* ಟೋಕಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ ಮಿಂಚಿದ ನಾಲ್ವರು ಪ್ಯಾರಾಥ್ಲೀಟ್‌ಗಳ ಹೆಸರು ಖೇಲ್ ರತ್ನ ಪ್ರಶಸ್ತಿಗೆ ಶಿಫಾರಸು* ಬ್ಯಾಡ್ಮಿಂಟನ್‌ ತಾರೆ ಪ್ರಮೋದ್‌ ಭಗತ್‌, ಶೂಟರ್‌ ಮನೀಶ್‌ ನರ್ವಾಲ್‌ ಸೇರಿ ನಾಲ್ವರ ಹೆಸರು ಶಿಫಾರಸು* ಟೋಕಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತದ ಪ್ಯಾರಾಥ್ಲೀಟ್‌ಗಳು ಒಟ್ಟು 19 ಪದಕಗಳನ್ನು ಜಯಿಸಿತ್ತು

ನವದೆಹಲಿ(ಸೆ.19): ಟೋಕಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಪ್ರಮುಖರ ಹೆಸರನ್ನು ಭಾರತೀಯ ಪ್ಯಾರಾಲಿಂಪಿಕ್‌ ಸಮಿತಿ(ಪಿಸಿಐ) ಮೇಜರ್‌ ಧ್ಯಾನ್‌ಚಂದ್‌ ಖೇಲ್‌ ರತ್ನ ಹಾಗೂ ಅರ್ಜುನ ಪ್ರಶಸ್ತಿಗೆ ಶಿಫಾರಸು ಮಾಡಿದೆ. 

ಬ್ಯಾಡ್ಮಿಂಟನ್‌ ತಾರೆ ಪ್ರಮೋದ್‌ ಭಗತ್‌, ಶೂಟರ್‌ ಮನೀಶ್‌ ನರ್ವಾಲ್‌, ಹೈಜಂಪ್‌ ಪಟು ಶರದ್‌ ಕುಮಾರ್‌ ಹಾಗೂ ಜಾವೆಲಿನ್‌ ಎಸೆತಗಾರ ಸುಂದರ್‌ ಸಿಂಗ್‌ ಗುರ್ಜರ್‌ ಹೆಸರು ಖೇಲ್‌ ರತ್ನ ಪ್ರಶಸ್ತಿಗೆ, ಶೂಟರ್‌ ಅವನಿ ಲೇಖರಾ ಹಾಗೂ ಜಾವೆಲಿನ್‌ ಎಸೆತಗಾರ ಸುಮಿತ್‌ ಅಂತಿಲ್‌ ಹೆಸರು ಅರ್ಜುನ ಪ್ರಶಸ್ತಿಗೆ ಶಿಫಾರಸು ಮಾಡಲಾಗಿದೆ. I ಈ ಬಾರಿಯ ಟೋಕಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತದ ಪ್ಯಾರಾಥ್ಲೀಟ್‌ಗಳು ಒಟ್ಟು 19 ಪದಕಗಳನ್ನು ಜಯಿಸಿ ಸಾರ್ವಕಾಲಿಕ ಶ್ರೇಷ್ಠ ಪ್ರದರ್ಶನ ತೋರಿದ್ದರು.

ಭಾರತ ಕ್ರೀಡಾ ಇತಿಹಾಸದಲ್ಲಿ ಟೋಕಿಯೋ ಪ್ಯಾರಾಲಿಂಪಿಕ್ಸ್‌ಗೆ ವಿಶೇಷ ಸ್ಥಾನ; ಪದಕ ಸಾಧನೆಗೆ ಕೊಂಡಾಡಿದ ಮೋದಿ!

ಪ್ರತಿ ವರ್ಷ ಆಗಸ್ಟ್‌ 29ಕ್ಕೆ ಕ್ರೀಡಾ ಪ್ರಶಸ್ತಿ ನೀಡಲಾಗುತ್ತಿತ್ತು. ಆದರೆ ಈ ಬಾರಿ ಪ್ಯಾರಾಲಿಂಪಿಕ್ಸ್‌ ಸಾಧಕರನ್ನು ಪ್ರಶಸ್ತಿಗೆ ಪರಿಗಣಿಸುವ ಹಿನ್ನೆಲೆಯಲ್ಲಿ ಆಯ್ಕೆ ಪ್ರಕ್ರಿಯೆ ಮುಂದೂಡಲಾಗಿತ್ತು. ಸದ್ಯದಲ್ಲೇ ಪ್ರಶಸ್ತಿ ವಿಜೇತರ ಹೆಸರುಗಳನ್ನು ಘೋಷಿಸುವ ನಿರೀಕ್ಷೆ ಇದೆ. ಈ ವರ್ಷ ಖೇಲ್‌ ರತ್ನ ಪ್ರಶಸ್ತಿಯ ಮೊತ್ತವನ್ನು 7.5 ಲಕ್ಷ ರುಪಾಯಿಗಳಿಂದ 25 ಲಕ್ಷಕ್ಕೆ ಏರಿಕೆ ಮಾಡಲಾಗಿದ್ದು, ಅರ್ಜುನ ಪ್ರಶಸ್ತಿಯ ಮೊತ್ತವನ್ನು 10 ಲಕ್ಷದಿಂದ 15 ಲಕ್ಷ ರುಪಾಯಿಗೆ ಏರಿಕೆ ಮಾಡಲಾಗಿದೆ.

ಕೇಂದ್ರ ಸರ್ಕಾರದಿಂದ ಕೊಡಮಾಡುವ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಗೆ ದಾಖಲೆ ಪ್ರಮಾಣದಲ್ಲಿ ಅರ್ಜಿಗಳು ಸಲ್ಲಿಕೆಯಾಗಿವೆ. ಅರ್ಜುನ, ದ್ರೋಣಾಚಾರ್ಯ ಹಾಗೂ ಧ್ಯಾನ್‌ಚಂದ್‌ ಖೇಲ್‌ರತ್ನ ಪ್ರಶಸ್ತಿಗಾಗಿ ಈ ವರ್ಷ 600ಕ್ಕೂ ಅಧಿಕ ಕ್ರೀಡಾಪಟುಗಳು ಹಾಗೂ ಕೋಚ್‌ಗಳು ಅರ್ಜಿ ಸಲ್ಲಿಸಿದ್ದಾರೆ. ಪ್ರವಾಹದ ರೂಪದಲ್ಲಿ ಅರ್ಜಿಗಳು ಸಲ್ಲಿಕೆ ಆಗಿದ್ದು, ಕಳೆದ ವರ್ಷ 400 ಮಂದಿ ಅರ್ಜಿ ಸಲ್ಲಿಸಿದ್ದರು.