ವಿಶ್ವ ಅಂಡರ್-20 ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್: ಬೆಳ್ಳಿ ಪದಕ ಗೆದ್ದ ಶೈಲಿ ಸಿಂಗ್
* ವಿಶ್ವ ಅಂಡರ್-20 ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ ಗೆದ್ದ ಶೈಲಿ ಸಿಂಗ್
* ಕೀನ್ಯಾದ ನೈರೋಬಿಯಲ್ಲಿ ನಡೆಯುತ್ತಿರುವ ಕಿರಿಯರ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್
* ಲಾಂಗ್ ಜಂಪ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಜಯಿಸಿದ ಶೈಲಿ ಸಿಂಗ್
ನೈರೋಬಿ(ಆ.23): 17 ವರ್ಷದ ಯುವ ಲಾಂಗ್ ಜಂಪ್ ಅಥ್ಲೀಟ್ ಶೈಲಿ ಸಿಂಗ್ ವಿಶ್ವ ಅಂಡರ್-20 ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ 6.59 ಮೀಟರ್ ದೂರ ಜಿಗಿಯುವ ಮೂಲಕ ಕೇವಲ ಒಂದು ಸೆಂಟಿ ಮೀಟರ್ ಅಂತರದಲ್ಲಿ ಚಿನ್ನ ಗೆಲ್ಲುವ ಅವಕಾಶ ಕೈಚೆಲ್ಲಿದ್ದಾರೆ. ಇದರೊಂದಿಗೆ ಝಾನ್ಸಿ ಮೂಲದ ಅಥ್ಲೀಟ್ ಬೆಳ್ಳಿ ಪದಕಕ್ಕೆ ಮುತ್ತಿಕ್ಕಿದ್ದಾರೆ.
ಬೆಂಗಳೂರಿನ ರಾಬರ್ಟ್ ಬಾಬಿ ಜಾರ್ಜ್ ಹಾಗೂ ಅಂಜು ಬಾಬಿ ಜಾರ್ಜ್ ಅಕಾಡಮಿಯಲ್ಲಿ ಪಳಗಿದ ಶೈಲಿ ಸಿಂಗ್ ಭಾನುವಾರ(ಆ.22) ನೈರೋಬಿಯಲ್ಲಿ ನಡೆದ ವಿಶ್ವ ಅಂಡರ್-20 ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಫೈನಲ್ ಪ್ರವೇಶಿ ಪದಕ ಗೆಲ್ಲುವ ಭರವಸೆ ಮೂಡಿಸಿದ್ದರು. ಸ್ವೀಡನ್‌ನ ಯುರೋಪಿಯನ್ ಜೂನಿಯರ್ ಚಾಂಪಿಯನ್ ಮಜಾ ಆಸ್ಕಗ್ ಚಿನ್ನದ ಪದಕಕ್ಕೆ ಮುತ್ತಿಕ್ಕಿದರು. ಇನ್ನು ಉಕ್ರೇನ್‌ನ ಮಾರಿಯಾ ಹೊರಿಲೊವಾ 6.50 ಮೀಟರ್ ದೂರ ಜಿಗಿಯುವ ಕಂಚಿನ ಪದಕಕ್ಕೆ ಕೊರಳೊಡ್ಡಿದರು.
2003ರಲ್ಲಿ ಸೀನಿಯರ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಅಂಜು ಬಾಬಿ ಜಾರ್ಜ್ ಲಾಂಗ್ ಜಂಪ್ ಸ್ಪರ್ಧೆಯಲ್ಲಿ ಕಂಚಿನ ಪದಕ ಜಯಿಸಿದ್ದರು. ಇದರೊಂದಿಗೆ ಅಂತಾರಾಷ್ಟ್ರೀಯ ಸ್ಪರ್ಧೆಯಲ್ಲಿ ಲಾಂಗ್ ಜಂಪ್ ವಿಭಾಗದಲ್ಲಿ ದೇಶಕ್ಕೆ ಮೊದಲ ಪದಕ ಜಯಿಸಿದ್ದರು.
ಭಾರತಕ್ಕೆ ಒಲಿದ 3 ಪದಕ: ನೈರೋಬಿಯಲ್ಲಿ ನಡೆಯುತ್ತಿರುವ ಅಂಡರ್-20 ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಭಾರತ ಮೂರನೇ ಪದಕ ಜಯಿಸಿದ ಸಾಧನೆ ಮಾಡಿದೆ. ಮೊದಲು ಭಾರತ ಮಿಶ್ರ ರಿಲೇ ತಂಡ ಕಂಚಿನ ಪದಕ ಜಯಿಸಿ ಖಾತೆ ತೆರೆದಿತ್ತು. ಇದಾದ ಬಳಿಕ ಅಮಿತ್ ಖತ್ರಿ 10,000 ಮೀಟರ್ ನಡಿಗೆ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಜಯಿಸಿದ್ದರು. ಇದೀಗ ಶೈಲಿ ಸಿಂಗ್ ಭಾರತಕ್ಕೆ ಮೂರನೇ ಪದಕ ಜಯಿಸಿದ್ದಾರೆ.