ಬೆಂಗಳೂರು ನಗರದ ಜಯನಗರ ಕ್ಷೇತ್ರದ ಟಿಕೆಟ್‌ ಆಕಾಂಕ್ಷಿಯಾಗಿದ್ದ ಬಿಜೆಪಿಯ ಬೆಂಗಳೂರು ದಕ್ಷಿಣ ಜಿಲ್ಲೆ ಅಧ್ಯಕ್ಷ ಎನ್‌.ಆರ್‌.ರಮೇಶ್‌ ಅವರಿಗೆ ಟಿಕೆಟ್‌ ಸಿಗದ ಹಿನ್ನೆಲೆಯಲ್ಲಿ ಪಕ್ಷದ ಕಾರ್ಯಕರ್ತರ ಅಸಮಾಧಾನ. 

ಬೆಂಗಳೂರು(ಏ.13): ರಾಜ್ಯ ವಿಧಾನಸಭೆಗೆ ಮಂಗಳವಾರವಷ್ಟೇ ಬಿಜೆಪಿಯ ಟಿಕೆಟ್‌ ಘೋಷಣೆ ಬೆನ್ನಲ್ಲೆ ನಗರದ 6 ಕ್ಷೇತ್ರಗಳಲ್ಲಿ ಬಂಡಾಯ ಭುಗಿಲೆದ್ದಿದೆ. ಪ್ರಮುಖವಾಗಿ ಬ್ಯಾಟರಾಯನಪುರ, ಚಾಮರಾಜಪೇಟೆ, ಜಯನಗರ, ಹೆಬ್ಬಾಳ, ಬಸವನಗುಡಿ ಕ್ಷೇತ್ರದಲ್ಲಿ ಟಿಕೆಟ್‌ ವಂಚಿತರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಚಾಮರಾಜಪೇಟೆಯಲ್ಲಿ ಹೊರಗಿನ ವ್ಯಕ್ತಿಗೆ ಟಿಕೆಟ್‌ ನೀಡಿರುವುದಕ್ಕೆ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಟಿಕೆಟ್‌ ಆಕಾಂಕ್ಷಿಯಾಗಿದ್ದ ಸೈಲೆಂಟ್‌ ಸುನೀಲನ ಬೆಂಬಲಿಗರು ಬಿಜೆಪಿ ಕಚೇರಿಗೇ ನುಗ್ಗಿದ್ದಾರೆ. ಜಯನಗರದ ಟಿಕೆಟ್‌ ನಿರೀಕ್ಷಿಸಿದ್ದ ಎನ್‌.ಆರ್‌.ರಮೇಶ್‌ ಪರವಾಗಿ ಅವರ ಬೆಂಬಲಿಗರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇಡವೆ ನಡುವೆ ಗೋವಿಂದರಾಜನಗರ ಕ್ಷೇತ್ರದಲ್ಲಿ ಸಚಿವ ವಿ.ಸೋಮಣ್ಣ ಪುತ್ರನಿಗೇ ಟಿಕೆಟ್‌ ನೀಡುವಂತೆ ಕಾರ್ಯಕರ್ತರು ಒತ್ತಡ ಹಾಕಿದ್ದಾರೆ.

ಬ್ಯಾಟರಾಯನಪುರ ಅತೃಪ್ತಿ ಸ್ಫೋಟ

ಆಡಳಿತರೂಢ ಬಿಜೆಪಿಯಲ್ಲಿ ಅಭ್ಯರ್ಥಿಗಳ ಪಟ್ಟಿಪ್ರಕಟಗೊಂಡ ಬೆನ್ನಲ್ಲೇ ಅಸಮಾಧಾನ ಭುಗಿಲೆದ್ದಿದ್ದು, ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದಲ್ಲಿ ಭಿನ್ನಮತ ಸ್ಫೋಟಗೊಂಡಿದೆ. ಪಕ್ಷದಿಂದ ಟಿಕೆಟ್‌ ಕೈ ತಪ್ಪಿದ್ದಕ್ಕೆ ಆಕಾಂಕ್ಷಿ ಮುಖಂಡರಾದ ಮುನೀಂದ್ರ ಕುಮಾರ್‌ ಮತ್ತು ಎ.ರವಿ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದರು. ಈ ಮುಖಂಡರ ನಿವಾಸಗಳ ಮುಂದೆ ಅಭಿಮಾನಿಗಳು ಜಮಾಯಿಸಿ ಬಿಜೆಪಿ ವಿರುದ್ಧ ಧಿಕ್ಕಾರ ಕೂಗಿದ ಪ್ರಸಂಗ ನಡೆಯಿತು. ಇನ್ನು, ಬೆಂಬಲಿಗರ ಅಭಿಮಾನ ಕಂಡು ನಾಯಕರು ಭಾವೋದ್ವೇಗಕ್ಕೆ ಒಳಗಾದರು. ಟಿಕೆಟ್‌ ಕೈ ತಪ್ಪಿದ್ದಕ್ಕೆ ಕಣ್ಣೀರು ಹಾಕಿದ ಘಟನೆಯೂ ಜರುಗಿತು.

2018 ರ ಪಕ್ಷೇತರ ಅಭ್ಯರ್ಥಿ ಗೆ ಈಗ ಗುಬ್ಬಿ ಬಿಜೆಪಿಯಿಂದ ಟಿಕೆಟ್‌

ಪಾಲಿಕೆಯ ಮಾಜಿ ಸದಸ್ಯರಾಗಿರುವ ಮುನೀಂದ್ರ ಕುಮಾರ್‌ ಬ್ಯಾಟರಾಯನಪುರ ಕ್ಷೇತ್ರದ ಪ್ರಬಲ ಆಕ್ಷಾಂಕಿಯಾಗಿದ್ದರು. ಅಂತೆಯೇ ಎ.ರವಿಯೂ ಸಹ ಟಿಕೆಟ್‌ ಸಿಗುವ ವಿಶ್ವಾಸದಲ್ಲಿದ್ದರು. ಕಳೆದ ಮೂರು ಚುನಾವಣೆಗಳಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ರವಿ ಅವರು ಸೋಲುಂಡಿದ್ದರು. ಆದರೆ, ಬಿಜೆಪಿ ಹೈಕಮಾಂಡ್‌ ಶಿಡ್ಲಘಟ್ಟಮೂಲದ ತಮ್ಮೇಶ್‌ಗೌಡ ಅವರ ಹೆಸರನ್ನು ಪ್ರಕಟಿಸಿದೆ. ಇದು ಉಭಯ ನಾಯಕರ ಅಸಮಾಧಾನಕ್ಕೆ ಕಾರಣವಾಗಿದೆ.

ಬುಧವಾರ ಬೆಳಗ್ಗೆಯೇ ಕೋಗಿಲು ಬಳಿಯ ಮುನೀಂದ್ರ ಕುಮಾರ್‌ ಮನೆ ಬಳಿ ನೂರಾರು ಜನರು ಜಮಾವಣೆಯಾಗಿ ಅವರ ಪರ ಘೋಷಣೆ ಕೂಗಿದರು. ಬಿಜೆಪಿ ಹೈಕಮಾಂಡ್‌ ವಿರುದ್ಧ ಕಿಡಿಕಾರಿದ ತೀರ್ಮಾನವನ್ನು ಬದಲಿಸಬೇಕು. ದೇಶಕ್ಕೆ ಪ್ರಧಾನಿ ನರೇಂದ್ರ ಮೋದಿಯಾದರೆ, ಕ್ಷೇತ್ರಕ್ಕೆ ಮುನೀಂದ್ರ ಎಂಬ ಘೋಷಣೆಯನ್ನು ಕೂಗಲಾಯಿತು. ಜನರ ಜತೆ ಗದ್ಗದಿತರಾಗಿ ಭಾವೋದ್ವೇಗಕ್ಕೊಳಗಾಗಿ ಕಣ್ಣೀರು ಹಾಕಿದರು.

ಈ ನಡುವೆ ರವಿ ಮನೆ ಮುಂದೆಯೂ ನೂರಾರು ಕಾರ್ಯಕರ್ತರು ಜಮಾಯಿಸಿ ಬಿಜೆಪಿ ವಿರುದ್ಧ ಘೋಷಣೆ ಕೂಗಿದರು. ಟಿಕೆಟ್‌ ತಪ್ಪಿದ್ದಕ್ಕೆ ಅಭಿಮಾನಿಗಳ ಮುಂದೆ ಕಣ್ಣೀರು ಹಾಕಿದರು. 2018ರ ಚುನಾವಣೆಯಲ್ಲಿ ಶಾಸಕ ಕೃಷ್ಣ ಬೈರೇಗೌಡ ವಿರುದ್ಧ ಐದು ಸಾವಿರ ಮತಗಳ ಅಂತರದಲ್ಲಿ ರವಿ ಸೋಲನುಭವಿಸಿದ್ದರು. ಈ ಬಾರಿಯೂ ತಮಗೆ ಟಿಕೆಟ್‌ ಸಿಗಲಿದ್ದು, ಗೆಲುವು ಖಚಿತ ಎಂಬ ನಿರೀಕ್ಷೆಯಲ್ಲಿದ್ದರು. ಟಿಕೆಟ್‌ ಸಿಗದ ಕಾರಣ ಬೆಂಬಲಿಗರ ಮತ್ತು ಕಾರ್ಯಕರ್ತರ ಸಭೆ ನಡೆಸಿದ್ದಾರೆ.
ಮುನೀಂದ್ರ ಕುಮಾರ್‌ ಮತ್ತು ಎ.ರವಿ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಸುವ ಬಗ್ಗೆ ಚರ್ಚೆ ನಡೆಸಿದ್ದು, ಶೀಘ್ರದಲ್ಲಿಯೇ ಸೂಕ್ತ ತೀರ್ಮಾನ ಕೈಗೊಳ್ಳಲಿದ್ದಾರೆ. ತಮ್ಮ ತಮ್ಮ ಅಭಿಮಾನಿಗಳ ಜತೆ ನಡೆಸಿದ ಸಭೆಯಲ್ಲಿ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯುವಂತೆ ಒತ್ತಾಯ ಕೇಳಿಬಂದ ಹಿನ್ನೆಲೆಯಲ್ಲಿ ಬಂಡಾಯ ಅಭ್ಯರ್ಥಿಗಳಾಗಿ ಸ್ಪರ್ಧಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಎನ್‌.ಆರ್‌.ರಮೇಶ್‌ಗೆ ಸಿಗದ ಕಮಲ: 1350+ ಕಾರ್ಯಕರ್ತರ ರಾಜೀನಾಮೆ

ಬೆಂಗಳೂರು ನಗರದ ಜಯನಗರ ಕ್ಷೇತ್ರದ ಟಿಕೆಟ್‌ ಆಕಾಂಕ್ಷಿಯಾಗಿದ್ದ ಬಿಜೆಪಿಯ ಬೆಂಗಳೂರು ದಕ್ಷಿಣ ಜಿಲ್ಲೆ ಅಧ್ಯಕ್ಷ ಎನ್‌.ಆರ್‌.ರಮೇಶ್‌ ಅವರಿಗೆ ಟಿಕೆಟ್‌ ಸಿಗದ ಹಿನ್ನೆಲೆಯಲ್ಲಿ ಪಕ್ಷದ ಕಾರ್ಯಕರ್ತರು ಅಸಮಾಧಾನಗೊಂಡಿದ್ದಾರೆ. ಯಡಿಯೂರು ವಾರ್ಡ್‌ನ ಬಿಜೆಪಿ ಘಟಕ ಅಧ್ಯಕ್ಷ ಎಸ್‌.ಜಿ.ಮಂಜೇಗೌಡ ನೇತೃತ್ವದಲ್ಲಿ 1250ಕ್ಕೂ ಹೆಚ್ಚು ಮಂದಿ ಮತ್ತು ಚಾಮರಾಜಪೇಟೆ ಮಂಡಲ ಬಿಜೆಪಿ ಘಟಕ ಅಧ್ಯಕ್ಷ ವಿ.ಕೇಶವ ನೇತೃತ್ವದಲ್ಲಿ 100ಕ್ಕೂ ಹೆಚ್ಚು ಮಂದಿ ರಾಜೀನಾಮೆ ಸಲ್ಲಿಸಿದ್ದಾರೆ. ಈ ಸಂಬಂಧ ಮಂಜೇಗೌಡ ಮತ್ತು ಕೇಶವ ಅವರು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಅವರಿಗೆ ಪತ್ರ ಬರೆದಿದ್ದಾರೆ.

ಕಳೆದ ಹತ್ತಾರು ವರ್ಷಗಳಿಂದ ಬಿಜೆಪಿ ಸಂಘಟನೆಗೆ ಹಗಲಿರುಳು ಶ್ರಮಿಸುತ್ತಾ, ಕಾಂಗ್ರೆಸ್‌ ಪಕ್ಷದ ಭ್ರಷ್ಟಾಚಾರಗಳು ಮತ್ತು ಹಗರಣಗಳ ವಿರುದ್ಧ ಏಕಾಂಗಿಯಾಗಿ ಪ್ರಾಣದ ಹಂಗು ತೊರೆದು ಹೋರಾಟ ಮಾಡುತ್ತಿರುವ ರಮೇಶ್‌ ಅವರಿಗೆ 2018ರ ಚುನಾವಣೆಯಲ್ಲಿ ಮಾಡಿದ ರೀತಿಯೇ 2023ರ ಚುನಾವಣೆಯಲ್ಲಿ ಸರಿಪಡಿಸಲಾಗದಷ್ಟುಅನ್ಯಾಯವನ್ನು ಮಾಡಲಾಗಿದೆ. ಈ ಬಾರಿಯಾದರೂ ರಮೇಶ್‌ ಅವರಿಗೆ ಪಕ್ಷದ ವತಿಯಿಂದ ನ್ಯಾಯ ಸಿಗಲಿದೆ ಎಂಬ ನಿರೀಕ್ಷೆಯಲ್ಲಿದ್ದ ನಮಗೆ ಪಕ್ಷದ ವರಿಷ್ಠರು ಬಿಡುಗಡೆ ಮಾಡಿರುವ ಪಟ್ಟಿಯನ್ನು ನೋಡಿದ ಬಳಿಕ ಆಘಾತವಾಗಿದೆ. ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ ಯಡಿಯೂರು ವಾರ್ಡ್‌, ಕರೇಸಂದ್ರ ವಾರ್ಡ್‌, ಗಣೇಶ್‌ ಮಂದಿರ ವಾರ್ಡ್‌ನ 1250ಕ್ಕೂ ಹೆಚ್ಚು ಮಂದಿ ಪಕ್ಷದ ಪ್ರಾಥಮಿಕ ಸದಸ್ಯತ್ವ ಸ್ಥಾನಕ್ಕೆ ಸಾಮೂಹಿಕ ರಾಜೀನಾಮೆ ನೀಡುತ್ತಿದ್ದೇವೆ ಎಂದು ಮಂಜೇಗೌಡ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಟಿಕೆಟ್ ಕೈತಪ್ಪಿದ ಆಕ್ರೋಶ, ಬಿಜೆಪಿಗೆ ಶಾಸಕ ಗೂಳಿಹಟ್ಟಿ ಶೇಖರ್ ಗುಡ್ ಬೈ!

ಇದೇ ವೇಳೆ ಚಾಮರಾಜಪೇಟೆ ಮಂಡಲ ಅಧ್ಯಕ್ಷ ಕೇಶವ ಅವರು, ಭಾಸ್ಕರರಾವ್‌ ಅವರ ಬದಲು ರಮೇಶ್‌ ಅವರಿಗೆ ಟಿಕೆಟ್‌ ನೀಡಬೇಕಾಗಿತ್ತು ಎಂದು ಅಭಿಪ್ರಾಯಪಟ್ಟು ಪಾಲಿಕೆ ಮಾಜಿ ಸದಸ್ಯೆ ಶಶಿಕಲಾ ಗೋಪಾಲ್‌ ಸೇರಿದಂತೆ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ 100ಕ್ಕೂ ಹೆಚ್ಚು ಮಂದಿ ಪಕ್ಷದ ಪ್ರಾಥಮಿಕ ಸದಸ್ಯತ್ವ ಸ್ಥಾನಕ್ಕೆ ಸಾಮೂಹಿಕ ರಾಜೀನಾಮೆ ನೀಡುತ್ತಿದ್ದೇವೆ ಎಂದಿದ್ದಾರೆ.

ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.