ಸ್ವಾತಂತ್ರ್ಯ ಅಮೃತ ಮಹೋತ್ಸವದ ರಂಗು ಹೆಚ್ಚಿಸಿದ ಟೋಕಿಯೋ ಒಲಿಂಪಿಕ್ಸ್ ಸಾಧಕರು..!
* 75ನೇ ಸ್ವಾತಂತ್ರ್ಯೋತ್ಸವ ಸಂಭ್ರಮಾಚರಣೆಗೆ ಸಾಕ್ಷಿಯಾಗಿದ ಒಲಿಂಪಿಕ್ಸ್ ಪದಕ ವಿಜೇತರು
* ಕೆಂಪು ಕೋಟೆಯ ಐತಿಹಾಸಿಕ ಧ್ವಜಾರೋಹಣ ಕಣ್ತುಂಬಿಕೊಂಡ ದೇಶದ ಕ್ರೀಡಾಪಟುಗಳು
* ಇದು ಅವಿಸ್ಮರಣೀಯ ಕ್ಷಣವೆಂದು ಬಣ್ಣಿಸಿದ ಚಿನ್ನದ ಹುಡುಗ ನೀರಜ್ ಚೋಪ್ರಾ
ನವದೆಹಲಿ(ಆ.16): ದೆಹಲಿಯ ಕೆಂಪು ಕೋಟೆಯಲ್ಲಿ ಭಾನುವಾರ ನಡೆದ 75ನೇ ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ಟೋಕಿಯೋ ಒಲಿಂಪಿಕ್ಸ್ ಪದಕ ವಿಜೇತ ಭಾರತೀಯ ಕ್ರೀಡಾಪಟುಗಳು ಪಾಲ್ಗೊಂಡು, ಪ್ರಧಾನಿ ನರೇಂದ್ರ ಮೋದಿ ಅವರ ಭಾಷಣ ಆಲಿಸಿದರು. ಭಾರತ ಮಹಿಳಾ ಹಾಕಿ ತಂಡದ ಸದಸ್ಯರು ಸಹ ಉಪಸ್ಥಿತರಿದ್ದರು.
ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಈ ಬಾರಿ ಭಾರತ ಒಂದು ಚಿನ್ನ ಸಹಿತ ಒಟ್ಟು 7 ಪದಕಗಳನ್ನು ಗೆಲ್ಲುವ ಮೂಲಕ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಗರಿಷ್ಠ ಪದಕಗಳ ಸಾಧನೆ ಮಾಡಿತ್ತು. ಭಾರತ ಪರ ಮೊದಲಿಗೆ ಮಹಿಳಾ ವೇಟ್‌ಲಿಫ್ಟರ್ ಮೀರಾಬಾಯಿ ಚಾನು ಬೆಳ್ಳಿ ಪದಕ ಜಯಿಸಿದರೆ, ಆ ಬಳಿಕ ಪಿ.ವಿ. ಸಿಂಧು. ಲವ್ಲೀನಾ ಬೊರ್ಗೊಹೈನ್, ಭಾರತ ಪುರುಷರ ಹಾಕಿ ತಂಡ ಹಾಗೂ ಕುಸ್ತಿಪಟು ಭಜರಂಗ್ ಪೂನಿಯಾ ಕಂಚಿನ ಪದಕಕ್ಕೆ ಕೊರಳೊಡ್ಡಿದ್ದರು. ಇನ್ನೋರ್ವ ಕುಸ್ತಿಪಟು ರವಿಕುಮಾರ್ ದಹಿಯಾ ಬೆಳ್ಳಿ ಪದಕ ಜಯಿಸಿದರೆ, ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟದ ಕೊನೆಯ ದಿನ ನೀರಜ್ ಚೋಪ್ರಾ ಬರೋಬ್ಬರಿ 87.58 ಮೀಟರ್ ಜಾವಲಿನ್ ಥ್ರೋ ಮಾಡುವ ಮೂಲಕ ಅಥ್ಲೆಟಿಕ್ಸ್‌ನಲ್ಲಿ ದೇಶಕ್ಕೆ ಮೊದಲ ಚಿನ್ನದ ಪದಕ ಗೆದ್ದುಕೊಟ್ಟರು. ಇದರೊಂದಿಗೆ ಶತಮಾನಗಳ ಬಳಿಕ ಒಲಿಂಪಿಕ್ಸ್‌ನ ಅಥ್ಲೆಟಿಕ್ಸ್ ವಿಭಾಗದಲ್ಲಿ ದೇಶ ಅನುಭವಿಸುತ್ತಿದ್ದ ಪದಕಗಳ ಬರವನ್ನು ನೀಗಿಸಿದ್ದರು.
ಐತಿಹಾಸಿಕ ಕೆಂಪುಕೋಟೆಯಲ್ಲಿಂದು ನಡೆದ ಐತಿಹಾಸಿಕ ಸ್ವಾತಂತ್ರ್ಯೋತ್ಸವ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡಿರುವುದು ನನಗೆ ಸಿಕ್ಕ ದೊಡ್ಡ ಗೌರವ. ಓರ್ವ ಅಥ್ಲೀಟ್ ಹಾಗೂ ಸೈನಿಕನಾಗಿ ರಾಷ್ಟ್ರಧ್ವಜ ಅತಿ ಎತ್ತರದಲ್ಲಿ ಹಾರಾಡುವುದನ್ನು ನೋಡಿ ಹೃದಯ ತುಂಬಿ ಬಂದಿತು. ಜೈ ಹಿಂದ್ ಎಂದು ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದ ಸಾಧಕ ನೀರಜ್ ಚೋಪ್ರಾ ಟ್ವೀಟ್ ಮಾಡಿದ್ದಾರೆ.
ಭಾರತಕ್ಕೆ 75ನೇ ಸ್ವಾತಂತ್ರ್ಯ ಸಂಭ್ರಮ: ರಾಷ್ಟ್ರಗೀತೆಗೆ ಧ್ವನಿಯಾದ ಕ್ರೀಡಾ ತಾರೆಯರು!
ಬಾಕ್ಸರ್ ಮೇರಿ ಕೋಮ್ ಸೇರಿದಂತೆ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಂಡ ಎಲ್ಲಾ 240 ಅಥ್ಲೀಟ್ಸ್, ಸಹಾಯಕ ಸಿಬ್ಬಂದಿ, ಸಾಯ್ ಮತ್ತು ಕ್ರೀಡಾ ಫೆಡರೇಷನ್‌ನ ಅಧಿಕಾರಿಗಳನ್ನು ಕೆಂಪು ಕೋಟೆಯ ಧ್ವಜಾರೋಹಣದ ಸಂಭ್ರಮದ ಕ್ಷಣಕ್ಕೆ ಸಾಕ್ಷಿಯಾಗಲು ಭಾರತ ಸರ್ಕಾರ ಸವಿನಯ ಆಮಂತ್ರಣವನ್ನು ನೀಡಿತ್ತು. ಕೆಂಪು ಕೋಟೆಯ ಗ್ಯಾನ್ ಪಥ್‌ನಲ್ಲಿ ಆಸೀನರಾಗಿದ್ದ ಎಲ್ಲಾ ಅತಿಥಿಗಳಿಗೆ ಪ್ರತ್ಯೇಕ ನೀರಿನ ಬಾಟಲ್, ಮಾಸ್ಕ್, ಸ್ಯಾನಿಟೈಸರ್, ಕೈ ಗ್ಲೌಸ್ ಹಾಗೂ ಚಿಕ್ಕ ಟವೆಲ್ ನೀಡಲಾಗಿತ್ತು. ಇದರೊಂದಿಗೆ ಎಲ್ಲಾ ಕೋವಿಡ್ ಮುನ್ನೆಚ್ಚರಿಕಾ ಕ್ರಮಗಳನ್ನು ಪಾಲಿಸಲಾಗಿತ್ತು.