Asianet Suvarna News Asianet Suvarna News

ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಗೆ 28 ಸ್ಥಾನ: ನಿಖಿಲ್ ಕುಮಾರಸ್ವಾಮಿ ವಿಶ್ವಾಸ

ಪ್ರಧಾನಿ ನರೇಂದ್ರ ಮೋದಿ ಅವರು ಮಾಡಿರುವ ಸಾಧನೆಗಳ ಹಿನ್ನೆಲೆಯಲ್ಲಿ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಗೆ ರಾಜ್ಯದಲ್ಲಿ ಎಲ್ಲ 28 ಸ್ಥಾನಗಳಲ್ಲಿ ಗೆಲ್ಲುವ ವಿಶ್ವಾಸವಿದೆ ಎಂದು ಜೆಡಿಎಸ್ ಮುಖಂಡ ನಿಖಿಲ್ ಕುಮಾರಸ್ವಾಮಿ ಹೇಳಿದರು. 

28 seats for BJP JDS alliance in Lok Sabha elections Says Nikhil Kumaraswamy gvd
Author
First Published Jan 30, 2024, 1:00 AM IST

ಕಲಬುರಗಿ (ಜ.30): ಪ್ರಧಾನಿ ನರೇಂದ್ರ ಮೋದಿ ಅವರು ಮಾಡಿರುವ ಸಾಧನೆಗಳ ಹಿನ್ನೆಲೆಯಲ್ಲಿ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಗೆ ರಾಜ್ಯದಲ್ಲಿ ಎಲ್ಲ 28 ಸ್ಥಾನಗಳಲ್ಲಿ ಗೆಲ್ಲುವ ವಿಶ್ವಾಸವಿದೆ ಎಂದು ಜೆಡಿಎಸ್ ಮುಖಂಡ ನಿಖಿಲ್ ಕುಮಾರಸ್ವಾಮಿ ಹೇಳಿದರು. ಇಲ್ಲಿನ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ನರೇಂದ್ರ ಮೋದಿ ಅವರ ಸಾಧನೆಗಳನ್ನು ನೋಡಿ, ಪರಾಮರ್ಶಿಸಿದ ಬಳಿಕವೇ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ದೇವೇಗೌಡ ಅವರು ಮೋದಿಯವರ ಕೈ ಬಲಪಡಿಸಲು ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದ್ದಾರೆ. ಹಾಗಾಗಿ, ಈ ನಿಟ್ಟಿನಲ್ಲಿ ಈಗಾಗಲೇ ಬಿಜೆಪಿ-ಜೆಡಿಎಸ್ ಮೈತ್ರಿಯೊಂದಿಗೆ ಲೋಕಸಭೆಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದರು.

ಎಚ್‌ಡಿಕೆ ದಿಲ್ಲಿಗೆ ಹೋದರೆ ರಾಜ್ಯಕ್ಕೆ ನಿಖಿಲ್‌?: ಜಾತ್ಯತೀತ ಜನತಾದಳ ಪಕ್ಷದಲ್ಲಿ ಮೂರನೇ ತಲೆಮಾರು ನಾಯಕತ್ವ ವಹಿಸಿಕೊಳ್ಳಲು ವೇದಿಕೆ ಸಜ್ಜಾಗುತ್ತಿದ್ದು, ಭರ್ಜರಿ ತಾಲೀಮು ಆರಂಭವಾಗಿದೆ. ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ, ಅವರ ಪುತ್ರರಾಗಿರುವ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಬಳಿಕ ಇದೀಗ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಅವರು ಮುಂದಿನ ನಾಯಕತ್ವ ವಹಿಸಿಕೊಳ್ಳುವ ದಿಕ್ಕಿನಲ್ಲಿ ಹೆಜ್ಜೆ ಇಡುತ್ತಿದ್ದಾರೆ.

ಲೋಕಸಭಾ ಚುನಾವಣೆ ಬಳಿಕ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರವೇ ಅಸ್ತಿತ್ವಕ್ಕೆ ಬಂದಲ್ಲಿ ಕುಮಾರಸ್ವಾಮಿ ಅವರು ಕೇಂದ್ರ ಸಚಿವರಾಗುವ ಮೂಲಕ ರಾಷ್ಟ್ರ ರಾಜಕಾರಣಕ್ಕೆ ಹೋಗುತ್ತಾರೆ ಎಂಬ ವದಂತಿ ಕಳೆದ ಹಲವು ದಿನಗಳಿಂದ ಬಲವಾಗಿ ಕೇಳಿಬರುತ್ತಿದೆ. ಹಾಗೊಂದು ವೇಳೆ ಕುಮಾರಸ್ವಾಮಿ ಅವರು ರಾಜ್ಯ ರಾಜಕಾರಣದಿಂದ ರಾಷ್ಟ್ರ ರಾಜಕಾರಣಕ್ಕೆ ಬಡ್ತಿ ಪಡೆದಲ್ಲಿ ಆಗ ರಾಜ್ಯ ಘಟಕದ ಜವಾಬ್ದಾರಿಯನ್ನು ನಿಖಿಲ್ ಹೆಗಲಿಗೆ ಹೊರಿಸುವ ಸಾಧ್ಯತೆಯಿದೆ ಎಂಬ ಮಾತು ಜೆಡಿಎಸ್ ಪಾಳೆಯದಿಂದಲೇ ದಟ್ಟವಾಗಿ ಕೇಳಿಬರುತ್ತಿದೆ.

ನಿತೀಶ್ ಕುಮಾರ್ ಬಗ್ಗೆ ವೈಯಕ್ತಿಕ ಟೀಕೆ ಮಾಡಿಲ್ಲ: ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ

ವಿದ್ಯಮಾನಗಳಿಂದ ಎಲ್ಲ ಸ್ಪಷ್ಟ: ಇತ್ತೀಚಿನ ಜೆಡಿಎಸ್ ಪಕ್ಷದಲ್ಲಿನ ವಿದ್ಯಮಾನಗಳನ್ನು ಗಮನಿಸಿದರೆ ಇದು ಸ್ಪಷ್ಟವಾಗುತ್ತದೆ. ಕುಮಾರಸ್ವಾಮಿ ಅವರು ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಭೇಟಿಯಾಗಲು ದೆಹಲಿಗೆ ತೆರಳಿದಾಗಲೆಲ್ಲ ತಮ್ಮೊಂದಿಗೆ ನಿಖಿಲ್ ಅವರನ್ನು ಕರೆದೊಯ್ದಿದ್ದಾರೆ. ಅಷ್ಟೇ ಯಾಕೆ. ಕಳೆದ ಭಾನುವಾರ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ನಿವಾಸದಲ್ಲಿ ನಡೆದ ಉಭಯ ಪಕ್ಷಗಳ ರಾಜ್ಯ ನಾಯಕರ ಮೊದಲ ಸಭೆಯಲ್ಲಿ ನಿಖಿಲ್ ಉಪಸ್ಥಿತರಿದ್ದರು. ಅಷ್ಟರ ಮಟ್ಟಿಗೆ ಕುಮಾರಸ್ವಾಮಿ ಅವರು ಪುತ್ರನನ್ನು ತಮ್ಮ ಉತ್ತರಾಧಿಕಾರಿ ಎಂಬ ಸ್ಪಷ್ಟ ಸಂದೇಶ ರವಾನಿಸುತ್ತಿದ್ದಾರೆ ಎನ್ನಲಾಗಿದೆ.

Follow Us:
Download App:
  • android
  • ios