ಧನಂಜಯ ಎಸ್‌.ಹಕಾರಿ, ಕನ್ನಡಪ್ರಭ

ಬೆಂಗಳೂರು(ಫೆ.19): ಕಂಬಳ ಕ್ರೀಡೆಗೆ ನೂರಾರು ವರ್ಷಗಳ ಇತಿಹಾಸವಿದ್ದರೂ, ಕರಾವಳಿ ಜಿಲ್ಲೆಗಳಿಗೆ ಮಾತ್ರ ಅದು ಸೀಮಿತವಾಗಿದೆ. ಇದೀಗ ಕಂಬಳ ಓಟಗಾರರು ದಾಖಲೆ ಮೇಲೆ ದಾಖಲೆಗಳನ್ನು ಬರೆಯುತ್ತಿದ್ದು, ಕ್ರೀಡೆ ಜಗತ್ಪ್ರಸಿದ್ಧಿ ಪಡೆಯುತ್ತಿದೆ. ಬೆಂಗಳೂರು ಸೇರಿದಂತೆ ರಾಜ್ಯದ ಬೇರೆ ಬೇರೆ ಕಡೆಯಲ್ಲೂ ಕಂಬಳ ಪರಿಚಯಿಸಲು ಇದು ಸೂಕ್ತ ಸಮಯ ಎನ್ನುವುದನ್ನು ಅರಿತಿರುವ ಆಯೋಜಕರು ಅದಕ್ಕಾಗಿ ಸಿದ್ಧತೆ ಆರಂಭಿಸಿದ್ದಾರೆ.

ಕಂಬಳದ ಮಾತ್ರವಲ್ಲ, ಟ್ರ್ಯಾಕ್‌ನಲ್ಲೂ ಓಡಿ ಗೆದ್ದ ಕರಾವಳಿಯ ಸಾಧಕ!

ಬೆಂಗಳೂರಿನ ದೊಡ್ಡ ಆಲದ ಮರದ ಹತ್ತಿರ ಕಂಬಳ ಟ್ರ್ಯಾಕ್‌ ಸಿದ್ಧಗೊಳಿಸಿಲು ಯೋಜನೆ ರೂಪಿಸಲಾಗುತ್ತಿದೆ ಎಂದು ಕಂಬಳ ಅಕಾಡೆಮಿ ಸಂಸ್ಥಾಪಕ ಗುಣಪಾಲ ಸುವರ್ಣ ನ್ಯೂಸ್.ಕಾಂನ ಸೋದರ ಸಂಸ್ಥೆ ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಈ ವರ್ಷ ಜೂನ್‌-ಜುಲೈನಲ್ಲಿ ಮೊದಲ ರೇಸ್‌ ನಡೆಯಲಿದೆ.

2 ಕಂಬಳದ ಟ್ರ್ಯಾಕ್‌ ನಿರ್ಮಾಣ

ದೊಡ್ಡ ಆಲದ ಮರದ ಬಳಿ 6ರಿಂದ 7 ಜಾಗವನ್ನು ಗುರುತಿಸಲಾಗಿದ್ದು, ಅದರಲ್ಲಿ 2 ಎಕರೆಯಲ್ಲಿ ಟ್ರ್ಯಾಕ್‌ಗಳನ್ನು ನಿರ್ಮಾಣ ಮಾಡಲಾಗುತ್ತದೆ. ಎರಡು ಉತ್ಕೃಷ್ಟ ಮಟ್ಟದ ಟ್ರ್ಯಾಕ್‌ಗಳನ್ನು ಸಿದ್ಧಪಡಿಸಲು 25ರಿಂದ 30 ಲಕ್ಷ ರುಪಾಯಿ ಖರ್ಚಾಗಲಿದೆ. ಪ್ರೇಕ್ಷಕರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕಿದೆ. ಬೆಂಗಳೂರಲ್ಲಿ ಕಂಬಳ ರೇಸ್‌ ನಡೆಸಲು 50ರಿಂದ 70 ಲಕ್ಷದ ವರೆಗೂ ಹಣ ಬೇಕು. ಇದಕ್ಕಾಗಿ ಬೆಂಗಳೂರಲ್ಲಿರುವ ದಕ್ಷಿಣ ಕನ್ನಡದ ಹಲವು ಸಂಘಟನೆಗಳು ಸಹಕಾರ ನೀಡಲು ಮುಂದಾಗಿವೆ ಎಂದು ಗುಣಪಾಲ ತಿಳಿಸಿದ್ದಾರೆ. ಇತ್ತೀಚೆಗೆ ಕಂಬಳ ವೀಕ್ಷಣೆಗೆ ದಕ್ಷಿಣ ಕನ್ನಡಕ್ಕೆ ಭೇಟಿ ನೀಡಿದ್ದ ಡಿಸಿಎಂ ಅಶ್ವತ್ಥ್ ನಾರಾಯಣ ಹಾಗೂ ಬಿ.ವೈ.ವಿಜಯೇಂದ್ರ ಬೆಂಗಳೂರಲ್ಲಿ ಕಂಬಳ ಆಯೋಜಿಸುವಂತೆ ಆಹ್ವಾನಿಸಿದ್ದರು ಎಂದು ಗುಣಪಾಲ ಹೇಳಿದ್ದಾರೆ.

ಕಂಬಳವೀರನಿಗೆ ಮೆಚ್ಚುಗೆ ಮಹಾಪೂರ: ಬಾಹುಬಲಿ 2ರಲ್ಲೂ ನಟಿಸಿದ್ದ ಶ್ರೀನಿವಾಸ!

ಆಯೋಜನೆಗೆ ಕಾನೂನು ಸಮಸ್ಯೆ!

ಕಂಬಳವನ್ನು ಎಲ್ಲೆಂದರಲ್ಲಿ ಆಯೋಜಿಸಲು ಸಾಧ್ಯವಿಲ್ಲ. ಕಂಬಳ ಕ್ರೀಡೆಯನ್ನು ನಿಷೇಧಿಸಲು ಪ್ರಾಣಿ ದಯಾ ಸಂಘ (ಪೇಟಾ) ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದೆ. ಇದರ ನಡುವೆಯೇ ಕಂಬಳ ಕ್ರೀಡೆ ಸೀಮಿತ ಪ್ರದೇಶಗಳಲ್ಲಿ ಮಾತ್ರ ನಡೆಯುತ್ತಿದೆ. ಸುಪ್ರೀಂ ಕೋರ್ಟ್‌ ಶಿವಮೊಗ್ಗ, ದಕ್ಷಿಣ ಕನ್ನಡ, ಉಡುಪಿ, ಕಾರ್ಕಳ, ಕಾಸರಗೋಡು ಹಾಗೂ ಮೂಡಿಗೆರೆಯಲ್ಲಿ ಮಾತ್ರ ಕಂಬಳ ನಡೆಸಲು ಅವಕಾಶ ನೀಡಿದೆ ಎಂದು ಆಯೋಜಕರಾದ ರಕ್ಶಮಿತ್‌ ಶೆಟ್ಟಿ ತಿಳಿಸಿದ್ದಾರೆ.

'ದಕ್ಷಿಣ ಕನ್ನಡದ ಕ್ರೀಡೆ ಕಂಬಳವನ್ನು ರಾಜ್ಯದೆಲ್ಲೆಡೆ ನಡೆಸಬೇಕು ಎನ್ನುವ ಆಸೆ ಇದೆ. ಇನ್ನೆರಡು ತಿಂಗಳಲ್ಲಿ ಬೆಂಗಳೂರಲ್ಲಿ ನಡೆಸಲು ನಿರ್ಧರಿಸಲಾಗಿದ್ದು, ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಸರ್ಕಾರದ ಅನುಮತಿಗೆ ಕಾಯುತ್ತಿದ್ದೇವೆ'.

- ಉಪೇಂದ್ರ ಶೆಟ್ಟಿ, ಬೆಂಗಳೂರು ಬಂಟರ ಸಂಘದ ಅಧ್ಯಕ್ಷ

#NewsIn100Seconds ಈ ಕ್ಷಣದ ಪ್ರಮುಖ ಹೆಡ್‌ಲೈನ್ಸ್
"