ಬ್ರಿಜ್ ಭೂಷಣ ಬಂಧನ ಸೇರಿದಂತೆ ಕೆಲ ಬೇಡಿಕೆ ಮುಂದಿಟ್ಟು ಪ್ರತಿಭಟನೆ ನಡೆಸುತ್ತಿದ್ದ ಕುಸ್ತಿಪಟುಗಳ ಜೊತೆ ಕ್ರೀಡಾ ಸಚಿವರ ಸಭೆ ಯಶಸ್ವಿಯಾಗಿದೆ. ಜೂನ್ 15ರ ವರೆಗೆ ಪ್ರತಿಭಟನೆ ಕೈಬಿಡಲು ಕುಸ್ತಿಪಟುಗಳು ನಿರ್ಧರಿಸಿದ್ದಾರೆ. ಇತ್ತ ಜೂ.30ರೊಳಗೆ ಕುಸ್ತಿಫೆಡರೇಶನ್ ಚುನಾವಣೆ ನಡೆಸುವುದಾಗಿ ಠಾಕೂರ್ ಘೋಷಿಸಿದ್ದಾರೆ.

ನವದೆಹಲಿ(ಜೂ.07): ಕುಸ್ತಿ ಫೆಡರೇಶನ್ ಅಧ್ಯಕ್ಷ ಬ್ರಿಜ ಭೂಷಣ್ ಬಂಧನಕ್ಕೆ ಆಗ್ರಹಿಸಿ ನಡೆಸುತ್ತಿದ್ದ ಕುಸ್ತಿಪಟುಗಳ ಪ್ರತಿಭಟನೆಗೆ ತಾತ್ಕಾಲಿಕ ಬ್ರೇಕ್ ಬಿದ್ದಿದೆ. ಪ್ರತಿಭಟನಾ ನಿರತ ಕುಸ್ತಿಪಟುಗಳ ಜೊತೆ ಸುದೀರ್ಘ ಮಾತುಕತೆ ನಡೆಸಿದ ಅನುರಾಗ್ ಠಾಕೂರ್ ಕೆಲ ಮಹತ್ವದ ಘೋಷಣೆ ಮಾಡಿದ್ದಾರೆ. ಜೂನ್ 15ರೊಳಗೆ ಬ್ರಿಜ್ ಭೂಷಣ್ ವಿರುದ್ಧದ ತನಿಖೆ ಪೂರ್ಣಗೊಳ್ಳಲಿದೆ ಎಂದು ಅನುರಾಗ್ ಠಾಕೂರ್ ಹೇಳಿದ್ದಾರೆ. ಠಾಕೂರ್ ನೀಡಿದ ಭರವಸೆ ಮೇರೆಗೆ ಕುಸ್ತಿಪಟುಗಳು ಜೂನ್ 15ರ ವರೆಗೆ ಪ್ರತಿಭಟನೆ ರದ್ದು ಮಾಡಲು ನಿರ್ಧರಿಸಿದ್ದಾರೆ. 

ಅನುರಾಗ್ ಠಾಕೂರ್ ಅಹ್ವಾನದ ಮೇರೆಗೆ ಮಾತುಕತೆಗಾಗಿ ತೆರಳಿದ ಕುಸ್ತಿಪಟುಗಳು ಹಲವು ಬೇಡಿಕೆ ಮುಂದಿಟ್ಟಿದ್ದಾರೆ. ಪ್ರಮುಖವಾಗಿ ಅಧ್ಯಕ್ಷ ಬ್ರಿಜ್ ಭೂಷಣ್ ಸಿಂಗ್ ಬಂಧಿಸುವರೆಗೆ ಪ್ರತಿಭಟನೆಯಿಂದ ಹಿಂದೆ ಸರಿಯುವುದಿಲ್ಲ ಎಂಬ ಅಚಲ ನಿರ್ಧಾರವನ್ನು ಕುಸ್ತಿಪಟಗಳು ವ್ಯಕ್ತಪಡಿಸಿದ್ದಾರೆ. ಜೂನ್ 15ರೊಳಗೆ ಬ್ರಿಜ್ ಭೂಷಣ್ ವಿರುದ್ಧ ನಡೆಯುತ್ತಿರುವ ತನಿಖೆ ಪೂರ್ಣಗೊಳ್ಳಲಿದೆ. ಜೂನ್ 15ಕ್ಕೆ ಚಾರ್ಜ್‌ಶೀಟ್ ಸಲ್ಲಿಕೆಯಾಗಲಿದೆ. ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳುವುದಾಗಿ ಅನುರಾಗ್ ಠಾಕೂರ್ ಭರವಸೆ ನೀಡಿದ್ದಾರೆ.

ಬ್ರಿಜ್‌ಭೂಷಣ್‌ ವಿರುದ್ಧ ರೆಸ್ಲರ್ಸ್‌ FIR: ಬ್ರೀತ್‌ ಚೆಕ್‌ ನೆಪದಲ್ಲಿ ಟೀಶರ್ಟ್‌ ತೆಗೆಸಿದ್ದರು, ವೈದ್ಯಕೀಯ ಭತ್ಯೆಗಾಗಿ ಸೆಕ್ಸ್‌!

ಪ್ರತಿಭಟನಾ ನಿರತ ಕುಸ್ತಿಪಟುಗಳ ಮೇಲಿನ ಎಫ್‌ಐಆರ್ ವಾಪಸ್ ಪಡೆಯಲು ಕುಸ್ತಿಪಟುಗಳು ಬೇಡಿಕೆ ಮುಂದಿಟ್ಟಿದ್ದಾರೆ. ಇದಕ್ಕೆ ಕ್ರೀಡಾ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಮಹಿಳಾ ಕುಸ್ತಿಪಟುಗಳ ಸುರಕ್ಷತೆ ಕುರಿತು ಭರವಸೆ ನೀಡಲಾಗಿದೆ. ಅನುರಾಗ್ ಠಾಕೂರ್ ಭರವಸೆ ನೀಡಿದ ಬಳಿಕ ಜೂನ್ 15ರ ವರೆಗೆ ಪ್ರತಿಭಟನೆ ತಾತ್ಕಾಲಿಕವಾಗಿ ಕೈಬಿಡಲು ಒಪ್ಪಿದ್ದಾರೆ. ಆದರೆ ಜೂನ್ 15ರ ಬಳಿಕ ಮುಂದಿನ ನಿರ್ಧಾರ ಪ್ರಕಟಿಸುವುದಾಗಿ ಕುಸ್ತಿಪಟುಗಳು ಹೇಳಿದ್ದಾರೆ.

ಕುಸ್ತಿಪಟುಗಳಿಂದ ಲೈಂಗಿಕ ಕಿರುಕುಳ ಆರೋಪ ಎದುರಿಸುತ್ತಿರುವ ಭಾರತೀಯ ಕುಸ್ತಿ ಫೆಡರೇಶನ್‌ ಅಧ್ಯಕ್ಷ ಬ್ರಿಜ್‌ಭೂಷಣ್‌ ಸಿಂಗ್‌ ವಿರುದ್ಧ ತನಿಖೆಯನ್ನು ದೆಹಲಿ ಪೊಲೀಸರು ಚುರುಕುಗೊಳಿಸಲಾಗಿದೆ. ಇದರ ಆಧಾರದಲ್ಲಿ ಅನುರಾಗ್ ಠಾಕೂರ್ ಜೂನ್ 15ರೊಳಗೆ ತನಿಖೆ ಪೂರ್ಣಗೊಳ್ಳುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರನ್ನು ಕುಸ್ತಿಪಟುಗಳು ಶನಿವಾರ ಭೇಟಿ ಮಾಡಿದ್ದರು. ಈ ಚರ್ಚೆ ಬಳಿಕ ಬ್ರಿಜ್ ಭೂಷಣ ಅವರ ದೆಹಲಿ, ಲಖನೌ ಹಾಗೂ ಗೊಂಡ ನಿವಾಸಗಳಿಗೆ ದೆಹಲಿ ಪೊಲೀಸರು ಭೇಟಿ ನೀಡಿ ಅವರ ಆಪ್ತರು, ಮನೆಗೆಲಸದವರನ್ನು ವಿಚಾರಣೆ ನಡೆಸಿದ್ದಾರೆ.

Wrestlers Protest: ಕುಸ್ತಿ​ಪ​ಟು​ಗಳ ಬೆನ್ನಿಗೆ ನಿಂತ ರೈತರು!

ಕೆಲಸದವರ ಬಳಿ ಬ್ರಿಜ್‌ರ ವರ್ತನೆ, ನಡತೆಯ ಬಗ್ಗೆ ಪ್ರಶ್ನೆಗಳನ್ನು ಕೇಳಲಾಗಿದ್ದು, ವಿಚಾರಣೆಗೆ ಒಳಪಟ್ಟವರ ಮಾಹಿತಿ, ವಿಳಾಸವನ್ನು ಪೊಲೀಸರು ಸಂಗ್ರಹಿಸಿದ್ದಾರೆ. ಮುಂದೆ ಮತ್ತೆ ವಿಚಾರಣೆಗೆ ಕರೆದರೆ ಬರಬೇಕಾಗಿ ಸೂಚಿಸಿದ್ದಾರೆ ಎನ್ನಲಾಗಿದೆ. ಇದೇ ವೇಳೆ ಕುಸ್ತಿ ಫೆಡರೇಶನ್‌ಗೆ 3-4 ಅಧಿಕಾರಿಗಳನ್ನೂ ವಿಚಾರಣೆ ನಡೆಸಿ ಹೇಳಿಕೆ ಪಡೆದುಕೊಂಡಿರುವುದಾಗಿ ತಿಳಿದುಬಂದಿದೆ. ಅಧಿಕಾರಿಗಳಿಂದ ಬ್ರಿಜ್‌ರ ಕೆಲಸದ ಶೈಲಿ, ಕುಸ್ತಿ ಚಟುವಟಿಕೆಗಳಿಗೆ ಸಂಬಂಧಿಸಿದ ವಿಚಾರಗಳ ಬಗ್ಗೆ ಮಾಹಿತಿ ಪಡೆದಿರುವುದಾಗಿ ವರದಿಯಾಗಿದೆ.