ಒಂದು ಪೀಳಿಗೆಯನ್ನೇ ತನ್ನತ್ತ ಆಕರ್ಷಿಸಿಕೊಂಡ ಭಾರತೀಯ ಟೆನಿಸ್‌ ಲೋಕದ ದಿಗ್ಗಜ ಈತ. ಭಾರತೀಯ ಹಾಕಿಗೆ ಧ್ಯಾನ್‌ಚಂದ್‌, ಓಟಕ್ಕೆ ಮಿಲ್ಖಾ ಸಿಂಗ್‌, ಕ್ರಿಕೆಟ್‌ಗೆ ಸಚಿನ್‌ ತೆಂಡುಲ್ಕರ್‌, ಚೆಸ್‌ಗೆ ವಿಶ್ವನಾಥನ್‌ ಆನಂದ್‌, ಬಿಲಿಯರ್ಡ್ಸ್ಗೆ ಗೀತ್‌ ಸೇಠಿ, ಸ್ನೂಕರ್‌ಗೆ ಪಂಕಜ್‌ ಅಡ್ವಾಣಿ ಹೇಗೋ, ಹಾಗೆ ಭಾರತೀಯ ಟೆನಿಸ್‌ಗೆ ಲಿಯಾಂಡರ್‌ ಪೇಸ್‌!

ರವಿಶಂಕರ್‌ ಭಟ್‌

ಅಜಮಾಸು 30 ವರ್ಷಗಳ ಕಾಲ ಅಂತಾರಾಷ್ಟ್ರೀಯ ಟೆನಿಸ್‌ನಲ್ಲಿ ಮಿಂಚಿ ಮಿನುಗಿದ, 7 ಒಲಿಂಪಿಕ್ಸ್‌ಗಳಲ್ಲಿ ಪಾಲ್ಗೊಂಡ ಭಾರತ ಏಕೈಕ ಟೆನಿಸ್‌ ಆಟಗಾರ, ಭಾರತಕ್ಕೆ ಟೆನಿಸ್‌ ಕ್ರೀಡೆಯಲ್ಲಿ ಒಲಿಂಪಿಕ್ಸ್‌ ಪದಕ ತಂದ ವೀರ, ಡೇವಿಸ್‌ ಕಪ್‌ ಟೆನಿಸ್‌ನಲ್ಲಿ ಈಗಲೂ ವಿಶ್ವದಾಖಲೆಯಾಗಿಯೇ ಉಳಿದಿರುವ 43 ಗೆಲುವುಗಳ ಸರದಾರ, 8 ಗ್ರ್ಯಾಂಡ್‌ಸ್ಲಾಮ್‌ ಪುರುಷರ ಡಬಲ್ಸ್‌ ಪ್ರಶಸ್ತಿ, 10 ಗ್ರ್ಯಾಂಡ್‌ಸ್ಲಾಮ್‌ ಮಿಶ್ರ ಡಬಲ್ಸ್‌ ಪ್ರಶಸ್ತಿ ವಿಜೇತ, ಎಟಿಪಿ ಟೂರ್‌ ವಿಭಾಗದಲ್ಲಿ 55 ಪುರುಷರ ಡಬಲ್ಸ್‌ ಪ್ರಶಸ್ತಿ ಗೆದ್ದ, ಎಟಿಪಿ ಚಾಲೆಂಜ​ರ್ಸ್ ಪಂದ್ಯಾವಳಿಗಳಲ್ಲಿ 26 ಪುರುಷರ ಡಬಲ್ಸ್‌ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡ ಒಟ್ಟಾರೆ 750ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಗೆಲುವು ಸಾಧಿಸಿದ... ಹೀಗೆ ಮೊಗೆದಷ್ಟೂ ಮುಗಿಯದಷ್ಟು ದಾಖಲೆಗಳನ್ನು ತನ್ನ ಹೆಸರಿಗೆ ಬರೆಸಿಕೊಂಡ ಮಹಾನುಭಾವ ಇದೀಗಷ್ಟೇ ಭಾರತದ ನೆಲದಲ್ಲಿ ಕೊನೆಯ ಬಾರಿಗೆ ವೃತ್ತಿಪರ ಟೆನಿಸ್‌ ಆಡಿ ರ‍್ಯಾಕೆಟ್‌ ಕೆಳಗಿಟ್ಟಿದ್ದಾರೆ. ಈಗಾಗಲೇ ಘೋಷಿಸಿರುವಂತೆ ಈ ವರ್ಷಾಂತ್ಯದೊಳಗೆ ವೃತ್ತಿಪರ ಟೆನಿಸ್‌ ಆಟಕ್ಕೆ ಸಂಪೂರ್ಣ ವಿದಾಯ ಹೇಳಲಿದ್ದಾರೆ.

ಲಿಯಾಂಡರ್ ಎನ್ನುವ ವಂಡರ್​ ಹುಡುಗ; ಟೆನಿಸ್ ಜಗತ್ತನ್ನೇ ತನ್ನತ್ತ ತಿರುಗಿಸಿದ ಸಲಗ!

ಹೌದು, ಈ ದಂತಕಥೆ ಇದೀಗ ಸ್ವದೇಶೀ ಕಣದಲ್ಲಿ ತನ್ನ ಕಟ್ಟಕಡೆಯ ಪಂದ್ಯವನ್ನಾಡಿದ್ದಾರೆ. ಬೆಂಗಳೂರಿನ ಕರ್ನಾಟಕ ರಾಜ್ಯ ಲಾನ್‌ ಟೆನಿಸ್‌ ಸಂಸ್ಥೆಯ (ಕೆಎಸ್‌ಎಲ್‌ಟಿಎ) ಅಂಕಣದಲ್ಲಿ ನಡೆಯುತ್ತಿರುವ ಬೆಂಗಳೂರು ಓಪನ್‌ ಎಟಿಪಿ ಚಾಲೆಂಜರ್‌ ಟೂರ್ನಿಯಲ್ಲಿ ಮೊದಲ ಹಾಗೂ ಕೊನೆಯ ಬಾರಿ ಕಣಕ್ಕಿಳಿದ 46 ವರ್ಷದ ಲಿಯಾಂಡರ್‌ ಪೇಸ್‌, ಅವರ ಆಟವನ್ನು ಕಡೆಯ ಬಾರಿಗೆ ವೀಕ್ಷಿಸುವ ಸೌಭಾಗ್ಯವನ್ನು ತವರಿನ ಅಭಿಮಾನಿಗಳಿಗೆ ದಯಪಾಲಿಸಿದ್ದಾರೆ.

ಕಡೆಯ ಒಂದು ಗರ್ಜನೆ:

ಕಳೆದ ವರ್ಷ ವಿದೇಶೀ ಟೂರ್ನಿಯೊಂದರಲ್ಲಿ ಸೋತ ಬಳಿಕ ಸ್ವತಃ ಒಲಿಂಪಿಯನ್‌ ಆಗಿರುವ ತಂದೆ ವೀಸಿ ಪೇಸ್‌ ಬಳಿ ಬಂದ ಲಿಯಾಂಡರ್‌, ‘ಸಾಕಿನ್ನು. ನನ್ನ ವೃತ್ತಿ ಬದುಕು ಮುಗಿಯಿತು. ಮತ್ತೆ ಆಡಲಾರೆ’ ಎಂದರಂತೆ. ಆಗ ತಂದೆ, ‘ನೀನು ಯಾರ ಮುಂದೆ ಬೆಳೆದಿದ್ದೀಯೋ, ಯಾರು ನಿನ್ನನ್ನು ಆರಾಧಿಸಿದ್ದಾರೋ ಅವರಿಗೆ ಹೇಳದೆ, ಅವರನ್ನು ಕಡೆಯ ಬಾರಿಗೆ ರಂಜಿಸದೆ ನಿವೃತ್ತನಾಗುವುದು ಸರ್ವಥಾ ಸರಿಯಲ್ಲ.’ ಅಂದರಂತೆ. ತಂದೆಯ ಮಾತಿಗೆ ತಲೆಬಾಗಿದ ಲಿಯಾಂಡರ್‌, ಇದೀಗ ಭಾರತದ ನೆಲದಲ್ಲಿ ಕಡೆಯ ಬಾರಿಗೆ ಟೆನಿಸ್‌ ಪ್ರೇಮಿಗಳನ್ನು ತಮ್ಮ ಆಟದ ಸವಿ ಉಣಬಡಿಸಿದ್ದಾರೆ. ‘ಒಂದು ಕಡೆಯ ಗರ್ಜನೆ’ (#OnelastRoar) ಎಂಬ ಘೋಷವಾಕ್ಯದೊಂದಿಗೆ ಬೆಂಗಳೂರು ಓಪನ್‌ ಟೆನಿಸ್‌ನಲ್ಲಿ ಪಾಲ್ಗೊಂಡಿದ್ದಾರೆ. ಈ ವರ್ಷಾಂತ್ಯದೊಳಗೆ ಇನ್ನೂ ಒಂದೆರಡು ವಿದೇಶೀ ಪಂದ್ಯಾವಳಿಗಳಲ್ಲಿ ಆಡಿ ವೃತ್ತಿಬದುಕಿಗೆ ಪೂರ್ಣ ವಿರಾಮ ಇಡುವ ನಿರ್ಧಾರಕ್ಕೆ ಬಂದಿದ್ದಾರೆ.

ಈ ವಿದಾಯದ ಆಟಕ್ಕೇಕೆ ‘ಕಡೆಯ ಗರ್ಜನೆ’ ಎಂಬ ಹೆಸರಿಟ್ಟಿದ್ದೀರಿ ಎಂದು ಕೇಳಿದರೆ, ‘ನನ್ನ ಹೆಸರು ಲಿಯಾಂಡರ್‌. ಗ್ರೀಕ್‌ ಭಾಷೆಯಲ್ಲಿ ಸಿಂಹಮಾನವ. ಸಿಂಹಕ್ಕೆ ಗರ್ಜನೆ ಇದ್ದಂತೆ, ಟೆನಿಸ್‌ ನನ್ನ ಗುರುತು. ಹಾಗಾಗಿಯೇ, ಕಡೆಯ ಆಟಕ್ಕೆ ಕಡೆಯ ಗರ್ಜನೆ ಎಂದಿದ್ದೇನೆ’ ಎನ್ನುತ್ತಾರೆ ಪೇಸ್‌.

ವೃತ್ತಿ ಬದುಕಿನ ಮೆಲುಕು:

ತಮ್ಮ ಬದುಕಿನ ಗುರುಗಳು, ಹಿತೈಷಿಗಳು, ಆಪ್ತೇಷ್ಟರು, ಭವಿಷ್ಯದ ಪಾಲುದಾರರ ಸಮ್ಮುಖದಲ್ಲಿ ಲಿಯಾಂಡರ್‌, ತಮ್ಮ ವೃತ್ತಿ ಬದುಕಿನ ಆರಂಭದಿಂದ ಕೊನೆಯವರೆಗಿನ ಸವಾಲು, ಹೋರಾಟ, ಅನುಭವಗಳ ಮೂಟೆಯನ್ನೇ ಬಿಚ್ಚಿಟ್ಟರವರು. ಶುಕ್ರವಾರ ತಡರಾತ್ರಿ ಬೆಂಗಳೂರು ಓಪನ್‌ ಪುರುಷರ ಡಬಲ್ಸ್‌ ಸೆಮಿಫೈನಲ್‌ ಪಂದ್ಯ ಗೆದ್ದ ಬಳಿಕ ಪಂಚತಾರಾ ಹೋಟೆಲೊಂದರಲ್ಲಿ ನಡೆದ ಒಂದು ಪುಟ್ಟವಿದಾಯಕೂಟದಲ್ಲಿ ಮಾತನಾಡಿದ ಅವರು, ಗೋವನ್‌ ಕ್ರೈಸ್ತರಾದ ಹಾಕಿಪಟು ತಂದೆ, ಬಂಗಾಳಿ ಬಾಸ್ಕೆಟ್‌ಬಾಲ್‌ ಆಟಗಾರ್ತಿ ತಾಯಿಯ ಮಗನಾಗಿ ಕೋಲ್ಕತಾದಲ್ಲಿ ಜನಿಸಿದ್ದು, ಮಗುವಾಗಿದ್ದಾಗಲೇ ಹೃದಯ ಸಮಸ್ಯೆ ಹೊಂದಿದ್ದು, ಫುಟ್ಬಾಲ್‌-ಕ್ರಿಕೆಟ್‌ ಹುಚ್ಚಿರುವ ಮಹಾನಗರಿಯ ಗಲ್ಲಿಗಳಲ್ಲಿ ಆಡುತ್ತಾ ಬೆಳೆದದ್ದು, ಒಲಿಂಪಿಕ್ಸ್‌ ಹಾಕಿಪಟು ಆಗಿದ್ದ ತಂದೆಯ ಪ್ರಭಾವ ಮತ್ತು ಮಾರ್ಗದರ್ಶನದಿಂದ ಟೆನಿಸ್‌ ಲೋಕಕ್ಕೆ ಹೊರಳಿದ್ದು, 15 ವರ್ಷದವನಿದ್ದಾಗಲೇ ಡೇವಿಸ್‌ ಕಪ್‌ಗಾಗಿ ರಾಷ್ಟ್ರೀಯ ತಂಡಕ್ಕೆ ಅನಿರೀಕ್ಷಿತವಾಗಿ ಆಯ್ಕೆಯಾದದ್ದು, ಟೆನಿಸ್‌ ಆಟಗಾರರೆಲ್ಲಾ 6 ಅಡಿ ಮೀರಿ ಎತ್ತರವಿದ್ದ ಕಾಲದಲ್ಲಿ 5 ಅಡಿ 10 ಇಂಚು ಎತ್ತರದ ತಾನು, ಸಿಂಗಲ್ಸ್‌ ಆಡಲಾಗದ ದೌರ್ಬಲ್ಯಗಳನ್ನು ಬದಿಗೊತ್ತಿ ತನ್ನ ಇತಿಮಿತಿಯನ್ನೇ ಶಕ್ತಿಯನ್ನಾಗಿ ಪರಿವರ್ತಿಸಿ ಸಫಲನಾದದ್ದು ಹೇಗೆ ಎಂಬಿತ್ಯಾದಿ ಸಣ್ಣ ಸಣ್ಣ ಅಂಶಗಳನ್ನೂ ಮೆಲುಕು ಹಾಕಿದರು.

2020ರಲ್ಲಿ ಟೆನಿಸ್‌ಗೆ ಪೇಸ್‌ ಗುಡ್‌ಬೈ!

ಲೀ-ಹೆಶ್‌ ಜೋಡಿ:

ಲೀ-ಹೆಶ್‌ (ಲಿಯಾಂಡರ್‌ ಪೇಸ್‌ ಮತ್ತು ಮಹೇಶ್‌ ಭೂಪತಿ) ಭಾರತದ ಅತ್ಯಂತ ಯಶಸ್ವಿ ಟೆನಿಸ್‌ ಯುಗಳ-ಜೋಡಿ ಎಂದೇ ಖ್ಯಾತಿವೆತ್ತವರು. ಒಂದೊಮ್ಮೆ ವಿಶ್ವದಲ್ಲೇ ನಂ.1 ಶ್ರೇಯಾಂಕದಲ್ಲಿದ್ದ ಡಬಲ್ಸ್‌ ಜೋಡಿಯದು. ಜೂನಿಯರ್‌ ವಿಂಬಲ್ಡನ್‌ ಆಡುವಾಗ ಅನಿರೀಕ್ಷಿತವಾಗಿ ಮಹೇಶ್‌ ತಮ್ಮ ಆಶ್ರಯ ಪಡೆದದ್ದು, ಒಂದೇ ತಟ್ಟೆಯಲ್ಲಿ ಊಟ ಮಾಡಿದ್ದು, ಸುದೀರ್ಘ ಕಾಲ ಜೋಡಿಯಾಗಿ ಅಸಂಖ್ಯ ಪ್ರಶಸ್ತಿಗಳನ್ನು ಭಾರತಕ್ಕಾಗಿ ಗೆದ್ದದ್ದರಿಂದ ಹಿಡಿದು, ತಮ್ಮಿಬ್ಬರ ಸುತ್ತಲಿನ ವರ್ತುಲದಲ್ಲಿದ್ದವರಿಂದಾಗಿ ಜೋಡಿ ಹೇಗೆ ಬೇರ್ಪಟ್ಟಿತು ಎಂಬುದರ ಸೂಕ್ಷ್ಮ ಎಳೆಯನ್ನೂ ಹೊರಗೆಡವಿದರು ಜ್ಯೂನಿಯರ್‌ ಪೇಸ್‌.

ಕರ್ನಾಟಕದ ಹಾಕಿ ದಿಗ್ಗಜ ಎಂ.ಪಿ.ಗಣೇಶ್‌ ಸೇರಿದಂತೆ ತಮ್ಮ ವೃತ್ತಿಜೀವನಕ್ಕೆ ಮಾರ್ಗದರ್ಶನ ನೀಡಿದ, ತಾವು ಕುಗ್ಗಿದ್ದಾಗ ಹೆಗಲು ಹಿಡಿದು ನಿಲ್ಲಿಸಿದ ಒಬ್ಬೊಬ್ಬರನ್ನೂ ನೆನೆಸಿಕೊಂಡು ಧನ್ಯವಾದ ಹೇಳಿದ ಲಿಯಾಂಡರ್‌, ನಿವೃತ್ತಿಯ ನಂತರ ಕಿರಿಯರಿಗೆ ಏನಾದರೂ ಧಾರೆ ಎರೆಯುವ ತುಡಿತವನ್ನು ಹೊರ ಹಾಕಿದರು.

100ನೇ ಡಬಲ್ಸ್‌ ಕಿರೀಟ:

ಹೀಗೊಂದು ಸಂದರ್ಭದಲ್ಲಿ, ‘ಪೇಸ್‌, (ಶನಿವಾರ) ನೀವು ಗೆದ್ದರೆ ಅದು ನಿಮ್ಮ ವೃತ್ತಿಜೀವನದ 100ನೇ ಡಬಲ್ಸ್‌ ಗೆಲುವಾಗಲಿದೆ’ ಎಂದು ಹೇಳಿದರೆ, ‘ಹೌದೇನ್ರಿ? ಅದು ಹೇಗೆ? ನನಗೆ ಗೊತ್ತೇ ಇರಲಿಲ್ಲ. ಅದರ ವಿವರ ಇದ್ದರೆ ಕಳಿಸಿಕೊಡಿ, ಪ್ಲೀಸ್‌’ ಎಂದು ಮುಗ್ಧವಾಗಿ ಕೇಳುತ್ತಾರೆ. ‘8 ಪುರುಷರ ಡಬಲ್ಸ್‌ ಗ್ರ್ಯಾಂಡ್‌ಸ್ಲಾಮ್‌ ಪ್ರಶಸ್ತಿ, 10 ಮಿಶ್ರ ಡಬಲ್ಸ್‌ ಗ್ರ್ಯಾಂಡ್‌ಸ್ಲಾಮ್‌ ಪ್ರಶಸ್ತಿ, 55 ಎಟಿಪಿ ಟೂರ್‌ ಡಬಲ್ಸ್‌ ಪ್ರಶಸ್ತಿ, 26 ಎಟಿಪಿ ಚಾಲೆಂಜ​ರ್‍ಸ್ ಡಬಲ್ಸ್‌ ಪ್ರಶಸ್ತಿ ಗೆದ್ದಿದ್ದೀರಿ. ಬೆಂಗಳೂರು ಓಪನ್‌ ಗೆದ್ದರೆ 100ನೆಯದಾಗುತ್ತೆ’ ಎಂದು ವಿವರಿಸಿದರೆ, ‘ಅಯ್ಯೋ, ನನಗಿದು ಗೊತ್ತೇ ಇರಲಿಲ್ಲ’ ಎಂದು ಅಚ್ಚರಿ ವ್ಯಕ್ತಪಡಿಸುತ್ತಾರೆ. ನೆನಪೇ ಇಡದಷ್ಟುಗೆಲುವು ಗಳಿಸಿದ್ದು, ಅದ್ಭುತ ಸಾಧನೆಯಲ್ಲದೆ ಮತ್ತೇನು?

ಹಾಗೆ ನೋಡಿದರೆ, ಅಂತಾರಾಷ್ಟ್ರೀಯ ಟೆನಿಸ್‌ನಲ್ಲಿ ಸಿಂಗಲ್ಸ್‌ ಆಟಗಾರನಿಗಿರುವಷ್ಟುಬೆಲೆ ಡಬಲ್ಸ್‌ ಆಟಗಾರನಿಗೆ ಇರುವುದಿಲ್ಲ. ಅದೆಷ್ಟೇ ಚಿನ್ನದ ಪದಕ, ಗ್ರ್ಯಾಂಡ್‌ಸ್ಲಾಮ್‌, ಅಂತಾರಾಷ್ಟ್ರೀಯ ಟೂರ್ನಿಗಳನ್ನು ಗೆದ್ದರೂ ಡಬಲ್ಸ್‌ ಆಟಗಾರನಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಿಗುವ ಗೌರವ ಅಷ್ಟಕ್ಕಷ್ಟೆ. ಆದರೆ, ಛಲಗಾರ ಲಿಯಾಂಡರ್‌ ಆ ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲ, ಎದೆಗುಂದಲಿಲ್ಲ. ಪುರುಷರ ಡಬಲ್ಸ್‌ನಲ್ಲಿ ಮಹೇಶ್‌ ಭೂಪತಿ ಸೇರಿದಂತೆ ಅನೇಕರ ಜೊತೆಗೂಡಿ ಟೂರ್ನಿಗಳ ಮೇಲೆ ಟೂರ್ನಿಗಳನ್ನು ಗೆದ್ದುದೇ ಅಲ್ಲದೆ, ನವ್ರಾಟಿಲೋವಾ, ಹಿಂಗಿಸ್‌ರಂತಹ ಜಾಗತಿಕ ದಿಗ್ಗಜರನ್ನು ಜೊತೆಗೂಡಿ ಮಿಶ್ರ ಡಬಲ್ಸ್‌ನಲ್ಲೂ ಅತ್ಯದ್ಭುತ ಸಾಧನೆ ಮಾಡಿದರು. ಭಾರತದ ಮಟ್ಟಿಗೆ ಟೆನಿಸ್‌ ಎಂದರೆ ಲಿಯಾಂಡರ್‌ ಪೇಸ್‌ ಎನ್ನಿಸುವಷ್ಟುಹೆಸರು ಗಳಿಸಿದರು. ಅವರಿಂದು ನಿವೃತ್ತರಾದರೂ, ಮುಂದೊಂದು ದಿನ ಅಳಿದರೂ, ಭಾರತೀಯ ಟೆನಿಸ್‌ ಲೋಕದಲ್ಲಿ ಅವರ ಹೆಸರು ಅಳಿಸಲಾಗದಷ್ಟುಆಳವಾಗಿ ಅಚ್ಚೊತ್ತಿದೆ. ಥ್ಯಾಂಕ್ಯೂ - ಗುಡ್‌ಬೈ ಡಬಲ್ಸ್‌ ಕಿಂಗ್‌!

ಪ್ರಮುಖ ಗೌರವಗಳು

- 1990: ಕ್ರೀಡಾಪಟುಗಳಿಗೆ ಕೇಂದ್ರ ಸರ್ಕಾರ ನೀಡುವ ‘ಅರ್ಜುನ ಪ್ರಶಸ್ತಿ’

- 1996: ದೇಶದ ಸರ್ವೋಚ್ಚ ಕ್ರೀಡಾ ಪುರಸ್ಕಾರವಾದ ‘ಖೇಲ್‌ ರತ್ನ ಪ್ರಶಸ್ತಿ’

- 2001: ದೇಶದ 4ನೇ ಸರ್ವೋಚ್ಚ ನಾಗರಿಕ ಪುರಸ್ಕಾರವಾದ ‘ಪದ್ಮಶ್ರೀ’

- 2014: ದೇಶದ 3ನೇ ಸರ್ವೋಚ್ಚ ನಾಗರಿಕ ಪುರಸ್ಕಾರವಾದ ‘ಪದ್ಮಭೂಷಣ’

ಪ್ರಮುಖ ಸಾಧನೆಗಳು

- 1996ರಲ್ಲಿ: ಅಟ್ಲಾಂಟ ಒಲಿಂಪಿಕ್ಸ್‌ನ ಟೆನಿಸ್‌ ಸಿಂಗಲ್ಸ್‌ನಲ್ಲಿ ಕಂಚಿನ ಪದಕ

- 7 ಒಲಿಂಪಿಕ್ಸ್‌: 1992ರಿಂದ 2016ರವರೆಗೆ ಎಲ್ಲಾ ಒಲಿಂಪಿಕ್ಸ್‌ ಆಡಿ ದಾಖಲೆ

- 43 ಗೆಲುವು: ಡೇವಿಸ್‌ ಕಪ್‌ನಲ್ಲಿ ಗೆದ್ದ ಪಂದ್ಯಗಳು ಇಂದಿಗೂ ದಾಖಲೆ

- 750ಕ್ಕೂ ಹೆಚ್ಚು ಪಂದ್ಯ: ಅಂತಾರಾಷ್ಟ್ರೀಯ ಟೆನಿಸ್‌ನಲ್ಲಿ ಪೇಸ್‌ ಗೆಲುವಿನ ಸಾಧನೆ