ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ಮಲ್ಲೇಶ್ವರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಸೋಮವಾರ ನಾಮಪತ್ರ ಸಲ್ಲಿಸಿದರು.
ಬೆಂಗಳೂರು (ಏ.18) : ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ಮಲ್ಲೇಶ್ವರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಸೋಮವಾರ ನಾಮಪತ್ರ ಸಲ್ಲಿಸಿದರು.
ನಾಮಪತ್ರ ಸಲ್ಲಿಕೆಗೂ ಮುನ್ನ ಮಲ್ಲೇಶ್ವರ(Malleshwar)ದ ನಿವಾಸದಲ್ಲಿ ಬೆಳಗ್ಗೆ ವಿಶೇಷ ಹೋಮ ನೆರವೇರಿಸಿದರು. ಕ್ಷೇತ್ರದ ವ್ಯಾಪ್ತಿಯ ಬಾಲಾಂಜನೇಯ, ಗಂಗಮ್ಮ, ಲಕ್ಷ್ಮೇ ನರಸಿಂಹ, ಕಾಡು ಮಲ್ಲೇಶ್ವರ, ಕೋಡಿ ಆಂಜನೇಯ ಹಾಗೂ ಮಹಾಗಣಪತಿ ದೇವಸ್ಥಾನಗಳಿಗೆ ಅಭಿಮಾನಿಗಳು ಹಾಗೂ ಕಾರ್ಯಕರ್ತರೊಂದಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.
ಈ ವೇಳೆ ಮಲ್ಲೇಶ್ವರ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಯದುಗಿರಿ ಯತಿರಾಜ ಮಠ, ಬಡಗನಾಡು ಬ್ರಾಹ್ಮಣ ಮಹಾಸಭಾ, ಸಿರಿನಾಡು ಬ್ರಾಹ್ಮಣ ಸಭಾ, ಅಕ್ಷಯ ಬ್ರಾಹ್ಮಣ ಸಭಾ, ಮಹಾತ್ಮ ಮಹಾಮಂಡಲ, ಮಾಧ್ವ ಮಹಾಮಂಡಲ, ವಿಪ್ರತ್ರಯ ಪರಿಷತ್, ಸುಧೀಂದ್ರ ನಗರದ ಮಾಧ್ವ ಸಂಘ ಮತ್ತು ಸಂದೀಪನಿ ಗುರುಕುಲದ ಪದಾಧಿಕಾರಿಗಳು ನಾಮಪತ್ರ ಸಲ್ಲಿಕೆ ವೇಳೆ ಪಾವತಿಸಬೇಕಾದ 10 ಸಾವಿರ ರು. ಠೇವಣಿ ಮೊತ್ತವನ್ನು ಸಚಿವ ಅಶ್ವತ್ಥನಾರಾಯಣ ಅವರಿಗೆ ದೇಣಿಗೆ ನೀಡಿದರು.
ರಾಮನಗರದ 4 ಕ್ಷೇತ್ರಗಳಲ್ಲೂ ಬಿಜೆಪಿಯದ್ದೇ ಗೆಲುವು: ಸಚಿವ ಅಶ್ವತ್ಥ ನಾರಾಯಣ
ಬಳಿಕ ಮಲ್ಲೇಶ್ವರದ ಮಾರಮ್ಮ ಸರ್ಕಲ್‌ನಲ್ಲಿ ಪೂಜೆ ಸಲ್ಲಿಸಿ ಸಾವಿರಾರು ಕಾರ್ಯಕರ್ತರೊಂದಿಗೆ ಪಾದಯಾತ್ರೆಯಲ್ಲಿ ಮಲ್ಲೇಶ್ವರದ 18ನೇ ಅಡ್ಡ ರಸ್ತೆಯ ಗೋಕಾಕ್ ಚಳವಳಿ ಸ್ಮರಣಾರ್ಥ ಉದ್ಯಾನದ ಮಾರ್ಗದಲ್ಲಿ ಸಂಚರಿಸಿ ಜಲಮಂಡಳಿ ಕಟ್ಟಡದಲ್ಲಿರುವ ಚುನಾವಣಾಧಿಕಾರಿ ಕಚೇರಿ ತೆರಳಿ ಉಮೇದುವಾರಿಕೆ ಸಲ್ಲಿಸಿದರು. ಸಚಿವರ ಪತ್ನಿ ಶ್ರುತಿ, ಮಲ್ಲೇಶ್ವರ ಮಂಡಲ ಬಿಜೆಪಿ ಅಧ್ಯಕ್ಷೆ ಕಾವೇರಿ ಕೇದಾರನಾಥ ಸಾಥ್ ನೀಡಿದರು.ರು.
ಸಚಿವ ಅಶ್ವತ್ಥನಾರಾಯಣ ಬಳಿ ₹17 ಕೋಟಿ ಮೌಲ್ಯದ ಆಸ್ತಿ:
ಮಲ್ಲೇಶ್ವರ ವಿಧಾನಸಭಾ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು 4.04 ಕೋಟಿ ರು. ಮೌಲ್ಯದ ಆಸ್ತಿ ಹೊಂದಿದ್ದಾರೆ.
ಅಶ್ವತ್ಥನಾರಾಯಣ ಅವರ ಬಳಿ 54.63 ಲಕ್ಷ ರು. ಮೌಲ್ಯ ಚರಾಸ್ತಿ ಹಾಗೂ ಮಾಗಡಿ ತಾಲೂಕಿನ ದಂಡೇನಹಳ್ಳಿಯಲ್ಲಿ 46.36 ಲಕ್ಷ ರು. ಮೌಲ್ಯದ 3.2 ಎಕರೆ ಕೃಷಿ ಭೂಮಿ, ನಾಗರಬಾವಿಯಲ್ಲಿ 3.06 ಕೋಟಿ ರು. ಮೌಲ್ಯದ ನಿವೇಶನ ಸೇರಿದಂತೆ ಒಟ್ಟು 3.52 ಕೋಟಿ ರು. ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ. 23.91 ಲಕ್ಷ ರು. ಮೌಲ್ಯದ ಐಷಾರಾಮಿ ಕಾರು, 2.43 ಲಕ್ಷ ರು. ಮೌಲ್ಯದ ಚಿನ್ನಾಭರಣ, ಬೆಳ್ಳಿ ಮುಂತಾದ ವಸ್ತುಗಳಿವೆ. ಪರವಾನಗಿ ಇರುವ 1.14 ಲಕ್ಷ ರು. ಮೌಲ್ಯದ ಪಿಸ್ತೂಲ್ ಹೊಂದಿದ್ದಾರೆ. ಅಶ್ವಥನಾರಾಯಣ ಅವರು 7.11 ಲಕ್ಷ ರು. ಸಾಲ ಹೊಂದಿದ್ದಾರೆ.
ಇವರ ಪತ್ನಿ ಶ್ರುತಿ ಅವರ 3.23 ಕೋಟಿ ರು. ಮೌಲ್ಯದ ಚರಾಸ್ತಿ ಹಾಗೂ 9.89 ಕೋಟಿ ರು. ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ. 9.89 ಕೋಟಿ ರು. ಮೌಲ್ಯದ ಮನೆ ಹೊಂದಿದ್ದು, 50.44 ಲಕ್ಷ ರು. ಹಣವನ್ನು ಷೇರುಗಳ ಮೇಲೆ ಹೂಡಿಕೆ ಮಾಡಿದ್ದಾರೆ. ಇವರ ಬಳಿ 1.43 ಲಕ್ಷ ರು. ಮೌಲ್ಯದ 34 ಗ್ರಾಂ ಚಿನ್ನಾಭರಣವಿದೆ. 34.27 ಲಕ್ಷ ರು. ಮೌಲ್ಯದ ರೋಲೆಕ್ಸ್ ವಾಚ್ ಇದೆ. ಶ್ರುತಿ ಅವರ ಮೇಲೆ 33.31 ಲಕ್ಷ ರು. ಸಾಲವಿದೆ. ಅಶ್ವತ್ಥನಾರಾಯಣ ಅವರ ಪುತ್ರಿ ಆಕಾಂಕ್ಷಾ ಅವರು 21.94 ಲಕ್ಷ ರು. ಹಾಗೂ ಪುತ್ರ ಅಮೋಘ್ 1.43 ಲಕ್ಷ ರು. ಮೌಲ್ಯದ ಚರಾಸ್ತಿ ಹೊಂದಿದ್ದಾರೆ.
ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.
