಒಳ್ಳೆಯದಾಗುತ್ತೆ

ಸಭೆಯಲ್ಲಿ ಮಾತನಾಡಿದ ಯಡಿಯೂರಪ್ಪ,ಎಲ್ಲಾ ಶಾಸಕರು ಒಗ್ಗಟ್ಟಿನಿಂದ ಇರೋಣ, ಒಳ್ಳೆಯದಾಗುತ್ತೆ. ಮೂರು ದಿನ ಇಲ್ಲೇ ಇರಿ. ಒಳ್ಳೆ ಸುದ್ದಿ ಕೊಡುತ್ತೇನೆ ಎಂದು ಶಾಸಕರಿಗೆ ಚುಟುಕಾಗಿ ಸೂಚಿಸಿದ್ದಾರೆ. ಹೆಚ್ಚಿನ ವಿವರ ನೀಡಿಲ್ಲ. ಇದನ್ನ ಖಾಸಗಿಯಾಗಿ ಶಾಸಕರು ಹೇಳುತ್ತಿದ್ದರು, ಬಹಿರಂಗವಾಗಿ ಹೇಳಲು ಶಾಸಕರು ತಯಾರಿಲ್ಲ. 

ಸೋಮವಾರ ಬಹುತೇಕ ಸಂಜೆ 5 ಗಂಟೆಯ ವರೆಗೆ ಸಭೆ ನಡೆಯಲಿದೆ. ಅದರ ನಂತರ ಅಗತ್ಯ ಬಿದ್ದಲ್ಲಿ ಎಲ್ಲ ಶಾಸಕರನ್ನು ಒಂದೇ ಹೋಟೆಲ್ ಗೆ ಶಿಫ್ಟ್ ಮಾಡೋ ಸಾಧ್ಯತೆ ಇದೆ ಎನ್ನಲಾಗಿದ್ದು, ಆಪರೇಷನ್ ಹಸ್ತ ತಡೆಯಲು ಈ ತಂತ್ರ ಎಂದು ಬಿಜೆಪಿ ಸಮರ್ಥಿಸಿಕೊಳ್ಳುತ್ತಿದೆ.

"

ಮುಂಬೈನಲ್ಲಿ ಸೇರುವ ಅತೃಪ್ತ ಶಾಸಕರ ಸಂಖ್ಯೆ ಎಷ್ಟು ಆಗುತ್ತದೆ ಎನ್ನುವುದರ ಮೇಲೆ ಬಿಜೆಪಿ ಶಾಸಕರಿಗೆ ದೆಹಲಿಯಿಂದ ಬಿಡುಗಡೆ ಯಾವಾಗ ಅನ್ನೋದು ನಿರ್ಧಾರ ಆಗಲಿದೆ. 

ಒಟ್ಟಿನಲ್ಲಿ ಮೂರು ದಿನ ಇಲ್ಲೇ ಇರಿ. ಒಳ್ಳೆ ಸುದ್ದಿ ಕೊಡುತ್ತೇನೆ ಎನ್ನುವ ಯಡಿಯೂರಪ್ಪ ಹೇಳಿಕೆ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದಂತೂ ಸತ್ಯ.  ಮತ್ತೊಂದೆಡೆ  ಕಾಂಗ್ರೆಸ್-ಜೆಡಿಎಸ್ ಮೈತ್ರಿ ನಾಯಕರಿಗೆ ತಮ್ಮ ಸರ್ಕಾರ ಉಳಿಸಿಕೊಳ್ಳುವ ಟೆನ್ಷನ್ ಶುರುವಾಗಿದೆ.