* ಒಲಿಂಪಿಕ್ಸ್‌ ಚಿನ್ನ ಗೆದ್ದ ನೀರಜ್ ಚೋಪ್ರಾ ಸಾಧನೆಗೆ ಮತ್ತೊಂದು ಗರಿ* ಪುರುಷರ ವಿಶ್ವ ರ‍್ಯಾಂಕಿಂಗ್‌ ಜಾವಲಿನ್ ಥ್ರೋ ಪಟುಗಳಲ್ಲಿ ನೀರಜ್‌ಗೆ ಎರಡನೇ ಸ್ಥಾನ* ಶತಮಾನಗಳ ಬಳಿಕ ಅಥ್ಲೆಟಿಕ್ಸ್‌ ನೀರಜ್ ಚೋಪ್ರಾ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದು ಇತಿಹಾಸ ನಿರ್ಮಿಸಿದ್ದರು.

ನವದೆಹಲಿ(ಆ.13): ಟೋಕಿಯೋ ಒಲಿಂಪಿಕ್ಸ್‌ ಜಾವೆಲಿನ್‌ ಥ್ರೋ ಸ್ಪರ್ಧೆಯಲ್ಲಿ ಐತಿಹಾಸಿಕ ಚಿನ್ನ ಗೆದ್ದ ಬಳಿಕ ಭಾರತದ ನೀರಜ್‌ ಚೋಪ್ರಾ ವಿಶ್ವ ರ‍್ಯಾಂಕಿಂಗ್‌ನಲ್ಲಿ 2ನೇ ಸ್ಥಾನಕ್ಕೆ ಏರಿದ್ದಾರೆ. 

23 ವರ್ಷದ ನೀರಜ್‌ ರ‍್ಯಾಂಕಿಂಗ್‌ನಲ್ಲಿ 14 ಸ್ಥಾನಗಳ ಏರಿಕೆ ಕಂಡಿದ್ದು, ಮೊದಲ ಸ್ಥಾನದಲ್ಲಿರುವ ಜರ್ಮನಿಯ ಜೊಹಾನಸ್‌ ವೆಟ್ಟರ್‌ಗಿಂತ ಕೇವಲ 81 ಅಂಕಗಳಿಂದ ಹಿಂದಿದ್ದಾರೆ. ವೆಟ್ಟರ್‌ 1396 ಅಂಕಗಳನ್ನು ಹೊಂದಿದ್ದರೆ, ನೀರಜ್‌ 1315 ಅಂಕಗಳನ್ನು ಪಡೆದಿದ್ದಾರೆ. ವೆಟ್ಟರ್‌ರಿಂದ ತೀವ್ರ ಪೈಪೋಟಿ ನಿರೀಕ್ಷಿಸಿದ್ದ ನೀರಜ್‌ ಒಲಿಂಪಿಕ್ಸ್‌ ಫೈನಲ್‌ನಲ್ಲಿ 87.57 ಮೀ. ದೂರಕ್ಕೆ ಜಾವೆಲಿನ್‌ ಎಸೆದು ಚಿನ್ನ ಗೆದ್ದರೆ, ವೆಟ್ಟರ್‌ 9ನೇ ಸ್ಥಾನ ಪಡೆಯಲಷ್ಟೇ ಸಫಲರಾಗಿದ್ದರು.

ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ವೇಟ್‌ ಲಿಫ್ಟರ್ ಮೀರಾಬಾಯಿ ಚಾನು ಬೆಳ್ಳಿ ಗೆಲ್ಲುವುದರೊಂದಿಗೆ ಭಾರತದ ಪದಕದ ಖಾತೆ ತೆರೆದರೆ, ನೀರಜ್ ಚೋಪ್ರಾ ಚಿನ್ನ ಗೆಲ್ಲುವ ಮೂಲಕ ಇಡೀ ದೇಶವೇ ಕುಣಿದು ಕುಪ್ಪಳಿಸುವಂತೆ ಮಾಡಿದರು. ಅಥ್ಲೆಟಿಕ್ಸ್‌ನಲ್ಲಿ ಶತಮಾನದ ಬಳಿಕ ಒಲಿಂಪಿಕ್ಸ್‌ ಕ್ರೀಡಾಕೂಟಕ್ಕೆ ಪದಕ ಗೆದ್ದುಕೊಡುವಲ್ಲಿ ನೀರಜ್ ಚೋಪ್ರಾ ಯಶಸ್ವಿಯಾಗಿದ್ದರು. 

ಈ ವರ್ಷ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿ ವಿತರಣೆ ವಿಳಂಬ..!

ನನ್ನ ಗಮನ ಏನಿದ್ದರೂ ನನ್ನ ಪ್ರದರ್ಶನ ಮೇಲಿತ್ತು. ನಾನು ಒಲಿಂಪಿಕ್ಸ್‌ನಲ್ಲಿ ಉತ್ತಮ ತೋರಿದರೆ ಪ್ರಾಯೋಜಕರು, ಹಣ ಹಿಂಬಾಲಿಸಿಕೊಂಡು ಬರಲಿದೆ ಎಂದು ಗೊತ್ತಿತ್ತು. ಅಥ್ಲೆಟಿಕ್ಸ್‌ನಲ್ಲಿ ಒಲಿಂಪಿಕ್ಸ್‌ನಲ್ಲಿ ಭಾರತ ಪದಕ ಗೆಲ್ಲಬೇಕು ಎನ್ನುವ ನಿರೀಕ್ಷೆ ಕೊನೆಗೂ ನನ್ನಿಂದ ಸಾಕಾರವಾಗಿದ್ದಕ್ಕೆ ಖುಷಿಯಿದೆ ಎಂದು ನೀರಜ್ ಚೋಪ್ರಾ ತಿಳಿಸಿದ್ದಾರೆ.

ವಿಶ್ವ ಅಥ್ಲೆಟಿಕ್ಸ್ ಸಂಸ್ಥೆ ಪಟ್ಟಿಮಾಡಿದ ಟಾಪ್ 10 ಮ್ಯಾಜಿಕಲ್ ಮೂಮೆಂಟ್‌ಗಳಲ್ಲಿ(ಸ್ಮರಣೀಯ ಕ್ಷಣಗಳಲ್ಲಿ) ನೀರಜ್ ಚೋಪ್ರಾ ಚಿನ್ನ ಗೆದ್ದ ಕ್ಷಣವೂ ಒಂದು ಎನಿಸಿದೆ.