ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಆರೇ ತಿಂಗಳಲ್ಲಿ ಕುದೂರನ್ನು ತಾಲೂಕು ಎಂದು ಘೋಷಣೆ ಮಾಡುತ್ತೇನೆ: ಎಚ್‌.ಡಿ.ಕುಮಾರಸ್ವಾಮಿ 

ಕುದೂರು(ಮೇ.08): ನನ್ನ ಬಳಿ ಹಣವಿಲ್ಲ. ಇದ್ದಿದಿದ್ರೆ 140ಕ್ಕಿಂತ ಹೆಚ್ಚು ಸೀಟುಗಳನ್ನು ನಮ್ಮ ಪಕ್ಷ ಗೆಲ್ಲುತ್ತಿತ್ತು. ಆದರೆ ಈಗಲೂ ನನಗೆ ಭರವಸೆ ಇದೆ. ಎರಡೂ ರಾಷ್ಟ್ರೀಯ ಪಕ್ಷಗಳಿಗಿಂತ ಹತ್ತು ಸ್ಥಾನ ಹೆಚ್ಚು ಗೆಲ್ಲುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು. ಕುದೂರು ಗ್ರಾಮದಲ್ಲಿ ಜೆಡಿಎಸ್‌ ಅಭ್ಯರ್ಥಿ ಎ.ಮಂಜುನಾಥ್‌ ಪರವಾಗಿ ತೆರೆದ ವಾಹನದಲ್ಲಿ ಪ್ರಚಾರ ಮಾಡಿ ಮಾತನಾಡಿದ ಅವರು, ಮಾಧ್ಯಮಗಳ ಸಮೀಕ್ಷೆಯನ್ನು ನೀವುಗಳು ನಂಬಬೇಡಿ. ನಾನೂ ಕೂಡಾ ಅವರಿಗೆ ಹತ್ತೋ ಇಪ್ಪತ್ತೋ ಕೋಟಿ ಕೊಟ್ಟಿದ್ದರೆ ನನ್ನ ಪಕ್ಷವೂ 125 ಸೀಟು ಬರುತ್ತಿತ್ತು ಎಂದು ಹೇಳುತ್ತಿದ್ದರು ಎಂದು ಮಾಧ್ಯಮಗಳ ಮೇಲೆ ಹರಿಹಾಯ್ದರು.

ಕ್ರಿಕೆಟ್‌ ಬೆಟ್ಟಿಂಗ್‌ನಿಂದ ಸಾಕಷ್ಟುಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಆನ್‌ಲೈನ್‌ ರಮ್ಮಿ ಆಟದಿಂದ ಯುವಕರು ನಾಶವಾಗುತ್ತಿದ್ದಾರೆ. ಅದನ್ನು ನೀವು ಅಧಿಕಾರಕ್ಕೆ ಬಂದ ದಿನ ಬ್ಯಾನ್‌ ಮಾಡಿ ಎಂದು ಜನರು ನಮಗೆ ಕೇಳಿಕೊಳ್ಳುತ್ತಿದ್ದಾರೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಆರೇ ತಿಂಗಳಲ್ಲಿ ಕುದೂರನ್ನು ತಾಲೂಕು ಎಂದು ಘೋಷಣೆ ಮಾಡುತ್ತೇನೆ. ಹಾಸನ ಜಿಲ್ಲೆಯಲ್ಲಿ ಹುಟ್ಟಿದ ನನಗೆ ರಾಜಕೀಯ ಜನ್ಮ ನೀಡಿದ್ದು ರಾಮನಗರ ಜಿಲ್ಲೆ ಇದನ್ನು ಇಡೀ ರಾಜ್ಯದಲ್ಲೇ ಮಾದರಿ ಜಿಲ್ಲೆಯನ್ನಾಗಿ ಮಾಡುತ್ತೇನೆ ಎಂದು ಹೇಳಿದರು.

ಜೆಡಿಎಸ್‌ ಅಧಿಕಾರಕ್ಕೆ ತಂದು ಕಣ್ಮುಚ್ಚುವ ಆಸೆ: ದೇವೇಗೌಡರ ಭಾವನಾತ್ಮಕ ಮಾತು

ಆಪರೇಷನ್‌ ಕಮಲ ಮಾಡುವಾಗ ಮಾಗಡಿ ಶಾಸಕ ಎ.ಮಂಜುನಾಥ್‌ ಅವರನ್ನು ಕೇಳಿದ್ದರು. ಆದರೆ ಅವರು ನನ್ನ ಕುಟುಂಬದ ಮೇಲೆ ನಂಬಿಕೆ ಇಟ್ಟಿದ್ದ ಕಾರಣ ಮಾರಾಟವಾಗಲಿಲ್ಲ. ಆದರೆ ನಮ್ಮ ಪಕ್ಷದಲ್ಲಿದ್ದ ಹಿಂದಿನ ವ್ಯಕ್ತಿ ಇದ್ದಿದ್ದರೆ ಖಂಡಿತಾ ಮೂವತ್ತು ಕೋಟಿಗೆ ಮಾರಾಟವಾಗುತ್ತಿದ್ದರು ಎಂದು ಕಾಂಗ್ರೆಸ್‌ ಅಭ್ಯರ್ಥಿ ಎಚ್‌.ಸಿ.ಬಾಲಕೃಷ್ಣ ಹೆಸರು ಹೇಳದೆ ಟೀಕಿಸಿದರು.

ನಮ್ಮ ತಂದೆ ಕಣ್ಣಲ್ಲಿ ನೀರು ಹಾಕುವುದು ನಾಟಕವಲ್ಲ. ನಮ್ಮ ನಾಡಿನ ಜನರ ನೋವನ್ನು ಅಳಿಸಲಾಗಲಿಲ್ಲವಲ್ಲಾ ಎಂದು ಕಣ್ಣೀರು ಸುರಿಸುತ್ತಾರೆ. ಆದರೆ ಅದನ್ನು ಜನರಿಗೆ ನಾಟಕ ಎಂದು ಬಿಂಬಿಸುತ್ತಿದ್ದಾರೆ. ನಮ್ಮ ತಂದೆಯ ಆಸೆಯನ್ನು ನಾನು ಪಂಚರತ್ನ ಯೋಜನೆ ಜಾರಿಗೊಳಿಸುವ ಮೂಲಕ ಪೂರೈಸುತ್ತೇನೆ. ಇನ್ನು ಮುಂದೆ ಚುನಾವಣೆ ಮಾಡೋದೆ ಕಷ್ಟವಾಗಿದೆ. ಸ್ವಲ್ಪ ಯಾಮಾರಿದ್ರೆ ನನ್ನ ಚರ್ಮವನ್ನೇ ಎತ್ಕೋತಾರೆ. ಹಣದ ಕೊರತೆ ಇಲ್ಲದಿದ್ದರೆ ಹೆಚ್ಚು ಸೀಟುಗಳು ಬರುತ್ತಿದ್ದವು. ಲಿಂಗಾಯತ ಮುಖ್ಯಮಂತ್ರಿಗಳೆಲ್ಲಾ ಭ್ರಷ್ಟರು ಎಂದು ಬೈಯೋದು ಬೈದು ಬಿಟ್ಟು ಅಯ್ಯಯ್ಯೋ ನಾನು ಬಾಯ್ತಪ್ಪಿ ಹಾಗಂದೆ ತಪ್ಪಾಯ್ತು ಕ್ಷಮಿಸಿ ಅಂತಾ ಕೈಮುಗಿದು ನಮ್ಮ ಪಕ್ಷದಲ್ಲಿದ್ದವರೊಬ್ಬರು ಮೈಸೂರಲ್ಲಿ ಕೇಳ್ಕೋತಾ ಇದಾರೆ ಅಂತಾ ಸಿದ್ದರಾಮಯ್ಯನವರ ಹೆಸರೇಳದೆ ಟೀಕಿಸಿದರು.

ಬೊಂಬೆನಗ​ರಿ​ಯಲ್ಲಿ ಕು​ಮಾ​ರ​ಸ್ವಾ​ಮಿಯನ್ನು ಮಣಿಸಿ ಯೋ​ಗೇ​ಶ್ವರ್‌ ವಿಧಾ​ನ​ಸೌಧ ಪ್ರವೇ​ಶಿ​ಸು​ತ್ತಾರಾ?

ಈ ಸಂದರ್ಭದಲ್ಲಿ ತಾಲೂಕು ಜೆಡಿಎಸ್‌ ಅಧ್ಯಕ್ಷ ರಾಮಣ್ಣ, ಕೃಷ್ಣಮೂರ್ತಿ, ರಾಘವೇಂದ್ರ, ವೆಂಕಟೇಶ್‌, ಗಂಗರಾಜು, ಶೈಲಜಾ ಮತ್ತಿತರರು ಭಾಗವಹಿಸಿದ್ದರು.

ಬಿಜೆಪಿಯವರು ನನ್ನನ್ನೂ ಕರೆದಿದ್ರು

ಜೆಡಿಎಸ್‌ ಅಭ್ಯರ್ಥಿ ಎ.ಮಂಜುನಾಥ್‌ ಮಾತನಾಡಿ, ಆಪರೇಷನ್‌ ಕಮಲ ಸಂದರ್ಭದಲ್ಲಿ ನನ್ನನ್ನೂ ಬಿಜೆಪಿಯವರು ಆಹ್ವಾನ ಮಾಡಿದ್ದರು. ಅನೇಕ ಆಸೆಗಳನ್ನು ತೋರಿಸಿದ್ದರು. ಆದರೆ ನಾನು ದೇವೇಗೌಡ ಅಪ್ಪಾಜಿ ಮತ್ತು ಕುಮಾರಣ್ಣನವರ ಮನೆಯ ವಿಶ್ವಾಸವುಳ್ಳ ನಾಯಿ. ಹಾಗಾಗಿ ಅಲ್ಲಿ ಬಿಟ್ಟು ಮೆತ್ತೆಲ್ಲಿಗೂ ಬರಲಾರೆ ಎಂದು ಹೇಳಿ ಕಳುಹಿಸಿದ್ದೆ. ಈ ಸಂಬಂಧ ಆಗಲೆ ಕುಮಾರಣ್ಣನವರಿಗೆ ನಾನು ಎಚ್ಚರಿಸಿದ್ದೆ, ಸರ್ಕಾರ ಉರುಳಿಸುತ್ತಾರೆ ಎಂದು. ಉತ್ತಮ ಕೆಲಸ ಮಾಡಿರುವ ನನ್ನನ್ನು ನಿಮ್ಮ ಮನೆ ಮಗನಾಗಿ ಮತ್ತೆ ಆರಿಸಿ ಕಳಿಸಿಕೊಡಲು ಮನವಿ ಮಾಡುತ್ತಿದ್ದೇನೆ ಎಂದು ಹೇಳಿದರು.