ಭಾರತೀಯ ಕುಸ್ತಿಗೆ ಉತ್ತರ ಪ್ರದೇಶ ಸರ್ಕಾರ ಪ್ರಾಯೋಜಕತ್ವ
* ಒಡಿಶಾ ಮಾದರಿಯಲ್ಲಿ ಭಾರತೀಯ ಕುಸ್ತಿಗೆ ಪ್ರಾಯೋಜಕತ್ವ ಪಡೆದ ಉತ್ತರ ಪ್ರದೇಶ ಸರ್ಕಾರ
* ಭಾರತೀಯ ಕುಸ್ತಿಗೆ 2032ರ ಒಲಿಂಪಿಕ್ಸ್‌ವರೆಗೂ ಪ್ರಾಯೋಜಕತ್ವ
* ಮುಂದಿನ 11 ವರ್ಷಗಳಿಗೆ ಉತ್ತರ ಪ್ರದೇಶ ಸರ್ಕಾರವೂ 170 ಕೋಟಿ ರು. ಬಂಡವಾಳ ಹೂಡಲಿದೆ
ನವದೆಹಲಿ(ಆ.27): ಒಡಿಶಾ ಸರ್ಕಾರ ಭಾರತೀಯ ಹಾಕಿ ತಂಡಗಳಿಗೆ ಪ್ರಾಯೋಜಕತ್ವ ನೀಡುವಂತೆ ಭಾರತೀಯ ಕುಸ್ತಿಗೆ 2032ರ ಒಲಿಂಪಿಕ್ಸ್‌ವರೆಗೂ ಪ್ರಾಯೋಜಕತ್ವ ನೀಡಲು ಉತ್ತರ ಪ್ರದೇಶ ಸರ್ಕಾರ ಮುಂದಾಗಿದೆ.
ಭಾರತೀಯ ಕುಸ್ತಿ ಫೆಡರೇಷನ್ (ಡಬ್ಲ್ಯುಎಫ್‌ಐ) ಪ್ರಸ್ತಾಪದಂತೆ ಮುಂದಿನ 11 ವರ್ಷಗಳಿಗೆ ಉತ್ತರ ಪ್ರದೇಶ ಸರ್ಕಾರವೂ 170 ಕೋಟಿ ರು. ಬಂಡವಾಳ ಹೂಡಲಿದೆ ಎಂದು ಭಾರತೀಯ ಕುಸ್ತಿ ಫೆಡರೇಷನ್ ಅಧ್ಯಕ್ಷ ಬ್ರಿಜ್‌ಭೂಷಣ್ ಸಿಂಗ್ ಹೇಳಿದ್ದಾರೆ. ಒಡಿಶಾ ಸರ್ಕಾರವನ್ನು ಮಾದರಿಯಾಗಿ ಇರಿಸಿಕೊಂಡು ಉತ್ತರ ಪ್ರದೇಶ ಸರ್ಕಾರಕ್ಕೆ ಪ್ರಸ್ತಾಪ ಸಲ್ಲಿಸಿದೆವು. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಒಪ್ಪಿಗೆ ಸೂಚಿಸಿದರು ಎಂದು ಸಿಂಗ್ ಹೇಳಿದ್ದಾರೆ.
ಭಾರತ ಹಾಕಿಗೆ ಇನ್ನೂ 10 ವರ್ಷ ಒಡಿಶಾ ಸರ್ಕಾರ ಪ್ರಾಯೋಜಕತ್ವ
2024ರವರೆಗೂ ವಾರ್ಷಿಕ 10 ಕೋಟಿ ರುಪಾಯಿ, 2025-2028ರ ವರೆಗೂ ವಾರ್ಷಿಕ 15 ಕೋಟಿ ರುಪಾಯಿ ಹಾಗೂ 2029-2032ರ ವರೆಗೂ ವಾರ್ಷಿಕ 20 ಕೋಟಿ ರುಪಾಯಿ ನೀಡಲು ಕೋರಿದ್ದೇವೆ ಎಂದು ಬ್ರಿಜ್‌ಭೂಷಣ್ ವಿವರಿಸಿದ್ದಾರೆ. ಡಬ್ಲ್ಯುಎಫ್‌ಐ ಕಿರಿಯ ಕುಸ್ತಿ ಪಟುಗಳಿಗೂ ಕೇಂದ್ರ ಗುತ್ತಿಗೆ ನೀಡಲು ಈ ಒಪ್ಪಂದ ಸಹಕಾರಿಯಾಗಲಿದೆ.