ಬ್ರಿಜ್‌ಭೂಷಣ್‌ ಸಿಂಗ್‌ರ ವಿರುದ್ಧ ಲೈಂಗಿಕ ಕಿರುಕುಳ, ಬೆದರಿಕೆ ಆರೋಪಪಟ್ಟುಬಿಡದೇ ಪ್ರತಿಭಟನೆ ನಡೆಸುತ್ತಿರುವ ಕುಸ್ತಿಪಟುಗಳುಇಂತಹ ಪ್ರತಿಭಟನೆಗಳಿಂದ ದೇಶದ ಘನತೆಗೆ ಧಕ್ಕೆಯಾಗಲಿದೆ ಎಂದ ಪಿಟಿ ಉಷಾ

ನವದೆಹಲಿ(ಏ.28): ಭಾರತೀಯ ಕುಸ್ತಿ ಫೆಡರೇಶನ್‌ ಅಧ್ಯಕ್ಷ ಬ್ರಿಜ್‌ಭೂಷಣ್‌ ಸಿಂಗ್‌ರ ವಿರುದ್ಧ ಲೈಂಗಿಕ ಕಿರುಕುಳ, ಬೆದರಿಕೆ ಆರೋಪಗಳನ್ನು ಹೊರಿಸಿ, ಅವರ ಬಂಧನಕ್ಕೆ ಆಗ್ರಹಿಸಿ ಪತ್ರಿಭಟನೆ ಮುಂದುವರಿಸಿರುವ ಕುಸ್ತಿಪಟುಗಳ ನಡೆಯನ್ನು ಭಾರತೀಯ ಒಲಿಂಪಿಕ್ಸ್‌ ಸಂಸ್ಥೆ(ಐಒಎ) ಅಧ್ಯಕ್ಷೆ ಪಿ.ಟಿ. ಉಷಾ ಖಂಡಿಸಿದ್ದಾರೆ. ಕುಸ್ತಿಪಟುಗಳ ಪ್ರತಿಭಟನೆಯಿಂದಾಗಿ ದೇಶದ ಘನತೆಗೆ ಧಕ್ಕೆಯಾಗುತ್ತಿದೆ ಎಂದು ಕಿಡಿಕಾಡಿದ್ದಾರೆ. ‘ಲೈಂಗಿಕ ಕಿರುಕುಳಕ್ಕೆ ಸಂಬಂಧಿಸಿದ ದೂರುಗಳಿಗೆ ನಮ್ಮ ಬಳಿ ಬರಬೇಕಿತ್ತು. ಐಒಎನಲ್ಲಿ ಇದಕ್ಕಾಗಿಯೇ ಸಮಿತಿ ಇದೆ. ಸ್ವಲ್ಪವಾದರೂ ಶಿಸ್ತು ಇರಬೇಕು. ನಮ್ಮ ಬಳಿಗೆ ಬರುವುದನ್ನು ಬಿಟ್ಟು ರಸ್ತೆಗಿಳಿದಿದ್ದಾರೆ. ಇದು ಕ್ರೀಡೆಗೆ ಮಾರಕ. ಇಂತಹ ಪ್ರತಿಭಟನೆಗಳಿಂದ ದೇಶದ ಘನತೆಗೆ ಧಕ್ಕೆಯಾಗಲಿದೆ’ ಎಂದು ಉಷಾ ಸಿಟ್ಟು ಹೊರಹಾಕಿದ್ದಾರೆ.

ಕುಸ್ತಿಪಟುಗಳಿಗೆ ಆಘಾತ

ಉಷಾ ಅವರ ಹೇಳಿಕೆಗೆ ಕುಸ್ತಿಪಟುಗಳಾದ ಭಜರಂಗ್‌ ಪೂನಿಯಾ, ವಿನೇಶ್‌ ಫೋಗಾಟ್‌ ಬೇಸರ ವ್ಯಕ್ತಪಡಿಸಿದ್ದಾರೆ. ‘ಉಷಾ ಅವರಿಂದ ಇಂತಹ ಕಠಿಣ ಪ್ರತಿಕ್ರಿಯೆ ನಿರೀಕ್ಷಿಸಿರಲಿಲ್ಲ. ಅವರು ನಮಗೆ ನೆರವು ನೀಡುತ್ತಾರೆ ಎಂದುಕೊಂಡಿದ್ದೆವು’ ಎಂದು ಭಜರಂಗ್‌ ಹೇಳಿದ್ದಾರೆ.

ತಾತ್ಕಾಲಿಕ ಸಮಿತಿ ರಚನೆ

ಭಾರತೀಯ ಕುಸ್ತಿ ಫೆಡರೇಶನ್‌ನ ದೈನಂದಿನ ಚಟುವಟಿಕೆಗಳನ್ನು ನಿರ್ವಹಿಸಲು 3 ಸದಸ್ಯರ ತಾತ್ಕಾಲಿಕ ಸಮಿತಿಯನ್ನು ಭಾರತೀಯ ಒಲಿಂಪಿಕ್ಸ್‌ ಸಂಸ್ಥೆ(ಐಒಎ) ರಚಿಸಿದೆ. ಈ ಸಮಿತಿಗೆ ನಿವೃತ್ತ ಹೈಕೋರ್ಚ್‌ ನ್ಯಾಯಮೂರ್ತಿ ಒಬ್ಬರನ್ನು ಮುಖ್ಯಸ್ಥರನ್ನಾಗಿ ನೇಮಿಸಲು ನಿರ್ಧರಿಸಿದ್ದು, ಇನ್ನಷ್ಟೇ ಹೆಸರು ಅಂತಿಮಗೊಳ್ಳಬೇಕಿದೆ. ಇನ್ನು ಭಾರತೀಯ ವುಶು ಸಂಸ್ಥೆ ಮುಖ್ಯಸ್ಥ ಭೂಪೇಂದ್ರ ಬಾಜ್ವಾ, ಖ್ಯಾತ ಶೂಟಿಂಗ್‌ ಕೋಚ್‌ ಸುಮಾ ಶಿರೂರು ಸಮಿತಿಯ ಸದಸ್ಯರಾಗಿದ್ದಾರೆ.

14 ಸಭೆ ನಡೆಸಿದ್ದೇವೆ: ಸಚಿವ

ಕುಸ್ತಿಪಟುಗಳ ಸಮಸ್ಯೆ ಬಗೆಹರಿಯಬೇಕು ಎನ್ನುವುದೇ ನಮ್ಮ ಉದ್ದೇಶ. ಅದಕ್ಕಾಗಿ ಎಲ್ಲಾ ಕ್ರಮ ಕೈಗೊಳ್ಳುತ್ತಿದ್ದೇವೆ ಎಂದು ಕೇಂದ್ರ ಕ್ರೀಡಾ ಸಚಿವ ಅನುರಾಗ್‌ ಠಾಕೂರ್‌ ಹೇಳಿದ್ದಾರೆ. ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕುಸ್ತಿಪಟುಗಳ ಜೊತೆ 14 ಸಭೆ ನಡೆಸಿದ್ದೇವೆ. ಅವರ ಒತ್ತಾಯದಂತೆ ತಾತ್ಕಾಲಿಕ ಸಮಿತಿ ರಚಿಸಲಾಗಿದೆ. ನಿಪಕ್ಷಪಾತ ಚುನಾವಣೆ, ದೂರು ಸಮಿತಿಯ ರಚನೆಯೂ ನಡೆಯಲಿದೆ’ ಎಂದರು.

Wrestler Protest: ಕುಸ್ತಿ​ಪ​ಟು​ಗಳ ಹೋರಾ​ಟಕ್ಕೆ ರಾಜ​ಕೀಯ ಬಣ್ಣ!

ಶಕ್ತಿ ಇರುವ ವರೆಗೂ ಹೋರಾಟ: ಭೂಷಣ್‌

ಒಂದೆಡೆ ಕುಸ್ತಿಪಟುಗಳು ತಮ್ಮ ಬಂಧನಕ್ಕೆ ಆಗ್ರಹಿಸುತ್ತಿದ್ದರೆ ಮತ್ತೊಂದೆಡೆ ಭಾರತೀಯ ಕುಸ್ತಿ ಫೆಡರೇಶನ್‌ ಅಧ್ಯಕ್ಷ ಬ್ರಿಜ್‌ಭೂಷಣ್‌ ಸಿಂಗ್‌ ತಾವು ಅಮಾಯಕ ಎಂದು ಪ್ರತಿಪಾದಿಸಿದ್ದಾರೆ. ವಿಡಿಯೋವೊಂದನ್ನು ಹರಿಬಿಟ್ಟಿರುವ ಭೂಷಣ್‌ ತಾವು ಹೋರಾಟ ಮುಂದುವರಿಸುವುದಾಗಿ ಹೇಳಿಕೊಂಡಿದ್ದಾರೆ. ‘ಶಕ್ತಿ ಇರುವ ವರೆಗೂ ಹೋರಾಟ ನಡೆಸುತ್ತೇನೆ. ನಾನು ಶಕ್ತಿ ಕಳೆದುಕೊಂಡಾಗ, ಅಸಹಾಯಕನಾದ ದಿನ ಇನ್ನು ಬದುಕಲು ಇಚ್ಛಿಸುವುದಿಲ್ಲ’ ಎಂದಿದ್ದಾರೆ.

ಬಬಿತಾ ಫೋಗಾಟ್‌ ವಿರುದ್ಧ ಕುಸ್ತಿಪಟುಗಳ ಆಕ್ರೋಶ!

ಅಚ್ಚರಿಯ ಬೆಳವಣಿಗೆಯಲ್ಲಿ ಕುಸ್ತಿಪಟುಗಳ ನಡುವೆಯೇ ಭಿನಾಭಿಪ್ರಾಯ ಶುರುವಾಗಿದೆ. ಈ ವರ್ಷ ಜನವರಿಯಲ್ಲಿ ಬ್ರಿಜ್‌ಭೂಷಣ್‌ ವಿರುದ್ಧ ಪ್ರತಿಭಟನೆ ಆರಂಭಿಸಿದ ಪ್ರಮುಖರ ಪೈಕಿ ಒಬ್ಬರಾದ ಬಬಿತಾ ಫೋಗಾಟ್‌ ಬಗ್ಗೆ ಮತ್ತೊಬ್ಬ ಕುಸ್ತಿಪಟು ಗಂಭೀರ ಆರೋಪ ಮಾಡಿದ್ದಾರೆ. ಬಿಜೆಪಿ ಪಕ್ಷದ ಜೊತೆ ಗುರುತಿಸಿಕೊಂಡಿರುವ ಬಬಿತಾ ಇತ್ತೀಚೆಗೆ ಬ್ರಿಜ್‌ಭೂಷಣ್‌ ವಿರುದ್ಧ ತನಿಖೆ ನಡೆಸುತ್ತಿರುವ ಸಮಿತಿಗೂ ಸೇರ್ಪಡೆಗೊಂಡಿದ್ದರು. ಅವರ ಬಗ್ಗೆ ಅನಾಮಧೇಯ ಕುಸ್ತಿಪಟುವೊಬ್ಬರು ಸಿಟ್ಟು ಹೊರಹಾಕಿದ್ದು, ‘ನಮ್ಮನ್ನು ಪ್ರತಿಭಟನೆಗೆ ಕೂರಿಸಿ ಈಗ ಬಬಿತಾ ತಮ್ಮ ರಾಜಕೀಯ ಲಾಭಕ್ಕಾಗಿ ನಮಗೆಲ್ಲಾ ದ್ರೋಹ ಮಾಡುತ್ತಿದ್ದಾರೆ’ ಎಂದಿದ್ದಾರೆ.