ಪ್ರತಿಭಟನೆಗೆ ಲಕ್ಷಾಂತರ ರೂಪಾಯಿ ಸುರಿದ ರಸ್ಲರ್ಸ್; ಹಾಸಿಗೆ, ಮೈಕ್, ಸ್ಪೀಕರ್ ಖರೀದಿ!
WIF ಅಧ್ಯಕ್ಷ ಬ್ರಿಜ್ ಭೂಷಣ್ ವಿರುದ್ಧ ಕುಸ್ತಿಪಟುಗಳು ನಡೆಸುತ್ತಿರುವ ಪ್ರತಿಭಟನೆಗೆ ಲಕ್ಷಾಂತರ ರೂಪಾಯಿ ಖರ್ಚು ಮಾಡಲಾಗಿದೆ. ಹಾಸಿಗೆ, ಮೈಕ್, ಸ್ಪೀಕರ್ ಸೇರಿದಂತೆ ಹಲವು ವಸ್ತು ಖರೀದಿಸಿದ್ದಾರೆ. ಆಹಾರ, ನೀರಿಗೂ ಹೆಚ್ಚಿನ ವೆಚ್ಚ ಮಾಡಲಾಗಿದೆ. ಇದೀಗ 5 ದಿನದಲ್ಲಿ 5 ಲಕ್ಷಕ್ಕೂ ಹೆಚ್ಚಿನ ಹಣ ಖರ್ಚು ಮಾಡಲಾಗಿದೆ.
ನವದೆಹಲಿ(ಏ.29): ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆಗೆ ಕುಸ್ತಿಪಟುಗಳಿಂದ ಲಕ್ಷಾಂತರ ರು. ಖರ್ಚಾಗುತ್ತಿದ್ದು, ಅದನ್ನು ಅವರೇ ಭರಿಸುತ್ತಿದ್ದಾರೆ. ಈಗಾಗಲೇ ಹಾಸಿಗೆ, ಬೆಡ್‌ಶೀಟ್‌ಗಳು, ಫ್ಯಾನ್, ಸ್ಪೀಕರ್, ಮೈಕ್, ಮಿನಿ ಜನರೇಟರ್, ನೀರು, ಆಹಾರಕ್ಕೆ 5 ದಿನಗಳಲ್ಲಿ 5 ಲಕ್ಷಕ್ಕೂ ಹೆಚ್ಚಿನ ವೆಚ್ಚವಾಗಿದೆ.
‘ಆರಂಭದಲ್ಲಿ ನಾವು ಹಾಸಿಗೆ, ಬೆಡ್‌ಶೀಟ್, ಧ್ವನಿವರ್ಧಕ, ಮೈಕ್‌ಗಳನ್ನು ಬಾಡಿಗೆಗೆ ಪಡೆಯುತ್ತಿದ್ದೆವು. ಒಂದು ದಿನಕ್ಕೆ 27000 ರು. ಬಾಡಿಗೆ ಪಾವತಿಸುತ್ತಿದ್ದೆವು. ಬರೀ ಹಾಸಿಗೆ, ಬೆಡ್‌ಶೀಟ್‌ಗಳಿಗೇ ದಿನಕ್ಕೆ 12000 ರು. ಬಾಡಿಗೆ ಆಗುತ್ತಿತ್ತು. ಈಗ 50000 ರು. ನೀಡಿ 80 ಹಾಸಿಗೆ ಖರೀದಿಸಿದ್ದೇವೆ. ಸ್ಪೀಕರ್, ಮೈಕ್‌ಗಳನ್ನೂ ಖರೀದಿಸಿದ್ದೇವೆ. ಮಾರುಕಟ್ಟೆಯಲ್ಲಿ ವರ್ತಕರು ನಮ್ಮ ಹೋರಾಟಕ್ಕೆ ಬೆಂಬಲ ಸೂಚಿಸಿ ಯಾವುದೇ ಲಾಭ ಇಟ್ಟುಕೊಳ್ಳದೆ ಮೈಕ್, ಸ್ಪೀಕರ್‌ಗಳನ್ನು ಕೊಟ್ಟಿದ್ದಾರೆ. ಫ್ಯಾನ್, ಜನರೇಟರ್ ಇನ್ನೂ ಬಾಡಿಗೆಗೆ ಪಡೆಯುತ್ತಿದ್ದು, ದಿನಕ್ಕೆ 10000 ರು. ಖರ್ಚಾಗುತ್ತಿದೆ ಎಂದು ವಿನೇಶ್ ಫೋಗಾಟ್‌ರ ಪತಿ, ಕುಸ್ತಿಪಟು ಸೋಮ್‌ವೀರ್ ರಾಠಿ ಹೇಳಿದ್ದಾರೆ.
ಬ್ರಿಜ್ ಭೂಷಣ್ ಬಂಧನದ ವರೆಗೆ ಪ್ರತಿಭಟನೆ, FIR ಪ್ರತಿ ತೋರಿಸುವಂತೆ ಪಟ್ಟು!
‘ಪ್ರತಿಭಟನೆಗೆ ಬರುವಾಗ 2 ಲಕ್ಷ ರು. ತಂದಿದ್ದೆವು. ಆದರೆ ಈಗಾಗಲೇ 5 ದಿನದಲ್ಲಿ 5-6 ಲಕ್ಷ ರು. ಖರ್ಚಾಗಿದೆ. ಕುಸ್ತಿಪಟುಗಳೇ ಹಣ ಹೊಂದಿಸುತ್ತಿದ್ದು, ಬೇರಾರಯರಿಂದಲೂ ಸಹಾಯ ಪಡೆಯುತ್ತಿಲ್ಲ. ಜೊತೆಗೆ ಹರಾರಯಣದ ಹಲವು ಅಖಾಡಗಳು ಯುವ ಕುಸ್ತಿಪಟುಗಳನ್ನು ನಮ್ಮೊಂದಿಗೆ ಪ್ರತಿಭಟಿಸಲು ಕಳುಹಿಸುತ್ತಿವೆ. ಆದರೆ ನಾವು ಹೆಚ್ಚು ಜನ ಬರಬೇಡಿ ಎಂದು ಮನವಿ ಮಾಡುತ್ತಿದ್ದೇವೆ’ ಎಂದು ಸೋಮ್‌ವೀರ್ ಹೇಳಿದ್ದಾರೆ.
ಬ್ರಿಜ್‌ಭೂಷಣ್ ಪ್ರಕರಣ ಕುರಿತು ತನಿಖೆಗೆ ನೇಮಿಸಿದ ಮೇರಿ ಕೋಮ್ ನೇತೃತ್ವದ ಸಮಿತಿಯು ಕ್ರೀಡಾ ಸಚಿವಾಲಯಕ್ಕೆ ನೀಡಿದ್ದ ವರದಿ ಕುರಿತು ಅನುಮಾನ ವ್ಯಕ್ತಪಡಿಸಿ ಕುಸ್ತಿಪಟುಗಳು ಮತ್ತೆ ಪ್ರತಿಭಟನೆ ಆರಂಭಿಸಿದ್ದಾರೆ. ಜನವರಿ ಅಂತ್ಯದಲ್ಲೇ ತನಿಖೆ ಆರಂಭಿಸಿದ್ದ ಸಮಿತಿಯು ಇತ್ತೀಚೆಗಷ್ಟೇ ವರದಿ ಸಲ್ಲಿಸಿತ್ತು. ಆದರೆ ಭೂಷಣ್ರಿಂದ ಕಿರುಕುಳವಾದ ಬಗ್ಗೆ ವರದಿಯಲ್ಲಿ ಯಾವುದೇ ಉಲ್ಲೇಖವಿಲ್ಲ ಮತ್ತು ಅವರಿಗೆ ಕ್ಲೀನ್ಚಿಟ್ ಸಿಗಲಿದೆ ಎಂದು ವರದಿಯಾಗಿತ್ತು. ಹೀಗಾಗಿ ಶುಕ್ರವಾರ ಕುನಾಟ್ನಲ್ಲಿರುವ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ ಕುಸ್ತಿಪಟುಗಳು, ಭಾನುವಾರ ಜಂತರ್ಮಂತರ್ಗೆ ಆಗಮಿಸಿ ಧರಣಿ ಕುಳಿತಿದ್ದಾರೆ. ‘ಅಪ್ರಾಪ್ತ ಕುಸ್ತಿಪಟು ಸೇರಿದಂತೆ 7 ಮಂದಿ ಸೇರಿ ಪೊಲೀಸರಿಗೆ ದೂರು ಸಲ್ಲಿಸಿದ್ದೇವೆ. ಆದರೆ ಪ್ರಕರಣವನ್ನೂ ಯಾರೂ ಗಂಭೀರವಾಗಿ ಪರಿಗಣಿಸುತ್ತಿಲ್ಲ. ಹೀಗಾಗಿ ಮತ್ತೆ ಧರಣಿ ಶುರುಮಾಡಿದ್ದೇವೆ. ನ್ಯಾಯ ಸಿಗುವವರೆಗೂ ಇಲ್ಲಿಂದ ಕದಲುವುದಿಲ್ಲ’ ಎಂದು ಕುಸ್ತಿಪಟು ಸಾಕ್ಷಿ ಮಲಿಕ್ ಎಚ್ಚರಿಸಿದ್ದಾರೆ.
Wrestlers Protest ಕುಸ್ತಿಪಟುಗಳ ನಡೆಯಿಂದ ದೇಶದ ಘನತೆಗೆ ಧಕ್ಕೆ: PT ಉಷಾ
ಲೈಂಗಿಕ ಕಿರುಕುಳ ಆರೋಪ ಹೊತ್ತಿರುವ ಭಾರತೀಯ ಕುಸ್ತಿ ಫೆಡರೇಶನ್ ಅಧ್ಯಕ್ಷ ಬ್ರಿಜ್‌ಭೂಷಣ್ ಸಿಂಗ್‌ರನ್ನು ಬಂಧಿಸುವಂತೆ ಆಗ್ರಹಿಸಿ ಪ್ರತಿಭಟನೆ ಪುನಾರಂಭಿಸಿರುವ ಭಾರತದ ತಾರಾ ಕುಸ್ತಿಪಟುಗಳು, ‘ನಮ್ಮ ಮನ್ ಕೀ ಬಾತ್ ಅನ್ನು ಏಕೆ ಆಲಿಸುತ್ತಿಲ್ಲ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಪ್ರಶ್ನಿಸಿದ್ದಾರೆ. ರಿಯೋ ಒಲಿಂಪಿಕ್ಸ್ ಪದಕ ವಿಜೇತೆ ಸಾಕ್ಷಿ ಮಲಿಕ್ ಮಾಧ್ಯಮಗಳ ಜೊತೆ ಮಾತನಾಡುತ್ತಾ, ‘ಪ್ರಧಾನಿ ಮೋದಿ ಅವರು ಹೆಣ್ಣು ಮಕ್ಕಳನ್ನು ರಕ್ಷಿಸಿ, ವಿದ್ಯೆ ಕಲಿಸಿ ಎನ್ನುತ್ತಾರೆ. ಎಲ್ಲರ ಮನದ ಮಾತುಗಳನ್ನು ಕೇಳುತ್ತಾರೆ. ಅದೇ ರೀತಿ ನಮ್ಮ ಮನದಲ್ಲಿರುವ ನೋವನ್ನು ಆಲಿಸಲು ಆಗುವುದಿಲ್ಲವೇ’ ಎಂದು ಪ್ರಶ್ನಿಸಿದರು.