US Open ಅನುಚಿತ ವರ್ತನೆ ತೋರಿದ ಜೋಕೋಗೆ 7 ಲಕ್ಷ ರೂ ದಂಡ!
* ಯುಎಸ್ ಓಪನ್ ಟೆನಿಸ್ ಟೂರ್ನಿಯ ಫೈನಲ್‌ನಲ್ಲಿ ಮುಗ್ಗರಿಸಿದ್ದ ಜೋಕೋವಿಚ್
* ಕ್ಯಾಲೆಂಡರ್ ಗ್ರ್ಯಾನ್ ಸ್ಲಾಂ ಗೆಲ್ಲುವ ಅವಕಾಶ ಕೈಚೆಲ್ಲಿದ್ದ ಜೋಕೋಗೆ ಬಿತ್ತು ದಂಡ
* ಕೋರ್ಟ್‌ನಲ್ಲಿ ಸಂಯಮ ಕಳೆದುಕೊಂಡ ಜೋಕೋಗೆ ದಂಡದ ಬರೆ
ನ್ಯೂಯಾರ್ಕ್(ಸೆ.15): ಯುಎಸ್ ಓಪನ್ ಗ್ರ್ಯಾನ್ ಸ್ಲಾಂ ಫೈನಲ್ ಪಂದ್ಯದ ವೇಳೆ ಅನುಚಿತ ವರ್ತನೆ ತೋರಿದ ವಿಶ್ವ ನಂ.1, ಸರ್ಬಿಯಾ ಟೆನಿಸಿಗ ನೊವಾಕ್ ಜೋಕೋವಿಚ್‌ಗೆ ಆಯೋಜಕರು 10,000 ಅಮೆರಿಕನ್ ಡಾಲರ್ (ಅಂದಾಜು 7.3 ಲಕ್ಷ ರು. ) ದಂಡ ವಿಧಿಸಿದ್ದಾರೆ.
ಪಂದ್ಯದಲ್ಲಿ ಸೋತ ಜೋಕೋವಿಚ್, 2ನೇ ಸೆಟ್ ವೇಳೆ ಸಿಟ್ಟಿನಲ್ಲಿ ತಮ್ಮ ರಾಕೆಟ್‌ನಿಂದ ಬಾಲ್ ಬಾಯ್‌ಗೆ ಹೊಡೆಯಲು ಮುಂದಾದರು. ತಕ್ಷಣ ತಮ್ಮ ತಪ್ಪಿನ ಅರಿವಾಗಿ ತಮ್ಮನ್ನು ತಾವು ನಿಯಂತ್ರಿಸಿಕೊಂಡರು. ಚೆಂಡನ್ನು ಎತ್ತಿಕೊಳ್ಳಲು ಜೋಕೋವಿಚ್ ಬಳಿ ಓಡುತ್ತಿದ್ದ ಬಾಲಕ, ಅವರ ನಡೆ ನೋಡಿ ಗಾಬರಿಗೊಂಡ ಎಂದು ಆಯೋಜಕರು ತಿಳಿಸಿದ್ದಾರೆ.
ನೊವಾಕ್ ಜೋಕೋವಿಚ್ ಈ ಋತುವಿನಲ್ಲಿ ಆಸ್ಟ್ರೇಲಿಯನ್ ಓಪನ್, ಫ್ರೆಂಚ್ ಓಪನ್ ಹಾಗೂ ವಿಂಬಲ್ಡನ್ ಗ್ರ್ಯಾನ್ ಸ್ಲಾಂ ಜಯಿಸಿದ್ದರು. ಯುಎಸ್ ಓಪನ್ ಜಯಿಸಿದರೆ, ಕ್ಯಾಲೆಂಡರ್ ಗ್ರ್ಯಾನ್ ಸ್ಲಾಂ ಜಯಿಸಿದ ಎರಡನೇ ಟೆನಿಸ್ ಆಟಗಾರ ಎನ್ನುವ ಗೌರವಕ್ಕೆ ಸರ್ಬಿಯಾದ ನೊವಾಕ್ ಜೋಕೋವಿಚ್ ಪಾತ್ರರಾಗುತ್ತಿದ್ದರು. ಆದರೆ ಯುಎಸ್ ಓಪನ್ ಫೈನಲ್‌ನಲ್ಲಿ ರಷ್ಯಾದ ಡೇನಿಲ್ ಮೆಡ್ವೆಡೆವ್ ಎದುರು ನೇರ ಸೆಟ್‌ನಲ್ಲಿ ಶರಣಾಗುವ ಮೂಲಕ ಕ್ಯಾಲೆಂಡರ್ ಗ್ರ್ಯಾನ್ ಸ್ಲಾಂ ಗೆಲ್ಲುವ ಅವಕಾಶವನ್ನು ಕೈಚೆಲ್ಲಿದ್ದರು.
US Open ಜೋಕೋಗೆ ಸೋಲಿನ ಶಾಕ್, ಡೇನಿಲ್ ಮೆಡ್ವೆಡೆವ್ ಚಾಂಪಿಯನ್..!
ಕಳೆದ ವರ್ಷವೂ ಜೋಕೋವಿಚ್ ದಂಡ ಹಾಕಿಸಿಕೊಂಡಿದ್ದರು. ಬಾಲ್ ಬಾಯ್‌ಗೆ ಚೆಂಡಿನಿಂದ ಹೊಡೆದ ಕಾರಣ, 10,000 ಡಾಲರ್ ದಂಡದ ಜೊತೆ ಪ್ರಶಸ್ತಿ ಮೊತ್ತದಿಂದ 25,000 ಡಾಲರ್ ಕಡಿತಗೊಳಿಸಲಾಗಿತ್ತು. ಅಲ್ಲದೇ ತಾವು ಗೆದ್ದಿದ್ದ ರ‍್ಯಾಂಕಿಂಗ್ ಅಂಕಗಳನ್ನೂ ಕಡಿತಗೊಳಿಸಲಾಗಿತ್ತು.