ಪ್ಯಾರಿಸ್(ಜೂ.08): ಕಿಂಗ್ ಆಫ್ ಕ್ಲೇ ಕೋರ್ಟ್‌ ಖ್ಯಾತಿಯ ರಾಫೆಲ್ ನಡಾಲ್ ಆರಂಭಿಕ ಹಿನ್ನಡೆಯ ಹೊರತಾಗಿಯೂ ಸರಿಯಾದ ಸಮಯದಲ್ಲಿ ತಮ್ಮ ಅನುಭವವನ್ನು ಬಳಸಿಕೊಂಡು ಗೆಲುವಿನ ನಗೆ ಬೀರುವಲ್ಲಿ ಯಶಸ್ವಿಯಾಗಿದ್ದಾರೆ. ಇಟಲಿಯ ಯುವ ಆಟಗಾರ ಜೆನಿಕ್ ಸಿನ್ನರ್ 7-5, 6-3, 6-0 ಸೆಟ್‌ಗಳ ಅಂತರದಲ್ಲಿ ಗೆಲುವು ಸಾಧಿಸುವ ಮೂಲಕ ಫ್ರೆಂಚ್ ಓಪನ್‌ ಟೆನಿಸ್ ಟೂರ್ನಿಯಲ್ಲಿ 15ನೇ ಬಾರಿಗೆ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.

ಕೇವಲ 19 ವರ್ಷದ ಇಟಲಿ ಆಟಗಾರ ಸಿನ್ನರ್ ಮೊದಲ ಸೆಟ್‌ನಲ್ಲೇ ನಡಾಲ್‌ ಅವರನ್ನು ತಬ್ಬಿಬ್ಬುಗೊಳಿಸುವಲ್ಲಿ ಯಶಸ್ವಿಯಾದರು. ವಿಶ್ವ 19ನೇ ಶ್ರೇಯಾಂಕಿತ ಆಟಗಾರ ಸಿನ್ನರ್ ರಣತಂತ್ರಕ್ಕೆ ನಡಾಲ್ ಆನಂತರದ ಎರಡು ಸೆಟ್‌ಗಳಲ್ಲಿ ಪ್ರತಿತಂತ್ರ ರೂಪಿಸಿದರು. ಉಳಿದೆರಡು ಸೆಟ್‌ಗಳಲ್ಲಿ ಆಕ್ರಮಣಕಾರಿ ಆಟಕ್ಕೆ ಮೊರೆ ಹೋದ ನಡಾಲ್‌ ಅನಾಯಾಸವಾಗಿ ಕ್ವಾರ್ಟರ್‌ ಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ. ಇದೀಗ ಮೂರನೇ ಶ್ರೇಯಾಂಕಿತ ನಡಾಲ್ ಸೆಮಿಫೈನಲ್ ಪ್ರವೇಶಿಸಲು ಅರ್ಜಿಂಟೀನಾದ ಡಿಯಾಗೊ ಸ್ಕ್ವಾರ್ಜ್‌ಮನ್‌ರನ್ನು ಎದುರಿಸಲಿದ್ದಾರೆ.

ಫ್ರೆಂಚ್‌ ಓಪನ್‌ ಟೆನಿಸ್‌: ಸೆರೆನಾ ವಿಲಿಯಮ್ಸ್‌ ಹೋರಾಟ ಅಂತ್ಯ!

ಆವೆ ಮಣ್ಣಿನಂಕಣದ ರಾಜ ಸ್ಪೇನ್‌ನ ರಾಫೆಲ್ ನಡಾಲ್‌ 14ನೇ ಫ್ರೆಂಚ್ ಓಪನ್‌ ಗ್ರ್ಯಾನ್‌ಸ್ಲಾಂ ಮೇಲೆ ಕಣ್ಣಿಟ್ಟಿದ್ದಾರೆ. ಇದಷ್ಟೇ ಅಲ್ಲದೇ 21 ಗ್ರ್ಯಾನ್‌ಸ್ಲಾಂ ಟ್ರೋಫಿ ಗೆದ್ದ ಮೊದಲ ಆಟಗಾರ ಎನಿಸಿಕೊಳ್ಳಲು ತುದಿಗಾಲಿನಲ್ಲಿ  ನಿಂತಿದ್ದಾರೆ. ಸದ್ಯ ಸ್ವಿಸ್ ಟೆನಿಸ್ ದಿಗ್ಗಜ ರೋಜರ್ ಫೆಡರರ್ ಹಾಗೂ ರಾಫೆಲ್ ನಡಾಲ್ ತಲಾ 20 ಗ್ರ್ಯಾನ್‌ಸ್ಲಾಂ ಟ್ರೋಫಿಗಳನ್ನು ಗೆಲ್ಲುವ ಮೂಲಕ ಜಂಟಿ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ.