ವಿಂಬಲ್ಡನ್: ಫೆಡರರ್‌ಗೆ ಸೋಲು, ಮುಗಿಯಿತಾ ಟೆನಿಸ್ ದಿಗ್ಗಜನ ಕೆರಿಯರ್?
* ವಿಂಬಲ್ಡನ್ ಗ್ರ್ಯಾನ್‌ಸ್ಲಾಮ್‌ನಲ್ಲಿ ರೋಜರ್ ಫೆಡರರ್‌ಗೆ ಸೋಲಿನ ಶಾಕ್
* ಪ್ರೇಕ್ಷಕರ ಗ್ಯಾಲರಿಯಲ್ಲಿ ಮುಗಿಲುಮುಟ್ಟಿದ ಕರತಾಡನ
* ಸೆಮಿಫೈನಲ್‌ಗೆ ಲಗ್ಗೆಯಿಟ್ಟ ಹಾಲಿ ಚಾಂಪಿಯನ್ ನೊವಾಕ್ ಜೋಕೋವಿಚ್
ಲಂಡನ್(ಜು.08): ಅಗ್ರ ಶ್ರೇಯಾಂಕಿತ ಆಟಗಾರ ನೊವಾಕ್ ಜೋಕೊವಿಚ್ 10ನೇ ಬಾರಿಗೆ ವಿಂಬಲ್ಡನ್ ಟೂರ್ನಿಯ ಸೆಮಿಫೈನಲ್ ಪ್ರವೇಶಿಸಿದರೆ, 8 ಬಾರಿ ವಿಂಬಲ್ಡನ್ ಚಾಂಪಿಯನ್ ರೋಜರ್ ಫೆಡರರ್ ಆಘಾತ ಅನುಭವಿಸಿದರು. ಫೆಡರರ್ ವೃತ್ತಿಬದುಕು ಅಂತ್ಯವಾಯಿತಾ ಎನ್ನುವ ಪ್ರಶ್ನೆ ಕಾಡಲಾರಂಭಿಸಿದೆ.
ಗ್ರ್ಯಾನ್‌ಸ್ಲಾಂಗಳಲ್ಲಿ ನೊವಾಕ್ ಜೋಕೊವಿಚ್ 40ನೇ ಬಾರಿಗೆ ಅಂತಿಮ ನಾಲ್ಕರ ಘಟಕ್ಕೇರಿದ ಸಾಧನೆ ಮಾಡಿದ್ದು, ಹಾಲಿ ಚಾಂಪಿಯನ್ ಮತ್ತೊಮ್ಮೆ ವಿಂಬಲ್ಡನ್ ಟ್ರೋಫಿಗೆ ಮುತ್ತಿಕ್ಕಲು ಮತ್ತಷ್ಟು ಸನಿಹವಾಗಿದ್ದಾರೆ. ಪುರುಷರ ಸಿಂಗಲ್ಸ್‌ನ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ 6-3, 6-4, 6-4 ನೇರ ಸೆಟ್‌ಗಳಿಂದ ಹಂಗೇರಿಯಾದ ಮಾರ್ಟನ್ ಫುಕ್ಸೊವಿಕ್ಸ್‌ರನ್ನು ಮಣಿಸಿದ ಜೋಕೋ ಉಪಾಂತ್ಯಕ್ಕೆ ಲಗ್ಗೆಯಿಟ್ಟರು.
ಪ್ರೀಕ್ವಾರ್ಟರ್‌ನಲ್ಲಿ ಮೆಡ್ವೆಡೆವ್‌ಗೆ ಆಘಾತ ನೀಡಿದ್ದ ಪೋಲೆಂಡ್‌ನ 24 ವರ್ಷದ ಹಬರ್ಟ್ ಹರ್ಕಾಜ್, ಕ್ವಾರ್ಟರ್ ಫೈನಲ್‌ನಲ್ಲಿ ಫೆಡರರ್‌ಗೆ ಶಾಕ್ ಕೊಟ್ಟರು. 6-3, 7-6, 6-0 ನೇರ ಸೆಟ್‌ಗಳಿಂದ ಫೆಡರರ್ ಸೋಲುಂಡರು. 20 ಗ್ರ್ಯಾನ್‌ಸ್ಲಾಮ್ ಒಡೆಯ ರೋಜರ್ ಫೆಡರರ್ ಸೆಂಟರ್ ಕೋರ್ಟ್‌ನಲ್ಲಿ ಸೋಲನುಭವಿಸಿ ಮರಳುವ ಮುನ್ನ ಸ್ಟೇಡಿಯಂನಲ್ಲಿದ್ದ ಪ್ರೇಕ್ಷಕರು ಎದ್ದುನಿಂತು ಚಪ್ಪಾಳೆ ತಟ್ಟುವ ಮೂಲಕ ಸ್ವಿಸ್ ಟೆನಿಸ್ ದಿಗ್ಗಜನಿಗೆ ಗೌರವ ಸೂಚಿಸಿದರು.
ಖ್ಯಾತ ವೀಕ್ಷಕ ವಿವರಣೆಗಾರ ಹರ್ಷಾ ಬೋಗ್ಲೆ ಟ್ವೀಟ್ ಮಾಡಿದ್ದು, ಫೆಡರರ್ ವೃತ್ತಿಬದುಕ ಸಂಧ್ಯಾಕಾಲದಲ್ಲಿದೆಯೇ ಎನ್ನುವ ಪ್ರಶ್ನೆಯನ್ನು ಎತ್ತಿದ್ದಾರೆ. ಹುಲ್ಲಿನಂಕಣದಲ್ಲಿ 0-6 ಸೆಟ್‌ಗಳಲ್ಲಿ ಸೋಲು ಎಂದರೇ? ಎಂದು ಬೋಗ್ಲೆ ಟ್ವೀಟ್ ಮಾಡಿದ್ದಾರೆ.
ಇನ್ನು ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್, ಫೆಡರರ್ ಯಾವತ್ತಿಗೂ ದಿಗ್ಗಜ ಆಟಗಾರ ಎಂದು ಟ್ವೀಟ್ ಮಾಡಿದ್ದಾರೆ.
ಸಾನಿಯಾ-ಬೋಪಣ್ಣಗೆ ಸೋಲು:
ಮಿಶ್ರ ಡಬಲ್ಸ್‌ನ ಪ್ರೀಕ್ವಾರ್ಟರ್ ಫೈನಲ್‌ನಲ್ಲಿ ಭಾರತದ ಸಾನಿಯಾ ಮಿರ್ಜಾ ಹಾಗೂ ರೋಹನ್ ಬೋಪಣ್ಣ ಜೋಡಿ ಸೋಲುಂಡಿತು.