ಡಿಹೈಡ್ರೇಷನ್‌ನಿಂದ ಆಸ್ಪತ್ರೆಗೆ ದಾಖಲಾದ ವಿನೇಶ್ ಪೋಗಟ್, ಐಒಎ ಅಧ್ಯಕ್ಷರ ವರದಿ ಕೇಳಿದ ಪ್ರಧಾನಿ ಮೋದಿ!
ಫೈನಲ್ ಪಂದ್ಯದಿಂದ ಅನರ್ಹಗೊಂಡ ಬೆನ್ನಲ್ಲಿಯೇ ಅಘಾತಕ್ಕೆ ಒಳಗಾದ ವಿನೇಶ್ ಪೋಗಟ್‌ಅನ್ನು ಪ್ಯಾರಿಸ್‌ನಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನೊಂದೆಡೆ ಪ್ರಧಾನಿ ಮೋದಿ ಭಾರತೀಯ ಒಲಿಂಪಿಕ್ ಸಂಸ್ಥೆ ಅಧ್ಯಕ್ಷೆ ಪಿಟಿ ಉಷಾ ಅವರಿಂದ ಪ್ರಕರಣದ ವರದಿ ಕೇಳಿದ್ದಾರೆ.
ಪ್ಯಾರಿಸ್ (ಆ.7); ಭಾರತಕ್ಕೆ ಪ್ಯಾರಿಸ್‌ನಿಂದ ಆಘಾತಕಾರಿ ಸುದ್ದಿ ಬಂದಿದೆ. ಚಿನ್ನದ ಪದಕದ ನಿರೀಕ್ಷೆಯಲ್ಲಿದ್ದ ರೆಸ್ಲರ್ ವಿನೇಶ್ ಪೋಗಟ್ ಫೈನಲ್‌ನಿಂದ ಅನರ್ಹಗೊಂಡಿದ್ದಾರೆ. 50 ಕೆಜಿ ರೆಸ್ಲಿಂಗ್ ವಿಭಾಗದ ಫೈನಲ್ ಪಂದ್ಯಕ್ಕೂ ಮುನ್ನ ನಡೆದ ತೂಕ ಪರೀಕ್ಷೆಯಲ್ಲಿ ವಿನೇಶ್ ಪೋಗಟ್ ಅವರ ತೂಕ 100 ಗ್ರಾಂ ಹೆಚ್ಚಾಗಿದೆ. ಇದರ ಬೆನ್ನಲ್ಲಿಯೇ ಅವರನ್ನು ಫೈನಲ್ ಪಂದ್ಯದಿಂದ ಅನರ್ಹ ಮಾಡಲಾಗಿದ್ದು, ಇವೆಂಟ್‌ನಲ್ಲಿ ಅವರ ಸ್ಥಾನ ಅನರ್ಹ ಎಂದೇ ಇರಲಿದೆ. ಇನ್ನೊಂದೆಡೆ ಆಘಾತಕಾರಿ ಸುದ್ದಿ ತಿಳಿದ ಬೆನ್ನಲ್ಲಿಯೇ ವಿನೇಶ್ ಪೋಗಟ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಡಿಹೈಡ್ರೇಷನ್ ಕಾರಣದಿಂದಾಗಿ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ವರದಿಯಾಗಿದೆ. ಸುದ್ದಿ ತಿಳಿದ ಬೆನ್ನಲ್ಲಿಯೇ ಅವರಿಗೆ ತಲೆತಿರುಗಿದಂತಾಗಿ ಅಲ್ಲಿಯೇ ಕುಸಿದು ಬಿದ್ದಿದ್ದರು. ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಈ ನಡುವೆ ಪ್ರಧಾನಿ ನರೇಂದ್ರ ಮೋದಿ, ವಿನೇಶ್ ಪೋಗಟ್ ಕುರಿತಾಗಿ ಟ್ವೀಟ್ ಮಾಡಿದ್ದು ಅವರೊಂದಿಗೆ ಅಚಲವಾಗಿ ನಿಂತಿರುವುದಾಗಿ ತಿಳಿಸಿದ್ದಾರೆ. ಅದಲ್ಲದೆ, ಭಾರತೀಯ ಒಲಿಂಪಿಕ್ ಸಮಿತಿ ಅಧ್ಯಕ್ಷೆ ಪಿಟಿ ಉಷಾ ಅವರಿಂದ ಪ್ರಧಾನಿ ಮೋದಿ ವರದಿಯನ್ನೂ ಕೇಳಿದ್ದಾರೆ.
ಪಿಎಂ ನರೇಂದ್ರ ಮೋದಿ ಐಒಎ ಅಧ್ಯಕ್ಷೆ ಪಿಟಿ ಉಷಾ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ. ವಿನೇಶ್ ಪೋಗಟ್‌ಗೆ ಆಗಿರುವ ಹಿನ್ನಡೆಯ ಹಿನ್ನಲೆಯಲ್ಲಿ ಈ ಸಮಸ್ಯೆಯನ್ನು ಬಗೆಹರಿಸುವುದು ಹೇಗೆ ಹಾಗೂ ಭಾರತ ಹೊಂದಿರುವ ಆಯ್ಕೆಗಳ ಬಗ್ಗೆ ಮೊದಲ ಮಾಹಿತಿಯನ್ನು ಕೇಳಿದ್ದಾರೆ. ಸವಿನೇಶ್ ಪೋಗಟ್‌ಗೆ ಸಹಾಯ ಮಾಡುವ ನಿಟ್ಟಿಲ್ಲಿ ಎಲ್ಲಾ ರೀತಿಯ ಅವಕಾಶಗಳು ಹಾಗೂ ಆಯ್ಕೆಗಳನ್ನು ಬಳಸಿಕೊಳ್ಳುವಂತೆ ಅವರಿಗೆ ತಿಳಿಸಿದ್ದಾರೆ. ಹಾಗೇನಾದರೂ ವಿನೇಶ್‌ಗೆ ಸಹಾಯವಾಗುತ್ತದೆ ಎಂದಾದಲ್ಲಿ ಅವರ ಅನರ್ಹತೆಯ ಬಗ್ಗೆ ಕಠಿಣವಾದ ಪ್ರತಿಭಟನೆಯನ್ನೂ ದಾಖಲಿಸುವಂತೆ ಮೋದಿ ಅವರು ಪಿಟಿ ಉಷಾಗೆ ಸೂಚನೆ ನೀಡಿದ್ದಾರೆ ಎಂದು ತಿಳಿಸಲಾಗಿದೆ.
ನಿಯಮಗಳ ಪ್ರಕಾರ, ಒಲಿಂಪಿಕ್ಸ್ ವೇಳೆ ರೆಸ್ಲರ್‌ಗಳಿಗೆ ಎರಡು ಬಾರಿ ತೂಕ ಪರೀಕ್ಷೆ ಆಗುತ್ತದೆ. ಪ್ರಾಥಮಿಕ ಸುತ್ತು ನಡೆಯುವ ಮುನ್ನ ಬೆಳಗ್ಗೆ ಅವರ ತೂಕ ಪರೀಕ್ಷೆ ಆಗುತ್ತದೆ. ಅದರೊಂದಿಗೆ ಫೈನಲ್ ಪಂದ್ಯದ ಬೆಳಗ್ಗೆ ಅವರ ಪರೀಕ್ಷೆ ನಡೆಯುತ್ತದೆ. ನಿನ್ನೆಯವರೆಗೂ ವಿನೇಶ್ ಪೋಗಟ್ ಅವರು 50 ಕೆಜಿಯ ತೂಕದ ಮಿತಿಯಲ್ಲಿದ್ದರು. ಆದರೆ ಬುಧವಾರ ಒಂದೇ ದಿನ ಅವರು ಮುರು ಪಂದ್ಯಗಳಲ್ಲಿ ಭಾಗಿಯಾಗಿದ್ದರು. ಇದಕ್ಕಾಗಿ ಅವರು ಆಹಾರ ಸೇವಿಸಿದ್ದರಿಂದ 2 ಕೆಜಿ ತೂಕ ಹೆಚ್ಚಾಗಿರಬಹುದು ಎನ್ನಲಾಗಿದೆ. ಅದಲ್ಲದೆ, ಅವರಿಗೂ ಕೂಡ ತಮ್ಮ ತೂಕ ಹೆಚ್ಚಾಗಿರುವ ಬಗ್ಗೆ ಅನುಮಾನಗಳು ಬಂದಿದ್ದವು. ಅದಕ್ಕಾಗಿ ರಾತ್ರಿಯಿಡೀ ಅವರು ಸ್ಕಿಪ್ಪಿಂಗ್, ಜಾಗಿಂಗ್ ಹಾಗೂ ಸೈಕ್ಲಿಂಗ್‌ಗಳನ್ನು ಮಾಡಿದ್ದರು.
ಫೈನಲ್‌ಗೂ ಮುನ್ನ ವಿನೇಶ್ ಫೋಗಟ್‌ಗೆ ಬಿಗ್ ಶಾಕ್; ಚಿನ್ನದ ಪದಕಕ್ಕೆ ಅನರ್ಹ..!
ಸೆಮಿಫೈನಲ್ ಪಂದ್ಯದ ಬಳಿಕ ಆಕೆ ಸ್ವೆಟ್ ಶರ್ಟ್‌ನಲ್ಲಿ ಸ್ಕಿಪ್ಪಿಂಗ್ ಮಾಡುತ್ತಿರುವ ಚಿತ್ರಗಳು ಕೂಡ ಪ್ರಕಟವಾಗಿದೆ. ಇದರಿದಾಗಿ ರಾತ್ರಿಯಿಡೀ ಅವರು ವ್ಯಾಯಾಮವನ್ನೇ ಮಾಡುತ್ತಿದ್ದರು. ಆದರೆ, ಇಂದು ಬೆಳಗ್ಗೆ ಎಂದಿನಂತೆ ಅವರ ತೂಕ ಪರೀಕ್ಷೆ ಆದಾಗ 100 ಗ್ರಾಂ ಹೆಚ್ಚಿನ ತೂಕ ಕಂಡು ಬಂದಿದೆ. ಅದರ ಬೆನ್ನಲ್ಲಿಯೇ ಆಕೆಯನ್ನು ಅನರ್ಹ ಮಾಡಲಾಗಿದೆ.
'ವಿನೇಶ್ ನೀವು ಎಲ್ಲರಿಗೂ ಚಾಂಪಿಯನ್..' ಚಿನ್ನದ ಪದಕದ ಪಂದ್ಯದಿಂದ ಅನರ್ಹಗೊಂಡ ಬೆನ್ನಲ್ಲೇ ಮೋದಿ ಟ್ವೀಟ್!