US Open: 21ನೇ ಗ್ರ್ಯಾನ್ ಸ್ಲಾಂ ಮೇಲೆ ಜೋಕೋವಿಚ್ ಕಣ್ಣು..!
* ಸೋಮವಾರದಿಂದ(ಆ.30) ಯುಎಸ್ ಓಪನ್ ಟೆನಿಸ್ ಟೂರ್ನಿ ಆರಂಭ
* 21ನೇ ಗ್ರ್ಯಾನ್ ಸ್ಲಾಂ ಮೇಲೆ ಕಣ್ಣಿಟ್ಟಿದ್ದಾರೆ ಸರ್ಬಿಯಾದ ಟೆನಿಸ್ ದಿಗ್ಗಜ ಜೋಕೋ
* ಯುಎಸ್ ಓಪನ್‌ನಿಂದ ಹಿಂದೆ ಸರಿದಿರುವ ನಡಾಲ್, ಫೆಡರರ್
ನ್ಯೂಯಾರ್ಕ್(ಆ.30): ವಿಶ್ವ ನಂ.1 ಟೆನಿಸಿಗ, ಸರ್ಬಿಯಾದ ನೋವಾಕ್ ಜೋಕೋವಿಚ್ ಸೋಮವಾರದಿಂದ ಆರಂಭಗೊಳ್ಳಲಿರುವ ವರ್ಷದ 4ನೇ ಹಾಗೂ ಕೊನೆಯ ಗ್ರ್ಯಾನ್ ಸ್ಲಾಂ ಟೂರ್ನಿ ಗೆದ್ದು ದಾಖಲೆಯ 21ನೇ ಗ್ರ್ಯಾನ್ ಸ್ಲಾಂ ಪ್ರಶಸ್ತಿ ಮುಡಿಗೇರಿಸಿಕೊಳ್ಳಲು ಕಾತರಿಸುತ್ತಿದ್ದಾರೆ. 20 ಗ್ರ್ಯಾನ್ ಸ್ಲಾಂ ಗೆದ್ದಿರುವ ಜೋಕೋವಿಚ್, ರೋಜರ್ ಫೆಡರರ್ ಹಾಗೂ ರಾಫೆಲ್ ನಡಾಲ್ ಜೊತೆ ಅತಿಹೆಚ್ಚು ಗ್ರ್ಯಾನ್ ಸ್ಲಾಂ ಗೆದ್ದ ಆಟಗಾರರ ಪಟ್ಟಿಯಲ್ಲಿ ಜಂಟಿ ಮೊದಲ ಸ್ಥಾನದಲ್ಲಿದ್ದಾರೆ.
ಫೆಡರರ್, ನಡಾಲ್ ಇಬ್ಬರೂ ಗಾಯದ ಸಮಸ್ಯೆಯಿಂದಾಗಿ ಟೂರ್ನಿಗೆ ಗೈರಾಗಲಿದ್ದಾರೆ. ಹಾಲಿ ಚಾಂಪಿಯನ್ ಡೊಮಿನಿಕ್ ಥೀಮ್ ಕೂಡ ಆಡುತ್ತಿಲ್ಲ. ಹೀಗಾಗಿ ಜೋಕೋವಿಚ್ ಪ್ರಶಸ್ತಿ ಹಾದಿ ಸುಲಭವಾಗಬಹುದು. ಆದರೆ ಅಲೆಕ್ಸಾಂಡರ್ ಜ್ವೆರೆವ್, ಡ್ಯಾನಿಲ್ ಮೆಡ್ವೆಡೆವ್ ಹಾಗೂ ಸ್ಟೆಫಾನೋಸ್ ಸಿಟ್ಸಿಪಾಸ್‌ರಿಂದ ಪ್ರಬಲ ಪೈಪೋಟಿ ಎದುರಾಗುವ ನಿರೀಕ್ಷೆ ಇದೆ.
ಯುಎಸ್ ಓಪನ್: ಪ್ರೇಕ್ಷಕರಿಗೆ ಮಾಸ್ಕ್, ಲಸಿಕೆ ದಾಖಲೆ ಕಡ್ಡಾಯವಲ್ಲ
ಕ್ಯಾಲೆಂಡರ್ ಗ್ರ್ಯಾನ್ ಸ್ಲಾಂ ಜಯ?: ಜೋಕೋವಿಚ್ ಈ ವರ್ಷ ಆಸ್ಪ್ರೇಲಿಯನ್ ಓಪನ್, ಫ್ರೆಂಚ್ ಓಪನ್ ಹಾಗೂ ವಿಂಬಲ್ಡನ್‌ನಲ್ಲಿ ಚಾಂಪಿಯನ್ ಆಗಿದ್ದಾರೆ. ಯುಎಸ್ ಓಪನ್‌ನಲ್ಲೂ ಪ್ರಶಸ್ತಿ ಜಯಿಸಿದರೆ ರಾಡ್ ಲೇವರ್(1969) ಬಳಿಕ ಕ್ಯಾಲೆಂಡರ್ ಸ್ಲಾಂ ಜಯಿಸಿದ ಆಟಗಾರ ಎನ್ನುವ ದಾಖಲೆ ಬರೆಯಲಿದ್ದಾರೆ.
ಒಸಾಕ, ಬಾರ್ಟಿ ಫೇವರಿಟ್ಸ್: ಮಹಿಳಾ ಸಿಂಗಲ್ಸ್‌ನಲ್ಲಿ ವಿಶ್ವ ನಂ.1 ಆಸ್ಪ್ರೇಲಿಯಾದ ಆಶ್ಲೆ ಬಾರ್ಟಿ, ವಿಶ್ವ ನಂ.3, ಹಾಲಿ ಚಾಂಪಿಯನ್ ಜಪಾನ್‌ನ ನವೊಮಿ ಒಸಾಕ ಪ್ರಶಸ್ತಿ ಗೆಲ್ಲಬಲ್ಲ ನೆಚ್ಚಿನ ಆಟಗಾರ್ತಿಯರು ಎನಿಸಿದ್ದಾರೆ.