* ಯುಎಸ್‌ ಓಪನ್‌ ಟೂರ್ನಿಯ ಆರಂಭದಲ್ಲೇ ಭಾರತೀಯ ಟೆನಿಸಿಗರಿಗೆ ನಿರಾಸೆ* ಅರ್ಹತಾ ಸುತ್ತಿನಲ್ಲೇ ಸೋತುಹೊರಬಿದ್ದ ನಗಾಲ್, ಅಂಕಿತಾ, ರಾಮ್‌ಕುಮಾರ್* ಆಗಸ್ಟ್ 30 ರಿಂದ ಯುಎಸ್ ಓಪನ್‌ ಪ್ರಧಾನ ಸುತ್ತು ಆರಂಭ

ನ್ಯೂಯಾರ್ಕ್(ಆ.26): ಯುಎಸ್‌ ಓಪನ್‌ ಟೆನಿಸ್‌ ಗ್ರ್ಯಾನ್‌ ಸ್ಲಾಂ ಟೂರ್ನಿಯ ಪ್ರಧಾನ ಸುತ್ತಿಗೇರುವಲ್ಲಿ ಭಾರತೀಯ ಆಟಗಾರರು ವಿಫಲರಾಗಿದ್ದಾರೆ. ಪುರುಷರ ಸಿಂಗಲ್ಸ್‌ ಅರ್ಹತಾ ಸುತ್ತಿನ ಮೊದಲ ಪಂದ್ಯದಲ್ಲೇ ಸುಮಿತ್‌ ನಗಾಲ್‌ ಹಾಗೂ ರಾಮ್‌ಕುಮಾರ್‌ ರಾಮನಾಥನ್‌ ಸೋತು ಹೊರಬಿದ್ದರೆ, ಮಹಿಳಾ ಸಿಂಗಲ್ಸ್‌ನಲ್ಲಿ ಅಂಕಿತಾ ರೈನಾ ಮೊದಲ ಪಂದ್ಯದಲ್ಲೇ ಪರಾಭವಗೊಂಡು ನಿರ್ಗಮಿಸಿದ್ದಾರೆ. 

Scroll to load tweet…

ಆಗಸ್ಟ್ 30ರಿಂದ ಯುಎಸ್ ಓಪನ್‌ ಗ್ರ್ಯಾನ್‌ ಸ್ಲಾಂ ಪ್ರಧಾನ ಸುತ್ತು ಆರಂಭಗೊಳ್ಳಲಿದೆ. ಈಗಾಗಲೇ ಯುಎಸ್ ಓಪನ್‌ ಟೆನಿಸ್‌ ಟೂರ್ನಿಯಿಂದ ದಿಗ್ಗಜ ಟೆನಿಸಗರಾದ ರೋಜರ್ ಫೆಡರರ್, ರಾಫೆಲ್‌ ನಡಾಲ್‌ ಗಾಯದ ಸಮಸ್ಯೆಯಿಂದ ಹಿಂದೆ ಸರಿದಿದ್ದಾರೆ. ಇದೀಗ 6 ಯುಎಸ್‌ ಗ್ರ್ಯಾನ್‌ ಸ್ಲಾಂ ಒಡತಿ ಸೆರೆನಾ ವಿಲಿಯಮ್ಸ್ ಸಹಾ ಯುಎಸ್‌ ಓಪನ್ ಕ್ರೀಡಾಕೂಟದಿಂದ ಹಿಂದೆ ಸರಿದಿದ್ದಾರೆ. ಸ್ನಾಯು ಸೆಳೆತದಿಂದ ಬಳಲುತ್ತಿರುವ ಸೆರೆನಾ ವಿಲಿಯಮ್ಸ್ ಸಂಪೂರ್ಣ ಚೇತರಿಸಿಕೊಳ್ಳದ ಹಿನ್ನೆಲೆಯಲ್ಲಿ ಕ್ರೀಡಾಕೂಟದಿಂದ ಹಿಂದೆ ಸರಿಯುತ್ತಿರುವುದಾಗಿ ತಿಳಿಸಿದ್ದಾರೆ.

ಅಭಿಮಾನಿಗಳಿಗೆ ಶಾಕ್; US ಓಪನ್ ಟೆನಿಸ್‌ನಿಂದ ಹಿಂದೆ ಸರಿದ ಸೆರೆನಾ ವಿಲಿಯಮ್ಸ್!

ಪುರುಷರ ಸಿಂಗಲ್ಸ್‌ನಲ್ಲಿ ವಿಶ್ವದ ನಂ.1 ಟೆನಿಸಿಗ ಸರ್ಬಿಯಾದ ನೊವಾಕ್ ಜೋಕೋವಿಚ್‌ ಯುಎಸ್‌ ಓಪನ್‌ ಗ್ರ್ಯಾನ್‌ಸ್ಲಾಂ ಗೆಲ್ಲಬಲ್ಲ ನೆಚ್ಚಿನ ಟೆನಿಸಿಗ ಎನಿಸಿದ್ದಾರೆ. ಈ ಆವೃತ್ತಿಯಲ್ಲಿ ಜೋಕೋವಿಚ್ ಈಗಾಗಲೇ ಆಸ್ಟ್ರೇಲಿಯಾ ಓಪನ್‌, ಫ್ರೆಂಚ್ ಓಪನ್ ಹಾಗೂ ವಿಂಬಲ್ಡನ್‌ ಗ್ರ್ಯಾನ್‌ ಸ್ಲಾಂ ಜಯಿಸಿದ್ದು, ನಾಲ್ಕನೇ ಗ್ರ್ಯಾನ್‌ ಸ್ಲಾಂ ಗೆಲ್ಲುವತ್ತ ಚಿತ್ತ ನೆಟ್ಟಿದ್ದಾರೆ. ರೋಜರ್ ಫೆಡರರ್, ರಾಫೆಲ್ ನಡಾಲ್‌ ಹಾಗೂ ನೊವಾಕ್ ಜೋಕೋವಿಚ್ ತಲಾ 20 ಗ್ರ್ಯಾನ್‌ ಸ್ಲಾಂಗಳನ್ನು ಜಯಿಸಿದ್ದಾರೆ. ಯುಎಸ್‌ ಓಪನ್‌ನಿಂದ ಫೆಡರರ್ ಹಾಗೂ ನಡಾಲ್‌ ಹಿಂದೆ ಸರಿದಿದ್ದರಿಂದ ಈ ಇಬ್ಬರ ಹೆಸರಿನಲ್ಲಿದ್ದ ದಾಖಲೆಯನ್ನು ತಮ್ಮ ಹೆಸರಿಗೆ ಬರೆಸಿಕೊಳ್ಳಲು ಜೋಕೋ ಎದುರು ನೋಡುತ್ತಿದ್ದಾರೆ.