ಟೆನಿಸ್ ಬಿಟ್ಟು ಕ್ರಿಕೆಟ್, ಕ್ರಿಕೆಟ್ ಬಿಟ್ಟು ಮತ್ತೆ ಟೆನಿಸ್: ಆ್ಯಶ್ಲೆ ಬಾರ್ಟಿ ಸಾಧನೆಯ ಹಾದಿ..!
* ಆಸ್ಟ್ರೇಲಿಯನ್ ಓಪನ್ ಸಿಂಗಲ್ಸ್ ಚಾಂಪಿಯನ್ ಆ್ಯಶ್ಲೆ ಬಾರ್ಟಿ ಸಾಧನೆಗೆ ಮತ್ತೊಂದು ಗರಿ
* ವೃತ್ತಿಬದುಕಿನ 3ನೇ ಪ್ರಶಸ್ತಿಗೆ ಮುತ್ತಿಟ್ಟ ಆ್ಯಶ್ಲೆ ಬಾರ್ಟಿ
* ಟೆನಿಸ್ ಬಿಟ್ಟು ಕ್ರಿಕೆಟ್, ಕ್ರಿಕೆಟ್ ಬಿಟ್ಟು ಮತ್ತೆ ಟೆನಿಸ್ ಆರಂಭಿಸಿ ಯಶಸ್ವಿಯಾದ ಬಾರ್ಟಿ
ಮೆಲ್ಬರ್ನ್(ಜ.30): ಆಸ್ಪ್ರೇಲಿಯನ್ನರ ಆಸ್ಪ್ರೇಲಿಯನ್ ಓಪನ್ (Australian Open) ಪ್ರಶಸ್ತಿ ಬರವನ್ನು ಆ್ಯಶ್ಲೆ ಬಾರ್ಟಿ (Ashleigh Barty) ನೀಗಿಸಿದ್ದಾರೆ. 44 ವರ್ಷಗಳ ಬಳಿಕ ತವರಿನ ಗ್ರ್ಯಾನ್ ಸ್ಲಾಂ ಗೆದ್ದ ದಾಖಲೆಯನ್ನು ಬಾರ್ಟಿ ಬರೆದಿದ್ದು, ತಮ್ಮ ವೃತ್ತಿಬದುಕಿನ 3ನೇ ಪ್ರಶಸ್ತಿಗೆ ಮುತ್ತಿಟ್ಟಿದ್ದಾರೆ. ಶನಿವಾರ ನಡೆದ ಮಹಿಳಾ ಸಿಂಗಲ್ಸ್ ಫೈನಲ್‌ನಲ್ಲಿ ವಿಶ್ವ ನಂ.1 ಆಟಗಾರ್ತಿ, ಅಮೆರಿಕದ ಡೇನಿಯಲ್ ಕಾಲಿನ್ಸ್ (Danielle Collins) ವಿರುದ್ಧ 6-3, 7-6(2) ಸೆಟ್‌ಗಳಲ್ಲಿ ಗೆಲುವು ಸಾಧಿಸಿದರು.
ಟೆನಿಸ್ ಬಿಟ್ಟು ಕ್ರಿಕೆಟ್, ಕ್ರಿಕೆಟ್ ಬಿಟ್ಟು ಮತ್ತೆ ಟೆನಿಸ್!
ಆ್ಯಶ್ಲೆ ಬಾರ್ಟಿ ಆಸ್ಪ್ರೇಲಿಯಾದ ಮೂಲನಿವಾಸಿಗಳ ಜನಾಂಗಕ್ಕೆ ಸೇರುತ್ತಾರೆ. ಅವರ ತಂದೆ, ತಾಯಿ ಇಬ್ಬರೂ ಗಾಲ್ಫ್‌ನಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ತಮ್ಮ 4ನೇ ವಯಸ್ಸಿನಲ್ಲೇ ಟೆನಿಸ್ ಆಡಲು ಆರಂಭಿಸಿದ ಬಾರ್ಟಿ, ತಮ್ಮ 13ನೇ ವಯಸ್ಸಿನಲ್ಲಿ ಕಿರಿಯರ ವಿಭಾಗದಲ್ಲಿ ಸ್ಪರ್ಧಿಸಲು ಶುರು ಮಾಡಿದರು. 15ನೇ ವಯಸ್ಸಿನಲ್ಲಿ ಕಿರಿಯರ ವಿಂಬಲ್ಡನ್ ಚಾಂಪಿಯನ್ ಆದ ಬಾರ್ಟಿ, 2013-14ರಲ್ಲಿ ಡಬಲ್ಸ್‌ನತ್ತ ಹೆಚ್ಚು ಗಮನ ಹರಿಸಿದರು.
Australian Open 2022: ವರ್ಷದ ಮೊದಲ ಗ್ರ್ಯಾನ್ ಸ್ಲಾಂ ಜಯಿಸಿ ಇತಿಹಾಸ ಬರೆದ ಆ್ಯಶ್ಲೆ ಬಾರ್ಟಿ
2014ರ ಋುತುವಿನ ಬಳಿಕ ಟೆನಿಸ್ ಬಿಟ್ಟು ಕ್ರಿಕೆಟ್‌ನತ್ತ ಆಕರ್ಷಿತರಾದ ಬಾರ್ಟಿ, ಉದ್ಘಾಟನಾ ಆವೃತ್ತಿಯ ಮಹಿಳಾ ಬಿಗ್‌ಬ್ಯಾಶ್ ಲೀಗ್‌ನಲ್ಲಿ (Big Bash League) ಬ್ರಿಸ್ಬೇನ್ ಹೀಟ್ ಪರ ಆಡಿದರು. ಮೆಲ್ಬರ್ನ್ ವಿರುದ್ಧದ ಪಂದ್ಯದಲ್ಲಿ 27 ಎಸೆತಗಳಲ್ಲಿ 39 ರನ್ ಸಿಡಿಸಿ ಗಮನ ಸೆಳೆದರು. ಅಲ್ಲದೇ ಕೆಲ ಸ್ಥಳೀಯ ಟೂರ್ನಿಗಳಲ್ಲೂ ಪಾಲ್ಗೊಂಡರು. 2016ರಲ್ಲಿ ಟೆನಿಸ್‌ಗೆ ಮರಳಿದ ಬಾರ್ಟಿ, ಹೆಚ್ಚಾಗಿ ಡಬಲ್ಸ್‌ನಲ್ಲಿ ಸ್ಪರ್ಧಿಸಿದರು. 2017ರಲ್ಲಿ ಸಿಂಗಲ್ಸ್ ಸ್ಪರ್ಧೆಗಳಲ್ಲಿ ಕಣಕ್ಕಿಳಿಯಲು ಆರಂಭಿಸಿದ ಬಾರ್ಟಿ, 2018ರ ಯುಎಸ್ ಓಪನ್ ಮಹಿಳಾ ಡಬಲ್ಸ್‌ನಲ್ಲಿ ಅಮೆರಿಕದ ಕೊಕೊ ವ್ಯಾಂಡೆವಿ ಜೊತೆ ಸೇರಿ ಪ್ರಶಸ್ತಿ ಜಯಿಸಿದರು. 2019ರಲ್ಲಿ ಸಿಂಗಲ್ಸ್‌ನಲ್ಲಿ ಚೊಚ್ಚಲ ಗ್ರ್ಯಾನ್ ಸ್ಲಾಂ ಗೆದ್ದ ಬಾರ್ಟಿ, ವಿಶ್ವ ನಂ.1 ಪಟ್ಟಕ್ಕೇರಿದರು.
ಒಂದೂ ಸೆಟ್ ಸೋಲದೆ ಬಾರ್ಟಿ ಚಾಂಪಿಯನ್!
ಟೂರ್ನಿಯುದ್ದಕ್ಕೂ ಅಬ್ಬರಿಸಿದ ಬಾರ್ಟಿ ಒಂದೂ ಸೆಟ್ ಸೋಲದೆ ಚಾಂಪಿಯನ್ ಪಟ್ಟಕ್ಕೇರಿದ್ದು ವಿಶೇಷ. ಮೊದಲ ಸುತ್ತಿನಲ್ಲಿ ಉಕ್ರೇನ್‌ನ ಸುರೆಂಕೊ ವಿರುದ್ಧ 6-0, 6-1ರಲ್ಲಿ ಜಯಿಸಿದ್ದ ಬಾರ್ಟಿ, 2ನೇ ಸುತ್ತಿನಲ್ಲಿ ಇಟಲಿಯ ಬ್ರೊಂಜೆಟಿ ವಿರುದ್ಧ 6-1, 6-1ರಲ್ಲಿ ಗೆಲುವು ಪಡೆದರು. 3ನೇ ಸುತ್ತಿನಲ್ಲಿ ಇಟಲಿಯ ಜಾರ್ಜಿ ವಿರುದ್ಧ 6-2, 6-3, ನಾಲ್ಕನೇ ಸುತ್ತಿನಲ್ಲಿ ಅಮೆರಿಕದ ಅನಿಸಿಮೊವಾ ವಿರುದ್ಧ 6-4, 6-3, ಕ್ವಾರ್ಟರ್ ಫೈನಲ್‌ನಲ್ಲಿ ಅಮೆರಿಕದ ಪೆಗ್ಯುಲಾ ವಿರುದ್ಧ 6-2, 6-0, ಸೆಮಿಫೈನಲ್‌ನಲ್ಲಿ ಅಮೆರಿಕದ ಮ್ಯಾಡಿಸನ್ ಕೀಸ್ ವಿರುದ್ಧ 6-1, 6-3, ಫೈನಲ್‌ನಲ್ಲಿ ಅಮೆರಿಕದ ಕಾಲಿನ್ಸ್ ವಿರುದ್ಧ 6-3, 7-6 ಸೆಟ್‌ಗಳಲ್ಲಿ ಗೆಲುವು ಪಡೆದರು. ತಮ್ಮ ಕೊನೆ 4 ಪಂದ್ಯಗಳಲ್ಲಿ ಅಮೆರಿಕದ ಆಟಗಾರ್ತಿಯರಿಗೆ ಸೋಲುಣಿಸಿದ್ದು ಗಮನಾರ್ಹ.
ಚಾಂಪಿಯನ್ ಬಾರ್ಟಿ ಹೆಜ್ಜೆ ಗುರುತು
ಏಪ್ರಿಲ್ 2000: 4ನೇ ವಯಸ್ಸಿನಲ್ಲಿ ಟೆನಿಸ್ ಆಡಲು ಆರಂಭ. ಬ್ರಿಸ್ಬೇನ್‌ನ ಜಿಮ್ ಜಾಯ್‌್ಸರಿಂದ ಮಾರ್ಗದರ್ಶನ.
ಏಪ್ರಿಲ್ 2010: 14ನೇ ವಯಸ್ಸನಲ್ಲಿ ವೃತ್ತಿಪರ ಟೆನಿಸ್‌ಗೆ ಪಾದಾರ್ಪಣೆ. ಇಂಗ್ಲೆಂಡ್‌ನ ಇಪ್ಸಿ$್ವಚ್‌ನಲ್ಲಿ ಮೊದಲ ಅಂ.ರಾ.ಪಂದ್ಯ. ಮೊದಲ ಪಂದ್ಯದಲ್ಲಿ ಸೋಲು.
ಜನವರಿ 2011: ಮೊದಲ ಬಾರಿ ಕಿರಿಯರ ಗ್ರ್ಯಾನ್ ಸ್ಲಾಂನಲ್ಲಿ ಕಣಕ್ಕೆ. ಆಸ್ಪ್ರೇಲಿಯನ್ ಓಪನ್‌ನ ಮೊದಲ ಸುತ್ತಿನಲ್ಲಿ ಸೋಲು.
ಜುಲೈ 2011: ಕಿರಿಯರ ವಿಂಬಲ್ಡನ್‌ನಲ್ಲಿ ಚಾಂಪಿಯನ್.
ಸೆಪ್ಟೆಂಬರ್ 2014: ಟೆನಿಸ್‌ನಿಂದ ತಾತ್ಕಾಲಿಕ ಬಿಡುವು. ಬಿಗ್‌ಬ್ಯಾಶ್ ಟಿ20 ಕ್ರಿಕೆಟ್‌ನಲ್ಲಿ ಕಣಕ್ಕೆ
ಫೆಬ್ರವರಿ 2016: ವೃತ್ತಿಪರ ಟೆನಿಸ್‌ಗೆ ವಾಪಸ್.
ಫೆಬ್ರವರಿ 2017: ಚೊಚ್ಚಲ ಡಬ್ಲ್ಯುಟಿಎ ಪ್ರಶಸ್ತಿ ಗೆಲುವು(ಮಲೇಷ್ಯಾ ಓಪನ್). ವಿಶ್ವ ರಾರಯಂಕಿಂಗ್‌ನಲ್ಲಿ 17ನೇ ಸ್ಥಾನಕ್ಕೇರಿಕೆ.
ಜೂನ್ 2019: ಫ್ರೆಂಚ್ ಓಪನ್ ಚಾಂಪಿಯನ್. ಚೊಚ್ಚಲ ಗ್ರ್ಯಾನ್ ಸ್ಲಾಂ ಪ್ರಶಸ್ತಿ ಗೆಲುವು.
ಜುಲೈ 2021: ಚೊಚ್ಚಲ ವಿಂಬಲ್ಡನ್ ಟ್ರೋಫಿ ಗೆಲುವು.
ಜನವರಿ 2022: ಚೊಚ್ಚಲ ಆಸ್ಪ್ರೇಲಿಯನ್ ಓಪನ್ ಗೆಲುವು.