ಜೂನಿಯರ್ ಅಥ್ಲೆಟಿಕ್ಸ್: ಮಿಶ್ರ ರಿಲೇಯಲ್ಲಿ ಕಂಚು ಗೆದ್ದ ಭಾರತ
* ಕಿರಿಯರ್ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಪದಕ ಗೆದ್ದ ಭಾರತ ಮಿಶ್ರ ರಿಲೇ ತಂಡ
* ಕರ್ನಾಟಕದ ಪ್ರಿಯಾ ಎಚ್ ಮೋಹನ್ ಅವರನ್ನೊಳಗೊಂಡ ತಂಡಕ್ಕೆ ಒಲಿದ ಪದಕ
* ಫೈನಲ್‌ನಲ್ಲಿ ಪ್ರಿಯಾ ಮೋಹನ್, ಸಮ್ಮಿ, ಭರತ್ ಮತ್ತು ಕಪಿಲ್ ಅವರನ್ನೊಳಗೊಂಡ ತಂಡಕ್ಕೆ ಒಲಿದ ಕಂಚು
ನೈರೋಬಿ(ಆ.19): ಕರ್ನಾಟಕದ ಪ್ರಿಯಾ ಎಚ್ ಮೋಹನ್ ಅವರನ್ನೊಳಗೊಂಡ ಭಾರತ ತಂಡವು 20 ವರ್ಷದೊಳಗಿನವರ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನ 4*400 ಮಿಶ್ರ ರೀಲೆಯಲ್ಲಿ ಕಂಚಿನ ಪದಕ ಕೊರಳಿಗೇರಿಸಿಕೊಂಡಿದೆ.
ಬುಧವಾರ(ಆ.19) ನಡೆದ ಫೈನಲ್‌ನಲ್ಲಿ ಪ್ರಿಯಾ ಮೋಹನ್, ಸಮ್ಮಿ, ಭರತ್ ಮತ್ತು ಕಪಿಲ್ ಅವರನ್ನೊಳಗೊಂಡ ತಂಡವು 3 ನಿಮಿಷ 20.60 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಕಂಚು ಗೆದ್ದಿತು. ನೈಜೀರಿಯಾ(3 ನಿ.19.70 ಸೆ.) ಚಿನ್ನ ಗೆದ್ದರೆ, ಪೋಲಾಂಡ್(3 ನಿ. 19.80 ಸೆ.) ಬೆಳ್ಳಿಗೆ ತೃಪ್ತಿಗೊಂಡಿತು.
ಟೋಕಿಯೋ 2020: ಕ್ರೀಡಾ ಸಾಧಕರ ಜತೆ ಮೋದಿ ಮಾತುಕತೆಯಲ್ಲಿ ಸಿಕ್ಕ 8 ಅಂಶಗಳಿವು..!
ಅರ್ಹತಾ ಸುತ್ತಿನಲ್ಲಿ ಮಿಂಚಿಂಗ್:
ಇದಕ್ಕೂ ಮುನ್ನ ನಡೆದ ಅರ್ಹತಾ ಸುತ್ತಿನಲ್ಲಿ ಭರ್ಜರಿ ಪ್ರದರ್ಶನ ನೀಡಿತ್ತು. ತಾನು ಸ್ಪರ್ಧಿಸಿದ ಹೀಟ್ಸ್‌ನಲ್ಲಿ ಕೂಟ ದಾಖಲೆಯ 3 ನಿಮಿಷ 23.36 ಸೆಕೆಂಡ್‌ನಲ್ಲಿ ಗುರಿ ತಲುಪಿತ್ತು. ಆದರೆ, 2ನೇ ಹೀಟ್ಸ್‌ನಲ್ಲಿ ಸ್ಪರ್ಧಿಸಿದ್ದ ನೈಜಿರಿಯಾ ತಂಡ 3 ನಿಮಿಷ 21.66 ಸೆಕೆಂಡ್‌ನಲ್ಲಿ ಗುರಿ ತಲುಪುವುದರೊಂದಿಗೆ ಭಾರತದ ದಾಖಲೆ ಮುರಿದು ಮೊದಲ ಸ್ಥಾನ ಪಡೆದು ಫೈನಲ್‌ಗೇರಿತ್ತು. ಭಾರತ ಒಟ್ಟಾರೆ 2ನೇ ಸ್ಥಾನದೊಂದಿಗೆ ಪದಕ ಸುತ್ತು ಪ್ರವೇಶಿಸಿತ್ತು.
5ನೇ ಪದಕ:
20 ವರ್ಷದೊಳಗಿನವರ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಭಾರತ ಗೆದ್ದ 5ನೇ ಪದಕ ಇದಾಗಿದೆ. ಈ ಮೊದಲು ಸೀಮಾ ಆಂಟಿಲ್(ಡಿಸ್ಕಸ್ ಥ್ರೋ ಕಂಚು, 2002), ನವಜೀತ್ ಕೌರ್ ದಿಲ್ಲೋನ್(ಡಿಸ್ಕಸ್ ಥ್ರೋ-ಕಂಚು, 2014), ಟೋಕಿಯೋ ಒಲಿಂಪಿಕ್ಸ್ ಚಿನ್ನ ಪದಕ ವಿಜೇತ ನೀರಜ್ ಚೋಪ್ರಾ(ಜಾವೆಲಿನ್ ಥ್ರೋ-ಚಿನ್ನ, 2016), ಹಿಮಾ ದಾಸ್(400 ಮೀ. ಓಟ -ಚಿನ್ನ, 2018) ಪದಕ ಗೆದ್ದಿದ್ದರು.