ಮಹಿಳಾ ವಿಶ್ವ ಬಾಕ್ಸಿಂಗ್; ಮಂಜುಗೆ ವಿಶ್ವ ಬಾಕ್ಸಿಂಗ್ ಬೆಳ್ಳಿ!
ಮಹಿಳಾ ವಿಶ್ವಬಾಕ್ಸಿಂಗ್ ಕೂಟದಲ್ಲಿ ಭಾರತದ ಮೇರಿ ಕೋಮ್ ಸೋಲಿನ ಆಘಾತ ಭಾರತೀಯರಿಗೆ ತೀವ್ರ ನಿರಾಸೆ ತಂದಿತ್ತು. ಆದರೆ ಮಂಜು ರಾಣಿ ಫೈನಲ್ ಪ್ರವೇಶಿಸೋ ಮೂಲಕ ಪದಕ ನಿರೀಕ್ಷೆ ಗರಿಗೆದರಿತ್ತು. ಫೈನಲ್ ಪಂದ್ಯದಲ್ಲಿ ಉತ್ತಮ ಹೋರಾಟ ನೀಡಿದ ಮಂಜು, ಪದಾರ್ಪಣಾ ಪಂದ್ಯದಲ್ಲೇ ಪದಕ ಗೆದ್ದಿದ್ದಾರೆ.
ಉಲನ್ ಉಡೆ (ರಷ್ಯಾ): ಮಹಿಳಾ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಮಂಜು ರಾಣಿ (48 ಕೆ.ಜಿ) ಬೆಳ್ಳಿ ಪದಕ ಗೆದ್ದಿದ್ದಾರೆ. ಮಂಜುಗೆ ಇದು ಪಾದಾರ್ಪಣೆ ಆವೃತ್ತಿಯಾಗಿದೆ. ಭಾನುವಾರ ಇಲ್ಲಿ ನಡೆದ ಫೈನಲ್ನಲ್ಲಿ ಮಂಜು ರಾಣಿ, ಸ್ಥಳೀಯ ತಾರೆ ಎಕಟರಿನಾ ಪಾಲ್ಟ್ಸೇವ ವಿರುದ್ಧ 1-4ರಲ್ಲಿ ಸೋಲೊಪ್ಪಿದರು. ಫೈನಲ್ನಲ್ಲಿ ರಷ್ಯಾ ಬಾಕ್ಸರ್ ಮೇಲುಗೈ ಸಾಧಿಸಿದ್ದರೂ, ಮಂಜು ಕೆಲವೊಂದು ನೇರ ಪಂಚ್ ಹಾಗೂ ಅಪ್ಪರ್ಹ್ಯಾಂಡ್ ಹೊಡೆದು ಗಮನಸೆಳೆದರು.
ಇದನ್ನೂ ಓದಿ: ಮಹಿಳಾ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್: ಕಂಚು ಗೆದ್ದ ಮೇರಿ ಕೋಮ್
18 ವರ್ಷಗಳ ಬಳಿಕ ಚೊಚ್ಚಲ ವಿಶ್ವ ಬಾಕ್ಸಿಂಗ್ ಫೈನಲ್ಗೇರಿದ ಮೊದಲ ಭಾರತೀಯ ಮಹಿಳಾ ಬಾಕ್ಸರ್ ಮಂಜು, ರಜತಕ್ಕೆ ತೃಪ್ತಿಪಟ್ಟರು. 2001ರಲ್ಲಿ ಈ ಸಾಧನೆಗೈದ ಮೇರಿ ಕೋಮ್ ಸಹ ಫೈನಲ್ನಲ್ಲಿ ಸೋತು ಬೆಳ್ಳಿ ಪದಕ ಗೆದ್ದಿದ್ದರು. ಈ ಆವೃತ್ತಿಯಲ್ಲಿ ಭಾರತದ ಪಾಲಿಗೆ ಮಂಜು ರಾಣಿ ಅತ್ಯುತ್ತಮ ಪ್ರದರ್ಶನ ನೀಡಿದರು. ಶುಕ್ರವಾರ ನಡೆದಿದ್ದ ಸೆಮಿಫೈನಲ್‌ನಲ್ಲಿ ಥಾಯ್ಲೆಂಡ್‌ನ ಚುಥಾಮತ್ ರಕ್ಸತ್ರನ್ನು ಮಂಜು ಸೋಲಿಸಿದ್ದರು. ಕ್ವಾರ್ಟರ್ ಫೈನಲ್ನಲ್ಲಿ ಉತ್ತರ ಕೊರಿಯಾದ ಕಿಮ್ ಹ್ಯಾಂಗ್ ಮಿ ಮಣಿಸಿದ್ದರು. ಹರ್ಯಾಣ ಬಾಕ್ಸರ್ ಮಂಜು 2019ನೇ ಸಾಲಿನಲ್ಲಿ ಪಂಜಾಬ್ ಪ್ರತಿನಿಧಿಸಿ ರಾಷ್ಟ್ರೀಯ ಚಾಂಪಿಯನ್ ಆಗಿದ್ದರು. ಯುರೋಪ್ನ ಪುರಾತನ ಹಾಗೂ ಅತ್ಯಂತ ಪೈಪೋಟಿ ಏರ್ಪಡುವ ಬಾಕ್ಸಿಂಗ್ ಸ್ಪರ್ಧೆ ಸ್ಟ್ರಾಂಡ್ಜ ಸ್ಮರಣಾರ್ಥ ಟೂರ್ನಿಯಲ್ಲಿ ಬೆಳ್ಳಿ ಗೆದ್ದಿದ್ದರು.
ಇದನ್ನೂ ಓದಿ: ದುಬೈನಲ್ಲಿ ಬಾಕ್ಸರ್ ವಿಜೇಂದರ್ ಕಾದಾಟಕ್ಕೆ ಡೇಟ್ ಫಿಕ್ಸ್..!
6 ಬಾರಿಯ ವಿಶ್ವ ಚಾಂಪಿಯನ್ ಮೇರಿ ಕೋಮ್ (51 ಕೆ.ಜಿ), ಜಮುನಾ ಬೊರೊ (54 ಕೆ.ಜಿ) ಹಾಗೂ ಲೊವ್ಲಿನಾ ಬೊರ್ಗೈನ್ (69 ಕೆ.ಜಿ) ಸೆಮಿಫೈನಲ್‌ನಲ್ಲಿ ಸೋತು ಕಂಚಿಗೆ ತೃಪ್ತಿಪಟ್ಟಿದ್ದರು.