ವಿಶ್ವ ನಂ.1 ಆ್ಯಶ್ಲೆ ಬಾರ್ಟಿ ಕೇವಲ 25ನೇ ವಯಸ್ಸಿಗೆ ಟೆನಿಸ್‌ಗೆ ದಿಢೀರ್ ಗುಡ್ ಬೈ..!
* ಆಸ್ಟ್ರೇಲಿಯನ್ ಓಪನ್ ಚಾಂಪಿಯನ್ ಆ್ಯಶ್ಲೆ ಬಾರ್ಟಿ ಟೆನಿಸ್‌ಗೆ ಗುಡ್ ಬೈ
* 25ನೇ ವಯಸ್ಸಿಗೆ ಟೆನಿಸ್‌ಗೆ ಗುಡ್ ಬೈ ಹೇಳಿದ ಆಸ್ಟ್ರೇಲಿಯಾದ ಆಟಗಾರ್ತಿ
* ಕೆಲ ತಿಂಗಳ ಹಿಂದಷ್ಟೇ ಅಸ್ಟ್ರೇಲಿಯನ್ ಓಪನ್ ಗ್ರ್ಯಾನ್ ಸ್ಲಾಂ ಜಯಿಸಿದ್ದ ಆ್ಯಶ್ಲೆ ಬಾರ್ಟಿ
ಮೆಲ್ಬೊರ್ನ್(ಮಾ.23): ವಿಶ್ವದ ನಂ.1 ಟೆನಿಸ್ ಆಟಗಾರ್ತಿ, ಆಸ್ಟ್ರೇಲಿಯಾ ಆ್ಯಶ್ಲೆ ಬಾರ್ಟಿ (Ashleigh Barty) ದಿಢೀರ್ ಎನ್ನುವಂತೆ ಟೆನಿಸ್ ವೃತ್ತಿಬದುಕಿಗೆ ವಿದಾಯ (Retirement) ಘೋಷಿಸುವ ಮೂಲಕ ಇಡೀ ಟೆನಿಸ್ ಜಗತ್ತನ್ನೇ ತಬ್ಬಿಬ್ಬುಗೊಳಿಸಿದ್ದಾರೆ. 25 ವರ್ಷದ ಆಸ್ಟ್ರೇಲಿಯನ್ ಓಪನ್ ಚಾಂಪಿಯನ್ ಆ್ಯಶ್ಲೆ ಬಾರ್ಟಿ, ಬುಧವಾರ(ಮಾ.23) ಅಚ್ಚರಿಯ ರೀತಿಯಲ್ಲಿ ಟೆನಿಸ್‌ಗೆ ಗುಡ್ ಬೈ ಹೇಳಿದ್ದಾರೆ.
ಕೆಲವು ತಿಂಗಳ ಹಿಂದಷ್ಟೇ, ಅಂದರೆ ಕಳೆದ ಜನವರಿಯಲ್ಲಿ ನಡೆದ ವರ್ಷದ ಮೊದಲ ಗ್ರ್ಯಾನ್ ಸ್ಲಾಂ ಎನಿಸಿಕೊಂಡಿರುವ ಆಸ್ಟ್ರೇಲಿಯನ್ ಓಪನ್ (Australian Open) ಟೆನಿಸ್ ಟೂರ್ನಿಯಲ್ಲಿ ಆ್ಯಶ್ಲೆ ಬಾರ್ಟಿ ಚಾಂಪಿಯನ್ ಪಟ್ಟ ಅಲಂಕರಿಸಿದ್ದರು. ಈ ಮೂಲಕ ಬರೋಬ್ಬರಿ 44 ವರ್ಷಗಳ ಬಳಿಕ ಆಸ್ಟ್ರೇಲಿಯನ್ ಗ್ರ್ಯಾನ್ ಸ್ಲಾಂ ಪ್ರಶಸ್ತಿ ಜಯಿಸಿದ ಆಸ್ಟ್ರೇಲಿಯಾದ ಆಟಗಾರ್ತಿ ಎನ್ನುವ ಹಿರಿಮೆಗೆ ಪಾತ್ರರಾಗಿದ್ದರು. ಇದಷ್ಟೇ ಅಲ್ಲದೇ ವಿವಿಧ ಮೂರು ಟೆನಿಸ್ ಅಂಕಣದಲ್ಲಿ ಟೆನಿಸ್ ಗ್ರ್ಯಾನ್ ಸ್ಲಾಂ ಜಯಿಸಿದ ಎರಡನೇ ಸಕ್ರಿಯ ಮಹಿಳಾ ಟೆನಿಸ್ ಆಟಗಾರ್ತಿ ಎನ್ನುವ ಹಿರಿಮೆಗೂ ಪಾತ್ರರಾಗಿದ್ದರು.
ಇದೀಗ ಆ್ಯಶ್ಲೆ ಬಾರ್ಟಿ, ತಮ್ಮ ಅಧಿಕೃತ ಇನ್‌ಸ್ಟಾಗ್ರಾಂ ಖಾತೆಯಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದು, ಇದರಲ್ಲಿ ಇಂದು ನನ್ನ ಪಾಲಿಗೆ ವಿಭಿನ್ನ ಹಾಗೂ ಭಾವನಾತ್ಮಕ ದಿನ, ಯಾಕೆಂದರೆ ನಾನಿಂದು ಟೆನಿಸ್‌ಗೆ ವಿದಾಯ ಹೇಳುತ್ತಿದ್ದೇನೆ ಎಂದು ಮಹತ್ವದ ನಿರ್ಧಾರವನ್ನು ಪ್ರಕಟಿಸಿದ್ದಾರೆ. ನಾನು ಈ ವಿಚಾರವನ್ನು ನಿಮ್ಮ ಜತೆ ಹೇಗೆ ಹಂಚಿಕೊಳ್ಳಬೇಕು ಎನ್ನುವುದೇ ತಿಳಿಯುಲಿಲ್ಲ. ಹೀಗಾಗಿ ನನ್ನ ಆತ್ಮೀಯ ಗೆಳತಿ ಹಾಗೂ ಡಬಲ್ಸ್ ಸಹ ಆಟಗಾರ್ತಿ ಕ್ರಾಸಿ ಡೆಲೆಕ್ವಾ ನನಗೆ ಸಹಾಯ ಮಾಡಿದರು.
ನಾನು ತುಂಬಾ ಸಂತೋಷವಾಗಿದ್ದೇನೆ ಹಾಗೂ ನಿವೃತ್ತಿ ಪಡೆಯಲು ಇದು ಸರಿಯಾದ ಸಮಯವೆಂದು ತೀರ್ಮಾನಿಸಿದ್ದೇನೆ. ಟೆನಿಸ್‌ನಲ್ಲಿ ನನಗೆ ಎಲ್ಲವೂ ಸಿಕ್ಕದ್ದು, ಇದು ನನ್ನೆಲ್ಲ ಕನಸುಗಳನ್ನು ಈಡೇರಿಸಿದೆ. ಟೆನಿಸ್‌ನಿಂದ ನಾನು ಏನೆಲ್ಲಾ ಪಡೆದಿದ್ದೇನೋ ಅದೆಲ್ಲದಕ್ಕೂ ನಾನು ಕೃತಜ್ಞರಾಗಿದ್ದೇನೆ. ಆದರೆ ಟೆನಿಸ್‌ನಿಂದ ದೂರ ಸರಿಯಲು ಇದು ಸಕಾಲ ಎಂದು ನನಗನಿಸುತ್ತಿದೆ. ಹೀಗಾಗಿ ಟೆನಿಸ್ ರಾಕೆಟ್ ಬದಿಗಿಟ್ಟು ಮತ್ತೆ ಕನಸು ಬೆನ್ನತ್ತಬೇಕೆಂದಿದ್ದೇನೆ ಎಂದು 3 ಗ್ರ್ಯಾನ್ ಸ್ಲಾಂ ಒಡತಿ ಆ್ಯಶ್ಲೆ ಬಾರ್ಟಿ ಹೇಳಿದ್ದಾರೆ.
ಆ್ಯಶ್ಲೆ ಬಾರ್ಟಿ ಕಳೆದ ಎರಡು ವರ್ಷಗಳಿಗಿಂತ ಹೆಚ್ಚುಕಾಲ ಮಹಿಳಾ ಟೆನಿಸ್ ಸಿಂಗಲ್ಸ್‌ನಲ್ಲಿ ನಂ.1 ಸ್ಥಾನ ಕಾಯ್ದುಕೊಂಡಿದ್ದಾರೆ. ಈ ಮೊದಲು 2019ರಲ್ಲಿ ಫ್ರೆಂಚ್ ಓಪನ್ (French Open) ಗ್ರ್ಯಾನ್ ಸ್ಲಾಂ ಜಯಿಸಿದ್ದ ಆ್ಯಶ್ಲೆ ಬಾರ್ಟಿ, ಇದಾದ ಬಳಿಕ ಕಳೆದ ವರ್ಷ ವಿಂಬಲ್ಡನ್ (2021) ಗ್ರ್ಯಾನ್ ಸ್ಲಾಂ ಮುಡಿಗೇರಿಸಿಕೊಂಡಿದ್ದರು.
ಟೆನಿಸ್ ಬಿಟ್ಟು ಕ್ರಿಕೆಟ್, ಕ್ರಿಕೆಟ್ ಬಿಟ್ಟು ಮತ್ತೆ ಟೆನಿಸ್: ಆ್ಯಶ್ಲೆ ಬಾರ್ಟಿ ಸಾಧನೆಯ ಹಾದಿ..!
ಟೆನಿಸ್ ಕ್ರೀಡೆಯ ಅದ್ಭುತ ರಾಯಬಾರಿಯಾಗಿದ್ದಕ್ಕೆ ಹಾಗೂ ಜಗತ್ತಿಯ ಹಲವು ಮಹಿಳೆಯರಿಗೆ ಸ್ಪೂರ್ತಿಯಾಗಿದ್ದಕ್ಕೆ ನಿಮಗೆ ಅನಂತ ಧನ್ಯವಾದಗಳು. ನಾವು ನಿಮ್ಮನ್ನು ಮಿಸ್ ಮಾಡಿಕೊಳ್ಳಲಿದ್ದೇವೆ ಎಂದು ಮಹಿಳಾ ಟೆನಿಸ್ ಅಸೋಸಿಯೇಷನ್ ಟ್ವೀಟ್ ಮಾಡಿದ್ದಾರೆ.
2014ರ ಋುತುವಿನ ಬಳಿಕ ಟೆನಿಸ್ ಬಿಟ್ಟು ಕ್ರಿಕೆಟ್‌ನತ್ತ ಆಕರ್ಷಿತರಾದ ಬಾರ್ಟಿ, ಉದ್ಘಾಟನಾ ಆವೃತ್ತಿಯ ಮಹಿಳಾ ಬಿಗ್‌ಬ್ಯಾಶ್ ಲೀಗ್‌ನಲ್ಲಿ (Big Bash League) ಬ್ರಿಸ್ಬೇನ್ ಹೀಟ್ ಪರ ಆಡಿದರು. ಮೆಲ್ಬರ್ನ್ ವಿರುದ್ಧದ ಪಂದ್ಯದಲ್ಲಿ 27 ಎಸೆತಗಳಲ್ಲಿ 39 ರನ್ ಸಿಡಿಸಿ ಗಮನ ಸೆಳೆದರು. ಅಲ್ಲದೇ ಕೆಲ ಸ್ಥಳೀಯ ಟೂರ್ನಿಗಳಲ್ಲೂ ಪಾಲ್ಗೊಂಡರು. 2016ರಲ್ಲಿ ಟೆನಿಸ್‌ಗೆ ಮರಳಿದ ಬಾರ್ಟಿ, ಹೆಚ್ಚಾಗಿ ಡಬಲ್ಸ್‌ನಲ್ಲಿ ಸ್ಪರ್ಧಿಸಿದರು. 2017ರಲ್ಲಿ ಸಿಂಗಲ್ಸ್ ಸ್ಪರ್ಧೆಗಳಲ್ಲಿ ಕಣಕ್ಕಿಳಿಯಲು ಆರಂಭಿಸಿದ ಬಾರ್ಟಿ, 2018ರ ಯುಎಸ್ ಓಪನ್ ಮಹಿಳಾ ಡಬಲ್ಸ್‌ನಲ್ಲಿ ಅಮೆರಿಕದ ಕೊಕೊ ವ್ಯಾಂಡೆವಿ ಜೊತೆ ಸೇರಿ ಪ್ರಶಸ್ತಿ ಜಯಿಸಿದರು. 2019ರಲ್ಲಿ ಸಿಂಗಲ್ಸ್‌ನಲ್ಲಿ ಚೊಚ್ಚಲ ಗ್ರ್ಯಾನ್ ಸ್ಲಾಂ ಗೆದ್ದ ಬಾರ್ಟಿ, ವಿಶ್ವ ನಂ.1 ಪಟ್ಟಕ್ಕೇರಿದರು.